ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರುಪೂರ್ವ ಮಳೆಗೆ ಎರಡು ಬಲಿ

Last Updated 10 ಮೇ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರ ಮುಂಗಾರುಪೂರ್ವ ಮಳೆಯಾಗಿದೆ. ವಿದ್ಯುತ್‌ ಕಂಬದ ಮೇಲೆ ಬಿದ್ದ ಮರ ಸ್ಪರ್ಶಿಸಿದ್ದರಿಂದ ಮೂಡಿಗೆರೆಯ ದಾರದಹಳ್ಳಿ ಗ್ರಾಮದಲ್ಲಿ ಯುವತಿ ಮತ್ತು ಹಾಸನ ಜಿಲ್ಲೆ ಅರಕಲಗೂಡುವಿನಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ.

ಅರಕಲಗೂಡು ತಾಲ್ಲೂಕಿನಲ್ಲಿ ಸಂಜೆ ಐದು ಗಂಟೆ ಸುಮಾರಿಗೆ ಮಳೆ ಆರಂಭವಾಗಿದೆ. ಈ ವೇಳೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಐವರು ಯುವಕರು ಮಳೆಯಿಂದ ರಕ್ಷಣೆ ಪಡೆಯಲು ಮರವೊಂದರ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಟ್ರ್ಯಾಕ್ಟರ್‌ ಚಾಲಕ, ಮುದಗನೂರು ಗ್ರಾಮದ ದೇವರಾಜ್‌ (33) ಮೃತಪಟ್ಟಿದ್ದಾರೆ. ಅವರ ಜತೆಯಲ್ಲಿದ್ದ ನಾಯಿಯೂ ಸಿಡಿಲು ಬಡಿದು ಮೃತಪಟ್ಟಿದೆ.

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮದ ಕೆಸವಳಲು ಎಂಬಲ್ಲಿ ಗಾಳಿಗೆ ಮರವೊಂದು ಮುರಿದು ವಿದ್ಯುತ್‌ ಕಂಬದ ಮೇಲೆ ಬಿದ್ದಿದೆ. ಈ ಮರ ಸ್ಪರ್ಶಿಸಿದ್ದರಿಂದ ಶ್ರೀನಿಧಿ (33) ಮೃತಪಟ್ಟಿದ್ದಾರೆ. ತೋಟಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಕಸಬಾ, ತಾಳ್ಯ ಹೋಬಳಿ, ಚಿಕ್ಕಜಾಜೂರು, ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಹಲವು ಗ್ರಾಮಗಳಲ್ಲಿ ತೆಂಗು, ಅಡಿಕೆ, ಮಾವು, ಬಾಳೆ ತೋಟಗಳಿಗೆ ನೀರು ಹರಿದಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಧರ್ಮಪುರ ಹೋಬಳಿ, ಪಿ.ಡಿ.ಕೋಟೆ, ಮದ್ದಿಹಳ್ಳಿ, ಸಕ್ಕರ, ಶ್ರವಣಗೆರೆ, ಹೊಸಕೆರೆ, ಹರಿಯಬ್ಬೆ, ಕಣಜನಹಳ್ಳಿ, ಹಲಗಲದ್ದಿ ಗ್ರಾಮಗಳಲ್ಲಿ ದಾಳಿಂಬೆ ಬೆಳೆಗೆ ನಷ್ಟ ಉಂಟಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತು. ಶಿಕಾರಿಪುರ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಭದ್ರಾವತಿ, ಸೊರಬ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೂ ಮಳೆಯಾಗಿದ್ದು, ಕೆಲವೆಡೆ ಮರ–ಗಿಡಗಳು ಬುಡಮೇಲಾಗಿವೆ.

ಹೊಸಪೇಟೆ ತಾಲ್ಲೂಕಿನ ಹಂಪಿಯ ಉಗ್ರ ನರಸಿಂಹ ಸ್ಮಾರಕದ ಎದುರಿನ ಬೃಹತ್‌ ಅರಳಿ ಮರ ಬೇರು ಸಮೇತ ಉರುಳಿ ಬಿದ್ದಿದೆ. ಆದರೆ, ಸ್ಮಾರಕಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ.

ರಾಯಚೂರು ಜಿಲ್ಲೆ ಸಿರವಾರದಲ್ಲಿ ಗಾಳಿಗೆ ಶೆಡ್‌ಗಳ ಛಾವಣಿ ಮುರಿದು, ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ಆಶ್ರಯ ಮನೆಗಳು ಶೀಟ್‌ಗಳು ಹಾರಿಹೋಗಿವೆ. ದಾವಣಗೆರೆ, ಧಾರವಾಡ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಗದಗ, ಗಜೇಂದ್ರಗಡ, ನರಗುಂದ, ನಿಪ್ಪಾಣಿ, ಶಿರಸಿ, ಸಿದ್ದಾಪುರ, ಹಿರೇಕೆರೂರು ಸೇರಿ ಹಲವೆಡೆ ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದೆ.

ಕುಂದಾಪುರದಲ್ಲಿ 8 ಸೆಂ.ಮೀ. ಮಳೆ
ಬೆಂಗಳೂರು:
ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಹಾಗೂ ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ.

ಕುಂದಾಪುರ 8 ಸೆಂ.ಮೀ, ಮಂಗಳೂರು 7, ಕೋಟ 5, ಪಣಂಬೂರು, ಸೇಡಂ, ಮೂಡಿಗೆರೆ ತಲಾ 4, ಜಗಲ್‌ಬೇಟ್‌, ಕೊಟ್ಟಿಗೆಹಾರ, ಜಯಪುರ, ತರಿಕೆರೆ ತಲಾ 3, ಹೊನ್ನಾವರ, ಮಂಕಿ, ಶಿಗ್ಗಾವಿ, ಭದ್ರಾವತಿ, ಕೊಪ್ಪದಲ್ಲಿ ತಲಾ 2 ಸೆಂ.ಮೀ. ಮಳೆ ದಾಖಲಾಗಿದೆ. ಕಲಬುರ್ಗಿಯಲ್ಲಿ 42.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಕರಾವಳಿಯ ಹಲವೆಡೆ ಹಾಗೂ ಉತ್ತರ, ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT