ಭಾನುವಾರ, ಮಾರ್ಚ್ 7, 2021
19 °C

ನೇಪಥ್ಯ ಕಲಾವಿದ ಸರ್ವೇಶ ಅಂತರಂಗ

ಮಂಜುಶ್ರೀ ಎಂ.ಕಡಕೋಳ Updated:

ಅಕ್ಷರ ಗಾತ್ರ : | |

ನೇಪಥ್ಯ ಕಲಾವಿದ ಸರ್ವೇಶ ಅಂತರಂಗ

ನನ್ನನ್ನು ನಟನನ್ನಾಗಿ ಮಾಡಬೇಕೆಂದು ಹಲವರು ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಆದರೆ, ನಾಟಕಕ್ಕೆ ಬೇಕಾದ ರಂಗಪರಿಕರಗಳನ್ನು ಮಾಡಿಕೊಡುವುದರಲ್ಲಿ ನಾನು ಯಶಸ್ಸನ್ನು ಪಡೆದೆ. ರಂಗಪರಿಕರಗಳ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಸಿಜಿಕೆ ಹೆಸರಿನಲ್ಲಿ ಮೊದಲನೇ ಪ್ರಶಸ್ತಿ ಪಡೆದವನು ನಾನು ಎಂದು ಹೇಳಿಕೊಳ್ಳಲು ಹೆಮ್ಮೆ. ‘ನೇಪಥ್ಯ’ ಅನ್ನುವ ಹೆಸರಿನಲ್ಲೇ ಈ ಪ್ರಶಸ್ತಿ ಇದೆ.

ನಾನು ಮೂಲತಃ ಹೋರಾಟಗಾರ. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೆ. 90ರ ದಶಕದಲ್ಲಿ ನಗರದಲ್ಲಿ ಜನಕಲಾಮೇಳ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಲಲಿತಕಲೆಗಳ ಮಹಾಸಂಗಮವೇ ಅಲ್ಲಿ ಮೇಳೈಸಿತ್ತು. ಆಗ ಬಿ.ಕೃಷ್ಣಪ್ಪ, ಕೋಟಿಗಾನಹಳ್ಳಿ ರಾಮಯ್ಯ, ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಅದರಲ್ಲಿದ್ದರು. ಸಿಜಿಕೆ ಅವರದ್ದು ಸ್ಟೇಜ್ ಸಾರಥ್ಯ. ಶಶಿಧರ ಅಡಪ, ಅಪ್ಪಯ್ಯ, ಸುದೇಶ್  ಮಹಾನ್, ಇಂದ್ರಯ್ಯ ಅವರೆಲ್ಲಾ ಇದ್ದರು. ಇಂದ್ರಣ್ಣ ಅಂತೂ ನೋಡಲು ಥೇಟ್ ವಿಲನ್ ಥರವೇ ಇದ್ದರು. ನಮಗೆಲ್ಲಾ ಅವರನ್ನು ನೋಡಲು ಸಹ ಭಯವಾಗುತ್ತಿತ್ತು.

ಆಗ ವಾಲ್ ರೈಟಿಂಗ್ ಮಾಡುವುದು, ಪೋಸ್ಟರ್ ಅಂಟಿಸುವುದು ಮಾಡುತ್ತಿದ್ದೆ. ಉಳಿದವರೂ ರಾತ್ರಿಯಿಡೀ ಕೆಲಸ ಮಾಡುತ್ತಿದ್ದರು. ರಾತ್ರಿಯಿಡೀ ನನ್ನನ್ನು ಅಲ್ಲಿ ಸೆಂಟ್ರಿ ಥರ ಹಾಕಿದ್ದರು. ಸಿಜಿಕೆ ಎಲ್ಲರನ್ನೂ ಏನೋ, ಹೋಗೋ, ಬಾರೋ ಅಂತ ಜೋರಿನಿಂದ ಮಾತನಾಡಿಸುತ್ತಿದ್ದರು. ದೊಡ್ಡ ವ್ಯಕ್ತಿಗಳೆಲ್ಲಾ ಇವರ ಬಳಿ ಕೆಲಸ ಮಾಡುತ್ತಾರಲ್ಲ ಅಂತ ಆಶ್ಚರ್ಯ ಆಗಿತ್ತು.

ಆಗ ಭಾರತ ಕಲಾಯಾತ್ರೆಯಿಂದ ರಂಗ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಅದರ ಕರಪತ್ರದಲ್ಲಿ ಸಿಜಿಕೆ ಹೆಸರಿತ್ತು. ಜನಕಲಾ ಮೇಳದಲ್ಲಿ ಸಿಜಿಕೆಯನ್ನು ನೋಡಿದ್ದ ನನಗೆ ಅವರೇ ಇವರು ಅನ್ನುವುದು ಮನವರಿಕೆಯಾಯಿತು.  ಆ ಕಲಾಯಾತ್ರೆಯನ್ನು ಕೆ.ವಿ.ನಾಗರಾಜ ಮೂರ್ತಿ ನೋಡಿಕೊಳ್ಳುತ್ತಿದ್ದರು. ನಾನು ಲಕ್ಷ್ಮೀಪತಿ, ವೇಣುಗೋಪಾಲ್ ಅವರ ಜತೆ ರಂಗ ತರಬೇತಿ ಸೇರಲೆಂದು ರವೀಂದ್ರ ಕಲಾಕ್ಷೇತ್ರಕ್ಕೆ ಹೋದೆವು.

ಸಿಜಿಕೆ ಕಲಾಕ್ಷೇತ್ರದ ಮೆಟ್ಟಿಲು ಮೇಲೆ ಕುಳಿತಿದ್ದರು. ನಮ್ಮನ್ನು ಪರಿಚಯಿಸಿಕೊಂಡಾಗ ಅವರು ‘ನನಗೆ ಅದೆಲ್ಲಾ ಗೊತ್ತಿಲ್ಲ ಹೋಗಯ್ಯಾ, ಅವನ್ಯಾರೋ ನಾಗರಾಜಮೂರ್ತಿ ನನ್ನ ಹೆಸರು ಹಾಕಿಕೊಂಡಿದ್ದಾನೆ. ಅವನ ಹತ್ತಿರವೇ ಹೋಗಿ ಕೇಳ್ರಯ್ಯ’ ಅಂದ್ರು. ನಾಗರಾಜ ಮೂರ್ತಿ ಬಳಿಗೆ ಹೋದೆವು. ಅವರು ನಮ್ಮನ್ನು ತರಬೇತಿಗೆ ಸೇರಿಸಿಕೊಂಡರು. ಅಂದು ಕೊಟ್ಟ ಫೈಲ್ ಈಗಲೂ ನನ್ನ ಬಳಿ ಜೋಪಾನವಾಗಿದೆ. ಅದರಲ್ಲಿ ಅಂದು ಒಂದಕ್ಷರವನ್ನೂ ಬರೆಯಲಿಲ್ಲ.

ನಂತರದ ದಿನಗಳಲ್ಲಿ ‘ಕಳ್ಳುಬುಲ್ಡೆ ನಮ್ಮವ್ವ’ ಅಂತ ಬೀದಿನಾಟಕ ಮಾಡಿಸಿದ್ರು. ರಿದಂ ಪ್ರಜ್ಞೆ ಇತ್ತು ಅಂತ ನನಗೆ ತಮಟೆ ಹೊಡೆಯಲು ಸೇರಿಸಿಕೊಂಡರು. ಒಂದು ದಿನ ಹಾಡುಗಾರ ಇರಲಿಲ್ಲ. ಅಂದು ನಾನೇ ಹಾಡಿದೆ. ಕೊನೆಗೆ ಕಲಾಕ್ಷೇತ್ರವೇ ನನ್ನ ಕಾಯಂ ಅಡ್ಡ ಆಯಿತು. ಅಂದಿನಿಂದ ಇಲ್ಲಿಯೇ ಉಳಿಯತೊಡಗಿದೆ. ಮನೆಗೆ ಹೋಗುವುದನ್ನೇ ಬಿಟ್ಟುಬಿಟ್ಟೆ. ಆಗ ಇಷ್ಟು ದೊಡ್ಡ ಕಾಂಪೌಂಡ್ ಕೂಡಾ ಇರಲಿಲ್ಲ. ನಾಟಕದ ಪರದೆಗಳನ್ನೇ ಹಾಸಿಕೊಳ್ಳಲು, ಹೊದೆಯಲು ಬಳಸುತ್ತಿದ್ದೆವು. ಆಗ ಬೀಟ್ ಪೊಲೀಸರೂ ನಮ್ಮ ಜತೆಗೆ ಬಂದು ಮಲಗುತ್ತಿದ್ದರು.

ಮುಂದೆ ಕಾಲೇಜು, ಹೋರಾಟ ಎಲ್ಲವನ್ನೂ ಬಿಟ್ಟು ರಂಗಭೂಮಿಗೇ ಸೇರಿಕೊಂಡೆ. ನಾನು ಒಂದೂವರೆ ವರ್ಷ ಇರುವಾಗಲೇ ಅಮ್ಮ ತೀರಿಕೊಂಡರು. ನಾಲ್ವರು ಅಕ್ಕಂದಿರು. ಅವರೆಲ್ಲಾ ಮದುವೆಯಾಗಿದ್ದರು. ನಾನು ಮನೆಗೆ ಹೋದರೂ ಬಿಟ್ಟರೂ ನನ್ನನ್ನು ಕೇಳುವವರಿರಲಿಲ್ಲ. ತಾಯ್ತನದ ಪ್ರೀತಿ ತೋರಿಸಿದ ಸಿಜಿಕೆ ಅವರೇ ನನಗೆ ತಾಯಿಯಾದರು. ನನ್ನ ಕಷ್ಟಸುಖಕ್ಕೆಆಗುತ್ತಿದ್ದರು. ನಮ್ಮನ್ನು ಕರೆದು ಜೇಬಿನಲ್ಲಿ ದುಡ್ಡು ಇಡುತ್ತಿದ್ದರು.

ಬ್ಯಾನರ್‌ಗಳಿಗೆ ಮೊಳೆ ಹೊಡೆಯುವುದೇ ಕಾಯಕವಾಯಿತು. ಕೊನೆಗೆ ನಮ್ಮಂಥವರೆಲ್ಲಾ ಸೇರಿ ‘ಪ್ರತಿರೂಪಿ’ ಮಾಡಿಕೊಂಡೆವು. ಊಟ ತಿಂಡಿಗೆ ಸಿನಿಮಾ, ಮನಸ್ಸಂತೋಷಕ್ಕೆ ರಂಗಭೂಮಿ ಅಂತ ಇದ್ದೀನಿ. ಅದೆಲ್ಲಾ ಆಗಿದ್ದು ಸಿಜಿಕೆ ದೆಸೆಯಿಂದಲೇ. ಕೈ ಬಾಯಿ ಶುದ್ಧವಾಗಿದ್ದರೆ ಎಲ್ಲಿಗೇ ಹೋದರೂ ಬದಕುಬಹುದು ಅಂತ ಅವರು ಹೇಳಿಕೊಟ್ಟ ಮಂತ್ರದಿಂದಲೇ ಇಂದಿಗೂ ಅನ್ನವನ್ನು ಕಂಡುಕೊಂಡಿದ್ದೀನಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.