7

ಗಾಲಿ ಕುರ್ಚಿ ಇಲ್ಲದೆ ಮೆಟ್ಟಿಲು ಹತ್ತಿದ ವೃದ್ಧರು

Published:
Updated:
ಗಾಲಿ ಕುರ್ಚಿ ಇಲ್ಲದೆ ಮೆಟ್ಟಿಲು ಹತ್ತಿದ ವೃದ್ಧರು

ಬೆಂಗಳೂರು: ಉಸ್ಸಪ್ಪ.. ಎಂದು ಬೆವರು ಒರೆಸಿಕೊಳ್ಳುತ್ತಾ, ಕೋಲು ಊರಿಕೊಂಡು ಮೆಟ್ಟಿಲು ಹತ್ತಿ ಬಂದು ಮತ ಚಲಾಯಿಸಿದ 80 ವರ್ಷದ ಹಿರಿಯಜ್ಜ ಮಾತಿಗೆ ನಿಂತರು. ‘ನೋಡಿ.. ನಮ್ಮ ಮನೆ ಹತ್ರ ಬಂದು ಮತ ಕೇಳೋಕೆ ಯಾರಿಗೂ ಧೈರ್ಯ ಇಲ್ಲ. ನಿಮ್ಮದೇನು ಸಾಧನೆ ಐತಿ ಎಂದು ನಾನು ಬೈದು ಓಡಿಸಿಬಿಡುತ್ತೇನೆ’ ಎಂದು ಮುಗುಳುನಗೆ ಬೀರಿದರು.

ಗುಂಡೂರಾವ್‌ ಕ್ವಾರ್ಟರ್ಸ್‌ನಿಂದ ನಡೆದೇ ಬಂದಿದ್ದರು. 20 ವರ್ಷದ ಚಿರಯುವಕನಂತೆ ಅಲ್ಲಿಗೆ ಮತ ಹಾಕಲು ಬಂದಿದ್ದ ಎಲ್ಲರೊಂದಿಗೂ ಮಾತು ಆರಂಭಿಸುತ್ತಿದ್ದರು.

ನಗರದ ದಕ್ಷಿಣ ವಲಯದ ಭಾಗಗಳಲ್ಲಿ ಬೆಳಗ್ಗಿನ ಅವಧಿಯಲ್ಲಿ ಮತದಾನ ಚುರುಕಿನಿಂದ ಸಾಗಿತ್ತು. ಆದರೆ, ರಂಗಪ್ಪ ಸೇರಿದಂತೆ ಅನೇಕ ವೃದ್ಧರು ಹಾಗೂ ಅಂಗವಿಕಲರು ಮೆಟ್ಟಿಲು ಹತ್ತಿಕೊಂಡು ಬಂದೇ ಮತಹಾಕುವ ಸ್ಥಿತಿ ಇಲ್ಲಿ ಇತ್ತು. ಪೊಲೀಸರು ಹಾಗೂ ಸಿಬ್ಬಂದಿ ಊರುಗೋಲಾಗಿ ಅವರನ್ನು ಕರೆದುಕೊಂಡು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಕಡೆ ಗಾಲಿಕುರ್ಚಿ ವ್ಯವಸ್ಥೆ ಇರಲಿಲ್ಲ.

ಗೋವಿಂದರಾಜನಗರ ಕ್ಷೇತ್ರದ ಬಸವೇಶ್ವರನಗರದ ಮತಗಟ್ಟೆಯಲ್ಲಿ 1025 ಮತದಾರರು ಇದ್ದಾರೆ. ಬೆಳಿಗ್ಗೆ 9 ಗಂಟೆ ವರೆಗೆ ಇಲ್ಲಿ 77 ಮಂದಿ ಹಕ್ಕು ಚಲಾಯಿಸಿದ್ದರು. ಹಾವನೂರು ಶಾಲೆಯ ಮತಗಟ್ಟೆಯಲ್ಲಿ ಬರೋಬ್ಬರಿ 5,000 ಮತದಾರರು ಇದ್ದರು. 9ರ ಹೊತ್ತಿಗೆ 500 ಜನರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ್ದರು.

ಮತಗಟ್ಟೆಯಿಂದ ನೂರು ಮೀಟರ್‌ ದೂರದಲ್ಲಿ ನಿಂತಿದ್ದ ಪಕ್ಷದ ಏಜೆಂಟ್‌ಗಳು ಮತದಾರರನ್ನು ಎದುರುಗೊಳ್ಳುತ್ತಿದ್ದರು. ‘ನಮ್ಮದೇ ಪಕ್ಷಕ್ಕೆ ಮತ ನೀಡಿ’ ಎಂದು ಹುರಿದುಂಬಿಸಿ ಕಳಿಸುತ್ತಿದ್ದರು. ಮಜ್ಜಿಗೆ, ಪಾನಕಗಳನ್ನು ಖುರ್ಚಿ, ಮೇಜುಗಳ ಕೆಳಗೆ ಹುದುಗಿಸಿ ಇಟ್ಟುಕೊಂಡಿದ್ದ ಅವರು ಬಿಸಿಲಿನ ಝಳ ಹೆಚ್ಚಾದಂತೆ ಒಂದೊಂದೇ ಗುಟುಕು ಹೀರುತ್ತಿದ್ದರು.

ಮತಗಟ್ಟೆ ಸಿಬ್ಬಂದಿಗೆ ಕುಳಿತ ಜಾಗದಲ್ಲಿಯೇ ಊಟೋಪಚಾರ ನಡೆದಿತ್ತು. ಪಿಂಕ್ ಮತಗಟ್ಟೆಗಳನ್ನು ‘ಗುಲಾಬಿ’ ಬಣ್ಣದ ಬಲೂನ್‌ಗಳು ಹಾಗೂ ಕೆಲವೆಡೆ ಹೂವುಗಳಿಂದಲೂ ಅಲಂಕರಿಸಲಾಗಿತ್ತು. ನಜೀರ್‌ ಸಾಬ್‌ ಬಡಾವಣೆಯಲ್ಲಿದ್ದ ಪಿಂಕ್‌ ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಇಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಅವರು ಬೆಳಿಗ್ಗೆ 8.30ಕ್ಕೆ ಬಂದು ಮತ ಚಲಾಯಿಸಿದರು. ಇಲ್ಲಿ ಇದ್ದ ಮಹಿಳಾ ಸಿಬ್ಬಂದಿ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟುಕೊಂಡಿದ್ದು ವಿಶೇಷವಾಗಿತ್ತು.

ಇಲ್ಲಿನ ಮತಗಟ್ಟೆ ಸಂಖ್ಯೆ 25ರಲ್ಲಿ ಮಧ್ಯಾಹ್ನದ ಹೊತ್ತಿಗೆ 1348 ಮತದಾರರ ಪೈಕಿ 618 ಮಂದಿ ಮತ ಚಲಾಯಿಸಿದ್ದರು.

ಅಸ್ವಸ್ಥರಾಗಿದ್ದ ಸಿಬ್ಬಂದಿ: ಬೊಮ್ಮನಹಳ್ಳಿ ಕ್ಷೇತ್ರದ ವಂಗಸಂದ್ರ ಬಡಾವಣೆಯ ವಿದ್ಯಾಜ್ಯೋತಿ ಕಾಲೇಜಿನಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡಿದ್ದರು. ಮೈಗ್ರೇನ್‌ನಿಂದಾಗಿ ಎರಡು ತಾಸು ಅವರು ವಿಶ್ರಾಂತಿ ಪಡೆದರು. ಅವರು ಚೇತರಿಸಿಕೊಳ್ಳದ ಕಾರಣ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಶಾಲೆಯಲ್ಲಿ ಒಟ್ಟು 14 ಮತಗಟ್ಟೆಗಳು ಇದ್ದವು.

‘ನಮ್ಮ ಕಾಲದಲ್ಲಿ ಹಿಂಗೆ ಇರ್ಲಿಲ್ಲ..’

‘ಸರ್ಕಾರ ಬದಲಾಗಲಿ ಎಂದು ನಾನು ಹೇಳುವುದಿಲ್ಲ. ಯಾರೇ ಗೆದ್ದರೂ ಉತ್ತಮ ಕೆಲಸ ಮಾಡಬೇಕು. ಸುಮ್ಮನೆ ಮನೆ ಮನೆಗೆ ಬಂದು ಪ್ರಚಾರ ಮಾಡುತ್ತಾರೆ. ಮತ ಪಡೆದುಕೊಂಡ ಮೇಲೆ ಅವರನ್ನು ಕೇಳೋಕೆ ಆಗಲ್ಲ. ನಮ್ಮ ಕಾಲದಲ್ಲಿ ಹಿಂಗೆ ಇರಲಿಲ್ಲ. ಅಭ್ಯರ್ಥಿಗಳು ನಮ್ಮ ಮಾತು ಕೇಳುತ್ತಿದ್ದರು. ಈಗಿನವರಿಗೆ ದುಡ್ಡು ಹೆಚ್ಚಾಗಿ ಹೊಟ್ಟೆ ಮುಂದಕ್ಕೆ ಬಂದಿದೆ. ಅದಕ್ಕೆ ಹಂಗೆ ಆಡ್ತಾರೆ. 50 ವರ್ಷದಿಂದ ನಾನು ಈ ರಾಜಕೀಯದವರನ್ನು ನೋಡುತ್ತಿದ್ದೇನೆ. ಇಲ್ಲಿಗೆ ಸರಿಸುಮಾರು ಏಂಟು ಬಾರಿ ನಾನು ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿರಬಹುದು. ನನ್ನ ಅನುಭವದಷ್ಟು ವಯಸ್ಸು ಆಗಿಲ್ಲ ಇವರಿಗೆ’

– ರಂಗಪ್ಪ, 80 ವರ್ಷದ ಹಿರಿಯಜ್ಜ

ಯುವ ಮತದಾರರ ಸೆಲ್ಫಿ ಗೀಳು

ಮತದಾನ ಮಾಡುವ ಜಾಗಕ್ಕೆ ಮೊಬೈಲ್ ಬಿಡಲ್ಲ ಮಾರ್ರೆ.. ಹೀಗೆ ಗೊಣಗಿದ್ದು ಪದ್ಮನಾಭನಗರ ಕ್ಷೇತ್ರದ ಯುವ ಮತದಾರ. ಮತದಾನ ಮಾಡುತ್ತಿರುವುದನ್ನೂ ಮೊಬೈಲ್‌ನಲ್ಲಿ ಸೆರೆಹಿಡಿಯುವ ಅವರ ತವಕಕ್ಕೆ ಭದ್ರತಾ ಸಿಬ್ಬಂದಿ ಅಡ್ಡಿಯಾಗಿದ್ದರು. ಮತಗಟ್ಟೆಯ ಒಳಗೆ ಮೊಬೈಲ್ ತೆಗೆದುಕೊಂಡು ಹೋಗದಂತೆ ಅವರು ತಡೆ ಒಡ್ಡುತ್ತಿದ್ದರು. ಮತ ಚಲಾಯಿಸಿ ಹೊರಗೆ ಬಂದಿದ್ದೇ ತಡ... ಗುಂಪು ಸೇರಿಕೊಂಡ ಕಾಲೇಜಿನ ಹುಡುಗ, ಹುಡುಗಿಯರು ಕ್ಯಾಮೆರಾದ ಕಡೆ ಬೆರಳು ತೋರಿಸಿ ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry