ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನಿರಾಳ, ಬಿಜೆಪಿಗೆ ಬಂಡಾಯದ ಬಿಸಿ

ಅಫಜಲಪುರದಲ್ಲಿ ಈಚೆಗಷ್ಟೇ ಜೆಡಿಎಸ್ ಸೇರಿದ್ದ ರೇವೂರ ಪಕ್ಷೇತರ ಅಭ್ಯರ್ಥಿ
Last Updated 24 ಏಪ್ರಿಲ್ 2018, 10:11 IST
ಅಕ್ಷರ ಗಾತ್ರ

ಕಲಬುರ್ಗಿ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೊಂದೇ ದಿನ ಬಾಕಿ ಉಳಿದಿದೆ. ಎಲ್ಲ ಪಕ್ಷಗಳೂ ಅಭ್ಯರ್ಥಿಗಳ ಹೆಸರು ಆಖೈರುಗೊಳಿಸಿದ್ದು, ಕಾಂಗ್ರೆಸ್‌– ಜೆಡಿಎಸ್‌ಗಿಂತ ಬಿಜೆಪಿಗೆ ಬಂಡಾಯದ ಬಿಸಿ ಹೆಚ್ಚು ತಾಗಿದೆ.

ಕಲಬುರ್ಗಿ ಗ್ರಾಮೀಣ, ಚಿಂಚೋಳಿ, ಕಲಬುರ್ಗಿ ಉತ್ತರ, ಸೇಡಂ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಬಂಡಾಯ ಎದುರಿಸುತ್ತಿದೆ.

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಟಿಕೆಟ್‌ ದೊರೆಯದ ಕಾರಣ ಜೆಡಿಎಸ್‌ ಸೇರಿ ಬಿ ಫಾರಂ ಪಡೆದುಕೊಂಡಿದ್ದಾರೆ. ಈ ಕ್ಷೇತ್ರದ ಇನ್ನೊಬ್ಬ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮಾಜಿ ಸಚಿವ ಬಾಬುರಾವ ಚವ್ಹಾಣ ಅವರೂ ಮುನಿಸಿಕೊಂಡಿದ್ದು, ಅವರ ನಡೆ ಏನು ಎಂಬುದು ಗೊತ್ತಾಗಿಲ್ಲ.

ಏತನ್ಮಧ್ಯೆ ತಮ್ಮ ಇಬ್ಬರು ಪ್ರಮುಖ ನಾಯಕರಿಗೆ ಟಿಕೆಟ್‌ ನೀಡದ ಬಿಜೆಪಿಗೆ ಮತ ನೀಡುವುದಿಲ್ಲ. ಚಿತ್ತಾಪುರ ಕ್ಷೇತ್ರದಲ್ಲಿ ತಮ್ಮ ಸಮುದಾಯದ ವಾಲ್ಮೀಕ ನಾಯಕ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಆ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಗೆ ಮತ ಹಾಕುವುದಾಗಿ ಅಖಿಲ ಭಾರತ ಬಂಜಾರ ಸೇವಾ ಸಂಘದವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಸೇಡಂ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್‌ ಪಾಲಾಗಿದ್ದರಿಂದ ಆ ಕ್ಷೇತ್ರದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಕೋಲಿ ಸಮಾಜದ ಮುಖಂಡ ರಾಜಗೋಪಾಲರೆಡ್ಡಿ ಮುದಿರಾಜ ಕಾಂಗ್ರೆಸ್‌ ಸೇರಿದ್ದಾರೆ. ಇದೇ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮುಕ್ರಂ ಖಾನ್‌ ಸಹ ಕಾಂಗ್ರೆಸ್‌ ತೆಕ್ಕೆಗೆ ಬಂದಿದ್ದು, ಈ ಕ್ಷೇತ್ರದ ರಾಜಕೀಯ ಹೊಸ ತಿರುವುದು ಪಡೆದಿದೆ.

ಚಿಂಚೋಳಿ ಯಲ್ಲಿಯೂ ಬಿಜೆಪಿ ಬಂಡಾಯ ಎದುರಿಸುತ್ತಿದೆ. ಬಿಜೆಪಿ ಟಿಕೆಟ್‌ ವಂಚಿತ ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ ಯಾಕಾಪುರ ಬೆಂಬಲಿಗರು ‘ಸುನೀಲ್‌ ವಲ್ಲ್ಯಾಪುರ ಹಟಾವೊ, ಚಿಂಚೋಳಿ ಬಿಜೆಪಿ ಬಚಾವೋ’ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಕಲಬುರ್ಗಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್‌ ಶಶೀಲ್‌ ನಮೋಶಿ ಕೈತಪ್ಪಿದ್ದರಿಂದ ಕುಪಿತಗೊಂಡಿದ್ದ ಅವರ ಬೆಂಬಲಿಗರು, ‘ಗೆಲ್ಲುವ ಅಭ್ಯರ್ಥಿ ಶಶೀಲ್‌ ನಮೋಶಿಗೆ ಟಿಕೆಟ್‌ ನೀಡಬೇಕು’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಶಶೀಲ್‌ ನಮೋಶಿ ಸಹ ಬೆಂಬಲಿಗರ ಸರಣಿ ಸಭೆ ನಡೆಸಿದರಾದರೂ ತಮ್ಮ ಮುಂದಿನ ನಡೆ ಏನು ಎಂಬುದನ್ನು ತಿಳಿಸಿಲ್ಲ.

‘ಅವರ ಮುನಿಸು ಶಮನವಾಗಿದ್ದು, ಅವರು ಪಕ್ಷದಲ್ಲೇ ಮುಂದುವರೆಯಲಿದ್ದಾರೆ’ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಅಫಜಲಪುರ ಕ್ಷೇತ್ರದ ರಾಜಕೀಯ ಹೊರಳು ಹಾದಿಯಲ್ಲಿದೆ. ಬಿಜೆಪಿ–ಕಾಂಗ್ರೆಸ್‌ ಅಭ್ಯರ್ಥಿಗಳು ಅಲ್ಲಿ ಅದಲು–ಬದಲಾಗಿದ್ದಾರೆ. ಇತ್ತೀಚಿಗಷ್ಟೇ ಜೆಡಿಎಸ್‌ ಸೇರಿದ್ದ ರಾಜುಗೌಡ ಪಾಟೀಲ ರೇವೂರ ಟಿಕೆಟ್‌ಗೆ ಪೈಪೋಟಿ ನಡೆಸಿದ್ದರು. ಟಿಕೆಟ್‌ ಸಿಗದ ಕಾರಣ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗೋವಿಂದ ಭಟ್‌ ಅವರು ಬಿ ಫಾರಂ ಗಿಟ್ಟಿಸಿಕೊಂಡು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

‘ಮಾಲೀಕಯ್ಯರ ಮಾತು ಕೇಳುತ್ತಿದ್ದಾರೆ’

ಕಲಬುರ್ಗಿ: ‘ಮಾಲೀಕಯ್ಯ ಗುತ್ತೇದಾರ ಅವರ ಮಾತು ಕೇಳಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ನನಗೆ ಸೇಡಂ ಕ್ಷೇತ್ರದ ಟಿಕೆಟ್ ನೀಡಲಿಲ್ಲ’ ಎಂದು ಕೋಲಿ ಸಮಾಜದ ಮುಖಂಡ ರಾಜಗೋಪಾಲರೆಡ್ಡಿ ಮುದಿರಾಜ ಆರೋಪಿಸಿದರು.

‘ಸೇಡಂ ಕ್ಷೇತ್ರದಲ್ಲಿ ನಾನು ತಳಮಟ್ಟದಿಂದ ಪಕ್ಷ ಸಂಘಟಿಸಿದ್ದೆ. ಬಿಜೆಪಿ ಹಿಂದುಳಿದ ಸಮಾಜದವರಿಗೆ ಆದ್ಯತೆ ನೀಡುತ್ತಿಲ್ಲ. ಪಕ್ಷಾಂತರಿಗಳಿಗೆ ಮಣೆ ಹಾಕುತ್ತಿದೆ. ಹಣ ನೀಡಿದವರಿಗೆ ಟಿಕೆಟ್‌ ನೀಡಲಾಗಿದೆ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸಾಮಾಜಿಕ ಕಳಕಳಿ ಇರುವವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದೆ. ಹೆಸರಿಗೆ ಮಾತ್ರ ಸಿದ್ಧಾಂತದ ಪಕ್ಷ’ ಎಂದರು.

‘ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತೇನೆ. ಖರ್ಗೆ ಅವರ ನೇತೃತ್ವದಲ್ಲಿ ಎಲ್ಲ ಕ್ಷೇತ್ರಗಳಿಗೆ ತೆರಳಿ ಪಕ್ಷವನ್ನು ಬಲಪಡಿಸುತ್ತೇನೆ. ಬಿಜೆಪಿಯನ್ನು ಸೋಲಿಸುವುದೇ ನನ್ನ ಗುರಿ. ಅಫಜಲಪುರ, ಸೇಡಂ ಕ್ಷೇತ್ರಗಳಲ್ಲಿ ಹೆಚ್ಚು ಒತ್ತು ನೀಡುತ್ತೇನೆ’ ಎಂದು ಹೇಳಿದರು.

ಜೈನ ಸಮಾಜದ ಮುಖಂಡ ನೇಮಿನಾಥ ಜೈನ, ಸುನೀಲ ಒಂಟಿ, ವಿಜಯಕುಮಾರ, ನಾಗರಾಜ ವಾರದ, ಸುರೇಶ ಎ. ಇದ್ದರು.

**

ಟಿಕೆಟ್‌ ಕೈತಪ್ಪಿದ್ದು ನನಗೂ ಮತ್ತು ಬೆಂಬಲಿಗರಿಗೂ ನೋವು ತಂದಿದೆ. ಆದರೂ, ನಾನು ಬಂಡಾಯದ ಬಾವುಟ ಹಾರಿಸುವುದಿಲ್ಲ
- ಶಶೀಲ್‌ ನಮೋಶಿ, ಬಿಜೆಪಿ ರಾಜ್ಯಘಟಕದ ಸಹ ವಕ್ತಾರ

**

ನಮ್ಮ ಬೆಂಬಲಿಗರು, ಹಿತೈಷಿಗಳು ಸೇರಿ ಸಭೆ ನಡೆಸುತ್ತೇವೆ. ಎಲ್ಲರ ಅಭಿಪ್ರಾಯ ಪಡೆದು ನಮ್ಮ ನಿಲುವನ್ನು ಮಂಗಳವಾರ ಸ್ಪಷ್ಟಪಡಿಸುತ್ತೇವೆ
ಸಂಜೀವನ ಯಾಕಾಪುರ, ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT