ಪರಸೇವೆಗಾಗಿ ಅಧಿಕಾರ

7

ಪರಸೇವೆಗಾಗಿ ಅಧಿಕಾರ

Published:
Updated:
ಪರಸೇವೆಗಾಗಿ ಅಧಿಕಾರ

‘ಅಧಿಕಾರ ಮನುಷ್ಯತ್ವವನ್ನು ಕೆಡಿಸುತ್ತದೆ; ಸರ್ವಾಧಿಕಾರ ಮನುಷ್ಯನನ್ನು ಸಂಪೂರ್ಣವಾಗಿ ಕೆಡಿಸುತ್ತದೆ’ ಎಂಬ ಜೊನ್ ಆಕ್ಟನ್‍ನ ಶತಮಾನಗಳಷ್ಟು ಹಳೆಯ ಮಾತುಗಳು ಇಂದಿಗೂ ಬಹಳ ಅರ್ಥಪೂರ್ಣ. ಚರಿತ್ರೆಯಲ್ಲಿ ಹಿಟ್ಲರ್, ಮುಸೊಲಿನಿ, ಇದಿ ಆಮಿನ್, ಇನ್ನಿತರ ಸರ್ವಾಧಿಕಾರಿಗಳು ಇದನ್ನು ಅಕ್ಷರಶಃ ನಿಜಗೊಳಿಸಿದ್ದಾರೆ. ಆದರೂ ಅಧಿಕಾರ ಗಳಿಸಲು ಇನ್ನಿಲ್ಲದ ಪರದಾಟ, ವಾಮಮಾರ್ಗಗಳ ಉಪಯೋಗ, ಹಿಂಸೆಯಂಥಹ ಅನಾಗರಿಕ ವಿಧಾನಗಳ ಬಳಸುವಿಕೆ ಇಂದಿಗೂ ನಡೆಯುತ್ತಾ ಇವೆ. ಅಧಿಕಾರ ಗಳಿಸುವ ಮೊದಲು ಇದ್ದ ಸೇವೆಯ ಉದ್ದೇಶವು ಅಧಿಕಾರ ಗಳಿಸಿದ ನಂತರ ದಬ್ಬಾಳಿಕೆ ಹಾಗೂ ಸರ್ವಾಧಿಕಾರವಾಗಿ ಬದಲಾಗುವುದು ಖೇದಕರ.

ಎಲ್ಲಾ ಅಧಿಕಾರ ಜನಸೇವೆಗಾಗಿ ಎಂಬುದು ಆದರ್ಶವಾದರೂ, ಇದನ್ನು ಪಾಲಿಸುವವರು ಬಹಳ ವಿರಳ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಸೇವೆ ಸಲ್ಲಿಸಲು ಸ್ಪರ್ಧೆ ನಡೆಸಿ, ಆನಂತರ ಸ್ವಾರ್ಥಕ್ಕಾಗಿ ಅಧಿಕಾರದ ಉಪಯೋಗ ನಡೆಯುತ್ತದೆ. ಸೇವೆ ಸಲ್ಲಿಸಬೇಕಾಗಿದ್ದ ಜನಸಾಮಾನ್ಯರು ಅಪರಿಚಿತರು ಎನ್ನುವಷ್ಟರ ಮಟ್ಟಿಗೆ ಈ ಜವಾಬ್ದಾರಿಯನ್ನು ಮರೆತುಬಿಡುತ್ತಾರೆ. ಇದಕ್ಕೆ ಕಾರಣ, ಜನನಾಯಕರಾಗಬಯಸುವ ಬಹುತೇಕರಲ್ಲಿ ಜನಸೇವೆ, ಅಧಿಕಾರ, ಇಂತಹ ಮೂಲ ವಿಷಯಗಳ ತಪ್ಪು ಪರಿಕಲ್ಪನೆ ಇರುವುದು.

ಯೇಸುಸ್ವಾಮಿಯ ಹನ್ನೆರಡು ಶಿಷ್ಯರಲ್ಲಿ ಇಬ್ಬರು ಯೋಹಾನ್ನ ಮತ್ತು ಯಕೋಬ - ಇವರ ತಾಯಿಯು ಯೇಸುಸ್ವಾಮಿಯ ಬಳಿಗೆ ಬಂದು ತನ್ನಿಬ್ಬರು ಮಕ್ಕಳನ್ನು ಯೇಸುಸ್ವಾಮಿ ತನ್ನ ಆಸ್ಥಾನದಲ್ಲಿ ಒಬ್ಬನನ್ನು ಬಲಕ್ಕೂ, ಇನ್ನೊಬ್ಬನನ್ನು ಎಡಕ್ಕೂ ಕುಳಿತುಕೊಳ್ಳುವ ಅವಕಾಶವನ್ನು ಮಾಡಿಕೊಡಬೇಕು ಎಂದು ವಿನಂತಿ ಮಾಡಿಕೊಂಡಳು. ಆ ತಾಯಿಯು ತಾನೇನು ಕೇಳುತ್ತಿದ್ದಾಳೆಂದು ಅವಳಿಗೇ ಅರಿಯದು ಎಂದು ಯೇಸುಸ್ವಾಮಿಗೆ ತಿಳಿದಿತ್ತು.

‘ನನ್ನಂತೆ ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಲು ನೀವು ಸಿದ್ಧರಿದ್ದೀರೋ’ ಎಂದು ಅವರಿಗೆ ಕೇಳಲು ಅವರು ಹೌದೆಂದು ಉತ್ತರಿಸಿದರು. ಆದರೆ ಯೇಸುಸ್ವಾಮಿಯ ಎಡಬಲಗಳಲ್ಲಿ ಆಸೀನರಾಗಿ ಅಧಿಕಾರ ಚಲಾಯಿಸುವ ಅವರ ತಿಳುವಳಿಕೆ ಸಂಪೂರ್ಣ ತಪ್ಪಾಗಿತ್ತು. ಯೇಸುಸ್ವಾಮಿಯ ಸಾಮ್ರಾಜ್ಯ ಈ ಲೋಕದ್ದು, ಅವರು ರೋಮನರ ವಿರುದ್ಧ ದಂಗೆಯೆದ್ದು ಅವರಿಂದ ಸ್ವತಂತ್ರರಾಗಿ ರಾಜ್ಯ ಸ್ಥಾಪಿಸುವಾಗ ಆ ರಾಜ್ಯದ ಆಸ್ಥಾನದಲ್ಲಿ ಯೇಸುರಾಜರ ಎಡಬಲಗಳಲ್ಲಿ ಕುಳಿತುಕೊಳ್ಳುವ ಪ್ರಾಪಂಚಿಕ ಅಧಿಕಾರದ ಆಸೆ ಅವರದಾಗಿತ್ತು. ಅಧಿಕಾರದ ಬಗ್ಗೆ ಯೇಸುಸ್ವಾಮಿ ನೀಡಿದ ಈ ಮಾತುಗಳು ನಿಜಕ್ಕೂ ಅರ್ಥಗರ್ಭಿತ. ‘ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಚಲಾಯಿಸುತ್ತಾರೆ. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ.’ ಇಂಥಹ ಬೋಧನೆಯನ್ನು ನೀಡಿದ ಗುರುವು ತನ್ನ ಶಿಷ್ಯರ ಪಾದಗಳನ್ನು ತೊಳೆದು ತನ್ನ ಮಾತನ್ನು ಕಾರ್ಯಗತಗೊಳಿಸಿದನು. ಇದೇ ನೈಜ ಅಧಿಕಾರ ಚಲಾವಣೆ - ಪರಸೇವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry