ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್ |ಶೀಘ್ರದಲ್ಲಿ ಭಾರತ ತಂಡ ಪ್ರಕಟ: 2ನೇ ಕೀಪರ್‌ ಸ್ಥಾನಕ್ಕೆ ರಾಹುಲ್?

Published 25 ಏಪ್ರಿಲ್ 2024, 13:52 IST
Last Updated 25 ಏಪ್ರಿಲ್ 2024, 13:52 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘವಾಗಿ ಆಡುತ್ತಿರುವ ರಿಷಭ್ ಪಂತ್ ಅವರು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. 

ಇದರಿಂದಾಗಿ ಎರಡನೇ ವಿಕೆಟ್‌ಕೀಪರ್ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕೇರಳದ ಸಂಜು ಸ್ಯಾಮ್ಸನ್ ಅವರು ಈ ಸ್ಪರ್ಧೆಯಲ್ಲಿರುವ ಪ್ರಮುಖರು. 

ಮೇ 1ರೊಳಗೆ ತಂಡದ ಪಟ್ಟಿಯನ್ನು ನೀಡಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೂಚಿಸಿದೆ. ಇದರಿಂದಾಗಿ 15 ಆಟಗಾರರ ತಂಡವನ್ನು ಬಿಸಿಸಿಐ ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಿಷಭ್ ಅವರು 161ರ ಸ್ಟ್ರೈಕ್‌ರೇಟ್‌ನಲ್ಲಿ 342 ರನ್‌ ಗಳಿಸಿದ್ದಾರೆ. ಕೀಪಿಂಗ್‌ನಲ್ಲಿಯೂ ಮಿಂಚಿದ್ದಾರೆ. ಅವರ ಫಿಟ್‌ನೆಸ್ ಮಟ್ಟವೂ ಉತ್ತಮವಾಗಿದೆ. ಇದರಿಂದಾಗಿ ಎರಡನೇ ಕೀಪರ್‌ ಅವಕಾಶ ಮಾತ್ರ ಈಗ ಲಭ್ಯವಿದೆ. ಅದಕ್ಕಾಗಿ ರಾಹುಲ್ (302 ರನ್, 141 ಸ್ಟ್ರೈಕ್‌ರೇಟ್) ಮುಂಚೂಣಿಯಲ್ಲಿದ್ದಾರೆ.  ಆದರೆ ಅವರು ಈ ಟೂರ್ನಿಯಲ್ಲಿ ಆರಂಭಿಕ ಬ್ಯಾಟರ್ ಮಾತ್ರ ಆಗಿ ಆಡಿದ್ದಾರೆ. ಮಧ್ಯಮಕ್ರಮಾಂಕದಲ್ಲಿ ಆಡಿಲ್ಲ. ಸಂಜು ಸ್ಯಾಮ್ಸನ್ (314 ರನ್, 152 ಸ್ಟ್ರೈಕ್‌ರೇಟ್) ಅವರು ಕೂಡ ಅಗ್ರಕ್ರಮಾಂಕದಲ್ಲಿಯೇ ಆಡಿದ್ದಾರೆ. 

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಂಡ್ಯ ಅವರ ಆಯ್ಕೆಯು ಅನುಮಾನವೆನ್ನಲಾಗುತ್ತಿದೆ. ಪ್ರಸ್ತುತ ಐಪಿಎಲ್‌ನಲ್ಲಿ ಅವರು ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ 17 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಫಿನಿಷರ್ ಆಗಿರುವ ಅವರು ಪರಿಣಾಮಕಾರಿಯಾಗಿ ಆಡುತ್ತಿಲ್ಲ. ಇದುವೆಗೆ ಒಟ್ಟು ಏಳು ಸಿಕ್ಸರ್‌ಗಳನ್ನು ಮಾತ್ರ ಹೊಡೆದಿದ್ದಾರೆ. ಅಲ್ಲದೇ ಅವರು 142ರ ಸ್ಟ್ರೈಕ್‌ರೇಟ್‌ನಲ್ಲಿ  ರನ್‌ ಗಳಿಸಿದ್ದಾರೆ.  ಅವರು ಆಡುವ ಕ್ರಮಾಂಕದಲ್ಲಿ ಇದು ’ಅರ್ಹತಾಮಟ್ಟ‘ಕ್ಕಿಂತ ಕಡಿಮೆಯೆನ್ನಲಾಗಿದೆ. 

ಇದೇ ಟೂರ್ನಿಯಲ್ಲಿ ಮಿಂಚುತ್ತಿರುವ ಶಿವಂ ದುಬೆ ಅವರು ಆಯ್ಕೆಗಾರರ ಗಮನ ಸೆಳೆಯುವ ಸಾಧ್ಯತೆ ಹೆಚ್ಚಿದೆ. ಅವರು ಪಾಂಡ್ಯಗಿಂತ ಉತ್ತಮವಾಗಿ  ಆಲ್‌ರೌಂಡ್ ಆಟವಾಡಿದ್ದಾರೆ. ತಮ್ಮ ಬಿರುಸಾದ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಶಕ್ತಿ ಹೆಚ್ಚಿಸಿದ್ದಾರೆ. 

ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಆರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಅವರ ಸ್ಥಾನ ಖಚಿತವಾಗಿದೆ. ಇನ್ನೊಬ್ಬ ಬೌಲರ್ ಸ್ಥಾನಕ್ಕೆ ರವಿ ಬಿಷ್ಣೋಯಿ, ಆವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ ಅವರಲ್ಲಿ ಪೈಪೋಟಿ ಏರ್ಪಟ್ಟಿದೆ. ಅಕ್ಷರ್ ಬ್ಯಾಟಿಂಗ್ ಕೂಡ ಮಾಡಬಲ್ಲ ಆಲ್‌ರೌಂಡರ್ ಆಗಿದ್ದಾರೆ. ಆದ್ದರಿಂದ ಅವರಿಗೆ ಅವಕಾಶ ಹೆಚ್ಚು. ಆದರೆ ಆವೇಶ್ ಖಾನ್ ಅವರು ಇನಿಂಗ್ಸ್‌ನ ಕೊನೆ ಹಂತದ ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿರುವುದರಿಂದ ಸ್ಥಾನ ಲಭಿಸಿದರೆ ಅಚ್ಚರಿಯೇನಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT