ಶುಕ್ರವಾರ, ಫೆಬ್ರವರಿ 26, 2021
26 °C
ಕುಮಟಾ– ಹೊನ್ನಾವರ ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು

ಬಂಡಾಯ ಬೇಗುದಿಯ ಲಾಭ ಯಾರಿಗೆ?

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಬಂಡಾಯ ಬೇಗುದಿಯ ಲಾಭ ಯಾರಿಗೆ?

ಕಾರವಾರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಕುಮಟಾ– ಹೊನ್ನಾವರ ಕ್ಷೇತ್ರ ಬಂಡಾಯ ಅಭ್ಯರ್ಥಿಗಳಿಂದಾಗಿ ಹೆಚ್ಚು ಗಮನ ಸೆಳೆಯುತ್ತಿದೆ. ಬಿಜೆಪಿಯಿಂದ ದಿನಕರ ಶೆಟ್ಟಿ, ಕಾಂಗ್ರೆಸ್‌ನಿಂದ ಶಾರದಾ ಶೆಟ್ಟಿ, ಜೆಡಿಎಸ್‌ನಿಂದ ಪ್ರದೀಪ ನಾಯಕ ಕಣದಲ್ಲಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಸೂರಜ್ ನಾಯ್ಕ ಸೋನಿ, ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಯಶೋಧರ ನಾಯ್ಕ, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿರುವ ಕೃಷ್ಣ ಗೌಡ ಅವರೂ ಕ್ಷೇತ್ರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿರುವ ಕ್ಷೇತ್ರಗಳ ಪೈಕಿ ಕುಮಟಾ ಕೂಡ ಪ್ರಮುಖವಾಗಿದೆ.

ಈ ಕ್ಷೇತ್ರದ ರಾಜಕೀಯದಲ್ಲಿ ಪ್ರಮುಖವಾಗಿರುವ ಶೆಟ್ಟಿ ಕುಟುಂಬದಲ್ಲಿ ಗೆಲುವಿಗಾಗಿ ಐದನೇ ಬಾರಿಗೆ ಹೋರಾಟ ನಡೆಯುತ್ತಿದೆ. 2008ರಲ್ಲಿ ಕೇವಲ 20 ಮತಗಳ ಅಂತರದಿಂದ ದಿನಕರ ಶೆಟ್ಟಿ ಜಯ ಸಾಧಿಸಿದ್ದರು. ಆಗ ಅವರು ಜೆಡಿಎಸ್‌ನಲ್ಲಿದ್ದರು. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಅವರು 420 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಅದೇ ರೀತಿಯ ರೋಚಕ ಫಲಿತಾಂಶ ಈ ಬಾರಿಯೂ ಪುನರಾವರ್ತನೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಕನಸಿಗೆ ಪಕ್ಷೇತರ ಅಭ್ಯರ್ಥಿಗಳು ತಣ್ಣೀರು ಎರಚಲು ಕಾತರರಾಗಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು, ಆರು ವರ್ಷ ಅಮಾನತುಗೊಂಡಿರುವ ಸೂರಜ್ ನಾಯ್ಕ ಸೋನಿ ಹಿಂದುತ್ವ, ದೇಶಸೇವೆಯನ್ನೇ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಇನ್ನೊಂದೆಡೆ ಯಶೋಧರ ನಾಯ್ಕ ಪಕ್ಷಕ್ಕೆ ಮೊದಲೇ ರಾಜೀನಾಮೆ ನೀಡಿ ತಮ್ಮದೇ ಸಂಘಟನೆಯ ಬಲದೊಂದಿಗೆ ಸ್ಪರ್ಧೆಗಿಳಿದಿದ್ದಾರೆ.

ಮಹಿಳಾ ಸಬಲೀಕರಣ ಅವರ ಪ್ರಮುಖ ಪ್ರಚಾರ ವಿಚಾರವಾಗಿದೆ. ಇತ್ತ ಕಾಂಗ್ರೆಸ್‌ನ ಶಾರದಾ ಶೆಟ್ಟಿ ಅವರಿಗೂ ಬಂಡಾಯದ ಬಿಸಿ ತಟ್ಟಿದೆ. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೃಷ್ಣ ಗೌಡ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಕಾಂಗ್ರೆಸ್ ಉಚ್ಚಾಟಿಸಿದೆ. ಸುಮನಾ ಹೆಗಡೆ ಕೂಡ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿರುವ ಪ್ರದೀಪ ನಾಯಕ ಅವರೂ ಪಕ್ಷವನ್ನು ಹೊರತಾಗಿಯೂ ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಎದುರಿಸುತ್ತಿರುವ ಬಂಡಾಯದ ಬೇಗುದಿಯಿಂದ ತಮಗೆ ಮತ್ತಷ್ಟು ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

‘ಶಾಸಕರಿಂದ ಕೆಲಸವಾಗಿದೆ’: ಈ ಕ್ಷೇತ್ರದಲ್ಲಿರುವುದು ಶಾಸಕಿಯಾದರೂ ಹಲವಾರು ಯೋಜನೆಗಳನ್ನು ಜಾರಿ ಮಾಡಿಸಿದ್ದಾರೆ. ಎಲ್ಲ ಸಮಾಜದವರು ಜತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಯಾರಿಗೂ ಅನ್ಯಾಯವಾದ ಭಾವನೆಯಿಲ್ಲ. ಅರಣ್ಯ ಒತ್ತುವರಿದಾರರಿಗೆ ಹಕ್ಕುಪತ್ರ ಕೊಡಿಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ಹಲವರಿಗೆ ಈಗಾಗಲೇ ಸಿಕ್ಕಿದ್ದು, ಉಳಿದವರಿಗೂ ಸಿಗುವ ಭರವಸೆಯಿದೆ ಎನ್ನುತ್ತಾರೆ ಪಟ್ಟಣದ ನಿವಾಸಿ ಕೇಶವಾಚಾರ್.

‘ಸಮಸ್ಯೆಗಳು ಬಗೆಹರಿದಿಲ್ಲ’: ಪಟ್ಟಣದಲ್ಲಿ ಸಾಕಷ್ಟು ವರ್ಷಗಳಿಂದ ಇರುವ ಜ್ವಲಂತ ಸಮಸ್ಯೆಗಳಿಗೆ ಇನ್ನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ಬಾಡ ಗ್ರಾಮದ ನಿವಾಸಿ ದೇವಿದಾಸ ನಾಯ್ಕ ಅವರ ಅಸಮಾಧಾನ.

‘ಪಟ್ಟಣದಲ್ಲಿ ಒಳಚರಂಡಿ ಸಮಸ್ಯೆ ನಾಗರಿಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಚರಂಡಿ ನಿರ್ಮಾಣವೂ ಪೂರ್ಣಗೊಂಡಿಲ್ಲ, ರಸ್ತೆಯೂ ದುರಸ್ತಿಯಾಗಿಲ್ಲ. ಇನ್ನು, ಕ್ಷೇತ್ರದ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಗಮನಹರಿಸಿಲ್ಲ. ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ’ ಎಂದು ಅವರು ದೂರುತ್ತಾರೆ.

ಕ್ಷೇತ್ರದ ಸಮಸ್ಯೆಗಳೇನು?

ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಅಪೂರ್ಣ

ಕ್ಷೇತ್ರದಲ್ಲಿ ಕುಡಿಯುವ ನೀರಿನ ಕೊರತೆ

ನಿಧಾನಗತಿಯಲ್ಲಿ ಅಘನಾಶಿನಿ ನದಿಯಿಂದ ಕುಮಟಾಕ್ಕೆ, ಶರಾವತಿ

ನದಿಯಿಂದ ಹೊನ್ನಾವರಕ್ಕೆ ಕುಡಿಯುವ ನೀರು ಯೋಜನೆ

ಉನ್ನತ ಶಿಕ್ಷಣಕ್ಕೆ ಸಂಸ್ಥೆಗಳಿಲ್ಲ

ಖಾರ್‌ಲ್ಯಾಂಡ್‌ಗಳಿಗೆ ನಿರ್ಮಿಸಲಾದ ಉಪ್ಪು ನೀರಿನ ತಡೆಗೋಡೆಗಳ ನಿರ್ವಹಣೆಯಾಗಿಲ್ಲ

ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ಬೇಕು ಬೇಡ ಚರ್ಚೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.