7

ಮತಚಲಾಯಿಸಿದವರ ಮಕ್ಕಳಿಗೆ ಅಂಕ !

Published:
Updated:
ಮತಚಲಾಯಿಸಿದವರ ಮಕ್ಕಳಿಗೆ ಅಂಕ !

ಮತ ಚಲಾವಣೆ ಮೂಲಕ ಪೋಷಕರು ತಮ್ಮ ಮಕ್ಕಳ ಶಾಲಾ ಅಂಕಗಳೂ ಹೆಚ್ಚಾಗುವಂತೆ ಮಾಡಬಹುದು. ಜತೆಗೆ  ತಮ್ಮ ಮಕ್ಕಳಿಗೆ ಶೈಕ್ಷಣಿಕ ಅಥವಾ ಸಂಶೋಧನಾ ಪರಿಕರಗಳನ್ನೂ ಬಹುಮಾನವಾಗಿಯೂ ಪಡೆಯಬಹುದು.

ಅರೆ, ಮತ ಚಲಾಯಿಸುವುದರಿಂದ ಜನ ಪ್ರತಿನಿಧಿಗಳ ಆಯ್ಕೆ ಆಗುತ್ತದೆ. ಆ ಮೂಲಕ ಸರ್ಕಾರ ರಚನೆಯಾಗುತ್ತದೆ. ಆದರೆ ಮಕ್ಕಳು ಶಾಲೆಯಲ್ಲಿ ಪಡೆಯುವ ಅಂಕಗಳಿಗೂ, ನಾವು ಚಲಾಯಿಸುವ ಮತದಾನಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ?

ಹೌದು, ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಇದಕ್ಕೆ ಅವಕಾಶ ಒದಗಿಸಿವೆ. ಮತ ಚಲಾಯಿಸಿ, ಕೈಬೆರಳಿನ ಶಾಯಿಯ ಗುರುತನ್ನು ಶಾಲೆಗೆ ತೋರಿಸಿದರೆ ಮಕ್ಕಳ ಖಾತೆಗೆ ನಾಲ್ಕು ಅಂಕಗಳು ಜಮೆಯಾಗುತ್ತವೆ. ಮಗುವಿನ ತಂದೆ ಚಲಾಯಿಸಿದ ಮತಕ್ಕೆ ಎರಡು, ತಾಯಿ ಚಲಾಯಿಸಿದ ಮತಕ್ಕೆ ಎರಡು ಅಂಕ ನೀಡಲಾಗುತ್ತದೆ. ಒಂದು ವೇಳೆ ಇಬ್ಬರಲ್ಲಿ ಒಬ್ಬರಷ್ಟೇ ಮತ ಚಲಾಯಿಸಿದ್ದರೆ ಅವರ ಮಗುವಿನ ಖಾತೆಗೆ ಎರಡು ಅಂಕಗಳು ಮಾತ್ರ ಜಮೆಯಾಗುತ್ತವೆ.

ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟವು (ಕೆಎಎಂಎಸ್‌) ಈ

ವಿನೂತನ ಯೋಜನೆ ಕೈಗೊಂಡಿದ್ದು, ಮಕ್ಕಳಿಂದ, ಮಕ್ಕಳ ಮೂಲಕ ಪೋಷಕರಲ್ಲಿ ಮತಚಲಾಯಿಸುವಂತೆ ಪ್ರೇರೇಪಿಸುತ್ತಿದೆ.

ಬೆಂಗಳೂರಿನ 900 ಶಾಲೆಗಳೂ ಸೇರಿದಂತೆ ರಾಜ್ಯದಲ್ಲಿ 3000 ಶಾಲೆಗಳು ಈ ಸಂಘದ ಸದಸ್ಯತ್ವ ಪಡೆದಿವೆ. ಇವುಗಳಲ್ಲಿ ಹಲವಾರು ಶಾಲೆಗಳು ಈ ವಿನೂತನ ಕಾರ್ಯಕ್ಕೆ ಕೈಜೋಡಿಸಿವೆ.

ಪೋಷಕರೊಡನೆ ಮತಗಟ್ಟೆಗೆ ಹೋಗಿ

‘ವಿದ್ಯಾರ್ಥಿಗಳಿಗೆ ಶಾಲೆ ಮುಗಿಯುವ ಮುನ್ನವೇ ಈ ಕುರಿತು ಎಲ್ಲ ಮಾಹಿತಿ ನೀಡಲಾಗಿದೆ. ಪೋಷಕರ ಮನವೊಲಿಸಿ ಮತ ಚಲಾಯಿಸುವಂತೆ ಹಾಗೂ ಮತಗಟ್ಟೆಗೆ ಪೋಷಕರೊಡನೆ ಹೋಗುವಂತೆಯೂ ಸೂಚಿಸಲಾಗಿದೆ’ ಎನ್ನುತ್ತಾರೆ ಕೆಎಎಂಎಸ್‌ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌.‌

ಮತದಾನ ದಿನದಿಂದ (ಮೇ 12) ವಾರದೊಳಗೆ ಪೋಷಕರು ಶಾಲೆಗೆ ಬಂದು ತಾವು ಮತ ಚಲಾಯಿಸಿರುವ ಶಾಯಿಯ ಗುರುತು ತೋರಿಸಿ, ಶಾಲೆಯಿಂದ ಹಿಂಬರಹ ಪಡೆಯಬೇಕು. ಬಳಿಕ ಶಾಲೆಯ ಆಡಳಿತ ಮಂಡಳಿ ನೀಡುವ ಚೀಟಿಯನ್ನು (ವಿದ್ಯಾರ್ಥಿಯ ಹೆಸರು, ತರಗತಿ ಹಾಗೂ ಪೋಷಕರ ಹೆಸರು ಇರುತ್ತದೆ) ಶಾಲೆಯ ‘ಬೂತ್‌’ನಲ್ಲಿ ಹಾಕಬೇಕು. ಹೀಗೆ ಮಾಡಿದರೆ ಮಕ್ಕಳ ಖಾತೆಗೆ ಅಂಕಗಳು ಜಮೆಯಾಗುತ್ತವೆ ಎಂದು ಅವರು ವಿವರಿಸುತ್ತಾರೆ.

’ಪ್ರತಿ ಶಾಲೆಯಲ್ಲಿ 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಯೋಜನಾ ಕಾರ್ಯ ನೀಡಲಾಗುತ್ತದೆ. ಈ ಕಾರ್ಯವನ್ನು ಮಕ್ಕಳ ಯೋಜನಾ ಕಾರ್ಯ ಎಂದೇ ಪರಿಗಣಿಸಿ, ಅವರ ಅಂಕಪಟ್ಟಿಯ ‘ಬಿ’ ವಿಭಾಗದಲ್ಲಿ ಈ ಹೆಚ್ಚುವರಿ ಅಂಕಗಳನ್ನು ನಮೂದಿಸಲಾಗುತ್ತದೆ’.

ಲಾಟರಿ ಮೂಲಕ ಬಹುಮಾನ

‘ಶಾಲೆಯ ಬೂತ್‌ಗಳಲ್ಲಿ ಪೋಷಕರು ಹಾಕುವ ಚೀಟಿಗಳನ್ನು ಲಾಟರಿ ಮೂಲಕ ಎತ್ತಿ ಬಹುಮಾನಗಳನ್ನು ನೀಡುತ್ತೇವೆ. ಸೋಲಾರ್‌ ಕಿಟ್‌, ರೊಬೊಟ್‌ ಕಿಟ್‌, ಪುಸ್ತಕಗಳು,ಕಲಿಕೆಗೆ ಪೂರಕವಾಗುವ ಸಲಕರಣೆಗಳನ್ನು ಬಹುಮಾನವಾಗಿ ಕೊಡುತ್ತೇವೆ. ಶಾಲೆಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಹುಮಾನ ನೀಡಬಹುದು’ ಎಂದು ಅವರು ವಿವರಿಸುತ್ತಾರೆ.

‘ಈ ಕಾರ್ಯಕ್ರಮದಿಂದ ಮಕ್ಕಳಿಗೆ ಚುನಾವಣೆ ಕುರಿತ ಮಾಹಿತಿ ದೊರೆಯುತ್ತದೆ. ಕಲಿಕೆಯ ಜತೆಗೆ ಅವರ ಸಾಮಾನ್ಯ ಜ್ಞಾನ ವೃದ್ಧಿಯೂ ಆಗುತ್ತದೆ. ಪೋಷಕರ ಜವಾಬ್ದಾರಿಯನ್ನು ಈ ಮೂಲಕ ಎಚ್ಚರಿಸಿದಂತಾಗುತ್ತದೆ. ಜತೆಗೆ ಮತದಾನದ ಪ್ರಮಾಣದ ಹೆಚ್ಚಳಕ್ಕೂ ನೆರವಾಗುತ್ತದೆ’ ಎಂದು ಅವರು ಮಾಹಿತಿ ನೀಡುತ್ತಾರೆ. 

ಯಶಸ್ವಿಯಾದ ಪರೀಕ್ಷೆ

ನಗರದ ಬಾಗಲಗುಂಟೆ ಮುಖ್ಯರಸ್ತೆಯಲ್ಲಿರುವ ಬ್ಲಾಸಮ್ಸ್‌ ಶಾಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಈ ವಿಧಾನವನ್ನು ಬಳಸಿ ನೋಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಲೆಯ 70 ಪೋಷಕರು ಮಾತ್ರ ಸ್ಪಂದಿಸಿದ್ದರು. ನಂತರದ ಲೋಕಸಭಾ ಚುನಾವಣೆಯಲ್ಲಿ 700 ಪೋಷಕರು, ಆ ನಂತರದ ಬಿಬಿಎಂಪಿ ಚುನಾವಣೆಯಲ್ಲಿ 1700 ಪೋಷಕರು ತಾವು ಮತಚಲಾಯಿಸಿರುವುದನ್ನು ಶಾಲೆಗೆ ತೋರಿಸಿ, ಮಕ್ಕಳ ಅಂಕಗಳಿಕೆಗೆ ಕಾರಣರಾಗಿದ್ದರು. ಹೀಗಾಗಿ ಈ ವಿಧಾನವನ್ನು ಸಂಘದ ಸದಸ್ಯ ಶಾಲೆಗಳಲ್ಲಿ ಜಾರಿಗೊಳಿಸಲು ಸಜ್ಜಾಗಿದ್ದೇವೆ ಎಂದು ಕೆಎಎಂಎಸ್‌ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry