ಇವರಿಗಿಲ್ಲಿ ಎಲ್ಲರೂ ಅಣ್ಣ–ತಮ್ಮಂದಿರೇ....

7

ಇವರಿಗಿಲ್ಲಿ ಎಲ್ಲರೂ ಅಣ್ಣ–ತಮ್ಮಂದಿರೇ....

Published:
Updated:
ಇವರಿಗಿಲ್ಲಿ ಎಲ್ಲರೂ ಅಣ್ಣ–ತಮ್ಮಂದಿರೇ....

ಬೆಂಗಳೂರು: ‘ಹೋ... ಇವರು ರಾಮಪ್ಪ. ನಮ್ಮ ಹಳೇ ದೋಸ್ತ; ಮಾದಪ್ಪಾ ಹೇಗಿದೀಯಪ್ಪಾ... ಅಣ್ಣಾ ಹೆಂಗಿದ್ದೀಯಣ್ಣ.. ಸಾಹೇಬ್ರೇ ಹೇಗಿದ್ದೀರಿ..., ಅಮ್ಮಾ ಚೆನ್ನಾಗಿದ್ದೀಯೇನಮ್ಮಾ.... ಮರೀಬೇಡಮ್ಮಾ ಈ ಸಲ...’

ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೀಗೆ ಹೆಸರು ಕರೆದು ಆತ್ಮೀಯತೆಯಿಂದ ಮಾತನಾಡಿಸುವಾಗ ಮತದಾರರಿಗೂ ‘ನಮ್ಮ ಹೆಸರೂ ನೆನಪಿಟ್ಟುಕೊಂಡಿದ್ದಾರಲ್ಲಾ’ ಎಂಬ ಖುಷಿ. ಗೋವಿಂದರಾಜನಗರ ಕ್ಷೇತ್ರದ ಮಾರುತಿ ಮಂದಿರ ವಾರ್ಡ್‌ನಲ್ಲಿ ಅವರು ಶುಕ್ರವಾರ ಮತ ಯಾಚಿಸಿದರು. ಹಿರಿಯರಿಗೆ, ಮಹಿಳೆಯರಿಗೆ ಕೈಮುಗಿಯುತ್ತಾ, ಯುವಕರ ಬೆನ್ನು ತಟ್ಟುತ್ತಾ... ಚುರುಕಿನಿಂದ ಸಾಗುತ್ತಿದ್ದ ಅವರನ್ನು ಪಕ್ಷದ ಕಾರ್ಯಕರ್ತರ ದಂಡು ಹಿಂಬಾಲಿಸಿತು.

ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಸೋಮಣ್ಣ ಅವರು ವಿನಾಯಕ ಬಡಾವಣೆಯ ಉದ್ಯಾನದ ಬಳಿ ಬಂದರು.  ‘ನೀವೆಲ್ಲರೂ ಒಳಗೆ ಬಂದರೆ ವಿಹಾರಕ್ಕೆ ಬಂದವರಿಗೆ ತೊಂದರೆ ಆಗುತ್ತದೆ. ನಾನು, ಪಾಲಿಕೆ ಸದಸ್ಯೆ ಶಾಂತಕುಮಾರಿ, ವಾಗೀಶ ಮಾತ್ರ ಒಳಕ್ಕೆ ಹೋಗುತ್ತೇವೆ. ನೀವಿಲ್ಲೇ ಇರಿ’ ಎಂದು ಕಾರ್ಯಕರ್ತರಿಗೆ ಸೂಚಿಸಿ ಉದ್ಯಾನದ ಒಳಹೊಕ್ಕರು. ವಿಹಾರಕ್ಕೆ ಬಂದವರ ಯೋಗಕ್ಷೇಮ ವಿಚಾರಿಸಿ ಮತ ಕೇಳಿದರು. ನೆಲದಲ್ಲಿ ಬಟ್ಟೆ ಹಾಸಿ ಯೋಗಾಸನದಲ್ಲಿ ನಿರತರಾಗಿದ್ದ ಏಳೆಂಟು ಮಂದಿ ಹಿರಿಯರು ಅವರನ್ನು ಕಂಡು ಎದ್ದು ಬಂದರು. ‘ಅಯ್ಯೋ ನೀವು ಮುಂದುವರಿಸಿ’ ಎನ್ನುತ್ತಲೇ ಅವರನ್ನು ಮಾತನಾಡಿಸಿ ಮುನ್ನಡೆದರು.

ಪ್ರಚಾರ ಹೇಗೆ ನಡೆಸಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿ ಅಲ್ಲಿಂದ ಸುಬ್ಬಣ್ಣ ಗಾರ್ಡನ್‌ನತ್ತ ಹೆಜ್ಜೆ ಹಾಕಿದರು. ಅಲ್ಲಿ 1ನೇ ಮುಖ್ಯ ರಸ್ತೆಯ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು.

‘ಇಲ್ಲಿ ಸಿಮೆಂಟ್‌ ಮಿಶ್ರಿತ ಜಲ್ಲಿ ಹಾಕಿ ಒಂದೂವರೆ ತಿಂಗಳಾಯಿತು. ಒಂದೆರಡು ಮನೆಯವರು ಕಾಂಕ್ರೀಟ್‌ ರಸ್ತೆ ಬೇಡ ಎಂದಿದ್ದಕ್ಕೆ ಕೆಲಸ ಅರ್ಧದಲ್ಲೇ ನಿಲ್ಲಿಸಿದ್ದಾರೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

‘ಚುನಾವಣೆ ಮುಗೀಲಿ. ಎಲ್ಲಾ ಸರಿ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು. ವಿರೋಧ ವ್ಯಕ್ತಪಡಿಸಿದವರ ಬಳಿ ತೆರಳಿ ಅವರ ಅಹವಾಲು ಆಲಿಸಿದರು.

‘ಇಲ್ಲಿ ಕೇವಲ ಎರಡೂವರೆ ಅಡಿ ಆಳದಲ್ಲಿ ಒಳಚರಂಡಿ ಹಾಗೂ ಒಂದೂವರೆ ಅಡಿ ಆಳದಲ್ಲಿ ಕುಡಿಯುವ ನೀರಿನ ಪೈಪ್‌ ಹಾದುಹೋಗಿದೆ. ಈ ಪೈಪ್‌ಗಳಲ್ಲಿ ದೋಷ ಕಾಣಿಸಿದರೆ ಮತ್ತೆ ಕಾಂಕ್ರೀಟ್‌ ಅಗೆಯಬೇಕಾಗುತ್ತದೆ. ಅಗೆದು ಹಾಕಿದ ಡಾಂಬರು ರಸ್ತೆಯನ್ನು ಮತ್ತೆ ದುರಸ್ತಿ ಮಾಡಿಸಿ ಕೊಡಿ ಸಾಕು’ ಎಂದು ಸ್ಥಳೀಯ ನಿವಾಸಿ ಲಿಂಗಣ್ಣ ಒತ್ತಾಯಿಸಿದರು.

ಅವರನ್ನು ಸಮಾಧಾನಪಡಿಸಿದ ಅಭ್ಯರ್ಥಿ ಮತ್ತೆ ಕಾರ್ಯಕರ್ತರ ತಂಡವನ್ನು ಸೇರಿಕೊಂಡರು.

ರಸ್ತೆಯಲ್ಲೇ ನಿಂತು ಕೈಮುಗಿದು ಮತ ಯಾಚಿಸುತ್ತಿದ್ದ ಸೋಮಣ್ಣ, ಸುಬ್ಬಣ್ಣ ಗಾರ್ಡನ್‌ನಲ್ಲಿ ಮೂರನೆ ಮಹಡಿಯಲ್ಲಿರುವ ಒಂದು ಮನೆಯೊಳಗೆ ಭೇಟಿ ನೀಡಿ ಮತ ಕೇಳಿದರು. ಅಲ್ಲಿಂದ ನಿರ್ಗಮಿಸಿದ ಬಳಿಕ, ‘ನೋಡಿ ಇದು ಕಾಂಗ್ರೆಸ್‌ ಕಾರ್ಯಕರ್ತರ ಮನೆ. ನಾನೀಗ ಅವರ ಮನೆಗೆ ಹೋಗಿದ್ದರಿಂದ, ಸೋಮಣ್ಣ ಮನೆಗೆ ಬಂದನಲ್ಲ ಎಂದು ಖುಷಿಯಾಗುತ್ತದೆ. ನಾವು ಮತ ಯಾಚನೆಯಲ್ಲೂ ಪಕ್ಷಭೇದ ಮಾಡಬಾರದು’ ಎಂದು ಪಕ್ಕದಲ್ಲಿದ್ದ ಮುಖಂಡರೊಬ್ಬರ ಬಳಿ ಉಸುರಿದರು.

ಆಗಷ್ಟೇ ತೆರೆದಿದ್ದ ಅಂಗಡಿ, ಹೋಟೆಲ್‌ಗಳ ಮಾಲೀಕರ ಬಳಿಯೂ ಕೈಮುಗಿದು ಮತ ಕೇಳಿದರು. ತರಕಾರಿ ಖರೀದಿಸಲು ಬಂದ ಮಹಿಳೆಯರನ್ನು ಮಾತನಾಡಿಸಿದರು. ಪಕ್ಷದ ಸ್ಥಳೀಯ ಮುಖಂಡರ ಜೊತೆ ಅಸಮಾಧಾನ ಹೊಂದಿದ್ದ ಯುವಕನೊಬ್ಬನನ್ನು ಬಳಿ ಕರೆದು ಹೆಗಲಿಗೆ ಕೈ ಹಾಕಿ ಮಾತನಾಡಿಸಿದರು. ದೊಡ್ಡ ಮೀಸೆ ಹೊಂದಿದ್ದ ಆತನ ಕೆನ್ನೆ ಚಿವುಟಿ ಸಮಾಧಾನ ಪಡಿಸಿ ಮುನ್ನಡೆದರು.

ಮಾರುತಿ ಮಂದಿರಕ್ಕೆ ತೆರಳಿ ಪೂಜೆ ಮಾಡಿಸಿ ಮತ್ತೆ ಮತ ಯಾಚನೆ ಮುಂದುವರಿಸಿದರು. ಆಗ ಹೊತ್ತು 10 ದಾಟಿತ್ತು. ಅಲ್ಲಿಯವರೆಗೂ ಉಪವಾಸವಿದ್ದ ಅವರು ಅಯ್ಯಪ್ಪ ದೇವಸ್ಥಾನದ ಬಳಿ ಕಾರ್ಯಕರ್ತರ ಜೊತೆ ಉಪಾಹಾರ ಸೇವಿಸಿದರು. ಅಲ್ಲಿಂದ ನೇರವಾಗಿ ಕಲ್ಯಾಣನಗರ ವಾರ್ಡ್‌ನ ಶಕ್ತಿ ಗಾರ್ಡನ್‌ಗೆ ಕಾರಿನಲ್ಲಿ ತೆರಳಿದರು. ಸ್ಥಳೀಯ ಕಾಂಗ್ರೆಸ್‌ ಮುಖಂಡರಾದ ಲತಾ ಶಾಂತಕುಮಾರ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

**

‘ಬೆಳಿಗ್ಗೆ 4.45ಕ್ಕೆ ಏಳುತ್ತೇನೆ’

ಬೆಳಿಗ್ಗೆ 4.45ಕ್ಕೆ ಏಳುವುದು ನನ್ನ ಅಭ್ಯಾಸ. ರಾತ್ರಿ ಮಲಗುವಾಗ 11 ಗಂಟೆಯಾಗುತ್ತದೆ. ಚುನಾವಣಾ ಪ್ರಚಾರ ಇದೆ ಎಂಬ ಕಾರಣಕ್ಕೆ ಏಳುವ ಸಮಯ ಮಾರ್ಪಾಡು ಮಾಡಿಕೊಂಡಿಲ್ಲ. 6.30ಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ. ಬೆಳಿಗ್ಗೆ 10ರಿಂದ 11 ಗಂಟೆವರೆಗೂ ಮತ ಯಾಚನೆ. ನಂತರ ಸಂಜೆ 4 ಗಂಟೆವರೆಗೆ ಮನೆಯಲ್ಲೇ ಇರುತ್ತೇನೆ. ಅಹವಾಲು ಹೇಳಿಕೊಂಡು ಮನೆಗೆ ಬಂದವರನ್ನು ಮಾತನಾಡಿಸುತ್ತೇನೆ. ಕೆಲವು ಮುಖಂಡರನ್ನು ಭೇಟಿ ಮಾಡುತ್ತೇನೆ. ಮತ್ತೆ ಚುನಾವಣೆ ಪ್ರಚಾರಕ್ಕೆ ತೆರಳುತ್ತೇನೆ’ ಎಂದು ಸೋಮಣ್ಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry