ಸೋಮವಾರ, ನವೆಂಬರ್ 30, 2020
23 °C

ಮೆಚ್ಚುಗೆಗೆ ಮಾತ್ರ ಪಾತ್ರ ಈ ಗಿರೀಶ ಕಾರ್ನಾಡ | ರಾಮಚಂದ್ರ ಗುಹಾ ಬರಹ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ನನ್ನ ತಲೆಮಾರಿನ ಹೆಚ್ಚಿನವರಂತೆ, ನಾನು ಗಿರೀಶ ಕಾರ್ನಾಡರನ್ನು ಮೊದಲು ನೋಡಿದ್ದು ಶ್ಯಾಮ್‍ ಬೆನಗಲ್‍ ಅವರ ಸಿನಿಮಾವೊಂದರಲ್ಲಿ ಬೆಳ್ಳಿ ಪರದೆಯ ಮೇಲೆ. ನೇರವಾಗಿ ಅವರನ್ನು ನೋಡಿದ್ದು 1990ರಲ್ಲಿ ದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‍ ಸೆಂಟರ್‌ನಲ್ಲಿ. ಆಗ ಅಲ್ಲಿ ಅವರು ಒಬ್ಬರೇ ಕುಳಿತು ಊಟ ಮಾಡುತ್ತಿದ್ದರು. ನನ್ನ ಕಣ್ಣು ಅವರತ್ತ ಹರಿಯಿತು- ಅದಕ್ಕೆ ಅವರು ಪ್ರಸಿದ್ಧ ವ್ಯಕ್ತಿಯಾಗಿರುವುದು ಒಂದು ಕಾರಣವಾದರೆ, ಹೊಳೆಯುವ ಚರ್ಮದ ಅತ್ಯಂತ ಸುಂದರ ವ್ಯಕ್ತಿಯಾಗಿರುವುದು ಇನ್ನೊಂದು ಕಾರಣ. ಅಲ್ಲಿದ್ದ ಒಬ್ಬೊಬ್ಬರಿಗೂ ಅವರು ಯಾರೆಂದು ತಿಳಿದಿತ್ತು. ಆದರೆ, ಅವರಿಗೆ ತೊಂದರೆ ಕೊಡುವ ಧೈರ್ಯ ಯಾರಿಗೂ ಇರಲಿಲ್ಲ.

1995ರಲ್ಲಿ ನಾನು ಮತ್ತು ನನ್ನ ಹೆಂಡತಿ ಸುಜಾತಾ ಬೆಂಗಳೂರಿಗೆ ಸ್ಥಳಾಂತರಗೊಂಡೆವು. ಕಾರ್ನಾಡ ಮತ್ತು ಅವರ ಅದ್ಭುತ ಆಕರ್ಷಣೆಯ, ಬುದ್ಧಿವಂತಿಕೆ ಮತ್ತು ವಿವೇಕ ಹೊಂದಿರುವ ಹೆಂಡತಿ ಸರಸ್‍ ಕೂಡ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ನಮ್ಮಿಬ್ಬರ ಗೆಳೆಯರೊಬ್ಬರು ನಮ್ಮನ್ನು ಪರಿಚಯ ಮಾಡಿಸಿದರು. ಬಳಿಕ ನಾವು ಭೇಟಿಯಾಗತೊಡಗಿದೆವು, ಹೆಚ್ಚಾಗಿ ಈ ಭೇಟಿ ನಮ್ಮ ಮನೆಗಳಲ್ಲಿಯೇ ನಡೆಯುತ್ತಿತ್ತು. ಕಾರ್ನಾಡರ ಆರಂಭಿಕ ನಾಟಕಗಳು ಪುರಾಣ ಮತ್ತು ಇತಿಹಾಸವನ್ನು ವಿಶಿಷ್ಟವಾಗಿ ಅಳವಡಿಸಿಕೊಳ್ಳುವ ಮೂಲಕ ನೈತಿಕ ದ್ವಂದ್ವಗಳನ್ನು ಶೋಧಿಸುತ್ತಿದ್ದವು. ಈಗ ಅವರು ಇನ್ನೊಂದು ಹಂತದ ಸೃಜನ ಶೀಲತೆಯತ್ತ ಹೊರಳಿಕೊಂಡಿದ್ದಾರೆ. ಅವರು ಅಭಿನಯಿಸುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿರುವುದು ಇದಕ್ಕೆ ಒಂದು ಕಾರಣ; ಲಂಡನ್‍ನ ನೆಹರೂ ಸೆಂಟರ್‌ನ ನಿರ್ದೇಶಕರಾಗಿದ್ದ ಅವಧಿಯಲ್ಲಿ ಜಗತ್ತಿನ ರಂಗಭೂಮಿಯ ಅತ್ಯುತ್ತಮ ಅಂಶಗಳ ಜತೆಗೆ ಸಂವಹನ ಸಾಧ್ಯವಾಗಿದ್ದು ಇನ್ನೊಂದು ಕಾರಣ.

ಈ ಹಂತದಲ್ಲಿ ಅವರು ರಚಿಸಿದ  ‘ಫ್ಲವರ್ಸ್‍’ ಮತ್ತು ‘ಒಡಕಲು ಬಿಂಬ’, ನಾನು ಮತ್ತು ಸುಜಾತಾ ನೋಡಿದ ಅವರ ಅತ್ಯುತ್ತಮ ನಾಟಕಗಳು. ಒಬ್ಬರು ಇಂಗ್ಲಿಷ್‍ ಮತ್ತು ಇನ್ನೊಬ್ಬರು ಕನ್ನಡದಲ್ಲಿ ಬರೆಯುವ ಇಬ್ಬರು ಸಹೋದರಿಯರ ನಡುವಣ ಪ್ರತಿಸ್ಪರ್ಧೆಯನ್ನು ‘ಒಡಕಲು ಬಿಂಬ’ ಕಥಾವಸ್ತುವಾಗಿ ಹೊಂದಿದೆ. ಸಾಹಿತ್ಯದ ದೇಸೀಯತೆಯನ್ನು ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನ ಇದು. ಅವರವರ ಸ್ಥಳೀಯ ಭಾಷೆಯಲ್ಲಿಯೇ ಬರೆಯಬೇಕು ಎಂದು ಯು.ಆರ್. ಅನಂತಮೂರ್ತಿ ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು. ಅಲ್ಲದೆ, ಭಾರತೀಯ ಭಾಷೆಯಲ್ಲಿ ಬರೆಯುವ ಲೇಖಕರನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ ಮತ್ತು ಇಂಗ್ಲಿಷ್‍ನಲ್ಲಿ ಬರೆಯುವಭಾರತೀಯ ಲೇಖಕರಿಗೆ ದೇಶೀ ಭಾಷೆಯಲ್ಲಿ ಬರೆಯುವವರಷ್ಟು ಸಂಭಾವನೆಯೂ ದೊರೆಯುತ್ತಿಲ್ಲ ಎಂದು ಅನಂತಮೂರ್ತಿ ದೂರುತ್ತಿದ್ದರು. ಅವರಿಗೆ ಕಾರ್ನಾಡರ ತಿರುಗೇಟು ಇದು ಎಂಬ ವಿಮರ್ಶೆಯೂ ಬಂದಿದೆ.

ಅನಂತಮೂರ್ತಿಯವರ ಬಗ್ಗೆ ಕಾರ್ನಾಡರಲ್ಲಿ ಹಲವು ಕಾರಣಗಳಿಗಾಗಿ ದ್ವಂದ್ವವಿತ್ತು. ಪ್ರಾದೇಶಿಕ ಭಾಷೆಗಳನ್ನು ಅತಿಯಾಗಿ ವಿಜೃಂಭಿಸುವುದು ಅದಕ್ಕೆ ಒಂದು ಕಾರಣ. ಪ್ರಚಾರದ ಬಗ್ಗೆ ಅವರಿಗಿದ್ದ ಅತಿಯಾದ ಪ್ರೀತಿ ಇನ್ನೊಂದು ಕಾರಣ. ಅನಂತಮೂರ್ತಿ ಅವರು ಸಾಮಾನ್ಯವಾಗಿ ರಾಜಕಾರಣಿಗಳ ಜತೆ ಕಾಣಿಸಿಕೊಳ್ಳುತ್ತಿದ್ದುದು ಮತ್ತು ಸ್ವತಃ ಅವರಿಗೇ ಇದ್ದ ರಾಜಕೀಯ ಮಹತ್ವಾಕಾಂಕ್ಷೆ ಕಾರ್ನಾಡರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಕಾರ್ನಾಡರ ಮಹತ್ವಾಕಾಂಕ್ಷೆ ಸದಾ ಸಾಹಿತ್ಯ ಮತ್ತು ರಸಾನುಭೂತಿಯೇ ಆಗಿದೆ (ಸಾಹಿತಿ ಎಂಬ ತಮ್ಮ ಪಾತ್ರವನ್ನು ‘ಪಬ್ಲಿಕ್‍ ಇಂಟಲೆ ಕ್ಚುವಲ್‍’ ಎಂಬ ಪಾತ್ರ ಸಂಪೂರ್ಣವಾಗಿ ನುಂಗಿ ಹಾಕಲು ಅನಂತಮೂರ್ತಿ ಅವಕಾಶ ಕೊಟ್ಟರು ಎಂಬುದು ಕನ್ನಡದ ಇತರ ಕೆಲವು ಲೇಖಕರ ಚಿಂತೆಗೂ ಕಾರಣವಾಗಿತ್ತು). ಕೊನೆಯದಾಗಿ, ಅನಂತಮೂರ್ತಿಯವರು ಕಾರ್ನಾಡರಿಗಿಂತ ಐದು ವರ್ಷ ದೊಡ್ಡವರಾಗಿದ್ದರು ಮತ್ತು ಕನ್ನಡದಲ್ಲಿ ಕಾರ್ನಾಡರಿಗಿಂತ ಮೊದಲು ಪ್ರಸಿದ್ಧಿಗೇರಿದರು ಎಂಬ ಅಂಶಗಳನ್ನು ಗಮನಿಸಿದರೆ ಇಲ್ಲಿ, ಸ್ವಲ್ಪಮಟ್ಟಿನ ದಾಯಾದಿ ಮೇಲಾಟವೂ ಇದ್ದಿರಬಹುದು.

ನನ್ನ ಗ್ರಹಿಕೆಯಲ್ಲಿ ನೋಡಿದಾಗ, ಕಾರ್ನಾಡರ ಪ್ರೀತಿ ಮತ್ತು ಮೆಚ್ಚುಗೆಗಾಗಿ ಅನಂತಮೂರ್ತಿ ಕಾತರಿಸುತ್ತಿದ್ದರು. ಅನಂತಮೂರ್ತಿ ಮತ್ತು ನನ್ನ ನಡುವೆ ಸಾಹಿತ್ಯ ಮತ್ತು ರಾಜಕೀಯ ಅಥವಾ ಇಂತಹ ಇತರ ವಿಚಾರಗಳ ಬಗ್ಗೆ ‘ಕ್ಯಾರವಾನ್’ ಪತ್ರಿಕೆಯವರು ಸಂವಾದವೊಂದನ್ನು ಏರ್ಪಡಿಸಿದ್ದರು. ಅಲ್ಲಿನ ಪ್ರಸಂಗವೊಂದು ನನಗೆ ನೆನಪಾಗುತ್ತಿದೆ. ಈ ಸಂವಾದ ಹೋಟೆಲೊಂದರಲ್ಲಿ ನಡೆದಿತ್ತು. ನಮ್ಮಿಬ್ಬರ ಕುರ್ಚಿಗಳನ್ನು ಬಿಟ್ಟು ಉಳಿದೆಲ್ಲ ಕುರ್ಚಿಗಳು ಒಂದೇ ಎತ್ತರದಲ್ಲಿದ್ದವು. ಹಾಗಾಗಿ, ತಡವಾಗಿ ಬಂದು ಹಿಂಭಾಗದಲ್ಲಿ ಕುಳಿತವರು ನಮಗಿಬ್ಬರಿಗೆ ಕಾಣುವುದು ಸಾಧ್ಯವಿರಲಿಲ್ಲ. ಪ್ರಶ್ನೋತ್ತರ ಸಮಯ ಬಂದಾಗ, ಕೊನೆಯ ಸಾಲುಗಳಿಂದ ಒಂದು ಕೈ ಮೇಲೆ ಬಂತು. ಮೊದಲಿಗೆ ನನ್ನ ಗಮನ ಅತ್ತ ಹೋಯಿತು. ನನಗಿಂತ ಹಿರಿಯರಾಗಿದ್ದ ಅನಂತಮೂರ್ತಿಯವರ ಕಣ್ಣು ಅಷ್ಟು ಚುರುಕಾಗಿರಲಿಲ್ಲ. ಹಾಗಾಗಿ ಕೈ ಎತ್ತಿದವರು ಯಾರೆಂದು ಅವರಿಗೆ ತಿಳಿಯಲಿಲ್ಲ. ಕಾರ್ನಾಡರು ಪ್ರಶ್ನೆ ಕೇಳಿದಾಗ (ಅದೃಷ್ಟವಶಾತ್‍ ಅದು ಸಂಘರ್ಷಾತ್ಮಕವಾಗಿರಲಿಲ್ಲ) ಅನಂತಮೂರ್ತಿ ನನ್ನತ್ತ ತಿರುಗಿದರು. ಅವರ ಮುಖದಲ್ಲಿ ಪ್ರೀತಿ ಮತ್ತು ಸಂತೃಪ್ತಿಯ ಭಾವದ ನಗು ಇತ್ತು: ‘ಗಿರೀಶ್‍ ಬಂದಿದಾರೆ’ ಎಂದರು.

ಅನಂತಮೂರ್ತಿ ಅವರಂತೆ ಕಾರ್ನಾಡ ಅವರು ಮೆರವಣಿಗೆಯಲ್ಲಿ ಭಾಗವಹಿಸುವ, ಘೋಷಣೆಗಳನ್ನು ಕೂಗುವ, ರಾಜಕಾರಣಿಯೊಬ್ಬರನ್ನು ಸಾರ್ವಜನಿಕವಾಗಿ ಹೊಗಳುವ ಅಥವಾ ತರಾಟೆಗೆ ತೆಗೆದುಕೊಳ್ಳುವ ಅಥವಾ ಮನವಿಯೊಂದಕ್ಕೆ ಸಹಿ ಮಾಡುವ ಸಾಧ್ಯತೆ ಕಡಿಮೆ. ಆದರೆ, ತಾವು ಬೆಳೆದ ಬಹುತ್ವ ಮತ್ತು ಸಹಿಷ್ಣುತೆಯ ಭಾರತದ ಬಗ್ಗೆ ತಮ್ಮ ‘ರಾಜಕೀಯ’ ಸಮಕಾಲೀನ ಗೆಳೆಯನಷ್ಟೇ ಗೌರವವನ್ನು ಗಿರೀಶ ಅವರೂ ಹೊಂದಿದ್ದಾರೆ. ಧರ್ಮಾಂಧತೆಯ ಬಗ್ಗೆಯೂ ಅನಂತಮೂರ್ತಿ ಅವರಷ್ಟೇ ಹೇವರಿಕೆ ಗಿರೀಶರಲ್ಲೂ ಇದೆ. 2017ರ ಜೂನ್‍ನಲ್ಲಿ ಉತ್ತರ ಭಾರತದ ವಿವಿಧೆಡೆಗಳಲ್ಲಿ ಹಿಂದುತ್ವವಾದಿ ಗುಂಪುಗಳು ಅಮಾಯಕ ಮುಸ್ಲಿಮರ ಮೇಲೆ ನಡೆಸಿದ ಹಲ್ಲೆಗಳನ್ನು ಖಂಡಿಸಿ ದೇಶದಾದ್ಯಂತ ‘ನನ್ನ ಹೆಸರಲ್ಲಿ ಬೇಡ’ ಎಂಬ ಪ್ರತಿಭಟನೆಗಳು ನಡೆದವು. ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ವಾರದ ದಿನವೊಂದರ ಸಂಜೆ ಬೆಂಗಳೂರಿನ ಪುರಭವನದ ಹೊರಗೆ ಪ್ರತಿಭಟನೆ ಸಂಘಟಿಸಿದ್ದರು. ಇದು ನಗರದ ಅತ್ಯಂತ ದಟ್ಟಣೆಯ ಪ್ರದೇಶ; ದಿನದ ಅತ್ಯಂತ ಕಾರ್ಯಮಗ್ನತೆಯ ಈ ಸಮಯದಲ್ಲಿ ಅಲ್ಲಿನ ರಸ್ತೆಗಳು ಬಸ್‍, ಲಾರಿ, ಕಾರು, ಸ್ಕೂಟರ್ ಸೇರಿ ಎಲ್ಲ ರೀತಿಯ ವಾಹನಗಳಿಂದ ತುಂಬಿರುತ್ತದೆ. ಪ್ರತಿಭಟನೆಯ ಸ್ಥಳಕ್ಕೆ ತಲುಪಬೇಕಿದ್ದರೆ ಅರ್ಧ ಮೈಲಿಯಷ್ಟು ದೂರದಲ್ಲಿ ವಾಹನ ನಿಲ್ಲಿಸಿ ನಡೆದೇ ಬರಬೇಕಿತ್ತು. ಸಾರ್ವಜನಿಕ ಜೀನವದಲ್ಲಿ (ಖಾಸಗಿ ಬದುಕಿನಲ್ಲಿ ಕೂಡ) ಘನತೆ ಮತ್ತು ನಾಗರಿಕತೆಗೆ ಒತ್ತಾಯಿಸಿ ಸೇರಿದ್ದ ಯುವಜನರು, ಮಧ್ಯವಯಸ್ಕರು ಮತ್ತು ಹಿರಿಯರು ಸೇರಿದ್ದ ಆ ಸ್ಥಳಕ್ಕೆ ನಾನು ಹೀಗೆಯೇ ಹೋಗಿ ತಲುಪಿದೆ.

ನನ್ನ ಮಟ್ಟಿಗೆ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಸಹಜ ಮತ್ತು ಸಾಮಾನ್ಯ; ಇಂತಹ ವಿಚಾರಗಳ ಬಗ್ಗೆ ನಾನು ಲೇಖನಗಳನ್ನೂ ಬರೆದಿದ್ದೇನೆ. ನನ್ನ ಮನೆ ಪ್ರತಿಭಟನೆ ಸ್ಥಳಕ್ಕೆ ಹತ್ತಿರದಲ್ಲಿಯೇ ಇದೆ. ಗಿರೀಶ ಅವರು ನೆಲೆಸಿರುವುದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ. ಅಲ್ಲಿಂದ ಪುರಭವನದತ್ತ ಬರಬೇಕಿದ್ದರೆ ಸಂಜೆಯ ಹೊತ್ತಿನಲ್ಲಿ ಅವರು ಒಂದೂವರೆ ತಾಸು ಪ್ರಯಾಣಿಸಬೇಕು. ಎಂಬತ್ತರ ಸಮೀಪದಲ್ಲಿರುವ ಅವರಿಗೆ ಉಸಿರಾಟದ ತೊಂದರೆಯೂ ಇದೆ. ಹಾಗಾಗಿ ಸದಾ ತಮ್ಮ ಜತೆ ಆಮ್ಲಜನಕದ ಸಿಲಿಂಡರ್ ಇರಿಸಿಕೊಂಡಿರಬೇಕು. ಮೂಗಿಗೆ ಜೋಡಿಸಿರುವ ಟ್ಯೂಬ್‍ ಅವರ ಶ್ವಾಸಕೋಶಕ್ಕೆ ಆಮ್ಲಜನಕ ಒದಗಿಸುತ್ತದೆ.

ಅವರು ಬರಬಹುದು ಎಂಬ ನಿರೀಕ್ಷೆಯೇ ನನಗೆ ಇರಲಿಲ್ಲ. ಬೇರೆ ಯಾರಿಗೂ ಅಂತಹ ನಿರೀಕ್ಷೆ ಇರಲಿಲ್ಲ. ನಾವೆಲ್ಲರೂ ಫಲಕಗಳನ್ನು ಹಿಡಿದು ಮೌನವಾಗಿ ನಿಂತಿರುವಾಗ ಮಳೆ ಸುರಿಯಲಾರಂಭಿಸಿತು. ಆ ಮಳೆಯಲ್ಲಿಯೇ ನಾವು ನಿಂತಿದ್ದೆವು. ಒಬ್ಬರು ಸದ್ದಿಲ್ಲದೆ ನನ್ನ ಎಡಭಾಗದಲ್ಲಿ ಬಂದು ಸೇರಿಕೊಂಡರು. ಅದು ಗಿರೀಶ ಕಾರ್ನಾಡ. ಅವರ ಕಾರಿನ ಚಾಲಕ ಕಾರನ್ನು ರಸ್ತೆಯ ಯಾವ ಭಾಗದಲ್ಲಿ ನಿಲ್ಲಿಸಿದ್ದರೂ ನಾವಿದ್ದಲ್ಲಿಗೆ ಅವರು ತಲುಪಲು ಕನಿಷ್ಠ ಹತ್ತು ನಿಮಿಷ ನಡೆಯಬೇಕು. ತಮ್ಮ ಆಮ್ಲಜನಕದ ಸಿಲಿಂಡರ್ ಮತ್ತು ಮೂಗಿಗೆ ಹಾಕಿದ್ದ ಟ್ಯೂಬ್‍ನೊಂದಿಗೆ ಅವರು ನಡೆದು ಬಂದಿದ್ದರು. ನನ್ನ ಪಕ್ಕದಲ್ಲಿ ನಿಂತ ಅವರು, ಅವರ ಆಚೆಗಿದ್ದ ವಿದ್ಯಾರ್ಥಿಯ ಕೈಯಲ್ಲಿದ್ದ ಫಲಕವನ್ನು ‘ನಾನು ಹಿಡಿದುಕೊಳ್ಳಲೇ’ ಎಂದು ಕೇಳಿದರು. ಒಬ್ಬ ವಿದ್ಯಾರ್ಥಿ ಕೊಡೆಯೊಂದನ್ನು ಹಿಡಿದು ಓಡಿ ಬಂದರು. ಅದನ್ನು ಬಿಚ್ಚಿ ಗಿರೀಶರಿಗೆ ಕೊಟ್ಟರು. ಅವರು ಅದನ್ನು ನನ್ನ ತಲೆ ಮೇಲೆಯೂ ಹಿಡಿದರು. ಈ ಮಧ್ಯೆ, ನಮ್ಮ ಮುಂದಿನ ಸಾಲಿನಲ್ಲಿದ್ದ ಮುಸ್ಲಿಮರು ಆನಂದ ಮತ್ತು ಮೆಚ್ಚುಗೆಯಿಂದ ಏನನ್ನೋ ಗುಣುಗಿದರು. ಅವರಲ್ಲೊಬ್ಬರು ಇಂಗ್ಲಿಷ್‍ನಲ್ಲಿ ಹೀಗಂದರು ‘ಗಿರೀಶ್‍ ಕಾರ್ನಾಡ್‍ ಸರ್ ಬಂದಿದ್ದಾರೆ’. ನಗರದ ಎಲ್ಲ ಭಾಗಗಳಿಂದ ಬಂದ ಅಷ್ಟೊಂದು ಹಿಂದೂಗಳು ಮತ್ತು ಕ್ರೈಸ್ತರು ಅವರಿಗೆ ಮುಖ್ಯವೇ ಅಗಿದ್ದರು. ಆದರೆ, ಈ ವ್ಯಕ್ತಿ ಆ ಎಲ್ಲರಿಗಿಂತ ಮುಖ್ಯ ಎನಿಸಿದ್ದರು.

ಈ ವರ್ಷದ ಆರಂಭದಲ್ಲಿ ಗಿರೀಶರ ಹುಟ್ಟೂರು ಧಾರವಾಡಕ್ಕೆ ನಾನು ಹೋಗಿದ್ದೆ. ಅವರ ಪುಸ್ತಕಗಳನ್ನು ಪ್ರಕಟಿಸುವ ಮನೋಹರ ಗ್ರಂಥಮಾಲಾದ ವಾರ್ಷಿಕ ಕಾರ್ಯಕ್ರಮ ಇತ್ತು. ನನ್ನನ್ನು ಬಿಟ್ಟು ಉಳಿದವರೆಲ್ಲರೂ ಕನ್ನಡದಲ್ಲಿ ಮಾತನಾಡಿದರು. ಈ ಉತ್ಸವ ಆರಂಭದ ಹಿಂದಿನ ದಿನ ಗಿರೀಶರು ನನ್ನನ್ನು ಗ್ರಂಥಮಾಲಾದ ಕಚೇರಿಗೆ ಕರೆದೊಯ್ದರು. ಸುಭಾಷ್‍ ರಸ್ತೆಯಲ್ಲಿರುವ ಹಳೆಯ ಕಟ್ಟಡದ ಎರಡನೇ ಮಹಡಿಯಲ್ಲಿ ಈ ಕಚೇರಿ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಇದೆ. ಗಿರೀಶರು ತಮ್ಮ ಮೊದಲ ನಾಟಕ ‘ಯಯಾತಿ’ಯ ಹಸ್ತಪ್ರತಿ ಕೊಡಲು ಇಲ್ಲಿಗೆ ಬಂದಿದ್ದರಂತೆ. ಅವರ ಎಲ್ಲ ನಾಟಕಗಳನ್ನು, ಆತ್ಮಚರಿತ್ರೆಯನ್ನು ಕೂಡ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ.

ಗಿರೀಶರು ಮೊದಲ ಬಾರಿ ಭೇಟಿ ಕೊಟ್ಟಾಗ ಹೇಗಿತ್ತೋ ಪ್ರಕಾಶಕರ ಕಚೇರಿ ಹೆಚ್ಚು ಕಡಿಮೆ ಈಗಲೂ ಹಾಗೆಯೇ ಇದೆ: ಒಂದು ದೊಡ್ಡ ಕೊಠಡಿ, ಬಹುಶಃ ಇಪ್ಪತ್ತಡಿ ಉದ್ದ, ಹದಿನೈದು ಅಡಿ ಅಗಲ ಇರಬಹುದು. ಹಸ್ತಪ್ರತಿಗಳು ತುಂಬಿರುವ ಕೆಲವು ಟೇಬಲ್‍ಗಳಿವೆ, ಗೋಡೆಯಲ್ಲಿನ ಕಪಾಟುಗಳಲ್ಲಿ ಗ್ರಂಥಮಾಲಾ ಪ್ರಕಟಿಸಿದ ಪುಸ್ತಕಗಳನ್ನು ಪೇರಿಸಿ ಇಡಲಾಗಿದೆ. ಕುಳಿತುಕೊಳ್ಳುವುದಕ್ಕೆ ಇಲ್ಲಿ ಸ್ವಲ್ಪ ಸ್ಥಳವಿದೆ. ಹತ್ತನ್ನೆರಡು ಕುರ್ಚಿಗಳಿವೆ. ಇಷ್ಟೆಲ್ಲ ವರ್ಷಗಳಲ್ಲಿ ಕಾರ್ನಾ
ಡರು ಸಂಪರ್ಕ ಇರಿಸಿಕೊಂಡಿರುವ ಸ್ಥಳೀಯ ಕವಿಗಳು, ಕಾದಂಬರಿಕಾರರು, ವಿಮರ್ಶಕರು ಇಲ್ಲಿ ಕುಳಿತಿದ್ದಾರೆ.

ಗಿರೀಶ, ತಮ್ಮ ರಾಜಕೀಯ ಒಲವು ಅಥವಾ ದೇಶಪ್ರೇಮವನ್ನು ಪ್ರದರ್ಶಿಸುವುದಿಲ್ಲ. ಅವರದ್ದೇ ಆದ, ತಣ್ಣಗಿನ ರೀತಿಯಲ್ಲಿ ಅವರು ತಮ್ಮ ಹುಟ್ಟೂರು, ತಮ್ಮ ತವರು ರಾಜ್ಯದ ಬಗ್ಗೆ ಬಹಳ ಮಮತೆ ಹೊಂದಿದ್ದಾರೆ. ಆದರೆ, ತಮ್ಮ ದೇಶ ಅಥವಾ ಜಗತ್ತು ಎಂದೂ ಅವರ ದೃಷ್ಟಿಯಿಂದ ಮರೆಯಾಗಿದ್ದು ಇಲ್ಲ. ಮನಸ್ಸು ಮಾಡಿದ್ದರೆ ಅವರು ಭಾರತದ ಸಾಂಸ್ಕೃತಿಕ ಇತಿಹಾಸವನ್ನು ಅದ್ಭುತವಾಗಿ ಬರೆಯಬಹುದಿತ್ತು. ಈ ದೇಶದ ಕಲೆ, ಸಂಗೀತ, ಸಾಹಿತ್ಯ, ನೃತ್ಯ, ಜನಪದ ಕಲೆಗಳ ಬಗ್ಗೆ  ಅವರಷ್ಟು ಚೆನ್ನಾಗಿ ಬಲ್ಲವರು ಯಾರೂ ಇಲ್ಲ. ಈ ವಿಚಾರದಲ್ಲಿ ಉತ್ತರ ಮತ್ತು ದಕ್ಷಿಣ ಭಾರತಗಳ ಭೇದವೂ ಇಲ್ಲ. ಜನಪ್ರಿಯ ಮತ್ತು ಶಾಸ್ತ್ರೀಯ ಪ್ರಕಾರಗಳೆರಡರ ಬಗ್ಗೆಯೂ ಅವರಿಗೆ ಅಪಾರವಾದ ಜ್ಞಾನ ಇದೆ (ಅವರು ಭಾರತದ ಆರು ಭಾಷೆಗಳಲ್ಲಿ ಓದಬಲ್ಲರು ಮಾತ್ರವಲ್ಲ, ಈ ಭಾಷೆಗಳಲ್ಲಿ ಮಾತನಾಡಬಲ್ಲರು ಕೂಡ).

ವಿಶ್ಲೇಷಣೆಗಿಂತ ಮೂಲ ಕೃತಿಗಳೇ ಹೆಚ್ಚು ಮೌಲಿಕ ಎಂದು ಅವರು ಭಾವಿಸಿದ್ದಿರುವುದೇ ಇಂತಹುದೊಂದು ಪುಸ್ತಕ ಬರೆಯದಂತೆ ಅವರನ್ನು ಕಟ್ಟಿ ಹಾಕಿರಬಹುದು. ತಮ್ಮ ಆತ್ಮಕತೆಯನ್ನು ಅವರು ಕನ್ನಡದಲ್ಲಿ ಬರೆದಿದ್ದಾರೆ. ಅದನ್ನು ಇಂಗ್ಲಿಷ್‍ಗೆ ಅನುವಾದಿಸುವುದನ್ನು ಅವರು ನಯವಾಗಿಯೇ ನಿರಾಕರಿಸಿದ್ದಾರೆ. ನನ್ನಂಥವರು ಅದನ್ನು ಓದುವುದು ಬೇಡ ಎಂದು ಅವರು ಬಯಸಿರುವುದು ಇದಕ್ಕೆ ಕಾರಣವಾಗಿರಬಹುದು; ಅಥವಾ ಅವರ ತಲೆಯಲ್ಲಿ ಇನ್ನೂ ಕಥನಗಳು ಇರಬಹುದು ಎಂಬುದೇ ಹೆಚ್ಚು ಸಾಧ್ಯತೆ ಇರುವ ಅಂಶ. ಎಂಬತ್ತನೇ ಹುಟ್ಟುಹಬ್ಬ ಸಮೀಪಿಸುತ್ತಿರುವ (ಮೇ 19ರಂದು) ಈ ಸಂದರ್ಭದಲ್ಲಿ ನನ್ನ ಈ ಶ್ರೇಷ್ಠ ದೇಶಬಾಂಧವನಿಗೆ ಅವರು ಬರೆಯಲು ಬಯಸುವ ಮತ್ತು ನಾನು ನೋಡಲು ಕಾತರರಾಗಿರುವಂತಹ ನಾಟಕಗಳನ್ನು ಬರೆಯುವಂತಹ ಆಯುಷ್ಯ, ಆರೋಗ್ಯ ದೊರೆಯಲಿ ಎಂದು ಆಶಿಸುತ್ತೇನೆ.

(11ನೇ ಮೇ 2018ರಂದು ಈ ಲೇಖನ ಮೊದಲ ಬಾರಿಗೆ ಪ್ರಕಟವಾಗಿತ್ತು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.