ಕರ್ನಾಟಕದ ಅಭಿವೃದ್ಧಿ– ಬಿಜೆಪಿ ಮಲತಾಯಿ ಧೋರಣೆ

7

ಕರ್ನಾಟಕದ ಅಭಿವೃದ್ಧಿ– ಬಿಜೆಪಿ ಮಲತಾಯಿ ಧೋರಣೆ

Published:
Updated:

ಬೆಂಗಳೂರು: ‘ಕರ್ನಾಟಕದ ಅಭಿವೃದ್ಧಿ ಕುರಿತು ಎನ್‌ಡಿಎ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ’ ಎಂದು ಕಾಂಗ್ರೆಸ್‌ ಮುಖಂಡರಾದ ಮೀರಾ ಕುಮಾರ್‌ ಆರೋಪಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರು ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಾಗ ಪ್ರಧಾನಿ ನರೇಂದ್ರ ಮೋದಿ ಕಿವಿಗೊಟ್ಟಿಲ್ಲ. 2016–17ರಲ್ಲಿ ರಾಜ್ಯದ 160 ತಾಲ್ಲೂಕುಗಳಲ್ಲಿ ಬರಗಾಲವಿತ್ತು. ಕರ್ನಾಟಕ ಸರ್ಕಾರ ₹ 3,311 ಕೋಟಿ ಪರಿಹಾರ ಬಿಡುಗಡೆ ಮಡುವಂತೆ ಮೊರೆ ಇಟ್ಟರೆ, ಕೇಂದ್ರ ಸರ್ಕಾರ ಕೇವಲ ₹ 795.5 ಕೋಟಿ ನೀಡಿತ್ತು’ ಎಂದರು.

ಕೇಂದ್ರ ಸರ್ಕಾರದ ನೆರವಿನಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಇದರಿಂದಾಗಿ, 46 ಕಾಮಗಾರಿಗಳ ಪೈಕಿ 22 ಕಾಮಗಾರಿಗಳಿಗೆ ಅಂದಾಜು ವೆಚ್ಚಕ್ಕಿಂತ ಶೇ 112 ರಷ್ಟು ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಪರಿಶಿಷ್ಟ ಜಾತಿ ಉಪಯೋಜನೆ, ಪರಿಶಿಷ್ಟ ಪಂಗಡ ಉಪಯೋಜನೆ ಹಾಗೂ ಹಿಂದುಳಿದ ಪ್ರದೇಶಗಳ ಧನಸಹಾಯವನ್ನು ರದ್ದುಗೊಳಿಸಿದೆ. ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ವೇತನಕ್ಕೆ 2015–16ರಲ್ಲಿ ಹಾಗೂ 2016–17ರಲ್ಲಿ ಕೇಂದ್ರ ಬಿಡಿಗಾಸನ್ನೂ ನೀಡಿಲ್ಲ. 2017–18ರಲ್ಲಿ ಕೇವಲ ₹ 12.64 ಕೋಟಿ ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ ರಾಜ್ಯಕ್ಕೆ 2013–14ರಲ್ಲಿ ಯುಪಿಎ ಸರ್ಕಾರ ₹ 20,121 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೆ, ಎನ್‌ಡಿಎ ಸರ್ಕಾರ 2015–16ರಲ್ಲಿ ಇದನ್ನು ₹ 2,808 ಕೋಟಿಗೆ ಹಾಗೂ 2016–17ರಲ್ಲಿ ₹ 1,946 ಕೋಟಿಗೆ ಇಳಿಸಿದೆ ಎಂದರು.

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ರಾಜಸ್ಥಾನ, ಗೋವಾ ಹಾಗೂ ಗುಜರಾತ್‌ಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಹೆಚ್ಚುತ್ತಿವೆ. ಆದರೆ ಕರ್ನಾಟಕದಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ ಎಂದರು.

‘ಬೇಟಿ ಬಚಾವೊ, ಬೇಟಿ ಪಢಾವೊ– ಪ್ರಚಾರಕ್ಕೆ ಮಾತ್ರ’

‘ಬೇಟಿ ಬಚಾವೋ ಬೇಟಿ ಪಢಾವೊ ಯೋಜನೆ ಕೇವಲ ಪ್ರಚಾರ ಗಿಟ್ಟಿಸಲು ಸೀಮಿತ’ ಎಂದು ಮೀರಾ ಕುಮಾರ್‌ ಆರೋಪಿಸಿದರು.

‘ಈ ಯೋಜನೆಯಡಿ ಕೇಂದ್ರ ಸರ್ಕಾರ 2018–19ನೇ ಸಾಲಿನಲ್ಲಿ ಪ್ರತಿ ಜಿಲ್ಲೆಗೆ ಕೇವಲ ₹ 43.75 ಲಕ್ಷ ಬಿಡುಗಡೆ ಮಾಡಿದೆ. ಇಷ್ಟು ಕಡಿಮೆ ಮೊತ್ತದಿಂದ ಏನುಪಯೋಗ’ ಎಂದು ಪ್ರಶ್ನಿಸಿದರು.

ಮಹಿಳಾ ಸುರಕ್ಷತೆಗಾಗಿ ರೂಪಿಸಿರುವ ನಿರ್ಭಯಾ ನಿಧಿಯ ₹ 3600 ಕೋಟಿಯಲ್ಲಿ ನಾಲ್ಕು ವರ್ಷಗಳಲ್ಲಿ ಕೇವಲ ₹ 825 ಕೋಟಿ ಬಳಕೆ ಆಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry