ಸೋಮವಾರ, ಮಾರ್ಚ್ 1, 2021
29 °C

ಮತಗಟ್ಟೆಗಳತ್ತ ತೆರಳಿದ ಚುನಾವಣೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತಗಟ್ಟೆಗಳತ್ತ ತೆರಳಿದ ಚುನಾವಣೆ ಸಿಬ್ಬಂದಿ

ಚಿಕ್ಕೋಡಿ: ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರ ಮತ್ತು ನಿಪ್ಪಾಣಿ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಇಲ್ಲಿನ ಆರ್‌.ಡಿ.ಹೈಸ್ಕೂಲ್‌ನಿಂದ ಶುಕ್ರವಾರ ಮಧ್ಯಾಹ್ನ ತೆರಳಿದರು.

ಆರ್‌.ಡಿ.ಹೈಸ್ಕೂಲ್‌ನಲ್ಲಿ ಬೆಳಿಗ್ಗೆ ಚುನಾವಣೆ ಸಿಬ್ಬಂದಿಗೆ ಮಾರ್ಗದರ್ಶನದೊಂದಿಗೆ ಚುನಾವಣಾ ಸಲಕರಣೆಗಳನ್ನು ನೀಡಿ ಆಯಾ ಮತಗಟ್ಟೆಗಳಿಗೆ ಕಳಿಸಲಾಯಿತು. ಚಿಕ್ಕೋಡಿ–ಸದಲಗಾ ವಿಧಾನಸಭೆ ಕ್ಷೇತ್ರದ 244 ಮತಗಟ್ಟೆಗಳಿಗೆ ತಲಾ ಒಬ್ಬ ಎಆರ್‌ಓ, ಒಬ್ಬ ಎಪಿಆರ್‌ಓ ಮತ್ತು ಮೂವರು ಸಹಾಯಕ ಸಿಬ್ಬಂದಿ ಹಾಗೂ ನಿಪ್ಪಾಣಿ ವಿಧಾನಸಭೆ ಕ್ಷೇತ್ರದ 246 ಮತಗಟ್ಟೆಗಳಿಗೆ ತಲಾ ಒಬ್ಬ ಎಆರ್‌ಓ, ಒಬ್ಬ ಎಪಿಆರ್‌ಓ ಮತ್ತು ಮೂವರು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಚುನಾವಣೆ ಸಿಬ್ಬಂದಿ ಮತ್ತು ಸಲಕರಣೆಗಳ ರವಾನೆಗಾಗಿ 74 ಬಸ್‌ಗಳನ್ನು ನಿಯೋಜಿಸಲಾಗಿದ್ದು, 40 ಜನ ಸೆಕ್ಟರ್‌ ಆಫಿಸರ್‌, 8 ಸಂಚಾರಿ ವಿಚಕ್ಷಕ ದಳ ಮತ್ತು ನಾಲ್ಕು ವಿಡಿಯೋ ವಿಜಿಲೆನ್ಸ್‌ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮದುರ್ಗ 1380 ಸಿಬ್ಬಂದಿ ನೇಮಕ

ರಾಮದುರ್ಗ: ವಿಧಾನ ಸಭಾ ಕ್ಷೇತ್ರದ ಚುನಾವಣೆ ಕಾರ್ಯಕ್ಕೆ 247 ಮತಗಟ್ಟೆಗಳಿಗೆ ಕರ್ತವ್ಯ ನಿರ್ವಹಿಸಲು ಚುನಾವಣಾ ಸಿಬ್ಬಂದಿ ಶುಕ್ರವಾರ ಇಲ್ಲಿನ ಈರಮ್ಮ ಯಾದವಾಡ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಿಂದ ತಮ್ಮ ಮತಗಟ್ಟೆಗಳತ್ತ ತೆರಳಿದರು.

ರಾಮದುರ್ಗ ವಿಧಾನಸಭೆ ನಿರ್ವಹಣೆಗಾಗಿ 1380 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 247 ಮತಗಟ್ಟೆಗಳಿವೆ. ಪ್ರತಿ ಮತದಾನ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಮತ್ತು ಮೂವರು ಸಿಬ್ಬಂದಿ ಸೇರಿ ಪ್ರತಿ ಮತಗಟ್ಟೆಗೆ 5 ಸಿಬ್ಬಂದಿಯಂತೆ ಒಟ್ಟು 1235 ಜನರನ್ನು ಮತಗಟ್ಟೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

145 ಹೆಚ್ಚುವರಿ ಸಿಬ್ಬಂದಿ ನೇಮಕಮಾಡಲಾಗಿದೆ ಎಂದು ಚುನಾವಣಾಧಿಕಾರಿ ಕೆ. ಮಹೇಶ್ವರಪ್ಪ ತಿಳಿಸಿದರು. 54 ಸೂಕ್ಷ್ಮ ಮತಗಟ್ಟೆ, 44 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅದರಲ್ಲಿ 5 ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ. 14 ಮೈಕ್ರೋ ವಿಕ್ಷಕರನ್ನು ನೇಮಕಮಾಡಿದ್ದು ಇವರು ಕ್ಷಣ ಕ್ಷಣಕ್ಕೆ ನೇರವಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಿದ್ದಾರೆ. ಸುವ್ಯವಸ್ಥೆ ಮತ್ತು ದಕ್ಷತೆಯಿಂದ ಕೆಲಸ ನಿರ್ವಹಿಸಲು 17 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

540 ರಕ್ಷಣಾ ಸಿಬ್ಬಂದಿ: ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 450 ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವದು ಎಂದು ಡಿವೈಎಸ್ಪಿ ರೇಣುಕಾ ಪ್ರಸಾದ ತಿಳಿಸಿದರು.

1600 ಚುನಾವಣಾ ಸಿಬ್ಬಂದಿ

ಖಾನಾಪುರ: ಶನಿವಾರ ನಡೆಯಲಿರುವ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆ ಪೂರ್ಣಗೊಂಡಿದ್ದು, ಮತದಾನಕ್ಕಾಗಿ ತಾಲ್ಲೂಕಿನಾದ್ಯಂತ ತೆರೆಯಲಾದ 249 ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ಒಟ್ಟು 1600ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿ ಶುಕ್ರವಾರ ಸಂಜೆ ತಲುಪಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಬಾlಕೃಷ್ಣ ಮಾಹಿತಿ ನೀಡಿದರು.

ಪಟ್ಟಣದ ಸರ್ವೋದಯ ವಿದ್ಯಾಲಯ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ಚುನಾವಣಾ ಪೂರ್ವ ತಯಾರಿಯ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಮಧ್ಯಾಹ್ನದಿಂದಲೇ ಚುನಾವಣಾ ಸಿಬ್ಬಂದಿಯೊಂದಿಗೆ ಇವಿಎಂ ಮತ್ತು ವಿವಿಪ್ಯಾಟ್, ಕಂಟ್ರೋಲ್ ಯೂನಿಟ್ ಮತ್ತು ಚುನಾವಣೆಯ ಅಗತ್ಯ ಪರಿಕರಗಳನ್ನು ಪಡೆದು ಮತದಾನ ಕೇಂದ್ರಗತ್ತ ತೆರಳಿದರು ಎಂದು ಅವರು ಹೇಳಿದರು.

ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ತಲುಪಿಸಲು 22 ಟ್ರ್ಯಾಕ್ಸ್, 28 ಬಸ್ ಹಾಗೂ 5 ಖಾಸಗಿ ವಾಹನಗಳನ್ನು ಬಳಸಲಾಗಿದೆ. ತಾಲ್ಲೂಕಿನ ಆಯ್ದ 5 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಸಿಸ್ಟಂ ಅಳವಡಿಸಲಾಗಿದೆ. ಪಿಂಕ್ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಣೆಗೆ ಮಹಿಳಾ ಸಿಬ್ಬಂದಿ ಹಾಜರಾಗಿದ್ದಾರೆ. ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಹಸೀಲ್ದಾರ್ ಡಿ.ಜಿ.ಹೆಗಡೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ, ಕಂದಾಯ ನಿರೀಕ್ಷಕ ಮಾರುತಿ ಚೋಟಣ್ಣವರ, ಸಿಪಿಐ ಮೋತಿಲಾಲ ಪವಾರ ಹಾಗೂ ಚುನಾವಣಾ ಸಿಬ್ಬಂದಿ ಇದ್ದರು.

ಮತಗಟ್ಟೆಗಳತ್ತ ಸಾಗಿದ ಸಿಬ್ಬಂದಿ

ಗೋಕಾಕ: ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್‌, ಮತದಾನ ಸಾಮಗ್ರಿಗಳನ್ನು ಹೊತ್ತುಕೊಂಡ ಚುನಾವಣಾ ಸಿಬ್ಬಂದಿ ಶುಕ್ರವಾರ ಇಲ್ಲಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಿಂದ ಮತಗಟ್ಟೆ ಕೇಂದ್ರದತ್ತ ಪ್ರಯಾಣ ಬೆಳೆಸಿದರು.

ಇಡೀ ರಾತ್ರಿ ಮತಗಟ್ಟೆಯನ್ನು ಸಿದ್ಧಪಡಿಸಿ, ಶನಿವಾರ ಬೆಳಿಗ್ಗೆ 7ಕ್ಕೆ ಮತದಾನ ಆರಂಭಿಸುವ ಜವಾಬ್ದಾರಿ ಮತಗಟ್ಟೆ ಅಧಿಕಾರಿಗಳ ಮೇಲಿದೆ. ಶನಿವಾರ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಚುನಾವಣಾ ಆಯೋಗದ ನಿರ್ಧಾರ ಸಿಬ್ಬಂದಿ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.