ಶನಿವಾರ, ಮಾರ್ಚ್ 6, 2021
29 °C
ಟೂರ್ನಿಯಿಂದ ಹೊರಬಿದ್ದಿರುವ ಡೆವಿಲ್ಸ್‌ಗೆ ಗೌರವ ಉಳಿಸಿಕೊಳ್ಳುವ ಹಂಬಲ

ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್‌ಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್‌ಸಿಬಿ

ನವದೆಹಲಿ: ನಿರಂತರ ಸೋಲಿನೊಂದಿಗೆ ನಿರಾಸೆಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್‌ನ ಶನಿವಾರದ ಪಂದ್ಯದಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್ ಎದುರು ಸೆಣಸಲಿದೆ.

ಪ್ಲೇ ಆಫ್‌ ಹಂತದ ಆಸೆ ಜೀವಂತವಾಗಿ ಉಳಿಸಿಕೊಳ್ಳಬೇಕಾದರೆ ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಇನ್ನೊಂದೆಡೆ, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಡೆಲ್ಲಿ ಡೇರ್ ಡೆವಿಲ್ಸ್‌ ಗೌರವ ಉಳಿಸಿಕೊಳ್ಳುವುದಕ್ಕಾಗಿ ಗೆಲ್ಲಲು ಪ್ರಯತ್ನಿಸಲಿದೆ. ಹೀಗಾಗಿ ಪಂದ್ಯ ರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

10 ಪಂದ್ಯಗಳ ಪೈಕಿ ಕೇವಲ ಮೂರನ್ನು ಗೆದ್ದಿರುವ ಆರ್‌ಸಿಬಿ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ತವರಿನಲ್ಲಿ ಇದೇ 17ರಂದು ನಡೆಯಲಿರುವ ಪಂದ್ಯ ಸೇರಿದಂತೆ ಉಳಿದಿರುವ ನಾಲ್ಕು ಪಂದ್ಯಗಳನ್ನು ಗೆದ್ದರೆ ಮಾತ್ರ ತಂಡದ ಮುಂದಿನ ಹಾದಿ ಸುಗಮವಾಗಲಿದೆ. ಇದಕ್ಕೆ ಶನಿವಾರವೇ ನಾಂದಿ ಹಾಡ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ ಕೊಹ್ಲಿ ಬಳಗ.

ಆದರೆ ಹಿಂದಿನ ಕೆಲವು ಪಂದ್ಯ ಗಳಲ್ಲಿ ಸುಲಭವಾಗಿ ಎದುರಾಳಿಗಳಿಗೆ ಮಣಿದಿರುವ ಕಾರಣ ತಂಡ ಭರವಸೆ ಕಳೆದುಕೊಂಡಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಎದುರು ಗೆಲುವಿನ ಅಂಚಿನಲ್ಲಿ ಸೋತ ನಂತರ ’ಈ ಪಂದ್ಯದಲ್ಲಿ ನಮ್ಮ ತಂಡಕ್ಕೆ ಗೆಲ್ಲುವ ಅರ್ಹತೆಯೇ ಇರಲಿಲ್ಲ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ತಂಡದ ಒಟ್ಟು ಸಾಮರ್ಥ್ಯದ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದರು. ಹೀಗಾಗಿ ಈಗ ತಂಡದ ಮೇಲಿನ ಒತ್ತಡ ಹೆಚ್ಚಿದೆ.

396 ರನ್‌ ಗಳಿಸಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಇತರ ಆಟಗಾರರು ನಿರೀಕ್ಷೆಗೆ ತಕ್ಕ ಆಟ ಆಡಲಿಲ್ಲ. ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಅವಲಂಬಿಸಿಕೊಂಡಿರುವ ತಂಡದಲ್ಲಿ ಕ್ವಿಂಟನ್ ಡಿ ಕಾಕ್‌, ಬ್ರೆಂಡನ್‌ ಮೆಕ್ಲಮ್‌, ಮನದೀಪ್ ಸಿಂಗ್‌ ಮಿಂಚುತ್ತಿಲ್ಲ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಮುಂದಿಟ್ಟ 147 ರನ್‌ಗಳ ಗುರಿಯನ್ನು ಬೆನ್ನತ್ತಲು ಆಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ತಂಡಕ್ಕೆ 127 ರನ್‌ ಗಳಿಸಲಷ್ಟೇ ಸಾಧ್ಯವಾಗಿತ್ತು.

ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್‌ ಈ ವರೆಗೆ ಕೇವಲ ನಾಲ್ಕು ವಿಕೆಟ್ ಕಬಳಿಸಿದ್ದು ಬ್ಯಾಟಿಂಗ್‌ನಲ್ಲೂ ಗಮನ ಸೆಳೆದಿಲ್ಲ. ವೇಗಿಗಳಾದ ಟಿಮ್ ಸೌಥಿ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್‌ ಉತ್ತಮ ಸಾಮರ್ಥ್ಯ ಮೆರೆದಿದ್ದಾರೆ. ಆದ್ದರಿಂದ ಫಿರೋಜ್ ಕೋಟ್ಲಾ ಕ್ರೀಡಾಂಗಣದಲ್ಲೂ ಅವರು ಬೆಳಗುವ ಭರವಸೆ ಇದೆ.

ರಿಷಭ್‌ ಪಂತ್‌ ಮೇಲೆ ಕಣ್ಣು: ಡೇರ್‌ ಡೆವಿಲ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಋಷಭ್ ಪಂತ್‌ ಶನಿವಾರದ ಪಂದ್ಯದ ಕೇಂದ್ರಬಿಂದುವಾಗಲಿದ್ದಾರೆ. ಗುರುವಾರ ಸನ್‌ರೈಸರ್ಸ್ ಎದುರು ಸೋತ ಡೇರ್‌ ಡೆವಿಲ್ಸ್‌ ಪರ ಪಂತ್ ಅಮೋಘ ಶತಕ ಸಿಡಿಸಿದ್ದರು.

ಶನಿವಾರದ ಪಂದ್ಯದಲ್ಲಿ ಡೇರ್‌ ಡೆವಿಲ್ಸ್‌ ಕೆಲವು ಪ್ರಯೋಗಗಳನ್ನು ಮಾಡುವ ಸಾಧ್ಯತೆ ಇದೆ. ನೇಪಾಳದ ಸ್ಪಿನ್ನರ್‌ ಸಂದೀಪ್ ಲಚಿಮಾನೆ ಮತ್ತು ದಕ್ಷಿಣ ಆಫ್ರಿಕಾ ವೇಗಿ ಜೂನಿಯರ್‌ ಡಾಲಾ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

‘ಟೂರ್ನಿಯಿಂದ ಹೊರಬಿದ್ದಿರುವುದು ನಿಜ. ಹಾಗೆಂದು ಮುಂದಿನ ಪಂದ್ಯಗಳನ್ನು ಕೈಚೆಲ್ಲಲು ನಾವು ಸಿದ್ಧವಿಲ್ಲ. ಈ ವರೆಗೆ ಅವಕಾಶ ಸಿಗದವರನ್ನು ಆಡಿಸುವುದಾದರೂ ಬಲಿಷ್ಠ ತಂಡವನ್ನೇ ಕಣಕ್ಕೆ ಇಳಿಸಲಿದ್ದೇವೆ’ ಎಂದು ಕೋಚ್‌ ಜೇಮ್ಸ್ ಹೋಪ್ಸ್ ಹೇಳಿದರು.

ಇಂದಿನ ಪಂದ್ಯಗಳು

ಕೆಕೆಆರ್‌–ಕಿಂಗ್ಸ್‌ ಇಲೆವನ್‌

ಸಮಯ: ಸಂಜೆ 4.00

*

ಆರ್‌ಸಿಬಿ–ಡೆಲ್ಲಿ ಡೇರ್‌ ಡೆವಿಲ್ಸ್‌ 

ಸಮಯ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.