ಗುರುವಾರ , ಫೆಬ್ರವರಿ 25, 2021
20 °C
ಶಿವಾಜಿನಗರ ಕೋಟೆಯೊಳಗೆ ‘ಸುಬ್ರಮಣ್ಯ’ನ ಸಂಚಾರ

ಕ್ವಾರ್ಟರ್ಸ್‌, ಗ್ಯಾರೇಜ್‌ಗಳಲ್ಲೇ ಕಾಲ ಕಳೆದ ಕಟ್ಟಾ!

ಎಂ.ಸಿ.ಮಂಜುನಾಥ್ Updated:

ಅಕ್ಷರ ಗಾತ್ರ : | |

ಕ್ವಾರ್ಟರ್ಸ್‌, ಗ್ಯಾರೇಜ್‌ಗಳಲ್ಲೇ ಕಾಲ ಕಳೆದ ಕಟ್ಟಾ!

ಬೆಂಗಳೂರು: ಬೆಳಿಗ್ಗೆ ನಾಲ್ಕು ಕ್ವಾಟರ್ಸ್‌ಗಳಲ್ಲಿ ಮತಬೇಟೆ. ಉಪಾಹಾರದ ನಂತರ ತೆರೆದ ವಾಹನದಲ್ಲಿ ಕ್ಷೇತ್ರ ಸಂಚಾರ. ಬೀದಿ ಬದಿ ವ್ಯಾಪಾರಿ

ಗಳು ಹಾಗೂ ಮೆಕ್ಯಾನಿಕ್‌ಗಳೊಂದಿಗೆ ಸಮಾಲೋಚನೆ. ವಾಹನದಿಂದ ಕೆಳಗಿಳಿಯದ ನಾಯಕನ ವಿರುದ್ಧ ಮುನಿಸಿಕೊಂಡ ಕಾರ್ಯಕರ್ತರು...

ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಮಣ್ಯನಾಯ್ಡು ಶನಿವಾರ ಶಿವಾಜಿನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸುವಾಗ ಕಂಡು ಬಂದ ದೃಶ್ಯಗಳಿವು.

ಬೆಳಿಗ್ಗೆ 6.30ಕ್ಕೆ ಸದಾಶಿವನಗರದ ತಮ್ಮ ಮನೆಯಿಂದ ಕಾರ್ಯಕರ್ತರೊಂದಿಗೆ ಹೊರಟ ಕಟ್ಟಾ, ಮುಖ್ಯಮಂತ್ರಿ ಕಚೇರಿ ನೌಕರರ ಕ್ವಾರ್ಟರ್ಸ್, ರಾಜ

ಭವನ ನೌಕರರ ಕ್ವಾಟರ್ಸ್, ಪೊಲೀಸ್ ಸಿಐಡಿ ಕ್ವಾಟರ್ಸ್‌ಗಳಿಗೆ ಭೇಟಿ ಕೊಟ್ಟರು.

ಅಲ್ಲಿಂದ 10.30ಕ್ಕೆ ಶಿವಾಜಿನಗರ ‍ಪೊಲೀಸ್ ಠಾಣೆ ಎದುರು ಬಂದು, ತೆರೆದ ವಾಹನದಲ್ಲಿ ಬ್ರಾಡ್‌ವೇ, ರಸೆಲ್ ಮಾರುಕಟ್ಟೆ, ನರೋನಾ ರಸ್ತೆಗಳಲ್ಲಿ ಸಾಗಿದರು. ‘ಕ್ರಮ ಸಂಖ್ಯೆ ಒಂದು, ನಮ್ ಓಟ್ ನಿಮ್ದು’ ಎಂದು ಕಾರ್ಯಕರ್ತರು ತಮ್ಮ ನಾಯಕನ ಕಡೆಗೆ ಬೆರಳು ತೋರಿಸಿ ಘೋಷಣೆ ಕೂಗುತ್ತಿದ್ದರು. ಚಾಲಕ ವಾಹನ ನಿಲ್ಲಿಸಿದಾಗಲೆಲ್ಲ ಸಿಡಿಮಿಡಿಕೊಳ್ಳುತ್ತಿದ್ದ ಕಟ್ಟಾ, ‘ಹೇ ನಡಿಯಪ್ಪ.. ಟ್ರಾಫಿಕ್ ಜಾಮ್ ಆಗ್ತಿದೆ’ ಎಂದು ವಾಹನದ ಛಾವಣಿ ಬಡಿದು ಕೂಗಿಕೊಳ್ಳುತ್ತಿದ್ದರು. ಪದೇ ಪದೇ ಹಿಂದೆ ತಿರುಗಿ, ದಟ್ಟಣೆ ನೋಡುತ್ತಿದ್ದರು.

ವಾಹನದಿಂದ ಇಳಿಯದ ನಾಯಕನ ವರ್ತನೆಗೆ ಕೆಲ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಚಾಂದಿನಿ ಚೌಕ್ ವೃತ್ತದಲ್ಲಿ ಸಭೆ ಸೇರಲು ವಾಹನ ನಿಲ್ಲಿಸುತ್ತಿದ್ದಂತೆಯೇ, ‘ಕೆಳಗಿಳಿರಿ ಕಟ್ಟಾ ಸ್ವಾಮಿ. ಒಂದೊಂದು ಅಂಗಡಿಗೂ ಹೋಗಿ ಮತ ಕೇಳಿ. ಇಲ್ಲದಿದ್ದರೆ ಕಷ್ಟವಾಗುತ್ತೆ ನೋಡಿ’ ಎಂದು ಜನರ ಮಧ್ಯದಿಂದ ಒಂದು ಕೂಗು ಕೇಳಿಬಂತು.

‍ಆಗ ಪರಿಸ್ಥಿತಿ ಅರಿತ ಅವರು, ಬೇಸರದಲ್ಲೇ ವಾಹನದಿಂದಿಳಿದು ಚಾಂದಿನಿ ಚೌಕ್ ರಸ್ತೆಯಲ್ಲಿ ಹೆಜ್ಜೆ ಹಾಕಿದರು. ಹೂವಿನ ವ್ಯಾಪಾರಿ ಫಾರೂಖ್, ಹಾರ ಹಾಕಿ ಸ್ವಾಗತಿಸಿದರು. ಆ ರಸ್ತೆಯ ಏಳೆಂಟು ಗ್ಯಾರೇಜ್‌ಗಳಿಗೆ ಹೋಗಿ ಮೆಕ್ಯಾನಿಕ್‌ಗಳನ್ನು ಮಾತನಾಡಿಸಿದ ಅವರು, ‘ನನ್ನ ಕೈಲಿ ಆಗುತ್ತಿಲ್ಲ. ಗಾಡಿ ಹತ್ತುತ್ತೇನೆ’ ಎಂದು ಹಾರ ತೆಗೆದು ಪುನಃ ವಾಹನವೇರಿದರು.

ವೃತ್ತದಲ್ಲಿ ಕಟ್ಟಾ ಭಾಷಣ ಮಾಡುತ್ತಿರುವಾಗಲೇ, ಆಟೊಗೆ ‘ಪೊರಕೆ’ ಕಟ್ಟಿಕೊಂಡು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಂದರು. ಆಗ ಎಲ್ಲರ ಗಮನ ಆ ಆಟೊದತ್ತ ಹೋಯಿತು. ಕೂಡಲೇ ಕಟ್ಟಾ ಏರುಧ್ವನಿಯಲ್ಲಿ ಕೂಗುತ್ತಾ, ಜನರ ಗಮನವನ್ನು ವಾಪಸ್ ತಮ್ಮತ್ತ ಸೆಳೆದುಕೊಂಡರು.

‘ಶಿವಾಜಿನಗರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಈ ಕ್ಷೇತ್ರದಲ್ಲಿ ರಾಜಕೀಯವೂ ಬದಲಾಗುತ್ತಿಲ್ಲ; ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತಿಲ್ಲ. ಈ ಬಾರಿ ಯಾರು ಅಧಿಕಾರಕ್ಕೆ ಬರುತ್ತೀರೋ ಗೊತ್ತಿಲ್ಲ. ಕ್ಷೇತ್ರದ ಜನ ಮೂಗು ಮುಚ್ಚಿಕೊಂಡು ಓಡಾಡದಂತೆ ಮಾಡಿ ಸಾಕು’ ಎಂದು ವ್ಯಾಪಾರಿಗಳು ಮನವಿ ಮಾಡಿದರು.

2016ರ ಅಕ್ಟೋಬರ್‌ನಲ್ಲಿ ಶಿವಾಜಿನಗರದಲ್ಲಿ ಕೊಲೆಯಾದ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್ ಪತ್ನಿ ವಿದ್ಯಾ ಸಹ ವಾಹನದಲ್ಲಿದ್ದರು. ‘ಈಗ ಪತಿ ಇದ್ದಿದ್ದರೆ ಅವರಿಗೇ ಟಿಕೆಟ್ ಸಿಗುತ್ತಿತ್ತು’ ಎಂದು ನೋವಿನಿಂದ ಹೇಳಿದರು.

ಉರ್ದು ಭಾಷಣ: ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ಹೆಚ್ಚಿರುವ ಕಾರಣ ಕಟ್ಟಾ ಪ್ರಚಾರದುದ್ದಕ್ಕೂ ಉರ್ದು ಮಿಶ್ರಿತ ಹಿಂದಿಯಲ್ಲೇ ಭಾಷಣ ಮಾಡಿದರು. ಬಿಜೆಪಿಯ ಮುಂಬೈ ಘಟಕದ ಉಪಾಧ್ಯಕ್ಷ ಹೈದರ್ ಅಜಂ ಕಟ್ಟಾ ಬೆಂಬಲಕ್ಕೆ ನಿಂತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.