‘ಲೂಟಿಕೋರ ರಾಜಕಾರಣವನ್ನು ಅಂತ್ಯಗೊಳಿಸಿ’

7
ಮತದಾರ ಪ್ರಭುವಿಗೆ ಸಾಹಿತಿ ದೇವನೂರ ಮಹಾದೇವ

‘ಲೂಟಿಕೋರ ರಾಜಕಾರಣವನ್ನು ಅಂತ್ಯಗೊಳಿಸಿ’

Published:
Updated:

ಪಾಂಡವಪುರ: ‘ಕೆಆರ್‌ಎಸ್‌ ಡ್ಯಾಂಗೆ ಡೈನಾಮಿಟ್‌ ಇಟ್ರು ಸರಿಯೇ, ಎಲ್ರೂ ಕೊಚ್ಕಂಡೋದ್ರು ಸರಿಯೇ, ನಾನು, ನನ್ನ ಬಂಧು–ಬಳಗ ಬದುಕಬೇಕು ಅ‌ನ್ನುವ ರಾಜಕಾರಣ ನಮ್ಮಲಿದೆ. ಸಾರ್ವಜನಿಕ ಸಂಪತ್ತು ಇಡೀ ಸಮುದಾಯಕ್ಕೆ ಸೇರಬೇಕಿದೆ. ಆದರೆ ಇದು ಲೂಟಿಕೋರರ, ದರೋಡೆಕೋರರ ಪಾಲಾಗುತ್ತಿದೆ. ಇಂತಹ ಕೆಟ್ಟ ರಾಜಕಾರಣ ಅಂತ್ಯಗೊಳ್ಳಬೇಕಿದೆ. ಇಲ್ಲದಿದ್ದರೆ ಜನರಿಗೆ ಉಳಿಗಾಲವಿಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸ್ವರಾಜ್‌ ಇಂಡಿಯಾ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ ಶುಕ್ರವಾರ ಆಯೋಜಿಸಿದ್ದ ವಿಧಾನ ಸಭಾ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇಲ್ಲಿ ಗುಣ ಮತ್ತು ಹಣದ ನಡುವೆ ಸ್ಪರ್ಧೆ ನಡೆಯುತ್ತಿದೆ. ಹಣವು ಮದದಿಂದ ಜನರನ್ನು ದನ–ಕರು, ಆಡು–ಕುರಿಗಳಂತೆ ಕೊಂಡುಕೊಳ್ಳಬಹುದು ಎಂಬಂತೆ ಕುಣಿಯುತ್ತಿದೆ. ಹಣದ ಮದ ಮುರಿಬೇಕು. ಗರ್ವಭಂಗ ಮಾಡಬೇಕು. ಆಗ ಮಾತ್ರ ಜನರು ಉಸಿರಾಡಲು ಸಾಧ್ಯ. ಹಾಗಾಗಿ ಜನರು ಗುಣ ಗೆಲ್ಲಿಸಬೇಕಿದೆ. ಇದು ಹೆಂಗರಳು ಕ್ಷೇತ್ರ. ಇಲ್ಲಿನ ಮಹಿಳೆಯರು ಪುಟ್ಟಣ್ಣಯ್ಯನವರು ಗೆಲ್ಲಲು ಶ್ರಮಿಸುತ್ತಿದ್ದರು. ಇದು ಈಗ ಆಗಬೇಕಿದೆ. ಇದರೊಂದಿಗೆ ಯುವಜನತೆ ಮತ್ತಷ್ಟು ಎದ್ದುನಿಲ್ಲಬೇಕಿದೆ’ ಎಂದರು.

‘ದರ್ಶನ್‌ ಪುಟ್ಟಣ್ಣಯ್ಯ ಮತ್ತೆ ಅಮೆರಿಕಕ್ಕೆ ಹೊರಟು ಹೋಗುತ್ತಾನೆ ಎಂಬ ಸುಳ್ಳು ವದಂತಿಯನ್ನು ಹರಡಿಸಲಾಗುತ್ತಿದೆ. ಪುಟ್ಟಣ್ಣಯ್ಯನವರ ಬಗ್ಗೆಯೂ ಈ ಅಪಪ್ರಚಾರ ನಡೆದಿತ್ತು. ಪುಟ್ಟಣ್ಣಯ್ಯ ಈ ಕ್ಷೇತ್ರದ ದುದ್ದಹೋಬಳಿಯ 54 ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿದರು’ ಎಂದು ಹೇಳಿದರು.

ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಲು ನೀವು ಎಲ್ಲೀದ್ದಿರೋ ಅಲ್ಲೇ ಪ್ರಚಾರ ಮಾಡಿ. ಇಲ್ಲಿ ಸೇರಿರುವ 30 ಸಾವಿರ ಜನರು ಕನಿಷ್ಠ 3 ಮತಗಳನ್ನು ಹಾಕಿಸುವ ಮೂಲಕ ದರ್ಶನ್‌ ಗೆಲುವಿಗೆ ಶ್ರಮಿಸಿ. ಇದು ಪ್ರತಿಜ್ಞೆ ಎಂದೇ ಸ್ವೀಕರಿಸಿ ಎಂದು ಮನವಿ ಮಾಡಿದರು.

ಪುಟ್ಟರಾಜು ಸಂಸದ ಅವಧಿ ಪೂರ್ಣಗೊಳಿಸಲಿ:  ಕಾಂಗ್ರೆಸ್‌‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಪಕ್ಷವು ರೈತ ನಾಯಕ ಪುಟ್ಟಣ್ಣಯ್ಯ ಅವರನ್ನು ಗೌರವಿಸಿ ಅವರ ಮಗನನ್ನು ಬೆಂಬಲಿಸಿದಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ದರ್ಶನ್‌  ಅವರನ್ನು ಬೆಂಬಲಿಸಲಿ. ಸಿ.ಎಸ್.ಪುಟ್ಟರಾಜು ವಿಧಾನಸಭೆಗೆ ಸ್ಪರ್ಧಿಸುವುದನ್ನು ಬಿಟ್ಟು ಸಂಸದರ ಅವಧಿಯನ್ನು ಪೂರ್ಣಗೊಳಿಸಲಿ ಎಂದು ಹೇಳಿದರು.

ಸ್ವರಾಜ್‌ ಇಂಡಿಯಾದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ತಂದೆಯನ್ನು ನೆನೆದರು. ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ, ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕಾಡೆ ಬಸವೇಗೌಡ, ಸದಸ್ಯ ಎ.ಎಲ್.ಕೆಂಪೂಗೌಡ, ಕಾಂಗ್ರೆಸ್‌ ಮುಖಂಡರಾದ ಎಲ್‌.ಡಿ.ರವಿ, ಎಲ್‌.ಸಿ.ಮಂಜುನಾಥ್‌, ರವಿ ಬೋಜೇಗೌಡ, ಸ್ವರಾಜ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾ‌ಟೀಲ್‌, ಪಚ್ಚೆ ನಂಜುಂಡಸ್ವಾಮಿ, ದಲಿತ ಸಂಘರ್ಷ ಸಮತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಸುನೀತಾ ಪುಟ್ಟಣ್ಣಯ್ಯ, ಅಕ್ಷತಾ ಪುಟ್ಟಣ್ಣಯ್ಯ, ಸುಶ್ಮಿತಾ ಪುಟ್ಟಣ್ಣ‌ಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry