ಮನುಷ್ಯಜನ್ಮ ದೊಡ್ಡದು

7

ಮನುಷ್ಯಜನ್ಮ ದೊಡ್ಡದು

Published:
Updated:

‘ಮಾನವಜನ್ಮ ದೊಡ್ಡದು, ಇದನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಹಾಡಿರುವುದು ನಮಗೆ ಗೊತ್ತಿದೆ. ಮನುಷ್ಯಜನ್ಮದ ಮಹತ್ವವನ್ನು ಅರಿತವರು ಯಾರೇ ಆಗಲಿ ಇದನ್ನು ಅನುಮೋದಿಸಲೇಬೇಕೆನ್ನಿ! ಇಲ್ಲೊಂದು ಸಂಸ್ಕೃತ ಸುಭಾಷಿತವಿದೆ, ನೋಡಿ:

ದುಷ್ಪ್ರಾಪಂ ಮಕರಾಕರೇ ಕರತಲಾದ್ರತ್ನಂ ನಿಮಗ್ನಂ ಯಥಾ

ಸಂಸಾರೇsತ್ರ ತಥಾ ನರತ್ವಮಥ ತತ್‌ಪ್ರಾಪ್ತಂ ಮಯಾ ನಿರ್ಮಲಂ |

ಭ್ರಾತಃ ಪಶ್ಯ ವಿಮೂಢತಾಂ ಮಮ ಹಹಾ ನೀತಂ ಯದೇತನ್ಮುದಾ

ಕಾಮಕ್ರೋಧ ಕುಬೋಧ ಮತ್ಸರ ಕುಧೀಮಾಯಾಮಹಾಮೋಹತಃ ||

ಇದರ ತಾತ್ಪರ್ಯ:

‘ಕೈಯಲ್ಲಿರುವ ರತ್ನವು ಸಮುದ್ರದಲ್ಲಿ ಬಿದ್ದುಹೋದರೆ ಅದು ಸಿಗುವುದು ಅಸಾಧ್ಯ. ಆ ರೀತಿಯಲ್ಲಿ ಉತ್ತಮವಾದ ಮನುಷ್ಯಜನ್ಮ ಈ ಪ್ರಪಂಚದಲ್ಲಿ ದುರ್ಲಭ; ಆದರೂ ಅದು ಹೇಗೋ ದಕ್ಕಿದೆ. ಆದರೆ, ತಮ್ಮ! ನನ್ನ ಮೂಢತನವನ್ನು ನೋಡು. ಕಾಮ, ಕ್ರೋಧ, ತಪ್ಪು ತಿಳಿವಳಿಕೆ, ಹೊಟ್ಟೆಕಿಚ್ಚು, ದುರ್ಬುದ್ಧಿಗಳ ಮಾಯೆಗೆ ಸಿಕ್ಕಿ ಈ ನರಜನ್ಮವನ್ನು ಅಯ್ಯೋ, ಹಾಳು ಮಾಡಿಕೊಂಡೆ.’

ಖಲೀಲ್‌ ಜಿಬ್ರಾನ್‌ ‘ನಮಗೆ ವಿವೇಕ ಇದ್ದಾಗ ವಯಸ್ಸು ಇರದು, ವಯಸ್ಸು ಇದ್ದಾಗ ವಿವೇಕ ಇರದು’ ಎನ್ನುವ ಮಾತನ್ನು ಹೇಳಿದ್ದಾನೆ.

ನಮ್ಮ ಇಂದಿನ ಸ್ಥಿತಿಯನ್ನು ಮೇಲಣ ಮಾತುಗಳು ಚೆನ್ನಾಗಿ ಎತ್ತಿಹಿಡಿಯುತ್ತವೆ.

‘ವಿವೇಕಚಡಾಮಣಿ’ಯ ಶ್ಲೋಕವೊಂದು ಹೀಗಿದೆ:

ದುರ್ಲಭಂ ತ್ರಯಮೇವೈದ್ದೇವಾನುಗ್ರಹಹೇತುಕಮ್ |

ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||

‘ಮನುಷ್ಯಜನ್ಮ, ಮೋಕ್ಷದ ಹಂಬಲ ಮತ್ತು ಮಹಾಪುರುಷರ ಸಹವಾಸ – ಇವು ಮೂರು ಸುಲಭವಾಗಿ ಸಿಗದು; ದೈವಾನುಗ್ರಹದಿಂದಲೇ ಇವು ದೊರೆಯುವಂಥದ್ದು.’ – ಇದು ಮೇಲಣ ಶ್ಲೋಕದ ಅರ್ಥ.

ಮನುಷ್ಯನ ಹಿರಿಮೆಯ ಬಗ್ಗೆ ತಿಳಿವಳಿಕೆ ಮೂಡಿಸುವಂಥ ವಾತಾವರಣದಿಂದ ನಾವು ವಂಚಿತರಾಗಿದ್ದೇವೆ. ನಮಗೆ ದುಡ್ಡಿನ ಹಿರಿಮೆ ಗೊತ್ತಾಗುತ್ತಿದೆ; ಪದವಿಗಳ ಹರಿಮೆಯ ಬಗ್ಗೆ ಗೊತ್ತಾಗುತ್ತಿದೆ; ಐಶ್ವರ್ಯದ ಬಗ್ಗೆ ಗೊತ್ತಾಗುತ್ತಿದೆ. ಆದರೆ ಮನುಷ್ಯನ ಬೆಲೆ ಮಾತ್ರ ನಮಗೆ ಗೊತ್ತಾಗುತ್ತಿಲ್ಲ!

ಪುರಾಣಗಳ ಕಲ್ಪನೆಯ ಪ್ರಕಾರ ಹಲವಾರು ಜನ್ಮಗಳ ಬಳಿಕವಷ್ಟೆ ಮನುಷ್ಯಜನ್ಮ ಸಿಗುವಂಥದ್ದು; ಈ ಹಿಂದಿನ ಜನ್ಮಗಳಾದರೂ ಎಂಥವು? ಪ್ರಾಣಿ–ಪಕ್ಷಿ–ಕ್ರಿಮಿ–ಕೀಟಗಳ ಜನ್ಮಾಂತರಗಳ ತರುವಾಯ ಮನುಷ್ಯಜನ್ಮ! ಈ ಕಲ್ಪನೆ ಸತ್ಯವೇ? ಸುಳ್ಳೇ? ಇದರ ಬಗ್ಗೆ ಸದ್ಯಕ್ಕೆ ಜಿಜ್ಞಾಸೆಯನ್ನು ನಿಲ್ಲಿಸೋಣ. ನಾವಿಲ್ಲಿ ಗಮನಿಸಬೇಕಾದ್ದು – ಮನುಷ್ಯನಾಗಿ ಹುಟ್ಟುವುದು ಅದೃಷ್ಟ, ವಿಶೇಷ – ಎಂಬ ನಿಲುವಂತೂ ಬಹಳ ಹಿಂದಿನಿಂದಲೂ ಇರುವುದಂತೂ ಸತ್ಯ. ಆದರೆ ಇಂದಿನ ನಮ್ಮ ಮಾನಸಿಕತೆ ಈ ಸಂದೇಶವನ್ನು ಮರೆತಂತೆ ತೋರುತ್ತಿದೆ. ನಮ್ಮಲ್ಲಿ ಶಿಥಿಲವಾಗುತ್ತಿರುವ ಮನುಷ್ಯಸಂಬಂಧಗಳನ್ನು ನೋಡಿದರೂ ಈ ಮಾತು ಎಷ್ಟು ಸತ್ಯ ಎನ್ನುವುದು ಸ್ಪಷ್ಟವಾಗುತ್ತದೆ.

ಇಲ್ಲೊಂದು ಉದಾಹರಣೆಯನ್ನೇ ತೆಗೆದುಕೊಳ್ಳಬಹುದು. ಇಂದು ನಮ್ಮಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮನ್ನು ಹೆತ್ತವರೇ ನಮಗಿಂದು ಭಾರವಾಗುತ್ತಿದ್ದಾರೆ. ಈ ಕಾರಣದಿಂದಾಗಿ ಅವರನ್ನು ನಾವು ವೃದ್ಧಾಶ್ರಮಗಳ ಪಾಲನ್ನಾಗಿಸುತ್ತಿದ್ದೇವೆ. ‘ಈ ವೃದ್ಧರು ನಮ್ಮನ್ನು ಹೆತ್ತವರು; ಅವರ ತ್ಯಾಗ–ಪರಿಶ್ರಮಗಳಿಂದಾಗಿಯೇ ನಾವಿಂದು ಈ ಸ್ಥಾನಕ್ಕೆ ಬಂದಿದ್ದೇವೆ’ ಎಂಬ ವಾಸ್ತವನ್ನೇ ಮರೆಯುತ್ತಿದ್ದೇವೆ. ಅವರ ವಯಸ್ಸಾದವರು, ಅಶಕ್ತರು – ಎನ್ನುವುದನ್ನೂ ಮರೆತು ಅವರೊಂದೆಗೆ ಕ್ರೂರವಾಗಿ ನಡೆದುಕೊಳ್ಳುತ್ತೇವೆ. ನಮ್ಮ ಈ ಅನಾಗರಿಕ ನಡೆಗೆ ಕಾರಣವಾಗುತ್ತಿರುವುದಾದರೂ ಏನು? ಮನುಷ್ಯಜನ್ಮದ ಮಹತ್ವದ ಬಗ್ಗೆ ನಮಗೆ ಅರಿವೇ ಮಾಯವಾಗುತ್ತಿರುವುದೇ ಕಾರಣ.

ಸೃಷ್ಟಿಯಲ್ಲಿ ವಿಶಿಷ್ಟ ಪ್ರಾಣಿ ಎಂದರೆ ‘ಮನುಷ್ಯ’. ಅವನಿಗೆ ಯೋಚನೆ ಮಾಡಬಲ್ಲಂಥ ಸಾಮರ್ಥ್ಯವಿದೆ; ಸರಿ–ತಪ್ಪುಗಳ ವಿವೇಚನೆಯ ಶಕ್ತಿಯಿದೆ; ಅವನ ಮಾತಿನಿಂದಲೂ ಕ್ರಿಯೆಯಿಂದಲೂ ಏನೆಲ್ಲ ಪರಿಣಾಮ ಆಗಬಹುದು ಎಂದು ವಿಶ್ಲೇಷಿಸುವ ಬುದ್ಧಿಯೂ ಅವನಿಗಿದೆ. ಆದರೆ ಈ ಎಲ್ಲವನ್ನೂ ಮರೆತು ಅವನು ನಡೆದುಕೊಳ್ಳುತ್ತಿದ್ದಾನೆ; ಆದುದರಿಂದಲೇ ಜಗತ್ತಿನಲ್ಲಿ ಹಿಂಸೆ, ದ್ವೇಷ, ಮತ್ಸರ, ರಕ್ತಪಾತ, ಕಲಹ, ಸುಲಿಗೆಗಳು ನಡೆಯುತ್ತಿರುವುದು.

ಸೃಷ್ಟಿಯಲ್ಲಿ ತನ್ನ ನೆಲೆ–ಬೆಲೆಗಳನ್ನು ಅರಿತವನೇ ಮನುಷ್ಯ; ಈ ಅರಿವು ಇಲ್ಲದವನನ್ನು ’ಮನುಷ್ಯ’ ಎಂದು ಕರೆಯಲಾದೀತೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry