ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಬದಲು ಶ್ರೇಯಸ್‌ಗೆ ಸ್ಥಾನ ಸಾಧ್ಯತೆ

ಅಫ್ಗಾನಿಸ್ತಾನ ಎದುರಿನ ಏಕೈಕ ಟೆಸ್ಟ್‌ ಪಂದ್ಯಕ್ಕೆ ಇಂದು ಭಾರತ ತಂಡದ ಆಯ್ಕೆ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೇಯಸ್‌ ಅಯ್ಯರ್‌ ಅವರು ಅಫ್ಗಾನಿಸ್ತಾನ ಎದುರಿನ ಏಕೈಕ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಮಂಗಳವಾರ ಸಭೆ ನಡೆಸಲಿದ್ದು, ಅಫ್ಗಾನಿಸ್ತಾನ ಎದುರಿನ ಟೆಸ್ಟ್‌ ಮತ್ತು ಐರ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳಿಗೆ ತಂಡವನ್ನು ಆಯ್ಕೆ ಮಾಡಲಿದೆ. ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ‘ಎ’ ತಂಡದ ಆಯ್ಕೆಯೂ ಇದೇ ವೇಳೆ ನಡೆಯಲಿದೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಕೌಂಟಿ ಕ್ರಿಕೆಟ್‌ನಲ್ಲಿ ಸರ‍್ರೆ ತಂಡದ ಪರ ಆಡಲು ನಿರ್ಧರಿಸಿದ್ದು, ಅಫ್ಗಾನಿಸ್ತಾನ ಮತ್ತು ಐರ್ಲೆಂಡ್‌ ಎದುರಿನ ಸರಣಿಗಳಲ್ಲಿ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ಆಯ್ಕೆ ಸಮಿತಿ ಕೊಹ್ಲಿ ಬದಲಿಗೆ ಶ್ರೇಯಸ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ನಿರೀಕ್ಷೆ ಇದ್ದು, ಅಜಿಂಕ್ಯ ರಹಾನೆಗೆ ನಾಯಕತ್ವದ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ಟ್ವೆಂಟಿ–20 ಸರಣಿಯಲ್ಲಿ ರೋಹಿತ್‌ ಶರ್ಮಾ, ತಂಡವನ್ನು ಮುನ್ನಡೆಸುವ ನಿರೀಕ್ಷೆ ಇದೆ.

2017ರಲ್ಲಿ ಧರ್ಮಶಾಲಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಪಂದ್ಯದ ವೇಳೆ ಕೊಹ್ಲಿ ಗಾಯಗೊಂಡಿದ್ದರು. ಆಗ ಶ್ರೇಯಸ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆಡುವ ಬಳಗದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

46 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶ್ರೇಯಸ್‌, 53.90ರ ಸರಾಸರಿಯಲ್ಲಿ 3989ರನ್‌ಗಳನ್ನು ಕಲೆಹಾಕಿದ್ದಾರೆ.

ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವ ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮತ್ತು ಬೌಲರ್‌ ಇಶಾಂತ್‌ ಶರ್ಮಾ ಅವರಿಗೂ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಗುವ ಸಂಭವ ಇದೆ.

ರೋಹಿತ್‌, ಮುರಳಿ ವಿಜಯ್‌, ಕರ್ನಾಟಕದ ಕೆ.ಎಲ್‌.ರಾಹುಲ್‌ ಮತ್ತು ಶಿಖರ್‌ ಧವನ್‌ ಅವರು ಸ್ಥಾನ ಪಡೆಯುವುದು ನಿಶ್ಚಿತವಾಗಿದೆ.

ಅಫ್ಗಾನಿಸ್ತಾನ ಎದುರಿನ ಟೆಸ್ಟ್‌ ಪಂದ್ಯ ಜೂನ್‌ 14ರಿಂದ ನಡೆಯಲಿದೆ. ಐರ್ಲೆಂಡ್‌ ವಿರುದ್ಧದ ಸರಣಿ ಜೂನ್‌ ಅಂತ್ಯದಲ್ಲಿ ಡುಬ್ಲಿನ್‌ನಲ್ಲಿ ಜರುಗಲಿದೆ.

ಐಪಿಎಲ್‌ನಲ್ಲಿ ಮೋಡಿ ಮಾಡುತ್ತಿರುವ ಅಂಬಟಿ ರಾಯುಡುಗೆ ಟ್ವೆಂಟಿ–20 ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಪೃಥ್ವಿ, ಗಿಲ್‌ಗೆ ಸ್ಥಾನ: ಭಾರತ ‘ಎ’ ತಂಡ ಮುಂದಿನ ತಿಂಗಳು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಏಕದಿನ ಮತ್ತು ಟೆಸ್ಟ್‌ ಸರಣಿಗಳಲ್ಲಿ ಭಾಗವಹಿಸಲಿದೆ.

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿ ಮಿಂಚಿದ್ದ ಪೃಥ್ವಿ ಶಾ, ಶುಭಮನ್‌ ಗಿಲ್‌ ಮತ್ತು ಶಿವಂ ಮಾವಿ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಜೂನ್‌ 22ರಿಂದ ನಡೆಯುವ ಏಕದಿನ ಸರಣಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ಲಯನ್ಸ್‌ ಮತ್ತು ವೆಸ್ಟ್‌ ಇಂಡೀಸ್‌ ‘ಎ’ ತಂಡಗಳ ವಿರುದ್ಧ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಜುಲೈ 16ರಿಂದ 19ರವರೆಗೆ ನಡೆಯುವ ನಾಲ್ಕು ದಿನಗಳ ಟೆಸ್ಟ್‌ ಪಂದ್ಯದಲ್ಲಿ ಭಾರತ ‘ಎ’ ಮತ್ತು ಇಂಗ್ಲೆಂಡ್‌ ಲಯನ್ಸ್‌ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT