ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು

7
ಸುಗ್ರೀವಾಜ್ಞೆ ಮೂಲಕ ಪೋಕ್ಸೊ ಕಾಯ್ದೆ ತಿದ್ದುಪಡಿ

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು

Published:
Updated:
ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು

ನವದೆಹಲಿ: ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಕಾಮುಕರನ್ನು ನೇಣುಗಂಬಕ್ಕೆ ಏರಿಸುವ ಹೊಸ ಕಾನೂನು ದೇಶದಲ್ಲಿ ಜಾರಿಗೆ ಬರಲಿದೆ.

12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಪೂರಕವಾದ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಕಠುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳಿಗೆ ದೇಶದಾದ್ಯಂತ ಭಾರಿ ಆಕ್ರೋಶ, ಟೀಕೆ ವ್ಯಕ್ತವಾದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಂತಹ ಗರಿಷ್ಠ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಈಗಾಗಲೇ ಅಸ್ತಿತ್ವದಲ್ಲಿರುವ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ’ಗೆ (ಪೋಸ್ಕೊ) ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಿದೆ.

ಇದರೊಂದಿಗೆ ಅಪರಾಧ ಕಾಯ್ದೆ, ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ), ಸಾಕ್ಷ್ಯಗಳ ಸಂರಕ್ಷಣಾ ಕಾಯ್ದೆ ಕೂಡ ತಿದ್ದುಪಡಿಯಾಗಲಿವೆ.

ಕಾಲಮಿತಿ ನಿಗದಿ: ತ್ವರಿತಗತಿಯಲ್ಲಿ ಅತ್ಯಾಚಾರ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಪೂರ್ಣಗೊಳಿಸಲು ತಲಾ ಎರಡು ತಿಂಗಳ ಕಾಲಮಿತಿ ನಿಗದಿಗೊಳಿಸಲಾಗಿದ್ದು, ಅತ್ಯಾಚಾರಿಗಳಿಗೆ ಗರಿಷ್ಠ ಶಿಕ್ಷೆ ದೊರೆಯಲಿದೆ.

ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲ ಮೇಲ್ಮನವಿ, ಅರ್ಜಿಗಳನ್ನು ಕಡ್ಡಾಯವಾಗಿ ಆರು ತಿಂಗಳ ಒಳಗಾಗಿ ಇತ್ಯರ್ಥಗೊಳಿಸಬೇಕಾಗುತ್ತದೆ. 16 ವರ್ಷದೊಳಗಿನ ಬಾಲಕಿಯರಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡದಂತೆ ನಿರ್ಬಂಧ ಹೇರುವ ಪ್ರಸ್ತಾವನೆ ಸುಗ್ರೀವಾಜ್ಞೆಯಲ್ಲಿದೆ. ಸದ್ಯ ಅತ್ಯಾಚಾರ ಪ್ರಕರಣಗಳ ತನಿಖೆ, ವಿಚಾರಣೆಗೆ ಯಾವುದೇ ಕಾಲಮಿತಿ ಇಲ್ಲದ ವರ್ಷಾನುಗಟ್ಟಲೇ ಇತ್ಯರ್ಥವಾಗುವುದಿಲ್ಲ. ಪ್ರಕರಣದ ತನಿಖೆ 60 ದಿನದಲ್ಲಿ ಪೂರ್ಣಗೊಳ್ಳದಿದ್ದರೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯುತ್ತಿತ್ತು.

ಕಾರ್ಯಕರ್ತರ ವಿರೋಧ: ಸುಗ್ರೀವಾಜ್ಞೆ ಮೂಲಕ ಪೋಸ್ಕೊ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರದ ನಿರ್ಧಾರವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರು ಬಲವಾಗಿ ವಿರೋಧಿಸಿದ್ದಾರೆ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯ ಬದಲು ಪ್ರಕರಣಗಳ ತ್ವರಿತ ತನಿಖೆ, ವಿಚಾರಣೆ, ಸಾಕ್ಷಿಗಳ ರಕ್ಷಣೆ, ಸಂತ್ರಸ್ತರು ದೂರು ನೀಡಲು ಅಗತ್ಯವಾದ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶೇ 95ರಷ್ಟು ಲೈಂಗಿಕ ದೌರ್ಜನ್ಯಗಳು ಕುಟುಂಬ ಸದಸ್ಯರಿಂದಲೇ ನಡೆಯುತ್ತವೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಭಾರ್ತಿ ಅಲಿ ಹೇಳಿದ್ದಾರೆ.

ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲಿಗೂ ಸುಗ್ರೀವಾಜ್ಞೆ

ನವದೆಹಲಿ: ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಮತ್ತೊಂದು ಸುಗ್ರೀವಾಜ್ಞೆ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

100 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತ ವಂಚಿಸಿದವರಿಗೆ ಸೇರಿದ ಆಸ್ತಿಯನ್ನು ಯಾವುದೇ ತೊಡಕು ಇಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವ ಪ್ರಸ್ತಾವನೆ ಇದೆ. ವಿದೇಶಗಳಿಗೆ ಪರಾರಿಯಾದ ಘೋಷಿತ ಅಪರಾಧಿಗಳು, ಉದ್ದೇಶಪೂರ್ವಕ ಸುಸ್ತಿದಾರರ ಹಸ್ತಾಂತರ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ವಜ್ರಾಭರಣ ಉದ್ಯಮಿ ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ವಿಜಯ್‌ ಮಲ್ಯ, ಲಲಿತ್‌ ಮೋದಿ ಸೇರಿದಂತೆ ಹಲವರ ಆಸ್ತಿ ಮುಟ್ಟುಗೋಲು ಸುಲಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry