ಶುಕ್ರವಾರ, ಫೆಬ್ರವರಿ 26, 2021
29 °C
ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆರ್ಥಿಕ ವಿಶ್ಲೇಷಕರ ಅಭಿಪ್ರಾಯ

ಗೊಂದಲ ಮೂಡಿಸುವ ಜಿಡಿಪಿ

ಪಿಟಿಐ Updated:

ಅಕ್ಷರ ಗಾತ್ರ : | |

ಗೊಂದಲ ಮೂಡಿಸುವ ಜಿಡಿಪಿ

ನವದೆಹಲಿ: ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕುರಿತು ಪರಿಷ್ಕೃತ ವಿವರಗಳನ್ನು ಪ್ರಕಟಿಸುವುದರಿಂದ ದೇಶಿ ಆರ್ಥಿಕತೆ ಬಗೆಗಿನ ಚಿತ್ರಣ ಸ್ಪಷ್ಟಗೊಳ್ಳುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ವೃದ್ಧಿ ದರದ ಬಗ್ಗೆ  ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ಬಿಡುಗಡೆ ಮಾಡುವ ಮುಂಚಿತ ಅಂದಾಜು  ಮತ್ತು ಅಂತಿಮ ಪರಿಷ್ಕೃತ ಅಂದಾಜುಗಳನ್ನು ಅಧ್ಯಯನ ಮಾಡಿರುವ ಆರ್‌ಬಿಐ ವಿಶ್ಲೇಷಕರು, ಈ ಸಂಬಂಧ ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಮೊದಲ ಅಂದಾಜುಗಳಲ್ಲಿ ಒಟ್ಟು ಮೌಲ್ಯವರ್ಧನೆ ಸೇರ್ಪಡೆ (ಜಿವಿಎ) ಮತ್ತು ಜಿಡಿಪಿ ಬಗ್ಗೆ ಕಡಿಮೆ ಬೆಲೆ ಕಟ್ಟಲಾಗಿರುತ್ತದೆ. ಇದು ಗೊಂದಲಕ್ಕೆ ಆಸ್ಪದ ಮಾಡಿಕೊಡುತ್ತದೆ ಎಂದು ‘ಒಟ್ಟು ಆಂತರಿಕ ಉತ್ಪನ್ನದ ಅಂಕಿ ಅಂಶಗಳ ಪರಿಷ್ಕರಣೆ’ ಕುರಿತ ವರದಿಯಲ್ಲಿ ಹೇಳಲಾಗಿದೆ.

ವರದಿಗೆ ಪೂರಕವಾಗಿ ಕೆಲ ನಿದರ್ಶನಗಳನ್ನೂ ನೀಡಲಾಗಿದೆ.  2015–16ರ ಮೊದಲ ಅಂದಾಜಿನಲ್ಲಿ ಜಿಡಿಪಿ ಶೇ 7.6ರಷ್ಟು ವೃದ್ಧಿಯಾಗಲಿದೆ ಎಂದು ‘ಸಿಎಸ್‌ಒ’ ತಿಳಿಸಿತ್ತು.

ಕೆಲ ದಿನಗಳ ನಂತರ ಪ್ರಕಟಿಸಲಾದ ಮೊದಲ ಪರಿಷ್ಕೃತ ಅಂದಾಜಿನಲ್ಲಿ ಇದನ್ನು ಶೇ 7.9ಕ್ಕೆ ಬದಲಿಸಲಾಗಿತ್ತು. ದ್ವಿತೀಯ ಪರಿಷ್ಕೃತ ಅಂದಾಜಿನಲ್ಲಿ ಇದನ್ನು ಶೇ 8.2ಕ್ಕೆ ಹೆಚ್ಚಿಸಲಾಗಿತ್ತು.

ಗೊಂದಲ ಮೂಡಿಸುವ ಪರಿಷ್ಕರಣೆ: ಆರ್ಥಿಕ ವೃದ್ಧಿ ದರ ಕುರಿತು ಒಂದಕ್ಕಿಂತ ಹೆಚ್ಚುಬಾರಿ ಅಂಕಿ ಅಂಶಗಳನ್ನು ಪರಿಷ್ಕರಣೆ ಮಾಡುವುದರಿಂದ ಆರ್ಥಿಕತೆಯ ನೈಜ ಪರಿಸ್ಥಿತಿ ಬಗ್ಗೆ ನಿರ್ಧಾರಕ್ಕೆ ಬರಲು ಗೊಂದಲ ಉಂಟಾಗುತ್ತದೆ. ಜತೆಗೆ, ಆರ್ಥಿಕ ವೃದ್ಧಿಯ ಸಾಮರ್ಥ್ಯದ ಬಗ್ಗೆ ಅನಿಶ್ಚಿತತೆಗೂ ಎಡೆಮಾಡಿಕೊಡುತ್ತದೆ.

2003–04 ರಿಂದ ಅಂಕಿ ಅಂಶಗಳನ್ನು ಪರಿಶೀಲಿಸಲಾಗಿದೆ. ಉತ್ಪಾದನೆಯಲ್ಲಿ ಗಣಿಗಾರಿಕೆ ಮತ್ತು ತಯಾರಿಕಾ ಚಟುವಟಿಕೆಗಳು ಗಮನಾರ್ಹ ಪರಿಷ್ಕರಣೆ ಕಂಡಿದ್ದರೆ, ವೆಚ್ಚದ ಬಾಬತ್ತಿನಲ್ಲಿ ಖಾಸಗಿ ಉಪಭೋಗದ ವಿವರಗಳನ್ನು ಪರಿಷ್ಕರಿಸಲಾಗಿದೆ.

ದತ್ತಾಂಶಗಳನ್ನು ಬಳಸುವವರು ಜಿಡಿಪಿ ವೃದ್ಧಿಗೆ ಸಂಬಂಧಿಸಿದ ವಿವರಗಳನ್ನು ಎಚ್ಚರಿಕೆಯಿಂದ ಬಳಸಬೇಕು.

ಆರ್ಥಿಕ ವೃದ್ಧಿ ದರದ ಬಗ್ಗೆ ನಿರ್ಧಾರಕ್ಕೆ ಬರಲು, ವಾಣಿಜ್ಯ ವಾಹನಗಳ ಮಾರಾಟ, ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಮತ್ತು ವಿದೇಶಿ ಪ್ರಯಾಣಿಕರ ಭಾರತ ಭೇಟಿಯಂತಹ ಇತರ ವಿವರಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ವಿಶ್ಲೇಷಕರು ಕೇಂದ್ರೀಯ ಸಾಂಖ್ಯಿಕ ಕಚೇರಿಗೆ (ಸಿಎಸ್‌ಒ) ಸಲಹೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.