ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಪ್ರವಾಸಿಗರ ಬಸ್‌ ಮೇಲೆ ಕಲ್ಲು ತೂರಾಟ: ತಮಿಳುನಾಡಿನ ಯುವಕ ಸಾವು

ತಲೆ ತಗ್ಗಿಸುವಂತಹ ಘಟನೆ– ಸಿಎಂ ಮೆಹಬೂಬಾ ಮುಫ್ತಿ
Last Updated 8 ಮೇ 2018, 4:39 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ಪ್ರವಾಸಿಗ ಕಲ್ಲು ತೂರಾಟದಲ್ಲಿ ಗಾಯಗೊಂಡು ಸೋಮವಾರ ಬೆಳಿಗ್ಗೆ ಕೋಮಾ ಸ್ಥಿತಿ ತಲುಪಿದ್ದರು. ರಾತ್ರಿ ಹೊತ್ತಿಗೆ ಅವರು ಮೃತಪಟ್ಟಿದ್ದಾರೆ.

ಚೆನ್ನೈನ 22 ವರ್ಷದ ಆರ್.ತಿರುಮಣಿ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದರು. ಶ್ರೀನಗರದ ಹೊರವಲಯ ನರಬಾಲ್‌ನಲ್ಲಿ ಸೋಮವಾರ ಬೆಳಿಗ್ಗೆ ಪ್ರವಾಸಿಗರ ವಾಹನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಕಲ್ಲೇಟಿನಿಂದ ತೀವ್ರವಾಗಿ ಗಾಯಗೊಂಡ ತಿರುಮಣಿ ಅವರನ್ನು ಬೆಳಿಗ್ಗೆ 10:30ರ ಸುಮಾರಿಗೆ ಆಸ್ಪತ್ರೆಗೆ ಸೇರಿಸಲಾಯಿತು.

ಆದರೆ, ಕೋಮಾ ಸ್ಥಿತಿ ತಲುಪಿದ ಅವರು ರಾತ್ರಿ 8:30ರ ಸುಮಾರಿಗೆ ಮೃತಪಟ್ಟಿದ್ದಾಗಿ ಎನ್‌ಡಿಟಿವಿ ವೆಬ್‌ಸೈಟ್‌ ವರದಿ ಮಾಡಿದೆ.

ಗುಂಪುಗಳ ಕಲ್ಲು ತೂರಾಟದ ಘರ್ಷಣೆ ವೇಳೆ ಪ್ರವಾಸಿಗರ ಬಸ್‌ನಲ್ಲಿದ್ದ ತಿರುಮಣಿ ಗಾಯಗೊಂಡಿದ್ದರು. ಪ್ರವಾಸಿಗರು ಗುಲ್‌ಮಾರ್ಗ್‌ ಕಡೆ ಹೊರಟಿದ್ದರು. ಈ ಘಟನೆಯಲ್ಲಿ 19 ವರ್ಷದ ಸ್ಥಳೀಯ ಯುವತಿಯೂ ಗಾಯಗೊಂಡಿರುವುದಾಗಿ ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ತಿರುಮಣಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶ್ರೀನಗರದ ಪೊಲೀಸ್‌ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ತಿರುಮಣಿ ಪೋಷಕರಿಗೆ ಸಾಂತ್ವನ ಹೇಳಿದರು.

‘ನಾಚಿಕೆಯಿಂದ ನನ್ನ ತಲೆ ಬಾಗಿದೆ. ಇದು ತುಂಬ ದುಃಖದ ಸಂಗತಿ’ ಎಂದು ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ದಕ್ಷಿಣ ಕಾಶ್ಮೀರದ ಸೋಫಿಯಾನ್‌ನಲ್ಲಿ ಕಳೆದ ವಾರ 50 ಮಕ್ಕಳಿದ್ದ ಶಾಲಾ ವಾಹನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಮಗುವೊಂದು ಗಾಯಗೊಂಡಿತ್ತು.

ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರು ಕಾಶ್ಮೀರದಲ್ಲಿ ನಡೆಸುತ್ತಿರುವ ಕಲ್ಲುತೂರಾಟ ಘರ್ಷಣೆ ಇದೀಗ ಪ್ರವಾಸಿಗರು ಹಾಗೂ ಶಾಲಾ ವಾಹನದ ಕಡೆಗೂ ತಿರುಗಿರುವುದು ಸರ್ಕಾರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜಮ್ಮು–ಕಾಶ್ಮೀರದ ಆದಾಯದ ಬಹುಪಾಲು ಪ್ರವಾಸೋದ್ಯಮದಿಂದಲೇ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT