ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಗಿನ ಸರ್ಕಾರದ ಹಗರಣಗಳ ತನಿಖೆ’

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಷನ್‌ ಸೇರಿದಂತೆ ಕಾಂಗ್ರೆಸ್‌ ಸರ್ಕಾರದ ಎಲ್ಲ ಹಗರಣಗಳ ತನಿಖೆ ನಡೆಸುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಚುನಾವಣಾ ಪ್ರಚಾರ ಪೂರ್ಣಗೊಳಿಸಿದ ಬಳಿಕ ಗುರುವಾರ ಇಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೂಟಿ ಮಾಡಿದ ಪ್ರತಿ ಪೈಸೆಯನ್ನೂ ನಮ್ಮ ಸರ್ಕಾರ ವಸೂಲಿ ಮಾಡಲಿದೆ’ ಎಂದರು.

‘ಬಿಜೆಪಿ 130ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಲಿದೆ. ಬಿ.ಎಸ್‌.ಯಡಿಯೂರಪ್ಪ ಐದು ವರ್ಷಗಳು ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಜೆಡಿಎಸ್‌ ಜತೆ ಮೈತ್ರಿ ಪ್ರಶ್ನೆಯೇ ಇಲ್ಲ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯು ಬೆಂಗಳೂರಿನ ಟ್ರಾಫಿಕ್‌ ಜಾಂನಂತೆ ನಿಂತು ಹೋಗಿದೆ. ನಗರವನ್ನು ತ್ರಿಮೂರ್ತಿಗಳಾದ ಕೆ.ಜೆ.ಜಾರ್ಜ್‌, ರೋಷನ್‌ ಬೇಗ್‌ ಹಾಗೂ ಎನ್‌.ಎ. ಹ್ಯಾರಿಸ್‌ ಕೈಗೆ ಸಿದ್ದರಾಮಯ್ಯ ಒಪ್ಪಿಸಿದ್ದಾರೆ. ಅವರು ನಗರವನ್ನು ಹಾಳುಗೆಡವಿದ್ದಾರೆ. ಸ್ವಾತಂತ್ರ್ಯಾ ನಂತರ ರಾಜ್ಯ ಕಂಡ ಕೆಟ್ಟ ಸರ್ಕಾರ ಇದು’ ಎಂದು ಜರಿದರು.

‘ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಪಕ್ಷವು ಎಸ್‌ಡಿಪಿಐ, ಪಿಎಫ್‌ಐನಂತಹ ಸಂಘಟನೆಗಳ ಜತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಜಾತಿವಾದ, ಕೋಮುವಾದ ಹಾಗೂ ತುಷ್ಟೀಕರಣ ಅದರ ನೀತಿ. ಇನ್ನೊಂದೆಡೆ, ಇದು ಸಿದ್ಧಾಂತದ ನಡುವಿನ ಹೋರಾಟ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳುತ್ತಾರೆ. ಇದಕ್ಕಿಂತ ದೊಡ್ಡ ಅಣಕ ಇದೆಯೇ’ ಎಂದು ಶಾ ಪ್ರಶ್ನಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕವನ್ನು ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ನಮ್ಮ ಆತ್ಮವಿಶ್ವಾಸಕ್ಕೆ ಸಾಕ್ಷಿ. ರಾಜ್ಯದಾದ್ಯಂತ ಬಿಜೆಪಿ ಪರ ಅಲೆ ಇದೆ’ ಎಂದರು.

‘ಮುಸ್ಲಿಮರಿಗೆ ಏಕೆ ಪಕ್ಷ ಟಿಕೆಟ್‌ ನೀಡಿಲ್ಲ’ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ‘ಟಿಕೆಟ್‌ ಹಂಚಿಕೆ ವೇಳೆ ನಾವು ಜಾತಿ, ಧರ್ಮ ನೋಡುವುದಿಲ್ಲ. ಅದು ನಮ್ಮ ನೀತಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

* ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕಿಂತ ಹೆಚ್ಚಿನ ಅಂತರದಲ್ಲಿ ಬಾದಾಮಿಯಲ್ಲಿ ಸೋಲಲಿದ್ದಾರೆ.

–ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT