ಡಿಜಿಟಲ್‌ ಉತ್ತೇಜನ 11 ರಂದು ಜಿಎಸ್‌ಟಿ ಸಭೆ

7

ಡಿಜಿಟಲ್‌ ಉತ್ತೇಜನ 11 ರಂದು ಜಿಎಸ್‌ಟಿ ಸಭೆ

Published:
Updated:
ಡಿಜಿಟಲ್‌ ಉತ್ತೇಜನ 11 ರಂದು ಜಿಎಸ್‌ಟಿ ಸಭೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಡಿಜಿಟಲ್‌ ಪಾವತಿ ಉತ್ತೇಜಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯಗಳ ಹಣಕಾಸು ಸಚಿವರ ಸಮಿತಿಯು ಇದೇ 11ರಂದು ಸಭೆ ಸೇರಿ ಚರ್ಚಿಸಲಿದೆ.

ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್ ಮೋದಿ ನೇತೃತ್ವದಲ್ಲಿನ ಸಮಿತಿಯಲ್ಲಿ ಐದು ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ. ಹದಿನೈದು ದಿನಗಳಲ್ಲಿ ವರದಿ ಸಲ್ಲಿಸಲು ಈ ಸಮಿತಿಗೆ ಸೂಚಿಸಲಾಗಿದೆ.

ನಗದುರಹಿತ (ಡಿಜಿಟಲ್‌) ವಿಧಾನದಲ್ಲಿ ಮತ್ತು ಚೆಕ್‌ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಶೇ 3ಕ್ಕಿಂತ ಹೆಚ್ಚಿನ ಜಿಎಸ್‌ಟಿ ಇರುವ ಸರಕು ಮತ್ತು ಸೇವೆಗಳ ಜಿಎಸ್‌ಟಿ ದರಗಳಲ್ಲಿ ಶೇ 2ರಷ್ಟು ರಿಯಾಯ್ತಿ ನೀಡುವ ಪ್ರಸ್ತಾವ ಇದೆ. ರಿಯಾಯ್ತಿಯ ಗರಿಷ್ಠ ಮಿತಿಯನ್ನು ಪ್ರತಿಯೊಂದು ವಹಿವಾಟಿಗೆ ₹ 100ಕ್ಕೆ ಸೀಮಿತಗೊಳಿಸಲು ಉದ್ದೇಶಿಸಲಾಗಿದೆ. ಕಳೆದ ವಾರ ನಡೆದಿದ್ದ ಜಿಎಸ್‌ಟಿ ಸಭೆಯಲ್ಲಿ ಇದನ್ನು ಚರ್ಚಿಸಲಾಗಿತ್ತು.

ಪಶ್ಚಿಮ ಬಂಗಾಳದ ಆಕ್ಷೇಪ: ಬಹುತೇಕ ಎಲ್ಲ ರಾಜ್ಯಗಳು ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದವು. ಪಶ್ಚಿಮ ಬಂಗಾಳ ಮಾತ್ರ ಇದಕ್ಕೆ ತನ್ನ ಆಕ್ಷೇಪ ದಾಖಲಿಸಿತ್ತು. ಬಡವರು ಈಗಲೂ ವಹಿವಾಟಿಗೆ ನಗದನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಅವರಿಗೆ ಇದರಿಂದ ಅನ್ಯಾಯವಾಗಲಿದೆ ಎನ್ನುವುದು ಅದರ ವಾದ.

‘ಪಶ್ಚಿಮ ಬಂಗಾಳ ಸರ್ಕಾರ ವ್ಯಕ್ತಪಡಿಸಿರುವ ಕಳವಳವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. 11ರಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry