ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಓಣಿಯ ಬೇಸಿಗೆ ಶಿಬಿರ

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಮಕ್ಕಳ ಪರೀಕ್ಷಾ ತೀರಿದವು, ಈಗ ನಮ್ಮ ಪರೀಕ್ಷಾ ಶುರುವಾಗೇದ’ ಅನ್ನುತ್ತ ಪಕ್ಕದ ಮನೆ ಪಾರಕ್ಕ ಎಂದಿನಂತೆ ಈ ಸಂಜೆಯ 5ಕ್ಕೆ ನಮ್ಮ ಮನೆಯ ಹರಟೆ ಕಟ್ಟೆ ಸೇರಿದಳು. ಈಗಾಗಲೇ ಬಂದು ಕುಳಿತ ಶಾಲಿನಿ ‘ಬರೋಬ್ಬರ್ ಹೇಳಿದಿ ನೋಡ್’ ಪಾರಕ್ಕ. ನಮ್ಮ ಮನ್ಯಾಗನೂ ಸಹನಾದ ಪರೀಕ್ಷಾ ನಡದದ. ಈಗೀನ ಸುಡು ಬಿಸಲಾಗ ಕ್ರಿಕೆಟ್ಟೋ, ಕಬಡ್ಡಿನೋ ಇಲ್ಲಾಂದ್ರ ಮಾವಿನಗಿಡ ಹತ್ತದದ, ಹರಕೊಂಡ ಮಾವಿನಕಾಯಿ ಮಂಗ್ಯಾನಂಗ ತಿನ್ನೊದದ. ನನ್ನ ಎರಡು ಗಂಡಮಕ್ಕಳನ್ನ ಹಿಡಿಯೂದು ಸಾಕಾಗ್ಯದ, ಏನ ಮಾಡ್ಲಿ? ಕ್ವಾಣ್ಯಾಗ ಇಬ್ಬರನ್ನೂ ಹಾಕಿ ಕೀಲಿ ಜಡದ ಬಂದೇನಿ ನಮ್ಮ ಗಂಡಮಕ್ಕಳನ್ನ ಹಿಡಿಯೋದು ಅಂದ್ರ ಪರಾಕಷ್ಟ’.

‘ಅಯ್ಯ, ಹೆಣ್ಣಮಕ್ಕಳ ಏನ ಕಡಿಮಿ ಅದಾರ? ನಮ್ಮ ಎರಡು ಹೆಣ್ಣ ಅದಾವಲ್ಲ ಯಾವ್ಯಾವದೋ ಗೆಳತ್ಯಾರ ಗುಂಪು ಮಾಡಕೊಂಡು ಟ್ರಿಪ್ಪಿಗೆ ತಯ್ಯಾರಾಗ್ಯಾರ. ನಾನೂ ಕೇಳದೆ ಯಾರ ಕರಕೊಂಡು ಹೊಂಟಾರ ನಿಮ್ಮನ್ನ? ಅಂದೆ ಅದಕ್ಕ ಹೀಂಗ ಹೇಳಬೇಕ, ಯಾಕವ್ವ ನೀ ಚಿಂತಿ ಮಾಡತಿ ನಮ್ಮ ಕ್ಲಾಸನ್ಯಾಗ ಸುಭಾಶ ಅದಾನಲ್ಲ ಅವಾ ಕರಕೊಂಡು ಹೊಂಟಾನ. ದಾಂಡೇಲ್ಯಾಗ ಅವರ ಅಕ್ಕನ ಮನಿ ಅದ. ಎರಡ ದಿನ ಸುತ್ತ ನೋಡಕೊಂಡು ಬರತೀವಿ’ ಅಂದಳು.

ನಾನು ಬಾಯಿ ಮ್ಯಾಗ ಕೈ ಇಟಗೊಂಡು ಸುಮ್ಮನಾದೆ. ‘ಇವತ್ತ ನಾಳೆ ಎರಡ ದಿನ ರಜಾ ತಗೊಂಡು ಮನ್ಯಾಗ ಇರಾಕ ಅವರಪ್ಪಗ ಹೇಳಿ ಕಾಯಾಕ ಇಟ್ಟೇನಿ’ ಅಂದಳು. ನಂದಿತಾ ತನ್ನ ಬಿಚ್ಚು ಕೂದಲನ್ನು ಸಾವರಿಸುತ್ತಾ ಅಂದಳು ‘ನಮ್ಮ ಮನ್ಯಾಗೀನ ಸಮಸ್ಯಾ ಬ್ಯಾರೆ ಅದ, ಅಜ್ಜಿ–ಅಜ್ಜ ಅಂತ ನನ್ನ ಮಕ್ಕಳು ಬಡಕೊಂತಾವ ಅವರಿರೋದು ಹಳ್ಳಿ. ದನಾ–ಕರಾ, ಶೆಗಣಿ, ಮಣ್ಣು, ಹೊಲಸು ನಾನು ಸ್ವಚ್ಛ ಹೇಳಿದೆ ಬೇಕೀದ್ರ ಬೆಂಗಳೂರಾಗ ನಿಮ್ಮ ದೊಡ್ಡಮ್ಮ ಅದಾಳ ಕಳಸ್ತೀನಿ ಅದಕ್ಕ ಅವರು ಹೀಂಗ ತಿರಗ ಉತ್ತರ ಕೊಟ್ಟರು ನಮಗ ಹಳ್ಳಿಗೇ ಹೋಗಬೇಕು. ನಮ್ಮ ಅಜ್ಜಿ ಕೈಯ್ಯಾಗೀನ ಅಡಗಿ ಉಣಬೇಕು. ಅಜ್ಜನ ಕೂಡ ಹೊಲಕ್ಕ ಹೋಗಬೇಕು ಥರ ಥರದ ಪಕ್ಷಿ ನೋಡಬೇಕು, ಹೊಲದಾಗಿನ ಸೌತಿಕಾಯಿ, ಗಜ್ಜರಿ ತಿನಬೇಕು’ ಅಂದರು ಮಕ್ಕಳು. ‘ಹಾಂ ಗೊತ್ತಾತು ಗೊತ್ತಾತು ನಿಮ್ಮಪ್ಪನ ಪ್ಲ್ಯಾನ ಇದು ಅವರಿಗೆ ಅವ್ವ ಅಪ್ಪನ್ನ ನೋಡಬೇಕು ಅಂತ ಅನಸಿರಬೇಕು’.

ಹೀಂಗ ಇಂದಿನ ನಮ್ಮ ಹದಿಹರೆಯದ ಮಕ್ಕಳ ಬೇಡಿಕೆ ಇದ್ದಾಗ ತಂದೆ ತಾಯಿಗಳಾದ ನಾವು ನಿರ್ದಯಿಗಳಾಗಿ ಅವರನ್ನ ಬಂಧಿಸಿ ಇಡುತ್ತೇವೆ, ಅವರನ್ನು ವಿರೋಧಿಸುತ್ತೇವೆ. ಇದು ತಪ್ಪು, ಮಕ್ಕಳಿಗೆ ಸ್ವಾತಂತ್ರ್ಯ ಕೊಡಬೇಕು ಅವರಿಗೆ ಕುಂತು ಬುದ್ಧಿ ಹೇಳಬೇಕು, ಮಾರ್ಗದರ್ಶನ ಮಾಡಬೇಕು. ಇದನ್ನು ಇಂದಿನ ಯಾವ ಪಾಲಕರು ತಿಳಿದುಕೊಳ್ಳುವುದಿಲ್ಲ. ನಮ್ಮ ಕಟ್ಟೆಯ ಹತ್ತು ಜನ ತಾಯಂದಿರು ತಮ್ಮ ಮಕ್ಕಳನ್ನು ಹಿಡಿದಿಡುವ ಸಮಸ್ಯೆಗಳನ್ನು ಹೇಳಿದಾಗ ಎರಡು ದಿನ ನನಗೂ ನಿದ್ರೆ ಬರಲಿಲ್ಲ. ಏನು ಮಾಡಬೇಕು? ಈ ಓಣಿಯ ಮಕ್ಕಳನ್ನೆಲ್ಲ ಬಿಸಿಲಿಗೆ ಓಡಿ ಹೋಗದಂತೆ ಯಾವುದಾದರೂ ಒಂದು ಯೋಜನೆಯನ್ನ ಹಾಕಬೇಕು ಎಂದು ಯೋಚಿಸಿದೆ. ಹುಬ್ಬಳ್ಳಿಯಲ್ಲಿಯ ನನ್ನ ತಮ್ಮ ಇಂಥ ಅನೇಕ ಬೇಸಿಗೆಯ ಶಿಬಿರಗಳನ್ನು ಮಾಡಿದ ಅನುಭವ ಇರುವುದರಿಂದ ಫೋನಿಸಿ ಕರೆದೆ. ಇಬ್ಬರು ತಲೆ ಕೂಡಿಸಿ ಒಂದು ಇಡೀ ದಿನ ಶಿಬಿರದ ಯೋಚನೆ ಮಾಡಿದೆವು.

ಮಾರನೆಯ ದಿನ ಬೆಳಿಗ್ಗೆ ನಮ್ಮ ದೊಡ್ಡ ಕಾರಿನ ಗರಾಜನ್ನು ಅವನೊಬ್ಬನೇ ಸ್ವಚ್ಛಗೊಳಿಸಿದ. ನಂತರ ನಾವಿಬ್ಬರೂ ನಮ್ಮ ಓಣಿ ಹಿಂದಿನ ಓಣಿ ಮುಂದಿನ ಓಣಿಗಳಲ್ಲಿ ಇರುವ ಮಕ್ಕಳ ಒಂದು ಸರ್ವೇ ಮಾಡಲಾಗಿ 6ರಿಂದ 16 ವರ್ಷದ 20 ಗಂಡುಮಕ್ಕಳು ಮತ್ತು 22 ಹೆಣ್ಣುಮಕ್ಕಳ ಹೆಸರನ್ನು ಒಂದು ಯಾದಿ ಮಾಡಿ ಇಟ್ಟುಕೊಂಡೆವು. ಸಂಜೆಗೆ ಈ ಮೂರು ಓಣಿಗಳಲ್ಲಿರುವ ಪಾಲಕರ ಸಭೆಯನ್ನು ಕರೆದು ನಮ್ಮ ಹತ್ತು ದಿನದ ಬೇಸಿಗೆಯ ಶಿಬಿರದ ಬಗ್ಗೆ ಚರ್ಚಿಸಿದೆವು. ನಂದಿನಿಯ ಗಂಡ ಒಳ್ಳೆಯ ಕ್ರೀಡಾಪಟು. ಶಾಲಿನಿಯ ಮೈದುನ ಕರುಕುಶಲ ಕಲೆಗಳಲ್ಲಿ ಪರಿಣತ.

ಹನಮಂತ ದೇವರ ಗುಡಿಯ ಪಕ್ಕದ ಮನೆಯಲ್ಲಿರುವ ಸುಲೋಚನಾ ಒಬ್ಬ ಒಳ್ಳೆಯ ಶಿಕ್ಷಕಿ, ಅಲ್ಲದೇ ಮಕ್ಕಳ ಸಾಹಿತಿ. ನಮ್ಮ ಮನೆಯ ಹಿಂದಿನ ಓಣಿಯಲ್ಲಿ ಒಂದು ಸಂಗೀತ ಕ್ಲಾಸನ್ನು ನಡೆಸುತ್ತಿರುವ ಸರಸ್ವತಿ ನನ್ನ ಒಳ್ಳೆಯ ಗೆಳತಿ. ಇವರನ್ನೆಲ್ಲ ಕೂಡಿಸಿಕೊಂಡು ಹತ್ತು ದಿನದ ಬೇಸಿಗೆಯ ಶಿಬಿರದ ರೂಪರೇಷೆಯನ್ನು ತಯಾರಿಸಿದೆವು. ಮೊಟ್ಟ ಮೊದಲು ಯಾವ ಮಗುನಿಂದಲೂ ಒಂದು ಪೈಸೆ ತೆಗೆದುಕೊಳ್ಳದೆ ನಾವೇ ಎಲ್ಲರೂ ಸಹಾಯ ನೀಡಿ ಶಿಬಿರ ನಡಿಸಬೇಕು ಎಂದು ನಿರ್ಧರಿಸಿದೆವು.

ಬೇಸಿಗೆ ಶಿಬಿರದ ವೇಳಾಪಟ್ಟಿ ಸಿದ್ಧವಾಯಿತು. ಬೆಳಗಿನ 8 ಗಂಟೆಗ ಮಕ್ಕಳ ಸಾಮೂಹಿಕ ಪ್ರಾರ್ಥನೆ, ಬಳಿಕ ಯೋಗಾಸನ, 9 ಗಂಟೆಗೆ ಗಂಡು ಮಕ್ಕಳಿಗಾಗಿ ಕ್ರಿಕೆಟ್ ತರಬೇತಿ, ಹೆಣ್ಣುಮಕ್ಕಳಿಗಾಗಿ ವಾಲಿಬಾಲ ಆಟ, ಇದನ್ನು ನಮ್ಮ ಹತ್ತಿರದ ಶಾಲೆಯ ಮೈದಾನದಲ್ಲಿ ಏರ್ಪಡಿಸುವುದು. ಬಳಿಕ 10.30 ರಿಂದ 11ರವರೆಗೆ ಅಲ್ಪೋಪಹಾರ. ಒಪ್ಪಿಕೊಂಡ ಪ್ರತಿಯೊಬ್ಬ ಮಹಿಳೆ 50 ಜನರಿಗಾಗಿ ಸವತಿಕಾಯಿಯ ಕೋಸಂಬರಿ, ಉಪ್ಪಿಟ್ಟು ಮತ್ತು ಮಾವಿನಕಾಯಿಯ ಪಾನಕ. 11 ರಿಂದ 12 ಗಂಟೆಯವರೆಗೆ ನಮ್ಮ ಗೆಳತಿ ಉತ್ತಮ ಮಕ್ಕಳ ಸಾಹಿತಿ, ಶಿಕ್ಷಕಿ ಸುಲೋಚನಾ ಮಕ್ಕಳಿಗಾಗಿ ಉತ್ತಮ ಕಥೆಗಳನ್ನು ಓದಬೇಕು ಮತ್ತು ಕವಿತೆಗಳನ್ನ ಹಾಡಿ ತೋರಿಸಬೇಕು.

ಸಮಯ ಸಿಕ್ಕರೆ ಮಕ್ಕಳಿಂದಲೇ ಕವಿತೆಗಳನ್ನು ಕಥೆಗಳನ್ನು ಬರೆಸಬೇಕು. ನಂತರ 12ರಿಂದ ಒಂದು ಗಂಟೆಯವರೆಗೆ ಕರಕುಶಲದ ವಸ್ತುಗಳ ತಯಾರಿಕೆಗಾಗಿ ಮಕ್ಕಳಿಗೆ ತರಬೇತಿ ನೀಡುವುದು ಇಷ್ಟು ಆದಮೇಲೆ ಮಕ್ಕಳೆಲ್ಲರನ್ನ ಸೇರಿಸಿ ಒಂದು ನಾಡಗೀತೆಯನ್ನ ಹಾಡಿಸಿ ಮನೆಗೆ ಬಿಟ್ಟು ಕೊಡುವುದು. ಈ ರೀತಿ ಯೋಜನೆಯ ರೂಪರೇಷೆ ಎಲ್ಲರ ಅನುಮತಿಯಿಂದ ಸಿದ್ಧವಾಯಿತು.

ಈ ಯೋಜನೆಯನ್ನು ಚರ್ಚಿಸುವಾಗ ನಮ್ಮ ಹಿಂದಿನ ಓಣಿಯಲ್ಲಿಯ ಇತಿಹಾಸದ ಶಿಕ್ಷಕರು ‘ಮುಂದಿನ ವರ್ಷಕ್ಕೆ ನಮ್ಮ ಓಣಿಯ ಮಕ್ಕಳನ್ನ ನಾನು ಪ್ರವಾಸಕ್ಕೆ ಕರೆದೊಯ್ಯುತ್ತೇನೆ, ಅದಕ್ಕೆ ನೀವೆಲ್ಲರೂ ಈಗಲೇ ಒಪ್ಪಿಗೆ ನೀಡಬೇಕು’ ಎಂದು ಸಂತೋಷದಿಂದ ಕೇಳಿಕೊಂಡರು. ಇನ್ನೊಬ್ಬ ನೆರೆಹೊರೆಯ ಸೋದರಿ ಅದರ ಮುಂದಿನ ವರ್ಷ ನಾನೂ ನಮ್ಮ ಹಳ್ಳಿಯ ಊರಿಗೆ ಮಕ್ಕಳನ್ನ ಕರೆದುಕೊಂಡು ಹೋಗಿ ಆ ಜೀವನವನ್ನು ಪರಿಚಯಿಸಲಿಕ್ಕೆ ಇಚ್ಛೆ ಪಡುತ್ತೇನೆ ಎಂದು ತಿಳಿಸಿದರು. ಹೀಗೆ ನಾಲ್ಕಾರು ಜನ ತಮ್ಮ ಮುಂದಿನ ಬೇಸಿಗೆ ಶಿಬಿರದ ಬಗ್ಗೆ ಕನಸು ಕಾಣತೊಡಗಿದರು. ಇವರೆಲ್ಲರ ಉತ್ಸಾಹ ನೋಡಿ ನಾನು ಅಚ್ಚರಿಪಟ್ಟೆ.

ಓಣಿಯ ಬೇಸಿಗೆ ಶಿಬಿರದ ಕಲ್ಪನೆ ನನಗೆ ಬಂದದ್ದು ತುಂಬಾ ಆಕಸ್ಮಿಕ. ಇದರ ಹಿಂದೆ ನನ್ನಲ್ಲಿ ಬಹು ದಿನಗಳಿಂದ ಮಿಡಿಯುವ ಕೆಲ ಭಾವನೆಗಳೂ ಕಾರಣವಾಗಿವೆ. ಇದೇ ಪ್ರದೇಶದಲ್ಲಿ ಇದ್ದ ನಾವೆಲ್ಲರೂ ಅಪರಿಚಿತರಂತೆ ದೂರ ದೂರ ಅಡ್ಡಾಡುತ್ತ ಇದ್ದವರು ಈಗ ಒಮ್ಮೆಲೆ ಆತ್ಮೀಯರಾದದ್ದು  ನನಗೆ ವಿಶೇಷವಾದ ಸಂತಸ ಕೊಟ್ಟಿದೆ. ಇಂದು ನಮ್ಮ ಸಾಂಪ್ರದಾಯಿಕ ಕೂಡು ಕುಟುಂಬಗಳು ಛಿದ್ರಗೊಂಡಿವೆ.

ಕಷ್ಟ, ಸುಖಕ್ಕೆ ನೆರೆಹೊರೆಯವರ ಸಹಾಯ ಕೇಳುವುದು ಸಂಕೋಚದ ವಿಷಯವಾಗಿತ್ತು. ಆದರೆ ಈಗ ಎಲ್ಲರೂ ಒಂದು ಮನೆಯವರು ಎಂಬ ಆತ್ಮೀಯ ಭಾವ ಮೂಡಿ ಬಂದಿದೆ. ಇದಕ್ಕೆಲ್ಲಾ ಮುಖ್ಯವಾಗಿ ಹಗಲು 12 ತಾಸೂ ಮುಚ್ಚಿಕೊಂಡ ಬಾಗಿಲುಗಳು, ಮನಸುಗಳು ಈಗ ತೆರೆದುಕೊಂಡವು ಎಂಬ ಸಂತೃಪ್ತಿಯ ಭಾವ ಮೂಡಿ ಮನಸ್ಸಿನೊಳಗೆ ನಾನು ಹಿರಿಹಿರಿ ಹಿಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT