ಅರಣ್ಯ ಇಲಾಖೆ ಅಧಿಕಾರಿಗಳಿಂದ ನ್ಯಾಯಾಂಗ ನಿಂದನೆ; ಆರೋಪ

7

ಅರಣ್ಯ ಇಲಾಖೆ ಅಧಿಕಾರಿಗಳಿಂದ ನ್ಯಾಯಾಂಗ ನಿಂದನೆ; ಆರೋಪ

Published:
Updated:

ಸಿದ್ದಾಪುರ (ಮಡಿಕೇರಿ): ಕಾಡಾನೆ– ಮಾನವ ಸಂಘರ್ಷಕ್ಕೆ ತಡೆಯೊಡ್ಡಬೇಕು. ಬೆಳೆನಾಶ ನಿಯಂತ್ರಿಸಿ ರೈತರಿಗೆ ರಕ್ಷಣೆ ಒದಗಿಸುವಂತೆ ಹೈಕೋರ್ಟ್‌ ನೀಡಿದ್ದ ಆದೇಶ ಪಾಲಿಸಿಲ್ಲ. ಇದು ನ್ಯಾಯಾಂಗ ನಿಂದನೆ ಆಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾರ್ಮಿಕರ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಕೆ.ಬಿ.ಹೇಮಚಂದ್ರ ಆರೋಪಿಸಿದರು.

ಸಣ್ಣ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯ ವಿವಿಧ ಸಂಘಟನೆಗಳೊಂದಿಗೆ ಮಡಿಕೇರಿಯಲ್ಲಿ ಫೆಬ್ರುವರಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕಾಡಾನೆ ಹಾವಳಿಗೆ ಕಡಿವಾಣ, ಸೂಕ್ತ ಪರಿಹಾರ, ಕೃಷಿಕರ ರಕ್ಷಣೆ ಸೇರಿದಂತೆ 12 ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗಿತ್ತು. ಆಗ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಅಧಿಕಾರಿಗಳು, ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪ್ರತಿಭಟನಾಕಾರರ ಕಣ್ಣೊರೆಸುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಬೆಳೆಗಾರರ ಹೋರಾಟ ಸಮಿತಿ ಗೌರವಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ‘ಹೈಕೋರ್ಟ್ ಅರಣ್ಯ ಸಂರಕ್ಷಣೆ ಮತ್ತು ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಪರೋಕ್ಷ ಹಾಗೂ ಕಡ್ಡಾಯವಾಗಿ ಪಾಲಿಸಬೇಕಾದ 17 ನಿರ್ದೇಶನ ನೀಡಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನ್ಯಾಯಾಂಗ ನಿಂದನೆ ಆಗಿದ್ದು, ಸಮಿತಿ ನೇತೃತ್ವದಲ್ಲಿ ಕಾನೂನು ಸಮರ ನಡೆಸುತ್ತೇವೆ’ ಎಂದರು.

ಮೇ 25ರಂದು ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಪ್ರಮುಖರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ನಂತರ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಸಂಘಟನೆ ಸಂಚಾಲಕ ಮಂಡೇಪಂಡ ಪ್ರವೀಣ ಬೋಪಯ್ಯ, ಉಪಾಧ್ಯಕ್ಷ ಕೆ.ಎಂ.ಕುಶಾಲಪ್ಪ, ಕೆ.ಬಿ.ಗಣಪತಿ, ವಿಕ್ರಂ ಬಿದ್ದಪ್ಪ, ಕೆ.ಎನ್‌.ಚಂಗಪ್ಪ, ಎ.ಎನ್‌.ಅಶೋಕ್‌, ಸುಜಯ್‌ ಗಣಪತಿ, ನವೀನ್‌ ಮೇದಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry