ಸಿಲಿಂಡರ್‌ ಸ್ಫೋಟ: ಕಟ್ಟಡ ನೆಲಸಮ: ಮಗು ಸೇರಿ ಮೂವರಿಗೆ ಗಾಯ, ಒಬ್ಬ ಸಾವು

7

ಸಿಲಿಂಡರ್‌ ಸ್ಫೋಟ: ಕಟ್ಟಡ ನೆಲಸಮ: ಮಗು ಸೇರಿ ಮೂವರಿಗೆ ಗಾಯ, ಒಬ್ಬ ಸಾವು

Published:
Updated:
ಸಿಲಿಂಡರ್‌ ಸ್ಫೋಟ: ಕಟ್ಟಡ ನೆಲಸಮ: ಮಗು ಸೇರಿ ಮೂವರಿಗೆ ಗಾಯ, ಒಬ್ಬ ಸಾವು

ಬೆಂಗಳೂರು: ಕಾಡುಗೋಡಿಯ ಬಾಪೂಜಿ ವೃತ್ತದ ಸಮೀಪ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿರುವ ಮಳಿಗೆಯೊಂದರಲ್ಲಿ ಭಾನುವಾರ ಸಿಲಿಂಡರ್‌ ರೀಫಿಲ್ಲಿಂಗ್‌ ಮಾಡುತ್ತಿದ್ದ ವೇಳೆ ಸಿಲಿಂಡರ್‌ ಸ್ಫೋಟಗೊಂಡು ಎರಡು ಅಂತಸ್ತಿನ ಕಟ್ಟಡ ಕುಸಿದು, ಒಬ್ಬ ಮೃತಪಟ್ಟಿದ್ದಾನೆ. ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಅಪ್ಸರ್‌ ಪಾಷಾ (23) ಮೃತಪಟ್ಟ ದುರ್ದೈವಿ. ಸುಲ್ತಾನಾ ಮತ್ತು ಇವರ ಪುತ್ರ ಸೈಯದ್‌ ಹಾಗೂ ಪ್ರದೀಪ್‌ (20) ಅವರಿಗೆ ಸುಟ್ಟಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಬಿ.ಎ.ಕೆ ಗ್ಯಾಸ್‌ ವಿತರಣಾ ಮಳಿಗೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಿಲಿಂಡರ್‌ ರೀಫಿಲ್ಲಿಂಗ್‌ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯಾಗಿದೆ. ಇದನ್ನು ಗಮನಿಸಿದೆ ಕಾರ್ಮಿಕರು ಲೈಟರ್‌ ಹಚ್ಚಿದ್ದಾರೆ. ಮರುಕ್ಷಣವೇ ಸಿಲಿಂಡರ್‌ ಸ್ಫೋಟಗೊಂಡಿದೆ‘ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು‌ ತಿಳಿಸಿದ್ದಾರೆ.

‘ಮಳಿಗೆಯಲ್ಲಿ 20ರಿಂದ 30 ಸಿಲಿಂಡರ್‌ ಸಂಗ್ರಹ ಇತ್ತು. ಹಾಗಾಗಿ ಸ್ಫೋಟದ ತೀವ್ರತೆಗೆ ಎರಡಂತಸ್ತಿನ ಕಟ್ಟಡ ನೆಲಸಮವಾಗಿದೆ. ಈ ವೇಳೆ ನಾಲ್ವರೂ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದರು. ಕಾಡುಗೋಡಿ ಮತ್ತು ವೈಟ್‌ಫಿಲ್ಡ್‌ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಅವರನ್ನು ರಕ್ಷಸಿದ್ದಾರೆ’ ಎಂದರು.

‘ಕಟ್ಟಡ ಕುಸಿದಾಗ ಮಹಡಿಯ ಮೇಲಿದ್ದ ಸುಲ್ತಾನ ಹಾಗೂ ಸೈಯದ್‌ ಅವರು ಕೆಳಗೆ ಬಿದ್ದಿದ್ದಾರೆ. ಕಟ್ಟಡದ ಅವಶೇಷಗಳು ಅವರ ಮೈಮೇಲೆ ಬಿದ್ದಿದ್ದವು. ಕಟ್ಟಡದೊಳಗೆ ಸಿಕ್ಕಿಹಾಕಿಕೊಂಡಿದ್ದ ಅಸ್ಸಾಂ ಮೂಲದ ಪ್ರದೀಪ್ ಅವರನ್ನು ಸತತ ಆರು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ’ ಎಂದು

ತಿಳಿಸಿದರು.

ಅಕ್ರಮ ರೀಫಿಲ್ಲಿಂಗ್‌ ವ್ಯವಹಾರ

ಬಿ.ಎ.ಕೆ ಗ್ಯಾಸ್‌ ವಿತರಣಾ ಮಳಿಗೆಯಲ್ಲಿ ಅಕ್ರಮ ರಿಫಿಲ್ಲಿಂಗ್ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದ್ದು, ಮಾಲೀಕ ಖಾಲಿದ್ ಘಟನೆಯ ನಂತರ ತಲೆ ಮರೆಸಿಕೊಂಡಿದ್ದಾನೆ. ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಬ್ಬಂದಿ ಅಸ್ವಸ್ಥ: ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry