ಶುಕ್ರವಾರ, ಫೆಬ್ರವರಿ 26, 2021
26 °C
ಫ್ಲಿಪ್‌ಕಾರ್ಟ್‌ ಸ್ವಾಧೀನಕ್ಕೆ ವಾಲ್‌ಮಾರ್ಟ್‌ನ ಸಿಇಒ ಸಮರ್ಥನೆ

‘ಭಾರತದ ಆರ್ಥಿಕತೆಗೆ ಪ್ರಯೋಜನ’

ಪಿಟಿಐ Updated:

ಅಕ್ಷರ ಗಾತ್ರ : | |

‘ಭಾರತದ ಆರ್ಥಿಕತೆಗೆ ಪ್ರಯೋಜನ’

ನವದೆಹಲಿ: ಫ್ಲಿಪ್‌ಕಾರ್ಟ್‌ ಸ್ವಾಧೀನ ಒಪ್ಪಂದವು ಭಾರತದ ಅರ್ಥವ್ಯವಸ್ಥೆಗೆ ಪ್ರಯೋಜನಕಾರಿಯಾಗಿದ್ದು, ಲಕ್ಷಾಂತರ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದು ವಾಲ್‌ಮಾರ್ಟ್‌ ಇಂಕ್‌ ಭರವಸೆ ನೀಡಿದೆ.

‘ಸಂಸ್ಥೆಯು ಸ್ಥಳೀಯ ಸರಕುಗಳನ್ನೇ ಖರೀದಿಸುವುದರಿಂದ ದೇಶಿ ಆರ್ಥಿಕತೆಗೆ ಲಾಭವಾಗಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅಸಂಖ್ಯ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಈ ಒಪ್ಪಂದಕ್ಕೆ ಸರ್ಕಾರದ ಬೆಂಬಲ ಸಿಗುವುದರಲ್ಲಿ ನನಗೆ ಯಾವುದೇ ಸಮಸ್ಯೆ ಕಾಣುವುದಿಲ್ಲ. ಈ ಹೂಡಿಕೆಯು ದೇಶದ ಆರ್ಥಿಕತೆಗೆ ಒಳಿತನ್ನು ಮಾಡಲಿದೆ. ಜನರಿಗೆ ಇದು ಮನವರಿಕೆಯಾಗಲಿದೆ’ ವಾಲ್‌ಮಾರ್ಟ್‌ ಸಿಇಒ ಡೌಗ್‌ ಮ್ಯಾಕ್‌ಮಿಲನ್‌ ಹೇಳಿದ್ದಾರೆ.

‘ಈ ವಹಿವಾಟಿಗೆ ಸಂಬಂಧಿಸಿದಂತೆ ಅಗತ್ಯವಾದ ತೆರಿಗೆ ಪಾವತಿಸಲು ಸಂಸ್ಥೆ ಬದ್ಧವಾಗಿದೆ. ದೇಶದಲ್ಲಿನ ತೆರಿಗೆ ನಿಯಮಗಳನ್ನು ಪಾಲಿಸಲಾಗುವುದು. ಫ್ಲಿಪ್‌ಕಾರ್ಟ್‌ನ ಇತರ ಹೂಡಿಕೆದಾರರು ತೆರಿಗೆ ಪಾವತಿಸುವಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

‘ಫ್ಲಿಪ್‌ಕಾರ್ಟ್‌ನಲ್ಲಿನ ಶೇ 77ರಷ್ಟು ಪಾಲು ಬಂಡವಾಳ ಖರೀದಿಸುವುದಕ್ಕೆ  ಭಾರತದ ಸ್ಪರ್ಧಾತ್ಮಕ ಆಯೋಗದ ಸಮ್ಮತಿ ಪಡೆಯಲು ಯಾವುದೇ ತೊಂದರೆ ಎದುರಾಗುವುದಿಲ್ಲ. ಸ್ಟಾರ್ಟ್‌ಅಪ್‌ ಮತ್ತು ಇ–ಕಾಮರ್ಸ್‌, ಭಾರತದ ಆರ್ಥಿಕತೆ ಮುನ್ನಡೆಸಲಿರುವ ದೊಡ್ಡ ಎಂಜಿನ್‌ಗಳಾಗಿವೆ’ ಎಂದು ಹೇಳಿದ್ದಾರೆ.

ಸರ್ಕಾರದ ತಣ್ಣನೆ ಪ್ರತಿಕ್ರಿಯೆ?: ‘ಈ ಒಪ್ಪಂದಕ್ಕೆ ಭಾರತ ಸರ್ಕಾರ ತಣ್ಣನೆಯ ಪ್ರತಿಕ್ರಿಯೆ ನೀಡಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಮ್ಯಾಕ್‌ಮಿಲನ್‌ ಹೇಳಿದ್ದಾರೆ.

‘ಎಲ್ಲ ಕಾಲಕ್ಕೂ ನಾವು ಸರ್ಕಾರದ ಎಲ್ಲ ಹಂತಗಳಲ್ಲಿ ಚರ್ಚೆ ನಡೆಸಿದ್ದೇವೆ. ನಾವು ಈ ಹಿಂದೆ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದೆವು. ಮತ್ತೆ ಭೇಟಿಯಾಗಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರ ಭೇಟಿಗೆ ಅವಕಾಶ ಸಿಗದಿರುವುದು ವಿವಾದಕ್ಕೆ ಕಾರಣವಾಗಿರುವುದರಿಂದ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಸ್ವದೇಶಿ ಜಾಗರಣ್‌ ಮಂಚ್‌ ಆಕ್ಷೇಪ

ಈ ಒಪ್ಪಂದ ಘೋಷಣೆಯಾಗುತ್ತಿದ್ದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌) ಬೆಂಬಲಿತ ಸ್ವದೇಶಿ ಜಾಗರಣ್‌ ಮಂಚ್‌, ವಿರೋಧ ದಾಖಲಿಸಿದೆ.  ವಾಲ್‌ಮಾರ್ಟ್‌, ದೇಶಿ ರಿಟೇಲ್‌ ವಹಿವಾಟಿನಲ್ಲಿ ಇ–ಕಾಮರ್ಸ್‌ ಮೂಲಕ ಹಿಂಬಾಗಿಲ ಪ್ರವೇಶ ಮಾಡುತ್ತಿದೆ. ರಾಷ್ಟ್ರದ ಹಿತಾಸಕ್ತಿ ರಕ್ಷಿಸಲು ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.

‘ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ವರ್ತಕರ ವಹಿವಾಟಿಗೆ ಧಕ್ಕೆ ಒದಗಲಿದೆ. ಉದ್ಯೋಗ ಸೃಷ್ಟಿಯ ಅವಕಾಶಗಳು ಕೊನೆಗೊಳ್ಳಲಿವೆ. ವಾಲ್‌ಮಾರ್ಟ್‌ ಪ್ರವೇಶದಿಂದ ವರ್ತಕ ಸಮುದಾಯಕ್ಕೆ ಇನ್ನಷ್ಟು ಸಮಸ್ಯೆಗಳು ಎದುರಾಗಲಿವೆ’ ಎಂದು ಮಂಚ್‌ನ ಸಂಚಾಲಕ ಅಶ್ವನಿ ಮಹಾಜನ್‌ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

*

ಈ ಒಪ್ಪಂದವು ಗ್ರಾಹಕರಿಗೆ ಪ್ರಯೋಜನಕಾರಿಯಾಗಿರಲಿದೆ. ಉದ್ಯೋಗ ಸೃಷ್ಟಿಸಿ, ಸಮುದಾಯಕ್ಕೂ ಒಳಿತು ಮಾಡಲಿದೆ

-ಡೌಗ್‌ ಮ್ಯಾಕ್‌ಮಿಲನ್‌, ವಾಲ್‌ಮಾರ್ಟ್‌ ಮುಖ್ಯ ಕಾರ್ಯನಿರ್ವಾಹಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.