ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಕಾಂಗ್ರೆಸ್‌, ನೀರಿನ ವಿವಾದ ಪರಿಹಾರಕ್ಕೆ ಜೆಡಿಎಸ್‌

Last Updated 7 ಮೇ 2018, 17:57 IST
ಅಕ್ಷರ ಗಾತ್ರ

ಪ್ರತಿಸ್ಪರ್ಧಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗಿಂತ ಕಾಂಗ್ರೆಸ್ ಪಕ್ಷ ಮುಂದಿರುವಂತೆ ಏಕೆ ಕಾಣಿಸುತ್ತಿದೆ ಎಂಬುದಕ್ಕೆ ಸಾಕಷ್ಟು ಕಾರಣಗಳನ್ನು ಲೋಕನೀತಿ – ಸಿಎಸ್‌ಡಿಎಸ್‌ – ಎಬಿಪಿ ನ್ಯೂಸ್‌ ಸಮೀಕ್ಷೆ ನೀಡಿದೆ. ಸರ್ಕಾರದ ಅಂಕ ಪಟ್ಟಿಯಲ್ಲಿ ಹಲವು ಧನಾತ್ಮಕ ಅಂಶಗಳು ಇರುವುದು ಸ್ಪಷ್ಟ. ರಸ್ತೆಗಳ ಸ್ಥಿತಿ ಸುಧಾರಣೆಯಲ್ಲಿ, ವಿದ್ಯುತ್‌ ಪೂರೈಕೆ ಸುಧಾರಣೆಯಲ್ಲಿ, ಕುಡಿಯುವ ನೀರಿನ ಪೂರೈಕೆಯ ವಿಚಾರದಲ್ಲಿ ಸರ್ಕಾರದ ಬಗ್ಗೆ ಪೂರಕ ಅಭಿಪ್ರಾಯ ಇದೆ. ಸಮೀಕ್ಷೆಯ ಭಾಗವಾಗಿದ್ದ ಪ್ರತಿ ಹತ್ತು ಜನರ ಪೈಕಿ ಆರು ಜನ ಈ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆ ಆಗಿದೆ ಎಂದು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿನ ಕೋಮುಸೌಹಾರ್ದ ಮತ್ತು ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಬಗ್ಗೆ ಮತದಾರರು ತುಸು ಕಳವಳ ಹೊಂದಿದ್ದಾರೆ.

ರಾಜ್ಯದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಮೂರು ಮುಖ್ಯ ರಾಜಕೀಯ ಪಕ್ಷಗಳ ಸಾಧನೆ ಹೋಲಿಕೆ ಮಾಡಿ ಎಂದು ಹೇಳಿದಾಗ, ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕರು ಕಾಂಗ್ರೆಸ್ ಪಕ್ಷದ ಪರ ಒಲವು ವ್ಯಕ್ತಪಡಿಸಿದಂತೆ ಕಂಡುಬಂದಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ, ಮಹಾರಾಷ್ಟ್ರದ ಜೊತೆಗಿನ ಗಡಿ ತಕರಾರಿಗೆ ಪರಿಹಾರ ಕಂಡುಕೊಳ್ಳಲು, ಯುವಕರ ಪಾಲಿಗೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜೆಡಿಎಸ್‌ ಮತ್ತು ಬಿಜೆಪಿಗಿಂತ ಕಾಂಗ್ರೆಸ್ ಸೂಕ್ತ ಎಂದು ಅವರು ಹೇಳಿದ್ದಾರೆ. ಹಾಗೆಯೇ, ತಮ್ಮ ಸಮುದಾಯಕ್ಕೆ ಹೆಚ್ಚು ಸೂಕ್ತವಾದ ಪಕ್ಷ ಕೂಡ ಕಾಂಗ್ರೆಸ್ ಎಂದು ಹೇಳಿದ್ದಾರೆ. ಮಹದಾಯಿ ಸಮಸ್ಯೆ, ನಗರ ಮತ್ತು ಪಟ್ಟಣಗಳ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಅತ್ಯಂತ ಸೂಕ್ತ ಪಕ್ಷ ಎಂದು ಅವರು ಅಭಿಪ್ರಾಯ ದಾಖಲಿಸಿದ್ದಾರೆ. ಕಾವೇರಿ ನೀರು ಹಂಚಿಕೆ ತಕರಾರನ್ನು ಪರಿಹರಿಸಲು ಜೆಡಿಎಸ್‌ ಅತ್ಯಂತ ಸೂಕ್ತವಾದ ಪಕ್ಷ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ಅತ್ಯಂತ ಭ್ರಷ್ಟ ಹಾಗೂ ಬಣಗಳ ಕಚ್ಚಾಟದಿಂದ ನಲುಗಿರುವ ಪಕ್ಷ ಎಂಬ ಅನಿಸಿಕೆ ಕೂಡ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷವು ಹೆಚ್ಚು ಸ್ವಜನಪಕ್ಷಪಾತದಲ್ಲಿ ತೊಡಗಿರುವ ಪಕ್ಷವೆಂದು ಅವರು ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ತಮಗೆ ಅಸಮಾಧಾನ ತಂದಿದೆ ಎಂಬುದನ್ನು ಹತ್ತರಲ್ಲಿ ಎಂಟು ಜನ ಹೇಳಿದ್ದಾರೆ. ಈಗಿನ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹತ್ತರಲ್ಲಿ ಆರು ಜನ ಹೇಳಿದ್ದಾರೆ. ಉದ್ಯೋಗ ಅವಕಾಶಗಳ ವಿಚಾರದಲ್ಲಿ ಅತೃಪ್ತಿ ಮನೆ ಮಾಡಿರುವುದು ಕೂಡ ಸ್ಪಷ್ಟವಾಗಿ ಕಂಡುಬಂದಿದೆ. ಆರನೆಯ ಒಂದರಷ್ಟು ಜನ ಮಾತ್ರ ಉದ್ಯೋಗಾವಕಾಶಗಳು ಹೆಚ್ಚಿವೆ ಎಂದು ಹೇಳಿದ್ದಾರೆ. ಸರ್ಕಾರದ ಸಾಧನೆಗಳನ್ನು ಅಳೆಯುವ ವಿಚಾರದಲ್ಲಿ ಇದು ಮಹತ್ವದ್ದು ಎಂಬುದು ಸ್ಪಷ್ಟ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನ ‘ನಿಮಗೆ ಅಥವಾ ನಿಮ್ಮ ಕುಟುಂಬದ ಯಾರಿಗಾದರೂ ದೊರೆತಿದೆಯೇ’ ಎಂಬ ಪ್ರಶ್ನೆಗೆ, ಪ್ರತಿ ಹತ್ತರಲ್ಲಿ ಆರು ಜನ ‘ನಮಗೆ ಪ್ರಯೋಜನ ಆಗಿದೆ’ ಎಂದು ಹೇಳಿದ್ದಾರೆ. ಪ್ರತಿ ಐದು ಜನರಲ್ಲಿ ನಾಲ್ವರಿಗೆ ಅನ್ನ ಭಾಗ್ಯ ಯೋಜನೆಯ ಪ್ರಯೋಜನ ದೊರೆತಿದೆ. ಶೇಕಡ 50ರಷ್ಟಕ್ಕಿಂತ ಹೆಚ್ಚು ಜನ ಕ್ಷೀರ ಭಾಗ್ಯ ಯೋಜನೆಯ ಲಾಭ ಪಡೆದಿದ್ದಾರೆ. ಸಮೀಕ್ಷೆಯ ಭಾಗ ಆಗಿದ್ದವರು ಅನ್ನ ಭಾಗ್ಯ, ಕ್ಷೀರ ಭಾಗ್ಯ, ಅಕ್ಷರ ದಾಸೋಹ ಯೋಜನೆಗಳ ಬಗ್ಗೆ ಕೇಳಿದ್ದಾರೆ, ಅವುಗಳ ಪ್ರಯೋಜನವನ್ನೂ ಪಡೆದಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್‌, ಸೈಕಲ್ ಭಾಗ್ಯ ಮತ್ತು ಕೃಷಿ ಭಾಗ್ಯ ಯೋಜನೆಗಳ ಬಗ್ಗೆ ಕೇಳಿದ್ದಾರೆ, ಅಷ್ಟೆ. ಅವುಗಳ ಲಾಭ ಪಡೆದುಕೊಂಡವರು ಹತ್ತರಲ್ಲಿ ಎರಡು ಜನ ಮಾತ್ರ.

ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಶ್ರೇಯಸ್ಸನ್ನು ಯಾರಿಗೆ ಕೊಡಬೇಕು? ಕೇಂದ್ರ ಸರ್ಕಾರಕ್ಕೋ, ರಾಜ್ಯ ಸರ್ಕಾರಕ್ಕೋ, ಸ್ಥಳೀಯ ರಾಜಕಾರಣಿಗೋ ಅಥವಾ ಸರ್ಕಾರದ ಅಧಿಕಾರಿಗಳಿಗೋ ಎಂಬ ಪ್ರಶ್ನೆ ಕೇಳಿದಾಗ, ಪ್ರತಿ ಐವರಲ್ಲಿ ಇಬ್ಬರಿಗಿಂತ ಹೆಚ್ಚು ಜನ ‘ರಾಜ್ಯ ಸರ್ಕಾರಕ್ಕೆ ಇದು ಸಲ್ಲಬೇಕು’ ಎಂದು ಉತ್ತರಿಸಿದ್ದಾರೆ. ಹತ್ತರಲ್ಲಿ ಒಬ್ಬರು ಮಾತ್ರ ಕೇಂದ್ರ ಸರ್ಕಾರಕ್ಕೆ ಇದರ ಶ್ರೇಯಸ್ಸನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆ ಕೇಳಿದ್ದೀರಾ ಎಂಬ ಪ್ರಶ್ನೆಗೆ, ಪ್ರತಿ ಐವರಲ್ಲಿ ಮೂರು ಜನ ತಾವು ಇದರ ಬಗ್ಗೆ ಕೇಳಿರುವುದಾಗಿ ಉತ್ತರಿಸಿದ್ದಾರೆ. ಆದರೆ, ತಾವು ಇದರಿಂದ ಪ್ರಯೋಜನ ಪಡೆದಿರುವುದಾಗಿ ಉತ್ತರಿಸಿದವರ ಪ್ರಮಾಣ ಶೇಕಡ 25ರಷ್ಟಕ್ಕಿಂತ ಕಡಿಮೆ. ಅದೇ ರೀತಿ, ಹತ್ತರಲ್ಲಿ ಏಳು ಜನ ನರೆಗಾ ಯೋಜನೆ ಬಗ್ಗೆ ಕೇಳಿದ್ದಾರೆ. ಆದರೆ, ಹತ್ತರಲ್ಲಿ ಮೂವರು ಮಾತ್ರ ಈ ಯೋಜನೆಯ ಲಾಭ ಪಡೆದಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ ಕಾರ್ಯಕ್ರಮದ ಅಡಿ ಉಚಿತ ಆರೋಗ್ಯ ಸೇವೆಗಳು ದೊರೆಯುವ ಬಗ್ಗೆ ಪ್ರತಿ ಹತ್ತರಲ್ಲಿ ಏಳು ಜನ ಕೇಳಿದ್ದಾರೆ. ಈ ಕಾರ್ಯಕ್ರಮದ ಅಡಿ ತಮಗೆ ಪ್ರಯೋಜನ ಆಗಿದೆ ಎಂದು ಹೇಳಿದವರ ಪ್ರಮಾಣ ಶೇಕಡ 33ರಷ್ಟು ಮಾತ್ರ.

ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ ಬಗ್ಗೆ ತಾವು ಕೇಳಿಯೇ ಇಲ್ಲ ಎಂದು ಪ್ರತಿ ಹತ್ತು ಜನರ ಪೈಕಿ ಆರು ಜನ ಹೇಳಿದ್ದಾರೆ. ಶೇಕಡ 10ರಷ್ಟು ಜನ ಮಾತ್ರ ತಾವು ಈ ಯೋಜನೆಯ ಪ್ರಯೋಜನ ಪಡೆದಿರುವುದಾಗಿ ಹೇಳಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಅರ್ಧಕ್ಕಿಂತ ತುಸು ಹೆಚ್ಚಿನ ಪ್ರಮಾಣದ ಜನ ಮಾತ್ರ ‘ಜನಧನ ಯೋಜನೆ’ ಬಗ್ಗೆ ಕೇಳಿದ್ದಾರೆ. ಈ ಯೋಜನೆಯಿಂದ ತಾವು ಲಾಭ ಪಡೆದಿದ್ದೇವೆ ಎಂದು ಹೇಳಿದವರ ಪ್ರಮಾಣ ಶೇಕಡ 25ರಷ್ಟು ಮಾತ್ರ. ಸ್ವಚ್ಛ ಭಾರತ ಯೋಜನೆಯ ಬಗ್ಗೆ ಕೇಳಿದ್ದೇವೆ ಎಂದು ಹೇಳಿದವರ ಸಂಖ್ಯೆ ಏಳು (ಪ್ರತಿ ಹತ್ತು ಜನರ ಪೈಕಿ). ಆದರೆ ಪ್ರತಿ ಮೂವರಲ್ಲಿ ಒಬ್ಬರು ಮಾತ್ರ ತಾವು ಇದರಿಂದ ಪ್ರಯೋಜನ ಪಡೆದಿರುವುದಾಗಿ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ, ಸ್ಕಿಲ್‌ ಇಂಡಿಯಾ, ಭಾರತದಲ್ಲೇ ತಯಾರಿಸಿ ಅಥವಾ ಉಜ್ವಲ ಯೋಜನೆ ಬಗ್ಗೆ ಕೇಳಿದ್ದೇವೆ ಎಂದು ಹೇಳಿದವರ ಪ್ರಮಾಣ ಶೇಕಡ 50ರಷ್ಟಕ್ಕಿಂತ ಕಡಿಮೆ. ಈ ಯೋಜನೆಗಳಿಂದ ತಾವು ಪ್ರಯೋಜನ ಪಡೆದಿದ್ದೇವೆ ಎಂದು ಹೇಳಿದವರ ಪ್ರಮಾಣ ತೀರಾ ಕಡಿಮೆ.

ಮತದಾರರಿಗೆ ಹೆಚ್ಚು ಗಾಢವಾಗಿ ಕಾಡುವ ವಿಚಾರ ಅವರ ಮತ ಚಲಾವಣೆ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕರ್ನಾಟಕದ ಮತದಾರರ ಪಾಲಿಗೆ ಅತ್ಯಂತ ಪ್ರಮುಖ ವಿಷಯ ‘ವಿಕಾಸ’. ಪ್ರತಿ ಹತ್ತರಲ್ಲಿ ಮೂವರು ಈ ವಿಷಯ ಉಳಿದೆಲ್ಲವುಗಳಿಗಿಂತ ಹೆಚ್ಚು ಮುಖ್ಯ ಎಂದು ಹೇಳಿದ್ದಾರೆ. ಇದನ್ನು ಬಿಟ್ಟರೆ, ಶಾಸಕರು ಕಳೆದ ಐದು ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆ ಮತ್ತು ಶಾಸಕರ ವ್ಯಕ್ತಿತ್ವ ಮುಖ್ಯ ಎಂದು ಮತದಾರರು ಭಾವಿಸಿದ್ದಾರೆ. ಕರ್ನಾಟಕದ ಮತದಾರರು ಪಕ್ಷವನ್ನು ಮಾತ್ರ ಗಮನಿಸಿ ಮತ ಚಲಾಯಿಸುವುದಿಲ್ಲ. ಅವರು ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ. ಪಕ್ಷಕ್ಕೆ ಆದ್ಯತೆ ನೀಡುವುದಕ್ಕಿಂತಲೂ ಶಾಸಕ ತನ್ನ ಕ್ಷೇತ್ರದಲ್ಲಿ ಮಾಡಿರುವ ಕೆಲಸಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ ಎಂಬುದು ಸ್ಪಷ್ಟ. ನಾಯಕತ್ವ, ಬಡತನ, ಕೃಷಿ ಕ್ಷೇತ್ರದ ಸಮಸ್ಯೆಗಳು ಮತ್ತು ರೈತರ ಸಂಕಷ್ಟಗಳ ಬಗ್ಗೆ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಇರುವ ಕಳಕಳಿ ಕೂಡ ಮತದಾರರಿಗೆ ಪ್ರಮುಖವಾಗುತ್ತವೆ.

ಬಹುಪಾಲು ಮತದಾರರು ಸಿದ್ದರಾಮಯ್ಯ ಸರ್ಕಾರದ ಕೆಲಸಗಳ ಬಗ್ಗೆ ತೃಪ್ತಿ ಹೊಂದಿದ್ದಾರೆ. ಪ್ರತಿ ಹತ್ತು ಮತದಾರರ ಪೈಕಿ ಐದು ಮತದಾರರ ಮತಗಳು ಈ ತೃಪ್ತಿಯ ಕಾರಣದಿಂದಾಗಿ ಆಡಳಿತಾರೂಢ ಪಕ್ಷಕ್ಕೆ ಸಿಗುತ್ತವೆ. ಎರಡು ವಾರಗಳ ಮೊದಲು ನಡೆಸಿದ ಸಮೀಕ್ಷೆ ಮತ್ತು ಈಗ ನಡೆಸಿರುವ ಸಮೀಕ್ಷೆಯ ನಡುವೆ ಈ ಅಭಿಪ್ರಾಯದಲ್ಲಿ ಬದಲಾವಣೆ ಕಂಡುಬಂದಿಲ್ಲ. ಆದರೆ, ಆಡಳಿತಾರೂಢ ಪಕ್ಷಕ್ಕೆ ಇನ್ನೊಂದು ಅವಕಾಶ ನೀಡಬಾರದು ಎಂದು ಹೇಳಿದವರ ಪ್ರಮಾಣದಲ್ಲಿ ಎರಡು ವಾರಗಳಲ್ಲಿ ಶೇಕಡ 4ರಷ್ಟು ಕುಸಿತ ಕಂಡುಬಂದಿದೆ. ಕಾಂಗ್ರೆಸ್ ವಿರೋಧಿ ಮತಗಳಲ್ಲಿನ ಒಡಕು ಕಾಂಗ್ರೆಸ್ ಪಕ್ಷಕ್ಕೆ ಪ್ರಯೋಜನ ತಂದುಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT