ಮೀಸಲು ಕ್ಷೇತ್ರದಲ್ಲಿ ಬಿರುಸಿನ ಕದನ

5
ಕ್ಷೇತ್ರ ಉಳಿಸಿಕೊಳ್ಳಲು ಎಸ್‌. ಅಂಗಾರ: ಕಸಿಯಲು ಡಾ.ಬಿ.ರಘು ಪೈಪೋಟಿ

ಮೀಸಲು ಕ್ಷೇತ್ರದಲ್ಲಿ ಬಿರುಸಿನ ಕದನ

Published:
Updated:

ಮಂಗಳೂರು: ಕರಾವಳಿಯ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಸುಳ್ಯದಲ್ಲಿ ಗದ್ದುಗೆ ಏರಲು ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಐದು ಬಾರಿ ಶಾಸಕರಾಗಿರುವ ಬಿಜೆಪಿಯ ಎಸ್‌.ಅಂಗಾರ ಸಾಧನೆಗಳನ್ನು ಮುಂದಿಟ್ಟು ಕ್ಷೇತ್ರ ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಮೂರು ಬಾರಿ ಸೋತಿರುವ ಕಾಂಗ್ರೆಸ್‌ ಅಭ್ಯರ್ಥಿ ಡಾ.ಬಿ.ರಘು ಅನುಕಂಪದ ಅಲೆಯನ್ನು ಆಧರಿಸಿ ಗೆಲುವನ್ನು ಕಸಿದುಕೊಳ್ಳುವ ತವಕದಲ್ಲಿದ್ದಾರೆ. ಅಭಿವೃದ್ಧಿ, ಓಲೈಕೆ, ಹಿಂದುತ್ವ ಎಲ್ಲವೂ ಇಲ್ಲಿ ಅಂತರ್ಮುಖಿಯಾಗಿ ಕೆಲಸ ಮಾಡುತ್ತಿವೆ.

ಅಂಗಾರ ಮತ್ತು ಡಾ.ಬಿ.ರಘು ನಡುವೆ ನೇರ ಹಣಾಹಣಿ ಕಾಣಿಸುತ್ತಿದೆ. ಜೆಡಿಎಸ್‌ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮೈತ್ರಿಯ ಫಲವಾಗಿ ಈ ಮೀಸಲು ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಬೆಳ್ತಂಗಡಿಯ ರಘು ಕಣದಲ್ಲಿದ್ದಾರೆ. ಚಂದ್ರಶೇಖರ ಪಲ್ಲತ್ತಡ್ಕ, ಸಂಜೀವ್‌ ಬಾಬುರಾವ್‌ ಕುರಂಡ್ವಾಡ ಮತ್ತು ಸುಂದರ ಕೆ. ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ. ಆರು ಅಭ್ಯರ್ಥಿಗಳಿದ್ದರೂ ಗೆಲುವಿಗಾಗಿ ಕದನ ನಡೆಯುತ್ತಿರುವುದು ಬಿಜೆಪಿ- ಕಾಂಗ್ರೆಸ್ ನಡುವೆ ಮಾತ್ರ.

ಮದ್ರಾಸ್ ವಿಧಾನಸಭೆಯೂ ಸೇರಿದಂತೆ ಈ ಕ್ಷೇತ್ರಕ್ಕೆ 14 ಚುನಾವಣೆಗಳು ನಡೆದಿವೆ. ತಲಾ ಆರು ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಗೆಲುವು ಸಾಧಿಸಿವೆ. ಸತತ ಐದು ಅವಧಿಯಿಂದ ಸುಳ್ಯ ಕ್ಷೇತ್ರ ಬಿಜೆಪಿ ಹಿಡಿತದಲ್ಲೇ ಉಳಿದಿದೆ. ಶಾಸಕ ಅಂಗಾರ ಅವರಿಗೆ ಇದು ಏಳನೇ ಚುನಾವಣೆ. ಆರು ಬಾರಿ ಸ್ಪರ್ಧಿಸಿದ್ದು, ನಿರಂತರವಾಗಿ ಐದು ಬಾರಿ ಗೆಲುವು ಸಾಧಿಸಿದವರು. ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ರಘು ಅವರನ್ನು ಹಿಂದಿನ ಮೂರು ಬಾರಿ ಸೋಲಿಸಿದ್ದರು.

