ಹಸಿವು ಮುಕ್ತ ಮಾಡಿದ್ದು ಕಾಂಗ್ರೆಸ್‌ ಸಾಧನೆ

7
ಲಕ್ಷ್ಮೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಚಿವ ಎಚ್‌.ಕೆ. ಪಾಟೀಲರಿಂದ ಪ್ರಚಾರ

ಹಸಿವು ಮುಕ್ತ ಮಾಡಿದ್ದು ಕಾಂಗ್ರೆಸ್‌ ಸಾಧನೆ

Published:
Updated:

ಲಕ್ಷ್ಮೇಶ್ವರ: ‘ಅನ್ನಭಾಗ್ಯದ ಮೂಲಕ ರಾಜ್ಯವನ್ನು ಹಸಿವು ಮುಕ್ತ ಮಾಡಿದ್ದು ಸಿದ್ಧರಾಮಯ್ಯನವರ ಕಾಂಗ್ರೆಸ್‌ ಸರ್ಕಾರ. ಬರಗಾಲದ ಸಮಯದಲ್ಲಿ ರಾಜ್ಯದ ನೂರಾರು ಹಳ್ಳಿಗಳ ಜನರು ತಿನ್ನಲು ಅಕ್ಕಿ ಇಲ್ಲದೆ ಪರದಾಡುತ್ತಿದ್ದರು. ಅನ್ನಭಾಗ್ಯ ಯೋಜನೆ ಅವರಿಗೆ ಆಹಾರ ಭದ್ರತೆ ನೀಡಿತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಕೃಷಿಭಾಗ್ಯ ಯೋಜನೆ ಅನುಷ್ಠಾನದಿಂದ ರೈತರಿಗೆ ಸಾಕಷ್ಟು ಅನುಕೂಲ ಆಗುವುದರ ಜೊತೆಗೆ ಕೃಷಿಹೊಂಡ ನಿರ್ಮಿಸಿ ಬಯಲು ಸೀಮೆಯಲ್ಲಿ ನೀರಿನ ಬರ ನೀಗಿಸಲು ಕಾಂಗ್ರೆಸ್‌ ಮಾಡಿದ ಕೆಲಸ ಶ್ಲಾಘನೀಯವಾದದ್ದು. ರಾಜ್ಯದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಪ್ರತಿ ಹಳ್ಳಿ ಪ್ರಜೆಯೂ ಶುದ್ಧ ನೀರನ್ನು ಕುಡಿಯುವಂತೆ ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವುದು ಅದರ ಕನಸಿನ ಮಾತು. ಮತದಾರರು ಕಾಂಗ್ರೆಸ್‌ನತ್ತ ಹೆಚ್ಚಿನ ಒಲವು ಹೊಂದಿದ್ದು ಈ ಬಾರಿ ಮತ್ತೆ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ ‘ಐದು ವರ್ಷಗಳಲ್ಲಿ ಶಿರಹಟ್ಟಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಕ್ಷೇತ್ರದ ಪ್ರತಿ ಹಳ್ಳಿಯಲ್ಲೂ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ವ್ಯರ್ಥವಾಗಿ ಹರಿಯುತ್ತಿದ್ದ ಮಳೆ ನೀರನ್ನು ತಡೆಹಿಡಿಯುವುದರ ಸಲುವಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಳ್ಳಗಳಿಗೆ ಬ್ಯಾರೇಜ್‌ ನಿರ್ಮಿಸಿದ್ದು ಕಾಂಗ್ರೆಸ್‌ನ ಸಾಧನೆಗಳಲ್ಲಿ ಒಂದಾಗಿದೆ. ಇಂಥ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೀರಣ್ಣ ಅಂಗಡಿ, ಜಿಲ್ಲಾ ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಪಿ. ಬಳಿಗಾರ, ತಾಲ್ಲೂಕು ಪಂಚಾಯ್ತಿ ಸದಸ್ಯ ಅಶೋಕಯ್ಯ ಮುಳಗುಂದಮಠ, ವಿ.ಜಿ. ಪಡಗೇರಿ, ಶಂಕ್ರಪ್ಪ ಮ್ಯಾಗೇರಿ, ಟಿ.ಈಶ್ವರ, ಎಂ.ಎಸ್‌. ದೊಡ್ಡಗೌಡ್ರ, ರಾಮಣ್ಣ ಲಮಾಣಿ ಶಿಗ್ಲಿ, ರಾಜಣ್ಣ ಹುಲಗೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry