ಚುನಾವಣೆ ಭದ್ರತೆಗೆ 10,500 ಸಿಬ್ಬಂದಿ

7

ಚುನಾವಣೆ ಭದ್ರತೆಗೆ 10,500 ಸಿಬ್ಬಂದಿ

Published:
Updated:
ಚುನಾವಣೆ ಭದ್ರತೆಗೆ 10,500 ಸಿಬ್ಬಂದಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೀಸಲು ಪೊಲೀಸ್‌ ಪಡೆ ನೆರವು ಪಡೆಯಲು ನಗರ ಪೊಲೀಸರು ನಿರ್ಧರಿಸಿದ್ದಾರೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ಕೇಂದ್ರೀಯ ಸಶಸ್ತ್ರ ಸೀಮಾ ಬಲ, ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಸೇರಿದಂತೆ 44 ವಿವಿಧ ಸಂಸ್ಥೆಗಳ ಸಹಾಯದೊಂದಿಗೆ ನಗರದ ಭದ್ರತೆಗಾಗಿ ಒಟ್ಟು 10,500 ಸಿಬ್ಬಂದಿಯನ್ನು ನೇಮಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಮಾತನಾಡಿ, ‘ನಗರದಲ್ಲಿ 3,000 ಸೂಕ್ಷ್ಮ ಹಾಗೂ 1,200 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು.‌

‘100 ಮತಗಟ್ಟೆಗಳನ್ನು ವಿಶೇಷವಾಗಿ ‘ಗುಲಾಬಿ’ ಮತಗಟ್ಟೆಗಳಾಗಿ ರೂಪಿಸಲಾಗಿದೆ. ಇಲ್ಲಿ ಮಹಿಳೆಯರು ಕೆಲಸ ಮಾಡುತ್ತಾರೆ. ಜೊತೆಗೆ ಮಹಿಳೆಯರು ಮಾತ್ರ ಇಲ್ಲಿ ಮತಹಾಕುವ ವ್ಯವಸ್ಥೆ ಮಾಡಲಾಗಿದೆ. ಗುಲಾಬಿ ಪೋಸ್ಟರ್‌ಗಳನ್ನು ಹಾಕಲಾಗುವುದು’ ಎಂದರು.

‘26,000 ಅಂಗವಿಕಲರು ಹಾಗೂ ಅಂಧ ಮತದಾರರನ್ನು ಗುರುತಿಸಿ ಅವರಿಗೆ ಮನೆಯಿಂದ ಮತಗಟ್ಟೆಗೆ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರರಾವ್ ಹೇಳಿದರು.

‘7,000 ನೂತನ ಮತದಾರರಿಗೆ ಗುರುತಿನ ಪತ್ರ ನೀಡಲಾಗಿದೆ. ಮತದಾನದ ಮಾರ್ಗದರ್ಶಿ, ಮತ ಪತ್ರ, ಮತಗಟ್ಟೆಯ ವಿವರಗಳನ್ನು ಕೂಡ ನೀಡಿದ್ದೇವೆ’ ಎಂದರು.

‘ಮತದಾನದ ಜಾಗೃತಿಗಾಗಿ ಮೇ 9ರಂದು ಎಲ್ಲಾ ಕ್ಷೇತ್ರದಲ್ಲಿ ಮೊಂಬತ್ತಿ ಬೆಳಗಿಸಲಾಗುವುದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದರು.

ಮತದಾನಕ್ಕೆ 48 ಗಂಟೆ ಮೊದಲು ರಾಜ್ಯದಿಂದ ಹೊರಡಿ

ಬೆಂಗಳೂರು:
ವಿಧಾನಸಭಾ ಚುನಾವಣೆಯ 48 ಗಂಟೆಗೂ ಮೊದಲು ಎಲ್ಲ ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯವನ್ನು ಬಿಟ್ಟು ತೆರಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಉಸ್ತುವಾರಿಯನ್ನು ಹೊರತುಪಡಿಸಿ ಬೇರೆ ಯಾರೂ ರಾಜ್ಯದಲ್ಲಿ ಇರುವಂತಿಲ್ಲ. ಅವರೂ ಕೆಲವು ನಿರ್ಬಂಧಗಳಿಗೆ ಒಳಪಡುತ್ತಾರೆ. ಅವರು ಪಕ್ಷದ ಕಚೇರಿಯಲ್ಲಿ ಇರಬೇಕು. ಬೇರೆ ಎಲ್ಲೂ ಹೋಗುವಂತಿಲ್ಲ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಸುದ್ದಿ ವಾಹಿನಿಗಳೂ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪರ ಅಥವಾ ವಿರುದ್ಧ ಪ್ರಭಾವ ಬೀರುವ ಕಾರ್ಯಕ್ರಮ, ಸಂವಾದ, ಸಂದರ್ಶನ ಮತ್ತು ವಾಯ್ಸ್‌ ಬೈಟ್ಸ್‌ಗಳನ್ನು ಪ್ರಸಾರ ಮಾಡುವಂತಿಲ್ಲ. ಇದೇ 10ರಂದು ಸಂಜೆ 6 ಗಂಟೆಯಿಂದಲೇ ಈ ನಿರ್ಬಂಧ ಅನ್ವಯವಾಗುತ್ತದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್‌ 126 (ಎ)ರ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇಲ್ಲಿಯವರೆಗೆ ₹ 162 ಕೋಟಿ ಮೌಲ್ಯದ ನಗದು, ವಿವಿಧ ವಸ್ತುಗಳು ಮತ್ತು ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿರುವುದರಿಂದ ನಿಗಾವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ವಿವಿಧ ರಾಜ್ಯಗಳಿಂದ 154 ಚುನಾವಣಾ ವೀಕ್ಷಕರು ಬಂದಿದ್ದಾರೆ. ಇವರನ್ನು ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗಿದೆ. 136 ಮಂದಿ ಖರ್ಚು ವೆಚ್ಚ ವೀಕ್ಷಕರು ಬಂದಿದ್ದಾರೆ ಎಂದು ತಿಳಿಸಿದರು.

ವಿಶೇಷ ಅಂಚೆ ಚೀಟಿ: ವಿಧಾನಸಭಾ ಚುನಾವಣೆ ಅಂಗವಾಗಿ ಚುನಾವಣಾ ಆಯೋಗದ ಸಹಯೋಗದೊಂದಿಗೆ ಅಂಚೆ ಇಲಾಖೆ ಹೊರ ತಂದಿರುವ ನಾಲ್ಕು ವಿಶೇಷ ಅಂಚೆ ಚೀಟಿಗಳು ಮತ್ತು ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಾಯಿತು. ಪ್ರಜಾಪ್ರಭುತ್ವ ಹಬ್ಬ– ಕರ್ನಾಟಕ ಚುನಾವಣೆಗಳು 2018 ಎಂಬ ಶೀರ್ಷಿಕೆಯಡಿ ಇವುಗಳನ್ನು ಹೊರ ತರಲಾಗಿದೆ.

ಅಂಧರಿಗೆ ಬ್ರೈಲ್‌ ಲಿಪಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಬರೆದಿರುವ ಮತದಾನದ ಮನವಿ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ. ಚಾರ್ಲ್ಸ್‌ ಲೋಬೊ, ಬೆಂಗಳೂರು ಪೂರ್ವ ಅಂಚೆ ವಿಭಾಗದ ಹಿರಿಯ ಅಧಿಕಾರಿ ಸಂದೇಶ್ ಮಹಾದೇವಪ್ಪ ಹಾಜರಿದ್ದರು.

ಮತಗಟ್ಟೆಯ ಮಾಹಿತಿಗಾಗಿ ಹೀಗೆ ಮಾಡಿ

ನಿಮ್ಮ ಮತಗಟ್ಟೆಯ ಬಗ್ಗೆ ನಿಖರ ಮಾಹಿತಿ ತಿಳಿದುಕೊಳ್ಳಲು KAEPIC (space) (EPIC number) ಹಾಕಿ 9731979899 ಗೆ ಸಂದೇಶ ಕಳಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry