ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

7
ಕರ್ನಾಟಕ ವಿಧಾನಸಭೆ ಚುನಾವಣೆ

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಸಂದೀಪ್‌ ಶಾಸ್ತ್ರಿ
Published:
Updated:
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರ ಅಂತಿಮ ಘಟ್ಟಕ್ಕೆ ತಲುಪುತ್ತಿದ್ದಂತೆ ಕಾಂಗ್ರೆಸ್‌ ಪಕ್ಷ ಮುಂದೆ ಸಾಗಿದಂತೆ ಕಾಣಿಸುತ್ತಿದೆ; ಆಡಳಿತ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷದ ನಡುವಣ ಅಂತರ ಹೆಚ್ಚಾಗಿದೆ ಎಂಬುದನ್ನು ಲೋಕನೀತಿ–ಸಿಎಸ್‌ಡಿಎಸ್‌–ಎಬಿಪಿ ನ್ಯೂಸ್‌ ಸಮೀಕ್ಷೆ ಸೂಚಿಸಿದೆ.

ರಾಜ್ಯದಲ್ಲಿ ಅತ್ಯಂತ ನಿಕಟ ಸ್ಪರ್ಧೆ ಇದೆ ಮತ್ತು ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವಂತೆ ಕಾಣಿಸುತ್ತಿಲ್ಲ ಎಂದು ಮತದಾನ ದಿನಕ್ಕಿಂತ ಸರಿಯಾಗಿ ಒಂದು ತಿಂಗಳ ಹಿಂದೆ ಜೈನ್‌ ವಿಶ್ವವಿದ್ಯಾಲಯ–ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷೆ ಹೇಳಿತ್ತು. ಅಭ್ಯರ್ಥಿಗಳ ಆಯ್ಕೆ ಮುಗಿದು ಮೊದಲ ವಾರದ ಪ್ರಚಾರದ ಹೊತ್ತಿಗೆ ಕಾಂಗ್ರೆಸ್‌ ಮುನ್ನಡೆ ಗಳಿಸಿದಂತೆ ಕಾಣಿಸುತ್ತಿದೆ. ಕೊನೆಯ ಕೆಲವು ದಿನಗಳ ಪ್ರಚಾರವೂ ಕರ್ನಾಟಕದ ಮತದಾರರ ಒಲವನ್ನು ಬದಲಾಯಿಸಬಲ್ಲುದು. ಆದರೆ, ಮತದಾನಕ್ಕೆ ಒಂದು ವಾರದ ಮೊದಲು ಕಾಂಗ್ರೆಸ್‌ ಮುಂದಿದೆ. ಚೆನ್ನೈ ಮ್ಯಾಥಮೆಟಿಕಲ್‌ ಇನ್ಸ್‌ಟಿಟ್ಯೂಟ್‌ನ ರಾಜೀವ ಕರಂಡಿಕರ್‌ ಅವರು ಹೊಸ ಸಮೀಕ್ಷೆಯ ಆಧಾರದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಬಹುದು ಎಂಬುದನ್ನು ಲೆಕ್ಕ ಹಾಕಿದ್ದಾರೆ. ಅದರ ಪ್ರಕಾರ, ಬಿಜೆಪಿಗಿಂತ ಕಾಂಗ್ರೆಸ್ ಮುಂದಿದೆ. ಆದರೆ, ಸರಳ ಬಹುಮತ ತಲುಪಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಇದು ಸ್ಪರ್ಧೆಯ ತೀವ್ರತೆಯನ್ನು ತೋರಿಸುತ್ತದೆ. ಕೊನೆಯ ವಾರದ ಪ್ರಚಾರ ಅಂತಿಮ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್‌ಗೆ ಪೂರಕವಾಗಿ ಕೆಲಸ ಮಾಡಿದ ಅಂಶಗಳು ಯಾವವು? ಮೊದಲನೆಯದಾಗಿ, ಪ್ರಾದೇಶಿಕ ಮಟ್ಟದ ಸ್ಪರ್ಧೆಯಲ್ಲಿ ಕಾಂಗ್ರೆಸ್‌ ಮುಂದಕ್ಕೆ ಹೋಗಿದೆ. ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಿಗಿಂತ ಕಾಂಗ್ರೆಸ್‌ ಮುನ್ನಡೆ ಪಡೆದುಕೊಂಡಿದೆ ಅಥವಾ ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿದೆ. ಕಾಂಗ್ರೆಸ್‌ ಹಿಂದೆ ಬಿದ್ದಿರುವ ಏಕೈಕ ಪ್ರದೇಶ ಎಂದರೆ ದಕ್ಷಿಣ ಕರ್ನಾಟಕ. ಇಲ್ಲಿ ಜೆಡಿಎಸ್‌ ಮುನ್ನಡೆಯಲ್ಲಿದೆ. ಜೈನ್‌ ವಿಶ್ವವಿದ್ಯಾಲಯ–ಲೋಕನೀತಿ–ಸಿಎಸ್‌ಡಿಎಸ್‌ನ ಹಿಂದಿನ ಸಮೀಕ್ಷೆಯ ಪ್ರಕಾರ, ಕರಾವಳಿ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ ಇತ್ತು. ಆದರೆ ಈಗಿನ ಸಮೀಕ್ಷೆ ಪ್ರಕಾರ, ಈ ಎರಡೂ ಪ್ರದೇಶಗಳಲ್ಲಿ ಮುನ್ನಡೆಯನ್ನು ಕಾಂಗ್ರೆಸ್‌ ಕಸಿದುಕೊಂಡಿದೆ.

ನಾಯಕತ್ವದ ಸ್ಪರ್ಧೆಯಲ್ಲಿಯೂ ಬಿಜೆಪಿಗಿಂತ ಕಾಂಗ್ರೆಸ್‌ ಮುಂದಿರುವಂತೆ ಕಾಣಿಸುತ್ತಿದೆ. ಹಲವು ಆಯಾಮಗಳಿಂದ ನೋಡಿದಾಗಲೂ ಇದು ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜನರ ನೆಚ್ಚಿನ ಆಯ್ಕೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌. ಯಡಿಯೂರಪ್ಪ ಅವರಿಗಿಂತ ಸಿದ್ದರಾಮಯ್ಯ ಅವರು ಶೇ ಆರರಷ್ಟು ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗಿಂತ ಶೇ 5 ಅಂಕಗಳಷ್ಟು ಹಿಂದಿದ್ದಾರೆ.

‘ಸಿದ್ದರಾಮಯ್ಯ ಅಥವಾ ಯಡಿಯೂರಪ್ಪ ಅವರಲ್ಲಿ ಯಾರನ್ನು ಹೆಚ್ಚು ಇಷ್ಟಪಡುತ್ತೀರಿ’ ಎಂಬ ನೇರ ಪ್ರಶ್ನೆಗೆ ಸಿದ್ದರಾಮಯ್ಯ ಅವರಿಗೆ ಶೇ 12ರಷ್ಟು ಹೆಚ್ಚು ಅಂಕಗಳು ದೊರೆತಿವೆ. ಕರ್ನಾಟಕದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸುತ್ತಿರುವ ಪ್ರಮುಖ ಪಾತ್ರದಿಂದಾಗಿ ಮುಖ್ಯಮಂತ್ರಿ ಮತ್ತು ಪ್ರಧಾನಿ ಹೊಂದಿರುವ ಜನಪ್ರಿಯತೆಯನ್ನು ಅರಿಯುವುದಕ್ಕೆ ಪ್ರಯತ್ನಿಸಲಾಗಿದೆ. ಸಿದ್ದರಾಮಯ್ಯ ಅವರಿಗಿಂತ ಮೋದಿ ಅವರು ಶೇ 4ರಷ್ಟು ಹೆಚ್ಚು ಮತ ಪಡೆದಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಸಾಧನೆಯೇ ನಿರ್ಣಾಯಕ. ಹತ್ತರಲ್ಲಿ ಹತ್ತಿರಹತ್ತಿರ ಏಳು ಮಂದಿ ಸರ್ಕಾರದ ಸಾಧನೆಯ ಬಗ್ಗೆ ತೃಪ್ತಿ (ಸಂಪೂರ್ಣ ಅಥವಾ ಬಹುಪಾಲು) ಹೊಂದಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಯ ಮೌಲ್ಯಮಾಪನದಲ್ಲಿಯೂ ಹೆಚ್ಚು ಕಡಿಮೆ ಇದೇ ಫಲಿತಾಂಶ ಇದೆ. ಒಂದೇ ವ್ಯತ್ಯಾಸ ಎಂದರೆ, ರಾಜ್ಯದ ಹೆಚ್ಚಿನ ಜನರು ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಕಾಂಗ್ರೆಸ್‌ ಯಾಕೆ ಮುನ್ನಡೆ ಪಡೆಯಿತು ಎಂಬುದನ್ನು ಇದು ವಿವರಿಸುತ್ತದೆ.

ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳು ಕಣ್ಣಿಗೆ ಕಾಣುವಂತಿವೆ, ಜನಪ್ರಿಯವಾಗಿವೆ ಮತ್ತು ಪ್ರಯೋಜನಕಾರಿಯಾಗಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ. ಆದರೆ ಇದೇ ಮಾತನ್ನು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹೇಳುವಂತಿಲ್ಲ. ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬ ಭಾವನೆ ಜನರಲ್ಲಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಚಿಂತೆಯ ವಿಚಾರವಾಗಬಹುದು. ಉದ್ಯೋಗ ಅವಕಾಶಗಳ ಸೃಷ್ಟಿಗೆ ಸಂಬಂಧಿಸಿದಂತೆಯೂ ಜನರಿಗೆ ಸಂತೃಪ್ತಿ ಇಲ್ಲ.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇರುವ ಇನ್ನೊಂದು ಅನುಕೂಲ ಎಂದರೆ ಕಾಂಗ್ರೆಸ್ ವಿರೋಧಿ ಮತಗಳ ವಿಭಜನೆ. ಒಂದೆಡೆ ಕ್ರೋಡೀಕರಣವಾಗುವ ಬದಲಿಗೆ ಅದು ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಹಂಚಿ ಹೋಗುತ್ತಿದೆ. ಕಾಂಗ್ರೆಸ್‌ ವಿರೋಧಿ ಮತಗಳ ದೊಡ್ಡ ಭಾಗವು ಬಿಜೆಪಿಗೆ ಹೋದರೆ, ಮೂರನೇ ಒಂದರಷ್ಟು ಜೆಡಿಎಸ್‌ ಬುಟ್ಟಿಗೆ ಬೀಳಲಿದೆ.

