ಕುಂದಾಪುರದ ಇಬ್ಬರು ವಿದ್ಯಾರ್ಥಿನಿಯರಿಗೆ 4ನೇ ಸ್ಥಾನ

7
ಕಾರು ಚಾಲಕನ ಮಗಳಿಗೆ ನಾಲ್ಕನೇ ಸ್ಥಾನ

ಕುಂದಾಪುರದ ಇಬ್ಬರು ವಿದ್ಯಾರ್ಥಿನಿಯರಿಗೆ 4ನೇ ಸ್ಥಾನ

Published:
Updated:

ಕುಂದಾಪುರ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕೋಟೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಸುಜಾತ ಭಟ್‌ ಹಾಗೂ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಿಲ್ಪಾ ಎಸ್.ಪಿ. 622 ಅಂಕ ಪಡೆದು ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕೋಟೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಸುಜಾತ ಭಟ್‌ ಅವರ ತಂದೆ ಶಾಂತಾರಾಮ್ ಭಟ್ ಅವರು ವೃತ್ತಿಯಿಂದ ಕಾರು ಚಾಲಕರು. ತಾಯಿ ಸೌಮ್ಯ ಎಸ್.ಭಟ್‌ ಅವರು ಪದವೀಧರೆಯಾಗಿದ್ದು ಅವರ ಮಾರ್ಗದರ್ಶನದಿಂದ ಸುಜಾತ ಭಟ್‌ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕನ್ನಡ (125), ಹಿಂದಿ (100), ಸಮಾಜದಲ್ಲಿ (100), ಇಂಗ್ಲಿಷ್‌ (99), ಗಣಿತ (99) ಹಾಗೂ ವಿಜ್ಞಾನ (99) ವಿಷಯದಲ್ಲಿ ಉತ್ತಮ ಅಂಕಗಳು ಬಂದಿವೆ.

ಕೋಟ ವಿವೇಕಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗವನ್ನು ಸೇರಿ ವಿದ್ಯಾಭ್ಯಾಸ ಮುಂದುವರೆಸುವ ಗುರಿಯನ್ನು ಇರಿಸಿಕೊಂಡಿರುವ ಸುಜಾತಾ ಭಟ್‌ ಅವರಿಗೆ ಬಡತನದಲ್ಲಿಯೂ ವಿದ್ಯಾಭ್ಯಾಸಕ್ಕೆ ಸ್ಫೂರ್ತಿಯಾದ ತಂದೆ–ತಾಯಿಯ ಬಗ್ಗೆ ಹೆಮ್ಮೆ ಇದೆ.

ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಿಲ್ಪಾ ಎಸ್.ಪಿ. ಅವರ ತಂದೆ ಮತ್ತು ತಾಯಿ ಇಬ್ಬರೂ ಶಿಕ್ಷಕರು. ಇಲ್ಲಿನ ಹುಂಚಾರಬೆಟ್ಟು ರಸ್ತೆಯ ವಡೇರಹೋಬಳಿ ನಿವಾಸಿ ಬಸ್ರೂರು ಪ್ರೌಢಶಾಲೆಯ ಶಿಕ್ಷಕ ಪ್ರಕಾಶ ಹಾಗೂ ಬಳ್ಕೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮನಾ ದಂಪತಿಯ ಪುತ್ರಿಯಾಗಿರುವ ಶಿಲ್ಪಾಗೆ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 100, ಹಿಂದಿಯಲ್ಲಿ 100, ಸಮಾಜದಲ್ಲಿ 100, ಗಣಿತದಲ್ಲಿ 99 ಹಾಗೂ ವಿಜ್ಞಾನದಲ್ಲಿ 98 ಅಂಕಗಳು ಬಂದಿವೆ.

‘ಮಗಳ ಮುಂದಿನ ವಿದ್ಯಾಭ್ಯಾಸದ ಆಯ್ಕೆಯನ್ನು ಆಕೆಗೆ ಮುಕ್ತವಾಗಿ ಇರಿಸಿದ್ದೇವೆ’ ಎನ್ನುತ್ತಾರೆ ಆಕೆಯ ತಂದೆ–ತಾಯಿ. ಓದಿನ ಜೊತೆಯಲ್ಲಿ ಚಿತ್ರಕಲೆ, ಕ್ರಾಫ್ಟ್‌ ಹಾಗೂ ಪುಸ್ತಕ ಓದುವ ಹವ್ಯಾಸವನ್ನು ಹೊಂದಿರುವ ಶಿಲ್ಪಾಗೆ ಮುಂದೆ ವಿಜ್ಞಾನಿಯಾಗುವ ಆಸೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry