ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರಿಗೆ ಮಣಿದ ನೈಟ್‌ ರೈಡರ್ಸ್‌

ಮತ್ತೆ ಮಿಂಚಿದ ಸೂರ್ಯಕುಮಾರ್ ಯಾದವ್‌; ರಾಬಿನ್‌ ಉತ್ತಪ್ಪ ಅರ್ಧಶತಕ ವ್ಯರ್ಥ
Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಪ್ಲೇ ಆಫ್ ಹಂತಕ್ಕೇರುವ ಕನಸು ಕಾಣುತ್ತಿರುವ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನ ತನ್ನ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವನ್ನು 13 ರನ್‌ಗಳಿಂದ ಮಣಿಸಿತು.

ಸೂರ್ಯಕುಮಾರ್ ಯಾದವ್ (59; 39 ಎ, 2 ಸಿ, 7 ಬೌಂ) ಮತ್ತು ಎವಿನ್‌ ಲೂಯಿಸ್‌ (43; 28 ಎ, 2 ಸಿ, 5 ಬೌಂ) ಅವರ ಅತ್ಯುತ್ತಮ ಆರಂಭ, ಹಾರ್ದಿಕ್ ಪಾಂಡ್ಯ (35 ರನ್‌, 19ಕ್ಕೆ2 ವಿಕೆಟ್‌) ಅವರ ಆಲ್‌ರೌಂಡ್ ಆಟ ತಂಡದ ಗೆಲುವಿಗೆ ಕಾರಣವಾಯಿತು.

182 ರನ್‌ಗಳ ಗೆಲುವಿನ ಗುರಿ ಬೆನ್ನ‌ತ್ತಿದ ಕೋಲ್ಕತ್ತ ತಂಡದ ಆರಂಭ ಉತ್ತಮವಾಗಿರಲಿಲ್ಲ. 28 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಲಿನ್ ಮತ್ತು ಶುಭಮನ್ ಗಿಲ್ ಔಟಾದರು. ರಾಬಿನ್‌ ಉತ್ತ‍ಪ್ಪ (54; 35 ಎ, 3 ಸಿ, 6 ಬೌಂ), ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಆಟವಾಡಿ ಗೆಲುವಿನ ಭರವಸೆ ಮೂಡಿಸಿದರು. ಆದರೆ ಅಂತಿಮ ಓವರ್‌ಗಳಲ್ಲಿ ಚಾಣಾಕ್ಷ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಗೆಲುವನ್ನು ಕಸಿದುಕೊಂಡಿತು.

ಈ ಜಯದೊಂದಿಗೆ ಚಾಂಪಿಯನ್ನರ ನಾಕೌಟ್ ಹಂತಕ್ಕೇರುವ ಕನಸು ಜೀವಂತವಾಗಿ ಉಳಿಯಿತು. ಇದೇ ಒಂಬತ್ತರಂದು ಉಭಯ ತಂಡಗಳು ಕೋಲ್ಕತ್ತದಲ್ಲಿ ಮುಖಾಮುಖಿಯಾಗಲಿವೆ.

ಅಮೋಘ ಆರಂಭ: ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ಗೆ ಸೂರ್ಯಕುಮಾರ್ ಯಾದವ್ ಮತ್ತು ಎವಿನ್ ಲೂಯಿಸ್ ಅಮೋಘ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 91 ರನ್‌ ಸೇರಿಸಿದರು. 10ನೇ ಓವರ್‌ನಲ್ಲಿ ಆ್ಯಂಡ್ರೆ ರಸೆಲ್‌ ಈ ಜೊತೆಯಾಟವನ್ನು ಮುರಿದರು. ಅವರು ಹಾಕಿದ ನಿಧಾನಗತಿಯ ಎಸೆತ ಫಲ ನೀಡಿತು.

ಚೆಂಡಿನ ಗತಿಯನ್ನು ಅರ್ಥೈಸಲು ವಿಫಲರಾದ ಲೂಯಿಸ್‌ ಅವರು ಕವರ್ಸ್ ಕಡೆಗೆ ಡ್ರೈವ್‌ ಮಾಡಲು ಯತ್ನಿಸಿದರು. ಆದರೆ ಚೆಂಡು ಥರ್ಡ್‌ ಮ್ಯಾನ್ ಕಡೆಗೆ ಚಿಮ್ಮಿತು. ಕ್ರಿಸ್ ಲಿನ್ ಸುಲಭ ಕ್ಯಾಚ್ ಪಡೆದರು.

ನಾಯಕ ರೋಹಿತ್ ಶರ್ಮಾ ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲು ಆಗಲಿಲ್ಲ. 11 ರನ್‌ ಗಳಿಸಿದ ಅವರನ್ನು ಸುನಿಲ್ ನಾರಾಯಣ್‌ ವಾಪಸ್ ಕಳುಹಿಸಿದರು. ಸ್ವೀಪ್ ಮಾಡಲು ಯತ್ನಿಸಿದ ಶರ್ಮಾ ಮಿಡ್‌ವಿಕೆಟ್‌ನಲ್ಲಿದ್ದ ಬದಲಿ ಆಟಗಾರ ರಿಂಕುಗೆ ಕ್ಯಾಚ್ ನೀಡಿ ಮರಳಿದರು.

15ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಔಟಾದರು. ಆ್ಯಂಡ್ರೆ ರಸೆಲ್‌ ಅವರ ಎಸೆತವನ್ನು ಕಟ್ ಮಾಡಲು ಪ್ರಯತ್ನಿಸಿದ ಯಾದವ್ ವಿಕೆಟ್ ಕೀಪರ್‌ ದಿನೇಶ್ ಕಾರ್ತಿಕ್‌ಗೆ ಕ್ಯಾಚ್ ನೀಡಿದರು.

ನಂತರ ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃಣಾಲ್ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. ಇವರು ಐದನೇ ವಿಕೆಟ್‌ಗೆ 24 ರನ್‌ ಸೇರಿಸಿದರು. ಕೃಣಾಲ್ ಪಾಂಡ್ಯ ಔಟಾದರೂ ಹಾರ್ದಿಕ್‌ ಅಮೋಘ ಬ್ಯಾಟಿಂಗ್ ಮುಂದುವರಿಯಿತು.

20 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿದ ಅವರು 35 ರನ್‌ ಗಳಿಸಿದರು. ಜೆಪಿ ಡುಮಿನಿ ಜೊತೆ ಐದನೇ ವಿಕೆಟ್‌ಗೆ 19 ಎಸೆತಗಳಲ್ಲಿ 31 ರನ್‌ ಸೇರಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಗಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT