ಭಾನುವಾರ, ಮಾರ್ಚ್ 7, 2021
32 °C

ಚುನಾವಣೆ ಫಲಿತಾಂಶದ ಮೇಲೆ ಪ್ರಾದೇಶಿಕ ಪ್ರಭಾವ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಫಲಿತಾಂಶದ ಮೇಲೆ ಪ್ರಾದೇಶಿಕ ಪ್ರಭಾವ?

ಬೆಂಗಳೂರು: ಕರ್ನಾಟಕದ ಸಮಗ್ರ ಮತ್ತು ನೈಜ ರಾಜಕೀಯ ಚಿತ್ರಣ ಸಿಗುವುದೇ ವಿಭಿನ್ನ ಭೌಗೋಳಿಕ ಮತ್ತು ಸಾಮಾಜಿಕ ಹಿನ್ನೆಲೆ ಹೊಂದಿರುವ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಎಂದು ರಾಜಕೀಯ ವಿಶ್ಲೇಷಕರು ಯಾವಾಗಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅದನ್ನು ಲೋಕನೀತಿ– ಸಿಎಸ್‌ಡಿಎಸ್‌ ಮತ್ತು ಎಬಿಪಿ ಚುನಾವಣಾ ಪೂರ್ವ ಸಮೀಕ್ಷೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಆಡಳಿತಾರೂಢ ಕಾಂಗ್ರೆಸ್‌ ತನ್ನ ಪ್ರಮುಖ ಎದುರಾಳಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದೆ ಎಂದರೆ, ಅದಕ್ಕೆ ಹೈದರಾಬಾದ್‌–ಕರ್ನಾಟಕ ಪ್ರದೇಶದಲ್ಲಿ ಆ ಪಕ್ಷ ಸಾಧಿಸಿರುವ ಸ್ಪಷ್ಟ ಮುನ್ನಡೆ ಕಾರಣ. ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶ ಹಾಗೂ ಕರಾವಳಿ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ ಸ್ವಲ್ಪ ಮುಂಚೂಣಿಯಲ್ಲಿದೆ.

ದಕ್ಷಿಣ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಆದರೆ,  ಹಿಂದಿನ ಚುನಾವಣೆಗೆ ಹೋಲಿಸಿದರೆ ಇಲ್ಲಿ ಕಾಂಗ್ರೆಸ್‌ ಬೇರೂರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಅನುಭವವನ್ನು ಗಣನೆಗೆ ತೆಗೆದುಕೊಂಡರೆ, ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯಲು ಹೈದರಾಬಾದ್‌–ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಉತ್ತಮ ಸಾಧನೆ ಮಾಡಬೇಕಾಗುತ್ತದೆ.

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಪೈಪೋಟಿ ಕಂಡು ಬರುತ್ತಿದೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮೇಲುಗೈ ಸಾಧಿಸಲು ಕಾಂಗ್ರೆಸ್‌ ಮತ್ತು ಬಿಜೆಪಿ ತೀವ್ರ ಸೆಣಸಾಟ ನಡೆಸುತ್ತಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ.

ಹಿರಿಯರ ಆಶೀರ್ವಾದ ಯಾರಿಗೆ?: ಪುರುಷರು ಕಾಂಗ್ರೆಸ್‌ನತ್ತ ಹೆಚ್ಚು ಒಲವು ಹೊಂದಿದ್ದಾರೆ. ತಲೆಮಾರುಗಳ ನಡುವಣ ರಾಜಕೀಯ ನಿಲುವುಗಳಲ್ಲಿ ಕೂಡ ಬದಲಾವಣೆ ಕಾಣುತ್ತಿದೆ. ಮಧ್ಯ ವಯಸ್ಕರು ಮತ್ತು ಹಿರಿಯ ತಲೆಮಾರಿನವರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶ, ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ಕಾಂಗ್ರೆಸ್‌ ಜನಪ್ರಿಯತೆ ವೃದ್ಧಿಸಿದೆ. ಸಣ್ಣ ಪಟ್ಟಣಗಳಲ್ಲಿ ಬಿಜೆಪಿ ಬಲವಾಗಿ ಬೇರೂರಿದೆ.

ಈ ಹಿಂದಿನ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಉನ್ನತ ಶಿಕ್ಷಣ ಪಡೆಯದ ಜನರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದಾರೆ. ಪದವೀಧರರ ಮತಗಳ ಆದ್ಯತೆ ಗಮನಿಸಿದಾಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಹೆಚ್ಚಿನ ಅಂತರ ಇಲ್ಲ.

ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ ಗಟ್ಟಿಯಾಗಿ ‘ಕೈ’ ಪರ ನಿಂತಿದೆ. ಶ್ರೀಮಂತರ ಬೆಂಬಲ ಪಡೆಯುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ಆರ್ಥಿಕವಾಗಿ ಸಬಲರಾಗಿರುವ ವರ್ಗ ಜೆಡಿಎಸ್‌ಗೆ ಬೆಂಬಲಕ್ಕೆ ನಿಂತಿದೆ.

ನಿಷ್ಠೆ ಬದಲಿಸದ ಲಿಂಗಾಯತರು, ಒಕ್ಕಲಿಗರು: ಲಿಂಗಾಯತರು ಮತ್ತು ಒಕ್ಕಲಿಗರ ಪಕ್ಷ ನಿಷ್ಠೆ ಬದಲಾಗಿಲ್ಲ. ಎಂದಿನಂತೆ ಲಿಂಗಾಯತರು ಮತ್ತು ಮೇಲ್ವರ್ಗದವರು ಬಿಜೆಪಿಗೆ ಹಾಗೂ ಒಕ್ಕಲಿಗರು ಜೆಡಿಎಸ್‌ಗೆ ನಿಷ್ಠೆ ತೋರಲಿದ್ದಾರೆ. ಆದರೆ, ಸಾರಾಸಗಟಾಗಿ ಬಿಜೆಪಿ ಬೆಂಬಲಕ್ಕೆ ನಿಂತಿದ್ದ ಲಿಂಗಾಯತ ಸಮುದಾಯದ ಮತಗಳ ಬುಟ್ಟಿಗೆ ಕಾಂಗ್ರೆಸ್‌ ಕೈ ಹಾಕಿದೆ. ಕೆಲ ಮಟ್ಟಿಗಾದರೂ ಆ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯುವ ಸಾಧ್ಯತೆ ಇದೆ.

ಫಲ ನೀಡದ ಪ್ರತ್ಯೇಕ ಧರ್ಮ ನಿರ್ಧಾರ: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಕಾಂಗ್ರೆಸ್‌ಗೆ ನಿರೀಕ್ಷಿತ ಫಲ ನೀಡಿದಂತೆ ತೋರುತ್ತಿಲ್ಲ.

ಪ್ರತ್ಯೇಕ ಧರ್ಮ ವಿಚಾರದಲ್ಲಿ ಲಿಂಗಾಯತರು ಸರ್ಕಾರಕ್ಕೆ ನೀಡಿದ್ದ ಬೆಂಬಲ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆ ಕಡಿಮೆ. ಕಾಂಗ್ರೆಸ್‌ ಈ ಬಾರಿ  ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತರ ಮತಗಳನ್ನು ಪಡೆಯಲಿದೆ ಎಂಬ ನಿರೀಕ್ಷೆ ಹುಸಿಯಾಗಬಹುದು.

ಜೆಡಿಎಸ್‌ ಬಿಟ್ಟರೆ ಒಕ್ಕಲಿಗ ಸಮುದಾಯ ಬಿಜೆಪಿಗಿಂತ ಕಾಂಗ್ರೆಸ್‌ ಪಕ್ಷವನ್ನೇ ಬೆಂಬಲಿಸುವ ಸಾಧ್ಯತೆ ಹೆಚ್ಚು. ಮುಸ್ಲಿಮರು ಮತ್ತು ಕ್ರೈಸ್ತರು ಎಂದಿನಂತೆ ಕಾಂಗ್ರೆಸ್‌ ಬೆನ್ನಿಗೆ ಅಚಲರಾಗಿ ನಿಲ್ಲಲಿದ್ದಾರೆ.

ಹಿಂದೂ ಮತಬುಟ್ಟಿಗೆ ಕೈ ಹಾಕಿದ ಕಾಂಗ್ರೆಸ್‌: ಹಿಂದೂಗಳ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಮಬಲದ ಪೈಪೋಟಿ ನಡೆಯುತ್ತಿದೆ. ದಲಿತರು ಮತ್ತು ಬುಡಕಟ್ಟುವರ್ಗ ಕಾಂಗ್ರೆಸ್‌ ಪರ ನಿಂತರೂ ಆ ಸಮುದಾಯದ ಕಾಲು ಭಾಗ ಮತಗಳು ಬಿಜೆಪಿ ಬುಟ್ಟಿಗೆ ಬೀಳಲಿವೆ.

ದಲಿತರಲ್ಲಿ ಮಾದಿಗರ ಬೆಂಬಲ ಗಳಿಸಲು ಬಿಜೆಪಿ ಯಶಸ್ವಿಯಾಗಿದ್ದು, ಬಲಗೈ ಜನಾಂಗ ಮತ್ತು ಆದಿ ದ್ರಾವಿಡರು ಕಾಂಗ್ರೆಸ್‌ಗೆ ನಿಷ್ಠರಾಗಿದ್ದಾರೆ. ಕುರುಬರು ಸೇರಿದಂತೆ ಅಹಿಂದ ವರ್ಗದಲ್ಲಿ ಬಹುಪಾಲು ಮತ ಕಾಂಗ್ರೆಸ್‌ ಪಾಲಾಗಲಿವೆ. ಹಿಂದುಳಿದ ವರ್ಗದಲ್ಲಿಯೇ ಕೆಲವು ಸಮುದಾಯಗಳು ಬಿಜೆಪಿಗೆ ನಿಷ್ಠರಾಗಿವೆ.

ಕೈಯತ್ತ ವಾಲಿದ ಜಾಲತಾಣಿಗರು!: ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೂಡ ಆಡಳಿತಾರೂಢ ಪಕ್ಷದತ್ತ ವಾಲುತ್ತಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ರಾಜ್ಯದ ವಿಭಿನ್ನ ಭೌಗೋಳಿಕ ಹಿನ್ನೆಲೆ ಮತ್ತು ಸಾಮಾಜಿಕ ನೆಲೆಗಟ್ಟಿನ ಮೇಲೆ ಕರ್ನಾಟಕದ ರಾಜಕೀಯದ ನೈಜ ಮತ್ತು ವಾಸ್ತವ ಚಿತ್ರಣವನ್ನು ಈ ಕೆಳಗಿನ ಅಂಕಿ, ಸಂಖ್ಯೆಗಳು ಕಟ್ಟಿಕೊಡಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.