ಮಂಗಳವಾರ, ಮಾರ್ಚ್ 2, 2021
26 °C
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ, ಸಕಲ ಸಿದ್ಧತೆ

ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

ಬೀದರ್‌: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆ ಬಯಸಿ ಒಟ್ಟು 64 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದು, ಶನಿವಾರ ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಜಶೇಖರ ಪಾಟೀಲ, ಎರಡು ಬಾರಿ ವಿಧಾನಸಭೆ ಪ್ರವೇಶಿಸಿರುವ ಈಶ್ವರ ಖಂಡ್ರೆ, ಪ್ರಭು ಚವಾಣ್‌, ಮಲ್ಲಿಕಾರ್ಜುನ ಖೂಬಾ, ರಹೀಂ ಖಾನ್, ಬಂಡೆಪ್ಪ ಕಾಶೆಂಪುರ, ಪ್ರಕಾಶ ಖಂಡ್ರೆ ಹಾಗೂ ಮತ್ತೊಮ್ಮೆ ವಿಧಾನಸಭೆಯ ಮೆಟ್ಟಿಲೇರಲು ಬಯಸಿರುವ ಅಶೋಕ ಖೇಣಿ ಚುನಾವಣಾ ಕಣದಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದ ಪ್ರಮುಖರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಹಿರಂಗ ಪ್ರಚಾರ ಸಭೆಯ ಮೂಲಕ ಶಕ್ತಿ ಪ್ರದರ್ಶಿಸಿ ಹೋಗಿದ್ದಾರೆ.

1,495 ಮತಗಟ್ಟೆಗಳು: ಬಸವಕಲ್ಯಾಣ ಕ್ಷೇತ್ರದಲ್ಲಿ 256, ಹುಮನಾಬಾದ್‌ 248, ಬೀದರ್‌ ದಕ್ಷಿಣ 223, ಬೀದರ್‌ 219, ಭಾಲ್ಕಿ 256 ಹಾಗೂ ಔರಾದ್‌ ಕ್ಷೇತ್ರದಲ್ಲಿ 247 ಮತಗಟ್ಟೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1,495 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಪ್ರತಿಯೊಂದು ಮತಕ್ಷೇತ್ರದಲ್ಲಿ ತಲಾ ಐದು ಪಿಂಕ್‌ ಮತಗಟ್ಟೆ ಹಾಗೂ ತಲಾ ಒಂದು ಎರಡು ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಅಂಗವಿಕಲರೇ ಕಾರ್ಯನಿರ್ವಹಿಸುವ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಪರ್ಯಾಯ 12 ದಾಖಲೆಗಳು: ‘ಗುರುತಿನ ಚೀಟಿ ಇಲ್ಲದ ಮತದಾರರು ಪರ್ಯಾಯವಾಗಿ 12 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ತೋರಿಸಬಹುದು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಅನಿರುದ್ಧ ಶ್ರವಣ ತಿಳಿಸಿದ್ದಾರೆ.

ಪಾಸ್‌ಪೋರ್ಟ್‌. ವಾಹನ ಚಾಲನಾ ಪರವಾನಗಿ, ಭಾವಚಿತ್ರ ಇರುವ ಬ್ಯಾಂಕ್‌ ಪಾಸ್‌ಬುಕ್‌, ಪಾನ್‌ಕಾರ್ಡ್, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅಡಿಯಲ್ಲಿ ಆರ್.ಜಿ.ಐ ವತಿಯಿಂದ ನೀಡಿರುವ ಸ್ಮಾರ್ಟ್‌ ಕಾರ್ಡ್‌, ನರೇಗಾ ಯೋಜನೆಯಡಿ ನೀಡಿರುವ ಉದ್ಯೋಗ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್‌ಕಾರ್ಡ್‌, ಭಾವಚಿತ್ರವಿರುವ ಪಿಂಚಣಿ ದಾಖಲೆಗಳನ್ನು ಹಾಜರುಪಡಿಸಬಹುದು.

ಭದ್ರತೆಗೆ ಪ್ಯಾರಾ ಮಿಲಿಟರಿ:  ವಿಧಾನಸಭೆ ಚುನಾವಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಲು ಪ್ಯಾರಾ ಮಿಲಿಟಿರಿಯ 15 ಕಂಪನಿಗಳನ್ನು ನಿಯೋಜಿಲಾಗಿದೆ.

ಗಡಿ ಸುರಕ್ಷತಾ ಪಡೆ, ಇಂಡೊ–ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಜಿಲ್ಲಾ ಸಶಸ್ತ್ರ ಪಡೆ, ಜಿಲ್ಲಾ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಂದೋಬಸ್ತ್ ಕಾರ್ಯಕ್ಕೆ ಬಳಸಲಾಗಿದೆ.

‘ಚುನಾವಣೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಪರಾಧ ಹಿನ್ನೆಲೆಯ ಒಂಬತ್ತು ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿ ಪಾರು ಮಾಡಲಾಗಿದೆ. ಅಪರಾಧ ಹಿನ್ನೆಲೆಯ 700 ವ್ಯಕ್ತಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ ಬಾಬು ತಿಳಿಸಿದ್ದಾರೆ.

15 ರಂದು ಮತ ಎಣಿಕೆ: ಬೀದರ್‌ನ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ಮೇ 15 ರಂದು ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಅಂದು ಕಾಲಕಾಲಕ್ಕೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ.

ಹೆಸರು, ಮತಗಟ್ಟೆ ಹೀಗೆ ಹುಡುಕಿ

97319 79899ಗೆ EPIC <Space>Voter ID Card No....ದಾಖಲಿಸಿ ಸಂದೇಶ ಕಳಿಸಿದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಂದೇಶ ಬರಲಿದೆ. 1950 ಸಹಾಯವಾಣಿಗೂ ಕರೆ ಮಾಡಬಹುದಾಗಿದೆ.

www.nvsp.in, www.ceokarnataka.kar.nic.in ಅಥವಾ www.bidar.nic.inನಲ್ಲಿ ಮತದಾರ ತಮ್ಮ ಮತಗಟ್ಟೆಗಳನ್ನು ಹುಡುಕಬಹುದಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.