ಐದು ಅವಧಿಯಿಂದ ಬಿಜೆಪಿ ವಶವಾಗಿರುವ ಕ್ಷೇತ್ರದಲ್ಲಿ ಮರಳಿ ಜಯಭೇರಿ ಬಾರಿಸಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದೆ. ಆದರೆ, ಕಳೆದ ಬಾರಿ ಕಾಂಗ್ರೆಸ್‌ನ ಅಲೆಯ ನಡುವೆಯೂ ಬಿಜೆಪಿಯ ಮಾನ ಉಳಿಸಿದ್ದ ಏಕೈಕ ಕ್ಷೇತ್ರ ಕೈ ಜಾರದಂತೆ ತಡೆಯಲು ಕಮಲ ಪಡೆಯ ನಾಯಕರು ತರಹೇವಾರಿ ದಾಳಗಳನ್ನು ಉರುಳಿಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ಒಂದು ಸುತ್ತು ಪ್ರಚಾರ ಮುಗಿಸಿದ್ದಾರೆ. ಹಿಂದುತ್ವದ ಆಧಾರದಲ್ಲಿ ಮತಗಳನ್ನು ಸೆಳೆಯಲು ಕೊನೆಯ ಕ್ಷಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಪ್ರಚಾರಕ್ಕೆ ಕರೆತರಲಾಗುತ್ತಿದೆ.

ಅನುಕಂಪದಲ್ಲಿ ಮೇಲೇಳಲು ಯತ್ನ: ಡಾ.ಬಿ.ರಘು 2004ರಲ್ಲಿ ಅಂಗಾರ ವಿರುದ್ಧ 17,085 ಮತಗಳ ಅಂತರದಲ್ಲಿ ಸೋತಿದ್ದರು. 2008ರಲ್ಲಿ ಈ ಅಂತರ 4,322ಕ್ಕೆ ಕುಸಿದಿದ್ದರೆ, 2013ರ ಚುನಾವಣೆಯಲ್ಲಿ ಕೇವಲ 1,373 ಮತಗಳಿಂದ ಗೆಲುವು ಕೈತಪ್ಪಿತ್ತು. ಮೂರು ಬಾರಿ ಸೋತಿರುವ ತಮಗೆ ಒಮ್ಮೆ ಅವಕಾಶ ಕೊಡಿ ಎಂದು ಮತದಾರರಲ್ಲಿ ಕೇಳುತ್ತಿರುವ ಅವರು, ಅನುಕಂಪದ ಅಲೆಯಲ್ಲಿ ಗೆದ್ದುಬರುವ ಪ್ರಯತ್ನ ಮಾಡುತ್ತಿದ್ದಾರೆ.

2013ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ 8,469 ಮತ ಗಳಿಸಿದ್ದ ನಂದರಾಜ್‌ ಸಂಕೇಶ್‌ ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಆ ಚುನಾವಣೆಯಲ್ಲಿ ಎಸ್‌ಡಿಪಿಐ 2,568 ಮತ ಗಳಿಸಿತ್ತು. ಈ ಬಾರಿ ಎಸ್‌ಡಿಪಿಐ ಕಣದಲ್ಲಿಲ್ಲ. ಈ ಎರಡೂ ಅಂಶಗಳು ತನಗೆ ಪೂರಕವಾಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ ಪಕ್ಷದಲ್ಲಿದೆ.

ಸುಳ್ಯ ತಾಲ್ಲೂಕಿಗೆ ಈವರೆಗೂ 110 ಕೆ.ವಿ. ವಿದ್ಯುತ್‌ ಮಾರ್ಗ ಬರದೇ ಇರುವುದು, ಕೆಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಆಗದೇ ಇರುವುದನ್ನು ಕಾಂಗ್ರೆಸ್‌ ಅಭ್ಯರ್ಥಿ ಚುನಾವಣಾ ಅಸ್ತ್ರವ ನ್ನಾಗಿ ಬಳಸುತ್ತಿದ್ದಾರೆ. ‘ಅಂಗಾರ 24 ವರ್ಷ ಶಾಸಕರಾದರೂ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ. ಒಂದು ಬಾರಿ ನನಗೆ ಅವಕಾಶ ಕೊಟ್ಟು ನೋಡಿ. ನಿಮ್ಮ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ’ ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಅಂಗಾರ ಅವರ ಸರಳ ಜೀವನ ಶೈಲಿ, ಐದು ಬಾರಿ ಶಾಸಕರಾದರೂ ಅವರ ಕುಟುಂಬದ ಆಸ್ತಿ ಹೆಚ್ಚದೇ ಇರುವುದನ್ನು ಬಿಜೆಪಿ ಪ್ರಚಾರಕ್ಕೆ ಬಳಸುತ್ತಿದೆ. ಅಮಿತ್‌ ಶಾ ಅವರ ಯಾತ್ರೆ ಸಮಯದಲ್ಲಿ ಸುಳ್ಯದಲ್ಲಿ ಜಿಲ್ಲೆಯಲ್ಲೇ ಹೆಚ್ಚು ಬೆಂಬಲ ವ್ಯಕ್ತವಾಗಿತ್ತು. ಹಿಂದುತ್ವದ ಹೆಸರಿನಲ್ಲಿ ಮತ ಸೆಳೆಯುವ ಕೆಲಸ ಇಲ್ಲಿ ವಿಫಲವಾಗದು ಎಂಬ ವಿಶ್ವಾಸ ಬಿಜೆಪಿಯದ್ದು. ಬಿಎಸ್‌ಪಿ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಜಾತ್ಯತೀತ ಮತಗಳು ವಿಭಜನೆಯಾಗಿ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿದೆ ಬಿಜೆಪಿ.

‘ಐದು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ಬಿಜೆಪಿಯದ್ದೇ ಸರ್ಕಾರ ಬಂದರೆ 110 ಕೆ.ವಿ. ವಿದ್ಯುತ್ ಮಾರ್ಗ ಸೇರಿದಂತೆ ಬಾಕಿ ಇರುವ ಎಲ್ಲ ಕೆಲಸಗಳನ್ನೂ ಮಾಡುತ್ತೇನೆ. ಇನ್ನೊಂದು ಅವಧಿಗೆ ಅವಕಾಶ ಕೊಡಿ’ ಎಂದು ಅಂಗಾರ ಕೇಳುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಹೆಚ್ಚಿನ ಬೆಂಬಲ ಗಿಟ್ಟಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾಂಗ್ರೆಸ್‌ನ ಅಬ್ಬರವಿದೆ. ಅಭಿವೃದ್ಧಿ ಕುರಿತ ಚರ್ಚೆಯ ಆಚೆಗೂ ಸೋಲಿನ ಅನುಕಂಪ, ಹಿಂದುತ್ವದ ಅಲೆ, ಎಸ್‌ಡಿಪಿಐ ಕಣದಲ್ಲಿ ಇಲ್ಲದೇ ಇರುವುದು ಮತ್ತು ಬಿಎಸ್‌ಪಿ ಸ್ಪರ್ಧೆ ಈ ಬಾರಿಯ ಫಲಿತಾಂಶದಲ್ಲಿ ನಿರ್ಣಾಯಕವಾಗುವಂತೆ ಗೋಚರಿಸುತ್ತಿದೆ.

ಕಣದಲ್ಲಿರುವ ಅಭ್ಯರ್ಥಿಗಳು

ಎಸ್‌.ಅಂಗಾರ– ಬಿಜೆಪಿ

ಡಾ.ಬಿ.ರಘು– ಕಾಂಗ್ರೆಸ್

ರಘು–  ಬಿಎಸ್‌ಪಿ

ಚಂದ್ರಶೇಖರ ಕೆ. ಪಲ್ಲತ್ತಡ್ಕ–    ಪಕ್ಷೇತರ

ಸಂಜೀವ್ ಬಾಬುರಾವ್ ಕುರಂಡ್ವಾಡ– ಪಕ್ಷೇತರ

ಸುಂದರ ಕೆ.–  ಪಕ್ಷೇತರ

ಒಟ್ಟು ಮತದಾರರು– 1,98,686

ಪುರುಷರು– 98,915

ಮಹಿಳೆಯರು– 99,771

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry