ಬುಧವಾರ, ಮಾರ್ಚ್ 3, 2021
25 °C

ನಗರದಲ್ಲಿ ತಂಪೆರೆದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ತಂಪೆರೆದ ಮಳೆ

ಬೆಂಗಳೂರು: ಬೆಳಿಗ್ಗೆಯಿಂದ ಸಂಜೆಯವರೆಗೆ ಅಬ್ಬಾ... ಸಾಕಪ್ಪ ಎನ್ನುವಷ್ಟು ಬಿಸಿಲು. ರಾತ್ರಿ ಗಾಳಿ, ಮಳೆ, ಗುಡುಗು– ಸಿಡಿಲಿನ ಆರ್ಭಟ. ಕಳೆದೊಂದು ವಾರದಿಂದ ಈ ಜುಗುಲ್‌ ಬಂದಿಗೆ ನಗರ ಸಾಕ್ಷಿಯಾಗಿದೆ.

ಗುರುವಾರವೂ ಉದ್ಯಾನ ನಗರಿಯಲ್ಲಿ ಮಳೆ ಸುರಿಯಿತು. ಆರಂಭದಲ್ಲಿ ಬಿರುಸಿನಿಂದ ಸುರಿದ ಮಳೆ ಬಳಿಕ ಹನಿಹನಿಯಾಗಿ ಧರೆಗಿಳಿಯಿತು. ಮಳೆಯೊಂದಿಗೆ ಗುಡುಗು– ಸಿಡಿಲಿನ ಆರ್ಭಟವೂ ಜೋರಾಗಿತ್ತು. ಉರಿ ಬಿಸಿಲಿನಲ್ಲಿ ಚುನಾವಣಾ ಪ್ರಚಾರ ನಡೆಸಿ, ದಣಿದು ರಾತ್ರಿ ಮರಳಿದ ಪಕ್ಷದ ಅಭ್ಯರ್ಥಿಗಳಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಮಳೆ ಹಿತಾನುಭವ ನೀಡಿತು.

ನಿಟ್ಟುಸಿರು ಬಿಟ್ಟರು: ಕೆಂಗೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಆಯೋಜಿಸಲಾಗಿತ್ತು. ಈ ಭಾಗದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣವಿತ್ತು. ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಮಾಡಲಿದೆ ಎಂದು ಸಂಘಟಕರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಕಾರ್ಯಕ್ರಮ ಮುಗಿದ ಒಂದು ಗಂಟೆಯ ಬಳಿಕ ಮಳೆ ಸುರಿಯಿತು. ಸಂಘಟಕರೂ ನಿಟ್ಟುಸಿರು ಬಿಟ್ಟರು.

ಮಲ್ಲೇಶ್ವರಂ, ಶ್ರೀರಾಂಪುರ,  ರಾಜಾಜಿನಗರ,  ಸುಬ್ರಮಣ್ಯನಗರ, ಮಹಾಲಕ್ಷ್ಮಿ ಬಡಾವಣೆ, ರಾಜ್‌ಗೋಪಾಲ್‌ ನಗರ, ನಂದಿನ ಬಡಾವಣೆ, ಯಶವಂತಪುರ, ಆರ್‌ಎಂಸಿ ಯಾರ್ಡ್‌, ಪೀಣ್ಯ, ಸೋಲದೇವನಹಳ್ಳಿ, ಗಂಗಮ್ಮನ ಗುಡಿ, ಜಾಲಹಳ್ಳಿ, ವಿದ್ಯಾರಣ್ಯಪುರ, ಜೆ.ಸಿ. ನಗರ, ಸಂಜಯ ನಗರ,  ಹೆಬ್ಬಾಳ, ಆರ್‌.ಟಿ.ನಗರದಲ್ಲಿ ಮಳೆಯಾಗಿದೆ.

ಪಶ್ವಿಮ ವಲಯದ ಚಿಕ್ಕಪೇಟೆ, ಉಪ್ಪಾರಪೇಟೆ,  ಸಿಟಿ ಮಾರ್ಕೆಟ್‌, ಕಲಾಸಿಪಾಳ್ಯ, ಕಾಟನ್‌ಪೇಟೆ, ಬ್ಯಾಟರಾಯನಪುರ, ಆರ್.ಆರ್.ನಗರ, ವಿಜಯ ನಗರ, ಬಸವೇಶ್ವರ ನಗರದಲ್ಲೂ ಉತ್ತಮ ಮಳೆಯಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ ತುಂತುರು ಮಳೆಯಾಗಿದೆ.

ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆ:

ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲೂ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದರು, ರೈತರಲ್ಲಿ ಹರ್ಷತಂದಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ಏಪ್ರಿಲ್‌ನಲ್ಲಿ ಪೂರ್ವ ಮುಂಗಾರಿನ ಆರ್ಭಟ ಶುರುವಾದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಗುತ್ತದೆ. ಅಶ್ವಿನಿ ಮಳೆಗೆ ಹೊಲಗಳನ್ನು ಬಿತ್ತಲು ಹದ ಮಾಡಿಕೊಂಡರೆ, ನಂತರ ಸುರಿಯುವ ಭರಣಿ ಮಳೆಗೆ ಎಳ್ಳು, ಜೋಳ, ಹಲಸಂದೆ ಕಾಳುಗಳನ್ನು ಬಿತ್ತುವುದು ರೂಢಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.