ಮಂಗಳವಾರ, ಮಾರ್ಚ್ 2, 2021
29 °C

ಪುಸ್ತಕಗಳ ಬಿಡಿ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಸ್ತಕಗಳ ಬಿಡಿ ಚಿತ್ರಗಳು

ಎಲೆಯೆಂಬುದು ಗಾಳಿಯ ಅಧೀನ 

ಸೂಕ್ಷ್ಮ ಸಂವೇದನೆಗಳ ಕವಿತೆಗಳ ಗುಚ್ಛ ಈ ಹೊತ್ತಗೆ. ನಿಜ ಜೀವನದಲ್ಲಿನ ಸನ್ನಿವೇಶಗಳು ಮತ್ತು ತಲ್ಲಣಗಳನ್ನು ಸರಳ ಭಾಷೆಯಲ್ಲಿ ಹಿಡಿದಿಡುವ ಕವಿತೆಗಳು ಆಪ್ತವೆನಿಸುತ್ತವೆ.

ಜೇಡಿ ಮಣ್ಣನ್ನು ಮಿದಿಯುತ್ತಾ ಬಂದೆ

ಅದು ಪುಟ್ಟ ಹಕ್ಕಿಯಾಯಿತು!

ಬಣ್ಣ ಹಚ್ಚಿದೆ- ಆಕಾರ ನಿಖರವಾಯ್ತ.


ಮತ್ತೂ ಸೂಕ್ಷ್ಮ ಕಣ್ಣು ಬರೆದೆ ಪಿಳಗುಟ್ಟಿತು – ಎರಡು ಹಕ್ಕಿಗಳು ಎಂಬ ಈ ಕವನದಲ್ಲಿ ಮನುಷ್ಯ ಭಾವನೆಗಳನ್ನು ತುಂಬಾ ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಲಾಗಿದೆ. ಇಲ್ಲಿನ ಕವನಗಳಲ್ಲಿ ಬದುಕನ್ನು ಪ್ರೀತಿಸುವ ತೀವ್ರತೆ, ಪ್ರಾಮಾಣಿಕತೆ ಮತ್ತು ಸಂವೇದನೆ ಇದೆ. ಇಲ್ಲಿರುವುದು ಅನುಭವದ ಮೂಸೆಯಿಂದ ಹೊಸೆದ ಕವನಗಳು.**

ಮೌನ ಮಾತಿನ ಸದ್ದು 

ಸಮಕಾಲೀನ ವಿದ್ಯಮಾನಗಳನ್ನೂ ಬದುಕಿನ ಕಠೋರ ವಾಸ್ತವವನ್ನು ಕವಿ ಕವನದ ಸಾಲುಗಳ ಮೂಲಕ ಹಿಡಿದಿಟ್ಟಿದ್ದಾರೆ. ಅನುಭವದ ಸಾಲುಗಳೂ, ಬದುಕಿನ ವಿವಿಧ ಮಜಲುಗಳು ಇಲ್ಲಿ ಕವನದ ಸಾಲುಗಳಾಗಿ ಹೊರಹೊಮ್ಮಿವೆ. ದೇವರು ಎಂದೋ ಸತ್ತು ಹೋಗಿದ್ದಾನೆ ಎಂಬ ಕವನದಲ್ಲಿ

ಈಗ ನಿಜವಾಗಿಯೂ

ದೇವರು ಸತ್ತುಹೋಗಿದ್ದಾನೆ 


ಎನ್ನುವ ಮೂಲಕ ಕವಿ ನ್ಯಾಯಕ್ಕಾಗಿ ಕೂಗುವ ಜನರ ದನಿಯಾಗಿದ್ದಾರೆ. ಅಲ್ಲಿ ದೇವರನ್ನು ಕಾಣುವ ಹಂಬಲವೂ, ಕರೆ ಕೇಳಿಸದೇ ಇರುವಾಗ ಆಗುವ ಹತಾಶೆಯೂ ಇದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಲೋಕದಲ್ಲಿನ ಅಬ್ಬರಗಳ ನಡುವೆ ಮೌನ ಮಾತಿನ ಸದ್ದನ್ನು ಆಲಿಸುವ ಕವಿ,

ಪ್ರಭುವೆ  

ನನಗೀಗ ಅರ್ಥವಾಗುತ್ತಿದೆ 

ಶಬ್ದಾರ್ಥಗಳಾಚೆ ಮಿಂಚಿ ಹೋದೊಂದು ಮೌನವ ಎಂದು ಮೌನದ ಮಾತುಗಳನ್ನು ಅರ್ಥವನ್ನು ಸೂಕ್ಷ್ಮವಾಗಿ ಹಿಡಿದಿಡುತ್ತಾ ಹೋಗುತ್ತಾರೆ.**

ಜಟಾಯು ಪಕ್ಷಿಗೆ ಶ್ರದ್ಧಾಂಜಲಿ 

ಜೀವನಪ್ರೀತಿಯ ಹಲವು ಭಾವಗಳನ್ನು ಸ್ಫುರಿಸುವ ಈ ಕವನ ಸಂಕಲನದಲ್ಲಿ ಅನುಭವಗಳ ಸಾಲು ಗಳನ್ನು ಕಾಣಬಹುದು. ಜಟಾಯು ಪಕ್ಷಿಗೆ ಶ್ರದ್ಧಾಂಜಲಿ ಎಂಬ ಕವನದ ಅನೇಕ ಕವನಗಳು ಬದುಕಿನ ಆಗು ಹೋಗುಗಳು ಮತ್ತು ಅಲ್ಲಿನ ಅನುಭನವಗಳನ್ನು ಕಾವ್ಯ ರೂಪಕ್ಕೆ ಇಳಿಸಿದವುಗಳಾಗಿವೆ. ಲೋಕವನ್ನು ಬೆರಗು ಕಣ್ಣಿನಿಂದ ನೋಡುವ ಕವಿಯತ್ರಿ ಬದುಕಿನ ಪ್ರತಿ ಘಳಿಗೆಯನ್ನೂ ಆಸ್ವಾದಿಸಿ, ಅಲ್ಲಿನ ಸುಖ ದುಃಖಗಳ ಸಂವೇದನೆಯನ್ನು ಕವನದ ಮೂಲಕ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

**

ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ

ಕೆಲವು ಕವಿತೆಗಳು ಜೀವನಾನುಭವದಿಂದ ಹುಟ್ಟಿದರೆ ಇನ್ನು ಕೆಲವು ಹೇಳಲಾರದೆ ಒದ್ದಾಡುವ ತಾಕಲಾಟದಿಂದ ಹುಟ್ಟುತ್ತವೆ. ಇಲ್ಲಿ ಹುಟ್ಟಿದ ಕವನಗಳು ಅಂಥದ್ದೇ ಆಗಿವೆ. ಬದುಕಿನಲ್ಲಿ ತನ್ನ ಅನುಭವಕ್ಕೆ ಬಂದ ಎಲ್ಲವೂ ಇಲ್ಲಿ ಕವನದ ರೂಪವನ್ನು ಪಡೆದುಕೊಂಡಿದೆ. ಇಲ್ಲಿ ಪ್ರೇಮವೂ, ಗೊಂದಲವೂ ಕಾವ್ಯ ವಸ್ತುವಾಗಿ ರೂಪುಗೊಂಡರೆ ಇನ್ನು ಕೆಲವು ಪ್ರಶ್ನೆಗಳಾಗಿ ಕಾಡುತ್ತವೆ. ಬಯಲು ಸೀಮೆಯ ನನ್ನಪ್ಪನಿಗೆ ಸಮುದ್ರವೆಂದರೆ ಎಲ್ಲಿರುತ್ತದೆ ಎಂದು ಕುಹಕವಾಡಿದೆ (ಅಪ್ಪ ಮತ್ತು ಕಡಲು), ದ್ವೇಷದ ಹೊಗೆಯುಗುಳುತ್ತಿದ್ದ ಊರಿನ ಕೆರೆಯಲ್ಲಿ ಇನ್ನೊಂದು ಅನಾಥ ಶವ ಪತ್ತೆಯಾಯಿತು (ಜುಟ್ಟು ಜನಿವಾರ ಇತ್ಯಾದಿ) ಹೀಗೆ ವಾಸ್ತವ ಮತ್ತು ವರ್ತಮಾನದ ಸಂಗತಿಗಳಿಗೆ ಸ್ಪಂದಿಸುವ ಕವಿತೆ ಇಲ್ಲಿದೆ.

**

ಕಣ್ಣ ಭಾಷೆ 

ಶೈನಾ ಕೈ ಬರಹ ಸಾಹಿತ್ಯ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ ಕಣ್ಣಭಾಷೆ. ಕನ್ನಡದ ವರ್ಣಮಾಲೆಯ ಎಲ್ಲ ಅಕ್ಷರಗಳಿಗೂ ಅರ್ಥ ವಿನ್ಯಾಸ ನೀಡಿ ,ಭಾಷಾ ಪ್ರೀತಿಯನ್ನು ಹರಿಸಿದ್ದಾರೆ ಜ್ಯೋತಿ ಗುರುಪ್ರಸಾದ್. ಒಂದೊಂದು ಅಕ್ಷರವನ್ನು ವಿವರಿಸಲು ಆಯ್ಕೆ ಮಾಡಿದ ಪದಗಳು, ಆ ಪದಗಳ ಅರ್ಥಗಳನ್ನು ವಿವರಿಸುವ ಬಗೆ ಎಲ್ಲವೂ ಸರಳ ಮತ್ತು ಸುಂದರ. ಪದಗಳ ಆಯ್ಕೆ ಮತ್ತು ಸರಳ ವಿವರಣೆಗಳ ಮೂಲಕ ಕಣ್ಣ ಭಾಷೆ, ಮನದ ಭಾಷೆಯಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.