ಮೈಸೂರಿನ ಯಶಸ್ ರಾಜ್ಯಕ್ಕೆ ಪ್ರಥಮ: ಮೊಹಮ್ಮದ್‌, ಮೇಧಾ, ಪ್ರಾಂಶುಲಗೆ ದ್ವಿತೀಯ ಸ್ಥಾನ

7

ಮೈಸೂರಿನ ಯಶಸ್ ರಾಜ್ಯಕ್ಕೆ ಪ್ರಥಮ: ಮೊಹಮ್ಮದ್‌, ಮೇಧಾ, ಪ್ರಾಂಶುಲಗೆ ದ್ವಿತೀಯ ಸ್ಥಾನ

Published:
Updated:
ಮೈಸೂರಿನ ಯಶಸ್ ರಾಜ್ಯಕ್ಕೆ ಪ್ರಥಮ: ಮೊಹಮ್ಮದ್‌, ಮೇಧಾ, ಪ್ರಾಂಶುಲಗೆ ದ್ವಿತೀಯ ಸ್ಥಾನ

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ಸದ್ವಿದ್ಯಾ ಪ್ರೌಢಶಾಲೆ ವಿದ್ಯಾರ್ಥಿ ಎಂ.ಎಸ್‌.ಯಶಸ್‌ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

ಏರೋನಾಟಿಕ್‌ ಎಂಜಿನಿಯರ್‌ ಆಗುವುದು ಯಶಸ್‌ ಕನಸು. ಪ್ರಥಮ ಭಾಷೆ ಸಂಸ್ಕೃತ, ದ್ವಿತೀಯ ಇಂಗ್ಲಿಷ್‌, ತೃತೀಯ ಭಾಷೆ ಕನ್ನಡ ಅಧ್ಯಯನ ಮಾಡಿದ್ದಾರೆ. ಇವರ ತಂದೆ ಶಿವಮಲ್ಲಪ್ಪ ಜೆಎಸ್‌ಎಸ್‌ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ದರ್ಜೆ ಗುಮಾಸ್ತರು. ತಾಯಿ ಗೃಹಿಣಿ.

ಇದೇ ಶಾಲೆಯ ವಿದ್ಯಾರ್ಥಿನಿಯರಾದ ಆರ್‌.ಕೀರ್ತನಾ, ಅದಿತಿ ಎ.ರಾವ್‌, ಮರಿಮಲ್ಲಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಶಿವಾನಿ ಎಂ.ಭಟ್‌ ತಲಾ 624 ಅಂಕ ಪಡೆದಿದ್ದಾರೆ.

ಮೊಹಮ್ಮದ್‌ಗೆ 624 ಅಂಕ

ಬೆಳಗಾವಿ ವರದಿ: ಇಲ್ಲಿನ ಕ್ಯಾಂಪ್‌ನ ಸೇಂಟ್‌ ಕ್ಸೇವಿಯರ್‌ ಪ್ರೌಢಶಾಲೆಯ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿ ಮೊಹಮ್ಮದ್‌ ಕೈಫ್‌ ಮುಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು, ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ್ದಾರೆ.

ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125, ವಿಜ್ಞಾನ ವಿಷಯದಲ್ಲಿ 99 ಅಂಕ ಗಳಿಸಿದ್ದಾರೆ. ದ್ವಿತೀಯ ಭಾಷೆ ಕನ್ನಡ ಸೇರಿದಂತೆ ಇತರ ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

‘ಮೊಬೈಲ್‌ ಫೋನ್‌ ಹಾಗೂ ಟಿ.ವಿಯಿಂದ ದೂರ ಇದ್ದೆ. ನಿತ್ಯ 5 ಗಂಟೆ ಮಾತ್ರವೇ ನಿದ್ದೆ ಮಾಡುತ್ತಿದ್ದೆ. ಉಳಿದ ಸಮಯವನ್ನು ಶಾಲೆ, ಓದಿಗೆ ವಿನಿಯೋಗಿಸುತ್ತಿದ್ದೆ. ಎಲ್ಲ ವಿಷಯಗಳಲ್ಲೂ ಗರಿಷ್ಠ ಅಂಕಗಳನ್ನು ನಿರೀಕ್ಷೆ ಮಾಡಿದ್ದೆ. ಆದರೆ, ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಡಿಮೆಯಾಗಿದೆ. ಚೆನ್ನಾಗಿ ಪರೀಕ್ಷೆ ಬರೆದಿದ್ದೇನೆ ಎನ್ನುವ ವಿಶ್ವಾಸವಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಮುಲ್ಲಾ ‘ಪ್ರಜಾವಾಣಿ’ ಗೆ ತಿಳಿಸಿದರು.

‘ದ್ವಿತೀಯ ಪಿಯು ಮುಗಿಯುವವರೆಗೂ ಸ್ಮಾರ್ಟ್‌ ಫೋನ್‌ನ ಅನಗತ್ಯ ಬಳಕೆಯಿಂದ ದೂರವಿರುತ್ತೇನೆ. ಫೋನ್‌ನಲ್ಲಿ ಮುಳುಗಿದರೆ ಸಮಯ ಹಾಳಾಗುತ್ತದೆ. ಓದಲು ತೊಂದರೆ ಆಗುತ್ತದೆ’ ಎಂದರು.

‘ಪಿಯುನಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ. ವಿಷಯ ಅಥವಾ ಅಂಕ ಗಳಿಕೆಗಿಂತ ಜ್ಞಾನಾರ್ಜನೆ ಮುಖ್ಯವೆಂದು ಭಾವಿಸಿದ್ದೇನೆ. ತಾಯಿ ಪರ್ವಿನ್‌ ನದಾಫ ಗಾಂಧಿನಗರದ ಉರ್ದು ಶಾಲೆ ಹಾಗೂ ತಂದೆ ಎಚ್‌. ಮುಲ್ಲಾ ಕಿತ್ತೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರೇ ನನ್ನ ಮೊದಲ ಗುರುಗಳು. ಶಾಲೆಯಲ್ಲೂ ಚೆನ್ನಾಗಿ ಹೇಳಿಕೊಡುತ್ತಿದ್ದರು. ಇದರಿಂದಾಗಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು’ ಎಂದು ಪ್ರತಿಕ್ರಿಯಿಸಿದರು.

‘ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಪಠ್ಯದ ವಿಷಯಗಳನ್ನು ಚರ್ಚಿಸುತ್ತಿದ್ದೆ. ಇದು ಹೆಚ್ಚು ನೆನಪಿನಲ್ಲಿ ಉಳಿಯುತ್ತಿತ್ತು. ಪರೀಕ್ಷೆ ಬರೆಯುವಾಗ ನೆರವಾಯಿತು. ಐಎಎಸ್‌ ಅಧಿಕಾರಿ ಆಗಬೇಕು ಎನ್ನುವ ಬಯಕೆ ಇದೆ’ ಎಂದರು.

624 ಅಂಕ ಗಳಿಸಿದ ಮೇಧಾ

(ಉಡುಪಿ ವರದಿ): ಇಲ್ಲಿನ ಟಿ.ಎ.ಪೈ ಇಎಎಂಎಚ್ ಶಾಲೆಯ ವಿದ್ಯಾರ್ಥಿನಿ ಮೇಧಾ ಅವರು ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಮನೆ ಪಾಠಕ್ಕೆ ಹೋಗದೆ ಓದಿ ಅತ್ಯಧಿಕ ಅಂಕ ಗಳಿಸುವ ಮೂಲಕ ಮಾದರಿಯಾಗಿದ್ದಾರೆ.

‘ಶಾಲೆ ಇರಲಿ, ಇಲ್ಲದಿರಲಿ ಪ್ರತಿ ದಿನ ನಾಲ್ಕು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರು ಏನೇ ಹೋಂವರ್ಕ್ ನೀಡಿದರೂ ಅದನ್ನು ಆಯಾ ದಿನವೇ ಮಾಡಿ ಮುಗಿಸುತ್ತಿದ್ದೆ. ನಿರೀಕ್ಷೆಯಂತೆಯೇ ಒಳ್ಳೆಯ ಅಂಕಗಳು ಬಂದಿವೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ. ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿ ಇದ್ದು, ಮುಂದೆ ಆ ವಿಷಯದಲ್ಲಿ ವ್ಯಾಸಂಗ ಮಾಡುವ ಇಚ್ಛೆ ಇದೆ’ ಎಂದು ಮೇಧಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮೇಧಾ ತಂದೆ ಡಾ. ನರಸಿಂಹ ಭಟ್ ತಮ್ಮದೇ ಆದ ‘ಮಣಿಪಾಲ ಡಾಟ್‌ನೆಟ್‌’ ಕಂಪನಿ ನಡೆಸುತ್ತಿದ್ದಾರೆ. ತಾಯಿ ಶಶಿಕಲಾ ಭಟ್ ಗೃಹಿಣಿಯಾಗಿದ್ದು, ಕುಟುಂಬ ಮಣಿಪಾಲದಲ್ಲಿ ನೆಲೆಸಿದೆ.

‘ಮಗಳ ಸಾಧನೆ ಖುಷಿ ತಂದಿದೆ. ಶಾಲೆ ನೀಡಿದ ಪ್ರೋತ್ಸಾಹದಿಂದಲೇ ಇದು ಸಾಧ್ಯವಾಗಿದೆ. ಮಗಳ ಪ್ರತಿಭೆಯನ್ನು ಶಿಕ್ಷಕರು ಪ್ರತಿ ಹಂತದಲ್ಲಿಯೂ ಪ್ರೋತ್ಸಾಹಿಸಿ ಬೆನ್ನುತಟ್ಟಿದ್ದಾರೆ. ಮಾಡುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುವುದು ಮಗಳ ಒಳ್ಳೆಯ ಗುಣ’ ಎಂದು ಶಶಿಕಲಾ ಭಟ್ ಹೇಳಿದರು.

‘ನನ್ನ ಪತಿ ಸಹ ರ‍್ಯಾಂಕ್ ಪಡೆದ ವಿದ್ಯಾರ್ಥಿ. ಅದು ಸಹ ಮೇಧಾಳಿಗೆ ಸ್ಫೂರ್ತಿಯಾಗಿತ್ತು’ ಎಂದು ಅವರು ಹೇಳಿದರು.

ಆಳ್ವಾಸ್‌ನ ಪ್ರಾಂಶುಲ ರಾಜ್ಯಕ್ಕೆ ದ್ವಿತೀಯ

(ಮೂಡುಬಿದಿರೆ ವರದಿ): ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಆಳ್ವಾಸ್ ಪ್ರೌಢಶಾಲೆಯ ಪ್ರಾಂಶುಲ ಪ್ರಶಾಂತ್ 625ಕ್ಕೆ 624 ಅಂಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಂಸ್ಕೃತ 125, ಕನ್ನಡ 100, ಇಂಗ್ಲಿಷ್ 100, ಸಮಾಜ 100, ವಿಜ್ಞಾನ 100 ಮತ್ತು ಗಣಿತದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ.

ಟ್ಯೂಷನ್ ಇಲ್ಲ: ‘ಪ್ರತಿದಿನದ ಪಾಠ ಪ್ರವಚನಗಳನ್ನು ಅಂದಂದೇ ಮನೆಯಲ್ಲಿ ರಿವಿಷನ್ ಮಾಡುತ್ತಿದ್ದೆ. ಪರೀಕ್ಷೆ ಹತ್ತಿರ ಬಂದಾಗ ಪ್ರತಿ ಸಂಜೆ ಶಾಲೆಯಲ್ಲಿ ಶಿಕ್ಷಕರು ಹೆಚ್ಚುವರಿ ತರಗತಿಗಳನ್ನು ನಡೆಸಿ ವಿಶೇಷ ತರಬೇತಿ ನೀಡಿ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಪ್ರತ್ಯೇಕ ಟ್ಯೂಷನ್‌ಗೆ ಹೋಗಿಲ್ಲ. ಪರೀಕ್ಷೆ ಹತ್ತಿರ ಬಂದಾಗ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಅಳ್ವ ಅವರು ಫೋನ್ ಮಾಡಿ ನನ್ನಲ್ಲಿ ವಿಶ್ವಾಸ ತುಂಬುತ್ತಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಇವೆಲ್ಲ ನನಗೆ ಪ್ರೇರಣೆಯಾಯಿತು’ ಎಂದು  ಪ್ರಾಂಶುಲ ಪ್ರಶಾಂತ್ ‘ಪ್ರಜಾವಾಣಿ’ ಜತೆ ಖುಷಿ ಹಂಚಿಕೊಂಡರು.

ತಪ್ಪಾಗಿದ್ದು ನಂತರ ಗೊತ್ತಾಯಿತು: ‘ಗಣಿತದಲ್ಲಿ ಒಂದು ಪ್ರಶ್ನೆಗೆ ಬರೆದ ಉತ್ತರ ತಪ್ಪಾಯಿತು ಎಂದು ಮನೆಗೆ ಬಂದ ಮೇಲೆ ಗೊತ್ತಾಯಿತು. ಹೀಗಾಗಿ ನನಗೆ ಒಂದು ಅಂಕ ಕಡಿಮೆಯಾಗಿ 625ರಲ್ಲಿ 624 ಅಂಕ ಸಿಕ್ಕಿದೆ. ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ಓದಬೇಕೆಂಬ ಆಸೆ ಇದೆ’ ಎಂದರು.

ಪ್ರಾಂಶುಲ ಮೂಡುಬಿದಿರೆಯ ಕೊಡಂಗಲ್ಲಿನ ನಿವಾಸಿ. ಇವರ ತಂದೆ ಪ್ರಶಾಂತ್ ಕುಮಾರ್ ಹರಿಹರದಲ್ಲಿ ಆದಿತ್ಯಾ ಬಿರ್ಲಾ ಕಂಪನಿಯ ಉದ್ಯೋಗಿ ಹಾಗೂ ತಾಯಿ ಚೇತನಾ ಪ್ರಶಾಂತ್ ಗೃಹಿಣಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry