ಶನಿವಾರ, ಮಾರ್ಚ್ 6, 2021
19 °C
ಮುಂದುವರೆದ ಸಾಂಪ್ರದಾಯಿಕ ಕುಟುಂಬಗಳ ಜಿದ್ದಾಜಿದ್ದಿ

ಹನೂರಿನಲ್ಲಿ ಹಳತು ಹೊಸತರ ಸಂಘರ್ಷ

ಕೆ.ಎಸ್. ಗಿರೀಶ್ Updated:

ಅಕ್ಷರ ಗಾತ್ರ : | |

ಹನೂರಿನಲ್ಲಿ ಹಳತು ಹೊಸತರ ಸಂಘರ್ಷ

ಚಾಮರಾಜನಗರ: ಜಿಲ್ಲೆಯ ಅತಿ ವಿಸ್ತಾರವಾದ ಕ್ಷೇತ್ರ ಎನಿಸಿದ ಹನೂರು ವಿಧಾನಸಭಾ ಕ್ಷೇತ್ರ ಹಳತು ಮತ್ತು ಹೊಸತರ ಸಂಘರ್ಷದ ಕಣವಾಗಿ ಏರ್ಪಟ್ಟಿದೆ. ಜತೆಗೆ, ಪ್ರತಿ ಬಾರಿಯಂತೆ ಈ ಬಾರಿಯೂ ಎರಡು ಕುಟುಂಬಗಳ ನಡುವಿನ ಜಿದ್ದಾಜಿದ್ದಿಯ ಸ್ಪರ್ಧೆಯಾಗಿಯೂ ಕ್ಷೇತ್ರ ಗಮನ ಸೆಳೆದಿದೆ.

ಈ ಬಾರಿ ಬಿಜೆಪಿಯಿಂದ ಡಾ. ಪ್ರೀತನ್ ನಾಗಪ್ಪ ಹಾಗೂ ಜೆಡಿಎಸ್‌ನಿಂದ ಮಂಜುನಾಥ್ ಚುನಾವಣಾ ಕಣದಲ್ಲಿ ಹೊಸಬರು. ಉಳಿದಂತೆ, ಸತತ ಎರಡು ಬಾರಿ ಶಾಸಕರಾಗಿರುವ ಆರ್. ನರೇಂದ್ರ ಹ್ಯಾಟ್ರಿಕ್ ಗೆಲುವಿಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.

ನಾಗಪ್ಪ ಹಾಗೂ ರಾಜೂಗೌಡ ಅವರ ಕುಟುಂಬ ಸದಸ್ಯರು ಎಂದಿನಂತೆ ಈಗಲೂ ಪರಸ್ಪರ ಎದುರಾಗಿದ್ದಾರೆ. ರಾಜೂಗೌಡ ಅವರ ಪುತ್ರ ನರೇಂದ್ರ ಹಾಗೂ ನಾಗಪ್ಪ ಅವರ ಪುತ್ರ ಪ್ರೀತನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ನರೇಂದ್ರ ಶೇ 40.39ರಷ್ಟು ಮತಗಳನ್ನು ಪಡೆದಿದ್ದರೆ, ಪರಿಮಳಾ ನಾಗಪ್ಪ ಶೇ 32.02ರಷ್ಟು ಮತಗಳನ್ನು ಪಡೆದಿದ್ದರು. ಅಂದರೆ, ಶೇ 72ರಷ್ಟು ಮತಗಳು ಈ ಎರಡೂ ಕುಟುಂಬಗಳ ಸದಸ್ಯರ ನಡುವೆಯೇ ಹಂಚಿಕೆಯಾಗಿರುವುದನ್ನು ಗಮನಿಸಿದರೆ ಕುಟುಂಬ ರಾಜಕಾರಣದ ಮಹತ್ವ ಅರಿವಾಗದೇ ಇರದು.

ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅನ್ನು ಬಲವಾಗಿಯೇ ಕಾಡುತ್ತಿದೆ‌. ಇದು ಬಿಜೆಪಿ ಪಾಲಿಗೆ ‘ಪ್ಲಸ್ ಪಾಯಿಂಟ್’ ಎನಿಸಿದರೂ ಈ ಅಲೆಯನ್ನು ಗೆಲುವಿಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಸೋತಿದೆ. ಆಡಳಿತ ವಿರೋಧಿ ಅಲೆಯನ್ನು ಪ್ರಧಾನವಾಗಿ ಪರಿಗಣಿಸದ ಬಿಜೆಪಿ ಪ್ರೀತನ್ ಅವರನ್ನು ‘ನಾಗಪ್ಪ ಅವರ ಕುಡಿ’ ಎಂದೇ ಪ‍್ರಧಾನವಾಗಿ ಬಿಂಬಿಸುತ್ತಿದೆ.

ಇತ್ತ ಕಾಂಗ್ರೆಸ್ ಸಹ ಆಡಳಿತ ವಿರೋಧಿ ಅಲೆಯನ್ನು ತಣ್ಣಗಾಗಿಸಲು ಹೆಚ್ಚಿನ ಕಸರತ್ತು ನಡೆಸಿಲ್ಲ. ಹೀಗಾಗಿ, ಜನರ ನಡುವಿನ ಈ ಅಲೆ ಇನ್ನೂ ಸ್ಪಷ್ಟವಾಗಿ ಬಹಿರಂಗಗೊಂಡಿಲ್ಲ.

ಕಳೆದ ‌ವಿಧಾನಸಭಾ ಅವಧಿಯ ಕಡೇ ಗಳಿಗೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ, ಇದು ಜನರಿಗೆ ಇನ್ನೂ ತಲುಪಿಲ್ಲ. ಹಲವು ಕಾಮಗಾರಿಗಳು ಟೆಂಡರ್ ಹಂತದಲ್ಲಿಯೇ ಇದೆ. ಈ ವಿಚಾರಗಳನ್ನು ಮತದಾರನಿಗೆ ಮನದಟ್ಟು ಮಾಡಿಸುವಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತಿದೆ.

ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿ‌ನ ಸಮಸ್ಯೆ ಢಾಳಾಗಿಯೇ ಇದೆ. ಸಮರ್ಪಕವಾದ ರಸ್ತೆ ಸಂಪರ್ಕ ಇಲ್ಲ. ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಅರಣ್ಯ ಇಲಾಖೆ ಬಹುತೇಕ ಕಡೆ ಅನುಮತಿ ನೀಡಿಲ್ಲ. ಈ ವಿಚಾರ ಅರಣ್ಯವಾಸಿಗಳಲ್ಲಿ ಅಸಮಾಧಾನ ಮಡುಗಟ್ಟುವಂತೆ ಮಾಡಿದೆ‌. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದ್ದಾಗ್ಯೂ ಯಾವೊಬ್ಬ ಅಭ್ಯರ್ಥಿಗಳೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಮುಖ ಚುನಾವಣಾ‌‌ ವಿಷಯಗಳನ್ನು ಒತ್ತಟ್ಟಿಗೆ ಸರಿಸಿರುವ ಅಭ್ಯರ್ಥಿಗಳು ಜಾತಿ, ಕುಟುಂಬಗಳ ಆಧಾರದ ಮೇಲೆಯೇ ಹೆಚ್ಚಾಗಿ ಮತಯಾಚನೆ ಮಾಡುತ್ತಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆಯನ್ನು ತಣ್ಣಾಗಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರವಷ್ಟೇ ಸಮಾವೇಶ ನಡೆಸಿ ಎದುರೇಟು ನೀಡಿದ್ದಾರೆ. ಜೆಡಿಎಸ್ ಈವರೆಗೂ ಸಮಾವೇಶ ನಡೆಸುವ ಅಥವಾ ಪಕ್ಷದ ‌ವರಿಷ್ಠರು ಮತಯಾಚನೆ ಮಾಡುವ ಪ್ರಯತ್ನಕ್ಕೂ ಕೈಹಾಕಿಲ್ಲ‌.

ಕ್ಷೇತ್ರದ ಇತಿಹಾಸ ಗಮನಿಸಿದರೆ ನಡೆದಿರುವ 11 ಚುನಾವಣೆಗಳಲ್ಲಿ 7ರಲ್ಲಿ ಕಾಂಗ್ರೆಸ್ ವಿಜಯಿಯಾಗಿದೆ. ಕಾಂಗ್ರೆಸ್ (ಐ), ಪಕ್ಷೇತರ, ಜನತಾದಳ ಹಾಗೂ ಜೆಡಿಎಸ್ ತಲಾ ಒಂದೊಂದು ಬಾರಿ ಗೆದ್ದಿವೆ. ಈ ಬಾರಿ ಡಾ.ಪ್ರೀತನ್ ನಾಗಪ್ಪ ಅವರಿಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಖಾತೆ ತೆರೆಯುವ ಯೋಜನೆ ಹಾಕಿಕೊಂಡಿದೆ.

ಪಕ್ಷಾವಾರು ರಾಜಕಾರಣವನ್ನು ಬದಿಗಿರಿಸಿ ನೋಡಿದರೆ, ನಾಗಪ್ಪ ಕುಟುಂಬದವರು 3 ಬಾರಿ ಶಾಸಕರಾಗಿದ್ದರೆ, ರಾಜೂಗೌಡ ಕುಟುಂಬದ ಸದಸ್ಯರು 6 ಬಾರಿ ಶಾಸಕರಾಗಿದ್ದಾರೆ. ಹೀಗಾಗಿ, ಪಕ್ಷಾವಾರು ರಾಜಕಾರಣಕ್ಕಿಂತ ಕುಟುಂಬವಾರು ರಾಜಕಾರಣವೇ ಇಲ್ಲಿ ಮಹತ್ವ ಪಡೆದಿದೆ.

ಅತ್ಯಧಿಕ ಸಂಖ್ಯೆಯಲ್ಲಿ ಹೊಸ ಮತದಾರರು!

ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳನ್ನು ಗಮನಿಸಿದರೆ ಹನೂರಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 26,516 ಮಂದಿ ಕಳೆದ ಚುನಾವಣೆಯಲ್ಲಿರದ ಹೊಸ ಮತದಾರರು ಈ ಬಾರಿ ಇದ್ದಾರೆ. ಇವರೇ ಈ ಚುನಾವಣೆಯ ನಿರ್ಣಾಯಕ ಮತದಾರರು ಎಂದೇ ವಿಶ್ಲೇಷಿಸಲಾಗುತ್ತಿದೆ.

ಮತದಾರರ ಅಂಕಿಸಂಖ್ಯೆಗಳು

ಕಳೆದ ವಿಧಾನಸಭಾ ಚುನಾವಣೆಯಲ್ಲಿ 1,81,087 ಮಂದಿಯಷ್ಟೇ ಮತದಾರರು ಇದ್ದರು. ಈಗ ಇವರ ಸಂಖ್ಯೆ 2,07,603 ಆಗಿದೆ. ಅಂದರೆ, 26,516 ಮಂದಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಇವರೇ ಈ ಬಾರಿಯ ಚುನಾವಣೆಯ ಫಲಿತಾಂಶದ ನಿರ್ಣಾಯಕರು ಎನಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.