ಬಸ್ ಡಿಕ್ಕಿ; ಕಾನ್‌ಸ್ಟೆಬಲ್ ಸಾವು

6

ಬಸ್ ಡಿಕ್ಕಿ; ಕಾನ್‌ಸ್ಟೆಬಲ್ ಸಾವು

Published:
Updated:

ಬೆಂಗಳೂರು: ಬನಶಂಕರಿ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಜಯನಗರ ಕಾನೂನು ಸುವ್ಯವಸ್ಥೆ ಠಾಣೆ ಕಾನ್‌ಸ್ಟೆಬಲ್ ಸಿದ್ದಪ್ಪ ಬೈರಮಡಗಿ (24) ಮೃತಪಟ್ಟಿದ್ದಾರೆ.

ವಿಜಯಪುರದ ಸಿದ್ದಪ್ಪ, 2016ರಲ್ಲಿ ಇಲಾಖೆ ಸೇರಿದ್ದರು. ಕೆಲಸದ ನಿಮಿತ್ತ ರಾತ್ರಿ ಯಡಿಯೂರಿಗೆ ಹೋಗಿದ್ದ ಅವರು, ಅಲ್ಲಿಂದ 11.45ರ ಸುಮಾರಿಗೆ ಬೈಕ್‌ನಲ್ಲಿ ಠಾಣೆಗೆ ವಾಪ‍ಸಾಗುತ್ತಿದ್ದರು. ಇದೇ ವೇಳೆ ಜಯನಗರ ಕಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದಾಗ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

‘ಎರಡು ವರ್ಷಗಳಿಂದ ನಮ್ಮ ಠಾಣೆಯಲ್ಲೇ ಯುಡಿಆರ್ (ಅಸಹಜ ಸಾವು ಪ್ರಕರಣಗಳ) ರೈಟರ್ ಆಗಿದ್ದ ಸಿದ್ದಪ್ಪ, ಯಲಚೇನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ರಾತ್ರಿ 10 ಗಂಟೆವರೆಗೂ ಠಾಣೆಯಲ್ಲೇ ಇದ್ದ ಅವರು, ಯಾವುದೋ ಕರೆ ಬಂತೆಂದು ಬೈಕ್‌ನಲ್ಲಿ ಹೋಗಿದ್ದರು’ ಎಂದು ಜಯನಗರ ಠಾಣೆ ಸಿಬ್ಬಂದಿ ಹೇಳಿದರು.

‘ಸಿದ್ದಪ್ಪ ಅರ್ಧ ಹೆಲ್ಮೆಟ್ ಧರಿಸಿದ್ದರು. ‌ಅದಕ್ಕೆ ಕ್ಲಿಪ್ ಇರಲಿಲ್ಲ. ಇದರಿಂದಾಗಿ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬಸ್ ಚಾಲಕನ ವಿರುದ್ಧ ಅಜಾಗರೂಕ ಚಾಲನೆ ಆರೋಪದಡಿ (ಐಪಿಸಿ 279) ಪ್ರಕರಣ ದಾಖಲಿಸಿಕೊಂಡು, ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಬನಶಂಕರಿ ಸಂಚಾರ ‍ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry