ಮೋದಿ ಭರವಸೆ ಭಾಷಣಕ್ಕೆ ಸೀಮಿತ

7
ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕೆ

ಮೋದಿ ಭರವಸೆ ಭಾಷಣಕ್ಕೆ ಸೀಮಿತ

Published:
Updated:

ಮಾನ್ವಿ:  ‘ಪ್ರಧಾನಿ ನರೇಂದ್ರ ಮೋದಿ ಯವರು ನೀಡುವ ಭರವಸೆಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿವೆ’ ಎಂದು ಲೋಕಸಭೆಯ ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಶನಿವಾರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‍ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಚಾಣಾಕ್ಷ ಭಾಷಣಕಾರನರೇಂದ್ರ ಮೋದಿಯವರು ತಮ್ಮ ಭಾಷಣಗಳ ಮೂಲಕ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಬಿಜೆಪಿಯವರು ಕೋಮುವಾದಿಗಳು ಹಾಗೂ ಸಂವಿಧಾನ ವಿರೋಧಿಗಳಾಗಿದ್ದಾರೆ. ಇವರಿಗೆ ಮತ ಹಾಕಿದರೆ ಬಡವರಿಗೆ, ದಲಿತರಿಗೆ ಸಿಗುವ ಮೀಸಲಾತಿ ಕಿತ್ತುಕೊಳ್ಳುತ್ತಾರೆ. ಆರ್‍ಎಸ್‍ಎಸ್ ನೀತಿಗಳನ್ನು ಜಾರಿಗೊಳಿಸುತ್ತಾರೆ. ಸಮಾಜವನ್ನು ಒಡೆಯುತ್ತಾರೆ. ಹಾಗಾಗಿ ಈ ಬಾರಿ ಮತದಾರರು ಎಚ್ಚರಿಕೆಯಿಂದ ಮತದಾನ ಮಾಡಬೇಕು’ಎಂದು ಮನವಿ ಮಾಡಿದರು.

‘ಮೋದಿಯವರು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಆಸೆ ತೋರಿಸಿದ್ದರು. ಅಲ್ಲದೆ ಪೆಟ್ರೋಲ್, ಡಿಸೇಲ್ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿಕೆಯಾಗಿದ್ದರೂ ಭಾರತದಲ್ಲಿ ಮಾತ್ರ ಬೆಲೆ ಇಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ಇದ್ದಾಗ ಅಡುಗೆ ಅನಿಲ ಬೆಲೆ ₹ 370 ಇತ್ತು. ಆದರೆ ಈಗ ₹ 800ಕ್ಕೆ ಏರಿಕೆಯಾಗಿದೆ. ಫಸಲ್‌ ಬಿಮಾ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಇದು ಶ್ರೀಮಂತ ಕಂಪೆನಿಗಳಿಗೆ ಲಾಭದಾಯಕವಾಗಿದೆ’ ಎಂದು ಅವರು ಆರೋಪಿಸಿದರು.

‘ಹೈದರಾಬಾದ್‌ ಕರ್ನಾಟಕ ಭಾಗಕ್ಕೆ 371(ಜೆ) ಕಲಂ ಜಾರಿ ಮಾಡಿದ್ದು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ₹8,700 ಕೋಟಿ ಸಾಲ ಮನ್ನಾ ಮಾಡಿದೆ. ಅನೇಕ ಜನಪರ ಯೋಜನೆಗಳನ್ನು ನೀಡಿದೆ. ಕಾಂಗ್ರೆಸ್ ನೀಡಿದ್ದ 165 ಭರವಸೆಗಳಲ್ಲಿ 16ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕರಿಗೆ ಮತ ಹಾಕಬೇಕು’ ಎಂದು ಹೇಳಿದರು.

ಸಂಸದ  ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಮಾತನಾಡಿದರು. ಈ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಿರಿಲಿಂಗಪ್ಪ ಮತ್ತು ಗಂಗಣ್ಣ ನಾಯಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಕೆ.ಇರಬಗೇರಾ, ಸಿರವಾರ ಮತ್ತು ಮಾನ್ವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯ್ಯನಗೌಡ ಸಿರವಾರ ಹಾಗೂ ಅಬ್ದುಲ್ ಗಫೂರ್ ಸಾಬ್, ರಾಜಾ ವಸಂತ ನಾಯಕ, ಲಕ್ಷ್ಮೀ ನಾರಾಯಣ ಯಾದವ್‌, ಚುಕ್ಕಿ ಸೂಗಪ್ಪ, ಪದಾಧಿಕಾರಿಗಳು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry