ಸೋಮವಾರ, ಮೇ 10, 2021
19 °C

ಶುಕ್ರವಾರ, 26–4–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ಕಾರ್: ಮೈಸೂರಿನಿಂದ ಕಡಿಮೆ ವೆಚ್ಚದ ಅಂದಾಜು‌ ಯೋಜನಾ ಆಯೋಗದ ಪರಿಶೀಲನೆಗೆ ರವಾನೆ

ನವದೆಹಲಿ, ಏ. 25–
ಸರಕಾರಿ ಉದ್ಯಮರಂಗದಲ್ಲಿ ‘ಬೃಹತ್ ಪ್ರಮಾಣದಲ್ಲಿ’ ಸಣ್ಣ ಕಾರ್ ಉತ್ಪಾದನೆ ಕಾರ್ಯಕ್ರಮ ಕೈಗೊಳ್ಳುವ ಸರಕಾರದ ನಿರ್ಧಾರವನ್ನು ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್ ಆಲಿ ಅಹಮದ್ ಅವರು ಇಂದು ಪುನರುಚ್ಚರಿಸಿದರು.

ತಮ್ಮ ಸಚಿವ ಶಾಖೆಯ ಬೇಡಿಕೆಗಳ ಬಗೆಗೆ ಲೋಕಸಭೆಯಲ್ಲಿ ನಡೆದ ಚರ್ಚೆಗೆ ಅವರು ಉತ್ತರ ಕೊಡುತ್ತ ಈಗಿನ ಮೂರು ಖಾಸಗಿ ಕಂಪನಿಗಳು ಏರುತ್ತಿರುವ ಬೇಡಿಕೆಯನ್ನು ಪೂರೈಸಲಾಗದಿರುವುದರಿಂದ ಕಾರ್‌ಗಳ ತಯಾರಿಕೆ ಹೆಚ್ಚಿಸುವುದು ಅಗತ್ಯವೆಂದರು.

ಹೊಸ ಕಾರ್ಖಾನೆ ಸ್ಥಾಪನೆಗೆ 32 ಕೋಟಿ ರೂ.ಗಳಾದರೂ ಅಗತ್ಯವೆಂದು ಶ್ರೀ ಎನ್.ಕೆ. ಸೊಮಾನಿ ಅವರು ಅಭಿಪ್ರಾಯವನ್ನು ಸಚಿವರು ಒಪ್ಪಲಿಲ್ಲ.

ಗಡಿ ವಿವಾದ ಮತ್ತೆ ಪರಿಶೀಲನೆಗೆ ಮಹಾರಾಷ್ಟ್ರ ಕಾಂಗ್ರೆಸ್ ಒತ್ತಾಯ

ಔರಂಗಾಬಾದ್, ಏ. 25–
ಮೈಸೂರು ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಕುರಿತ ಮಹಾಜನ್ ಆಯೋಗದ ವರದಿಯು ಮೂಲೆ ಗುಂಪಾಗಿರುವುದರಿಂದ ಈ ವಿವಾದವನ್ನು ಬದಲಾಗಿರುವ ಹಿನ್ನೆಲೆಯಲ್ಲಿ ಪುನರ್‌ಪರಿಶೀಲಿಸಬೇಕು ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ವಸಂತರಾವ್ ಪಾಟೀಲ್ ಅವರು ಇಂದು ಇಲ್ಲಿ ಹೇಳಿದರು.

ಕಾಂಗ್ರೆಸ್ಸಿಗೆ ಪ್ರಚಂಡ ವಿಜಯ

ಬಿಜಾಪುರ, ಏ. 25–
ಬಿಜಾಪುರ ಕ್ಷೇತ್ರದಿಂದ ಲೋಕಸಭೆಗೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿ ಶ್ರೀ ಗುಡದಿನ್ನಿ ಬಸಗೊಂಡಪ್ಪ ಕಾಡಪ್ಪ ಅವರು ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಎಂ.ಪಿ.ಗಳಿಗೆ ಉಚಿತ ಮನೆ, ನೀರು, ವಿದ್ಯುತ್: ಎಸ್.ಎಸ್.ಪಿ. ವಿರೋಧ

ನವದೆಹಲಿ, ಏ. 25–
ಸಂಸತ್ ಸದಸ್ಯರಿಗೆ ಉಚಿತ ಮನೆ, ವಿದ್ಯುತ್ ಮತ್ತು ನೀರು ಉಚಿತ ಸರಬರಾಜು, ಫಸ್ಟ್‌ಕ್ಲಾಸ್ ‘ಎ‘ ಪಾಸು ಮತ್ತು ವಿಶೇಷ ರಿಯಾಯಿತಿ ದರದಲ್ಲಿ ವಿಮಾನ ಪ್ರಯಾಣದ ಸೌಲಭ್ಯ ನೀಡಬೇಕೆಂಬ ಸಂಸತ್ತಿನ ಸರ್ವಪಕ್ಷಗಳ ಸಮಿತಿಯ ಸಲಹೆಯನ್ನು ಸಂಯುಕ್ತ ಸಮಾಜವಾದಿ ಪಕ್ಷ ವಿರೋಧಿಸಿದೆ.

ಪ್ರಧಾನಿಯ ಕೊನೆಯ ಯತ್ನ ವಿಫಲವಾದರೆ ಜಲವಿವಾದ ಪಂಚಾಯ್ತಿಗೆ

ನವದೆಹಲಿ, ಏ. 25– ಕೃಷ್ಣ –
ಗೋದಾವರಿ ಹಾಗೂ ನರ್ಮದಾ ನದಿ ವಿವಾದದ ಬಗ್ಗೆ  ಒಪ್ಪಿತ ಪರಿಹಾರ ಕಂಡು ಹಿಡಿಯಲು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಮತ್ತೊಮ್ಮೆ ಯತ್ನಿಸುವ ಸಂಭವವಿದೆ.

ಈ ಯತ್ನವೂ ವಿಫಲವಾದರೆ ಆಗ ಅಂತರ ರಾಜ್ಯ ಜಲವಿವಾದ ಶಾಸನದ ಪ್ರಕಾರ ಈ ವಿವಾದಗಳನ್ನು ಪಂಚಾಯ್ತಿಗೆ ಒಪ್ಪಿಸುವ ಬಗ್ಗೆ ಕೇಂದ್ರ ಪರಿಶೀಲಿಸುವುದು.

ನಿರಕ್ಷರಸ್ಥ ಹರಿಜನ ಮಹಿಳೆ ವಿಕ್ರಮ

ಅಂಕೋಲಾ, ಏ. 25–
ಅಂಕೋಲಾ ತಾಲ್ಲೂಕಿನ ಬೆಳಸೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಶ್ರೀಮತಿ ದುರ್ಗಿ ಪುಟ್ಟು ಎಂಬ ಹರಿಜನ ನಿರಕ್ಷರಸ್ಥ ಮಹಿಳೆ ನಿನ್ನೆ ಆಯ್ಕೆಯಾದರು.

ಮಾಜಿ ಪಂಚಾಯ್ತಿ ಅಧ್ಯಕ್ಷ ಹಾಗೂ ಹಾಲಕ್ಕಿ ಜನರ ಮುಖಂಡ ಶ್ರೀ ನಿಂಗು ಕನ್ನೇಗೌಡ ಎಂಬುವರನ್ನು ಪಂಚಾಯ್ತಿ ಅಧ್ಯಕ್ಷ ಚುನಾವಣೆಯಲ್ಲಿ ಶ್ರೀಮತಿ ದುರ್ಗಿಪಟ್ಟು 84 ಮತಗಳಿಂದ ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.