ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಸ್ಮರಣೆ(ದ್ಹಿಕ್ರ್)

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಂಪ್ರದಾಯಿಕ ಸಾಮಾನ್ಯ ಮುಸ್ಲಿಮರು ಮತ್ತು ಅಧ್ಯಾತ್ಮ ಪಂಡಿತರು ಒಂದೇ ರೀತಿಯಲ್ಲಿ ಮಾಡುವ ದೈನಂದಿನ ಆಚರಣೆಗಳ ಪೈಕಿ `ದ್ಹಿಕ್ರ್' ಅಥವಾ ನಾಮಸ್ಮರಣೆ, ಜಪ ಮುಖ್ಯವಾಗಿದೆ. ಇದನ್ನು ಸೂಫಿ ಅಧ್ಯಾತ್ಮ ಪಂಡಿತರು ದೇವರ ಸ್ಮರಣೆ, ನಾಮಗಳ ಜಪ ಎಂದು ಪರಿಗಣಿಸುತ್ತಾರೆ. ಈ ಸ್ಮರಣೆಯನ್ನು ಮೌನವಾಗಿ ಮಾಡುವುದು ಹೆಚ್ಚು, ಮಸೀದಿಯೊಳಗೆ ಮತ್ತು ಧ್ಯಾನ ಕೂಟಗಳಲ್ಲಿ ತನಗೆ ಮಾತ್ರ ಕೇಳಿಸುವಂತೆ ಪಿಸುಗುಟ್ಟುವಂತಿದ್ದರೆ, ಕೆಲವೊಮ್ಮೆ, ಮುಖ್ಯವಾಗಿ ಸಮೂಹ ಭಕ್ತಿ ಕೂಟದಲ್ಲಿ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗೂ ಮಾಡುವುದಿದೆ. ಕುರಾನಿನ ಅಧ್ಯಾಯ 17:110ರಲ್ಲಿ ‘ನಾಮ ಸ್ಮರಣೆ ಮಾಡುವಾಗ ಮತ್ತು ನಮಾಜಿನಲ್ಲಿ ಹೆಚ್ಚು ಗಟ್ಟಿಯಾಗಿ ಓದಬೇಡಿ, ಹೆಚ್ಚು ಮೆಲ್ಲಗೆಯೂ ಓದದಿರಿ- ಇದರ ಮಿತ ಮಧ್ಯಮಾರ್ಗದಲ್ಲಿ ಓದಿರಿ’ ಎಂದು ಹೇಳಲಾಗಿದೆ. ಸೂಫಿಗೆ ಎಲ್ಲೆಡೆಯಲ್ಲೂ ದೇವರು ಕಾಣಿಸುವುದರಿಂದ ತನ್ನ ಧ್ಯಾನದಲ್ಲೂ, ದೈನಂದಿನ ಎಲ್ಲ ಕಾರ್ಯಗಳನ್ನು, ಕರ್ತವ್ಯಗಳನ್ನು ಪೂರೈಸುವಾಗ ಪ್ರತೀಕ್ಷಣದಲ್ಲೂ ದೇವರ ನಾಮಸ್ಮರಣೆ (ದ್ಹಿಕ್ರ್) ಮೌನವಾಗಿ ಮಾಡುತ್ತಿರುತ್ತಾನೆ. ಸೂಫಿಗಳ ಧ್ಯಾನ ಜಪಗಳೆಲ್ಲವೂ ಕುರಾನ್ ನೀಡಿದ (ಅಧ್ಯಾಯ 33: 41-42ರ) ‘ಅಲ್ಲಾಹನನ್ನು ಅತ್ಯಧಿಕವಾಗಿ ಧ್ಯಾನಿಸಿರಿ. ದಿನದ ಮುಂಜಾವಿನಿಂದ ಸಂಜೆಯ ತನಕವೂ ಸ್ಮರಣೆ ಮಾಡಿರಿ’ ಎಂಬ ಸಂದೇಶಕ್ಕೆ ಅನುಗುಣವಾಗಿಯೇ ಇರುತ್ತದೆ. ‘ಅಲ್ಲಾಹನ ಸ್ಮರಣೆಯಲ್ಲಿ ಆತ್ಮಶಾಂತಿ ದೊರೆಯುತ್ತದೆ. ಅರಿತುಕೊಳ್ಳಿ! ಅಲ್ಲಾಹನ ನಾಮದಜಪ(ದ್ಹಿಕ್ರ್‍ಅಲ್ಲಾಹ್)ದಿಂದ ಮನಶ್ಶಾಂತಿ ಲಭಿಸುತ್ತದೆ’ ಎಂಬ ಕುರಾನಿನ ಮತ್ತೊಂದು ಸೂಕ್ತಿ (13:28)ಯಿಂದ ಮಾರ್ಗದರ್ಶನವನ್ನು ಪಡೆಯುತ್ತಾರೆ.

ಅಲ್ಲಾಹನ ನಾಮಸ್ಮರಣೆಯು ಸೂಫಿ ಅಧ್ಯಾತ್ಮ ಸಾಧನೆಯ ಪಥದ ಆಧಾರಸ್ಥಂಭವೆಂದು ಪರಿಗಣಿಸಲಾಗುತ್ತದೆ. ಕ್ಷಣವೂ ಬಿಡದೆ ದೇವರ ನಾಮಸ್ಮರಣೆಯನ್ನು ಮಾಡದೆ ಅವನನ್ನು ಸೇರಲು ಸಾಧ್ಯವಿಲ್ಲ ಎಂದು ಸೂಫಿಗಳು ಅಭಿಪ್ರಾಯಪಡುತ್ತಾರೆ. ’ಬದುಕು ನಾಮಸ್ಮರಣೆಯ ಹೊರತು ಪೊಳ್ಳು ಶಬ್ಧಾಡಂಬರವಾಗಿರುತ್ತದೆ’ ಎಂದು ಸೂಫಿ ಕವಿ ಅಬುಲ್ ಮಜ್ದ್ ಮಜ್ದೂದ್ ಸನಾಯಿ ಹೇಳುತ್ತಾರೆ. ಆಧುನಿಕಯುಗದ ಪರಿಭಾಷೆಯಲ್ಲಿ ಹೇಳುವುದಾದರೆ ಸತತವಾಗಿ ದೇವರ ನಾಮಸ್ಮರಣೆ ಮಾಡುವುದರಿಂದ ಮನುಷ್ಯನ ದೇಹದಿಂದ ಅಧ್ಯಾತ್ಮ ಪ್ರಭಾವಳಿಯು ಉತ್ಪನ್ನವಾಗಿ ಸೂಫಿ ಅಧ್ಯಾತ್ಮ ಪಥದ ಸಾಧನೆಗೆ ಸಹಕಾರಿಯಾಗುತ್ತದೆ. ‘ನಿಮಗಿದು ಗೊತ್ತೇನು, ದೇವರ ದೃಷ್ಟಿಯಲ್ಲಿ ಒಳ್ಳೆಯ ಕಾರ್ಯಮಾಡುವವನು, ವೈರಿಯಿಂದ ಜನರನ್ನು ರಕ್ಷಿಸಲು ಹೋರಾಡುವವನಿಗಿಂತ, ಧನಕನಕಗಳನ್ನು ದಾನ ಮಾಡುವವನಿಗಿಂತ ಉತ್ತಮನು ಯಾರೆಂದು? ಅವನು ಪ್ರತಿಕ್ಷಣವೂ ದೇವರ ನಾಮಸ್ಮರಣೆಯನ್ನು ಮಾಡುವವನು’ ಎಂದು ಪ್ರವಾದಿಯವರು ತನ್ನ ಅನುಯಾಯಿಗಳಿಗೆ(ಸಹಾಬಾ) ಉಪದೇಶಿಸಿದ್ದರೆಂದು ಹಜ್ರತ್ ಅಬೂಉದ್ದರ್‍ದಾರವರ ಹೇಳಿಕೆ ಇದೆ. ಇನ್ನೊಂದು ಸಂದರ್ಭದಲ್ಲಿ ಪ್ರವಾದಿಯವರು ‘ಅಂತಿಮ ತೀರ್ಮಾನದ ಸಮಯವು ಅಲ್ಲಾಹನ ನಾಮಸ್ಮರಣೆಯು ಇಲ್ಲದವರಿಗೆ ಸಮೀಪವೊದಗಲಾರದು. ಲೌಕಿಕ ಬದುಕಿನಲ್ಲಿ ದೇವರ ಸ್ಮರಣೆಯನ್ನು ಮಾಡದಾತನಿಗೆ ಪಾರಮಾರ್ಥಿಕ ಬದುಕಿನಲ್ಲಿ ಒಳಿತಿನ ಸಮಯ ಸನಿಹಬಾರದು’ ಎಂದು ಹೇಳಿದ್ದರೆಂದು ಹಜ್ರತ್ ಅನಸ್ ಇಬ್ನ್ ಮಾಲಿಕ್‍ರವರ ಹೇಳಿಕೆ ಇದೆ. ದೇವರ ನಾಮಸ್ಮರಣೆಯಲ್ಲಿ ಎರಡು ವಿಧವಿದೆ. ಒಂದು ಮನಸ್ಸಿನಲ್ಲಿ ಮಾಡುವ ಸ್ಮರಣೆ, ಇನ್ನೊಂದು ಬಾಯಿಯಿಂದ ಮಾಡುವ ಸ್ಮರಣೆ. ಮನಸ್ಸಿನಿಂದ ಮಾಡುವ ಸ್ಮರಣೆಗೆ ಹೆಚ್ವು ಮಹತ್ವವಿರುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT