ಗುರುವಾರ , ಫೆಬ್ರವರಿ 25, 2021
17 °C
ತಳಿರು ತೋರಣಗಳಿಂದ ಸಿಂಗಾರಗೊಂಡ ಮತಗಟ್ಟೆ

ಮಾದರಿ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾದರಿ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ

ನರಸಿಂಹರಾಜಪುರ: ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂಂದು ಮಾದರಿ ಮತಗಟ್ಟೆ ಕೇಂದ್ರ ಸ್ಥಾಪಿಸಬೇಕೆಂಬ ಚುನಾವಣಾ ಆಯೋಗದ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ತಾಲ್ಲೂಕು ಕೇಂದ್ರದಲ್ಲಿ ಒಂದು ಮಾದರಿ ಮತಗಟ್ಟೆಯನ್ನು ಸ್ಥಾಪಿಸಿ ಅದಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಮೀಪವಿರುವ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 22 ಅನ್ನು ಮಾದರಿ ಮತಗಟ್ಟೆಯನ್ನಾಗಿ ಸ್ಥಾಪಿಸಿ ಇದಕ್ಕೆ ತಳಿರು, ತೋರಣಗಳಿಂದ ಶೃಂಗರಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ. ಚುನಾವಣಾ ಆಯೋಗ ಮಾರ್ಗಸೂಚಿಯ ಅನ್ವಯ ಮತಗಟ್ಟೆಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಮತಗಟ್ಟೆಯ ಕೇಂದ್ರಕ್ಕೆ ಸುಣ್ಣ, ಬಣ್ಣ ಬಳೆಯಲಾಗಿದೆ.

ಮತಗಟ್ಟೆಯ ಹೊರಭಾಗದಲ್ಲಿ ಮತದಾರರು ಕುಳಿತುಕೊಳ್ಳಲು ಶಾಮಿಯಾನ ಅಳವಡಿಸಿ, ನೆರಳಿನ ವ್ಯವಸ್ಥೆ ಕಲ್ಪಿಸಿ ಕುರ್ಚಿಗಳನ್ನು ಹಾಕಲಾಗಿದೆ. ನೆಲಕ್ಕೆ ಹಸಿರು ಮತ್ತು ಕೆಂಪು ನೆಲಹಾಸನ್ನು ಹಾಕಲಾಗಿದೆ. ಎಲ್ಲಾ ಮತದಾರರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮತದಾರರಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರವನ್ನು ಸಹ ತೆರೆಯಲಾಗಿದೆ. ಮತಗಟ್ಟೆಯ ಕೇಂದ್ರದ ಒಳಗೂ ಸಹ ಹಸಿರು ನೆಲ ಹಾಸುಹಾಕಿ ಗೋಡೆಗಳ ಸುತ್ತ ಹೂವಿನಿಂದ ಅಲಂಕರಿಸಲಾಗಿದೆ. ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಬೂತ್ ಏಜೆಂಟ್‌ಗಳು ಕುಳಿತುಕೊಳ್ಳಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಕಡೆ ಮತ ಚಲಾಯಿಸಲು ಹೋಗುಲು, ಇನ್ನೊಂದು ಕಡೆಯಿಂದ ಹೊರಗೆ ಬರುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಂಗವಿಕಲರು, ವೃದ್ಧರಿಗೆ ಹೊಸ ಗಾಲಿಕುರ್ಚಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತದಾನ ಕೇಂದ್ರದಲ್ಲಿ ಮತದಾನ ಮಾಡಲು ಬರುವ ಮತದಾರರಿಗೆ ಉಚಿತ ಆರೋಗ್ಯ ತಪಾಸಣಾ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೂ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತಗಟ್ಟೆಯಲ್ಲಿ ಸಕಲ ಸೌಲಭ್ಯ ಒದಗಿಸಲಾಗಿದೆ ಎಂದು ಸೆಕ್ಟರಲ್ ಅಧಿಕಾರಿ ಪಿ.ನಾಗರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಮಾದರಿ ಮತಗಟ್ಟೆಯನ್ನು ಸ್ಥಾಪಿಸಿರುವುದು ವಿಶೇಷವಾಗಿದ್ದು, ದಾರಿ ಹೋಕರನ್ನು ಒಮ್ಮೆ ಅತ್ತ ಕಣ್ಣು ಹಾಯಿಸುವಂತೆ ಆಕರ್ಷಿಸುತ್ತಿದೆ.

**

ಮತದಾನ ಅತ್ಯಂತ ಪವಿತ್ರವಾದ ಕೆಲಸ. ಹಾಗಾಗಿ, ಮತದಾನ ಮಾಡುವ ಸ್ಥಳವನ್ನು ಸಹ ಅತ್ಯಂತ ಪವಿತ್ರವಾಗಿರುವಂತೆ ಸ್ಥಾಪಿಸಲಾಗಿದೆ

- ಪಿ.ನಾಗರಾಜ್, ಸೆಕ್ಟರಲ್ ಅಧಿಕಾರಿ

ಕೆ.ವಿ.ನಾಗರಾಜ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.