ಕಾಂಗ್ರೆಸ್‌ ರೂಪಿಸಲು ಯತ್ನಿಸಿರುವ ಸಾಮಾಜಿಕ ಸಮೀಕರಣ ಮತ್ತು ಅದರ ಕ್ರೋಡೀಕರಣ ಆ ಪಕ್ಷಕ್ಕೆ ಅನುಕೂಲ ತಂದುಕೊಡಲಿದೆ. ಕುರುಬ, ಅಲ್ಪಸಂಖ್ಯಾತ, ದಲಿತ ಮತ್ತು ಆದಿವಾಸಿ ಸಮುದಾಯಗಳು ಕಾಂಗ್ರೆಸ್‌ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲಲಿವೆ. ಒಕ್ಕಲಿಗ ಸಮುದಾಯಕ್ಕೆ ಜೆಡಿಎಸ್‌ ಮೆಚ್ಚಿನ ಆಯ್ಕೆಯಾಗಿದೆ. ಹಾಗಿದ್ದರೂ ಈ ಪ್ರಬಲ ಜಾತಿಯ ಸ್ವಲ್ಪ ಪ್ರಮಾಣದ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗುವಂತೆ ಕಾಣಿಸುತ್ತಿದೆ. ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನ ತಂದುಕೊಡಲು ಕಾಂಗ್ರೆಸ್‌ ನಡೆಸಿದ ಪ್ರಯತ್ನ, ಆ ಸಮುದಾಯದ ಮತಗಳು ಬಿಜೆಪಿಗೆ ಹೋಗುವುದನ್ನು ತಡೆಯಲು ಯಶಸ್ವಿಯಾಗಿಲ್ಲ. ಲಿಂಗಾಯತ ಮತಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಬೀಳುವ ಸಾಧ್ಯತೆ ಇಲ್ಲ.

ರಾಜ್ಯ ಮಟ್ಟದ ವಿಚಾರಗಳು ಮತ್ತು ರಾಜ್ಯದ ನಾಯಕತ್ವದ ಆಯ್ಕೆಗೆ ಮತದಾರರು ಆದ್ಯತೆ ನೀಡಿದ್ದಾರೆ ಎಂಬುದನ್ನು ಸಮೀಕ್ಷೆ ದೃಢಪಡಿಸಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮತದಾರರು ಭಿನ್ನ ಆಯ್ಕೆಗಳನ್ನು ಮಾಡುತ್ತಿರುವುದಕ್ಕೆ ಮೂರು ದಶಕಗಳ ಇತಿಹಾಸ ಇದೆ. ಈ ಚುನಾವಣೆಯೂ ಅದೇ ದಿಕ್ಕಿನಲ್ಲಿ ಸಾಗುವಂತೆ ಕಾಣಿಸುತ್ತಿದೆ ಮತ್ತು ಆಡಳಿತ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಗಳು ಕಾಣಿಸುತ್ತಿವೆ.

ಕೊನೆಯ ವಾರಕ್ಕೆ ಮೊದಲು

ಏಪ್ರಿಲ್‌ನ ಕೊನೆಯ ಕೆಲವು ದಿನಗಳು ಮತ್ತು ಮೇ ತಿಂಗಳ ಆರಂಭದ ಕೆಲವು ದಿನಗಳಲ್ಲಿ ಲೋಕನೀತಿ–ಸಿಎಸ್‌ಡಿಎಸ್‌–ಎಬಿಪಿ ಸಮೀಕ್ಷೆ ನಡೆದಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡು ಪ್ರಚಾರ ಆರಂಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರಚಾರವನ್ನು ಮುಗಿಸಿದ್ದರು. ಈ ಸಮೀಕ್ಷೆ ಮತದಾನಕ್ಕೆ ಒಂದು ವಾರದ ಮೊದಲು ರಾಜ್ಯದ ಜನರ ಮನಸ್ಥಿತಿಯನ್ನು ತೋರುತ್ತದೆ. ನಂತರದ ಒಂದು ವಾರದಲ್ಲಿ ಏನಾದರೂ ನಡೆಯಬಹುದು. ಮೋದಿಯವರ ಭಾಷಣಗಳೇ ತನ್ನ ನಿಜವಾದ ಪ್ರಚಾರ ಎಂದು ಬಿಜೆಪಿ ಹೇಳುತ್ತಿದೆ. ಕೊನೆಯ ವಾರದ ಆರೋಪ ಪ್ರತ್ಯಾರೋಪಗಳು ಚುನಾವಣೆಗೆ ಮುನ್ನ ದೊಡ್ಡ ಬದಲಾವಣೆ ಮಾಡಬಲ್ಲುದೇ? ಅದನ್ನು ತಿಳಿಯಲು 15ರವರೆಗೆ ಕಾಯಲೇಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry