ಮಂಗಳವಾರ, ಮಾರ್ಚ್ 9, 2021
23 °C

ಒಂದು ಮತ–ಹತ್ತು ಹಲವು ಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಮತ–ಹತ್ತು ಹಲವು ಭಾವ

ಬೆಂಗಳೂರು: ಸೂರ್ಯರಶ್ಮಿ ಇಳೆ ತುಂಬುವ ಹೊತ್ತಿಗೆ ಬೂತ್‌ ಏಜೆಂಟರು ಟೇಬಲ್‌, ಕುರ್ಚಿ ಹಾಕಿ ಕುಳಿತಿದ್ದರು. ಭದ್ರತಾ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಯಂತ್ರವನ್ನು ಕಾಯ್ದರು. ಮತದಾರರು ಸರದಿಯಲ್ಲಿ ನಿಂತು ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸಿದರು.

ಬೆಂಗಳೂರು ಉತ್ತರ ವಲಯದ ಬಹುತೇಕ ಕ್ಷೇತ್ರಗಳಲ್ಲಿ ಸನ್ನಿವೇಶ ಹೀಗೇ ಇತ್ತು. ಪುಟಾಣಿಗಳನ್ನು ಸೊಂಟಕ್ಕೇರಿಸಿ ಸಾಲಿನಲ್ಲಿ ನಿಂತ ಅಮ್ಮಂದಿರು, ಏದುಸಿರು ಬಿಡುತ್ತಾ ಮೆಟ್ಟಿಲು ಏರುತ್ತಿದ್ದ ಅಜ್ಜಿಯಂದಿರು, ಸಿಂಗರಿಸಿಕೊಂಡು ಬಂದ ಮೊದಲ ಮತದಾರರು ಎಲ್ಲರೂ ಅಲ್ಲಿದ್ದರು. ಗುಂಪು ಗುಂಪಾಗಿ ನಿಲ್ಲದಂತೆ, ಪ್ರಚಾರ ಮಾಡದಂತೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು.

ಅನೇಕ ಕಡೆ ಗಾಲಿ ಕುರ್ಚಿ ವ್ಯವಸ್ಥೆ ಇರಲಿಲ್ಲ. ಮೆಟ್ಟಿಲು ಹತ್ತಿಕೊಂಡು ಹೋಗಬೇಕಿದ್ದುದರಿಂದ ವಯಸ್ಕರು ತುಸು ಕಷ್ಟ ಪಟ್ಟರು. ‘ಮೂರು ವರ್ಷದಿಂದ ಹುಷಾರಿಲ್ಲ. ಆದರೂ ಮತದಾನ ಮಾಡುವ ಹುಮ್ಮಸ್ಸು ಕುಗ್ಗಿಲ್ಲ. ಇಲ್ಲಿ ನಾಲ್ಕು ಕೊಠಡಿಗಳು ಇವೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿಸುತ್ತಿದ್ದಾರೆ’ ಎಂದು ಬೇಸತ್ತು ಅಲ್ಲೇ ಕುಳಿತರು 72 ವರ್ಷದ ಶಕುಂತಲಾ.

80 ವರ್ಷದ ಅಮೀರ್‌ ಬಿ, 85 ವರ್ಷದ ಮುನಿಯಮ್ಮ ‘ಯಾರಾದರೂ ಗೆಲ್ಲಲಿ. ಒಂದು ಸಲವೂ ನನ್ನ ಹಕ್ಕು ವ್ಯರ್ಥ ಮಾಡಿಲ್ಲ’ ಎಂದಷ್ಟೇ ಉತ್ತರಿಸಿದರು. ವೃಷಭಾವತಿ ನಗರದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5 ಗಂಟೆ ಹೊತ್ತಿಗೆ ಬಂದಿದ್ದ ವೃದ್ಧೆ ಗೌರಮ್ಮ ಮೊಗದಲ್ಲಿ ಸಿಟ್ಟು ಮನೆಮಾಡಿತ್ತು.

‘ವೋಟ್‌ ಹಾಕಬಾರದು ಅಂತ ಇಷ್ಟೊತ್ತು ಮನೇಲೇ ಕೂತಿದ್ದೆ. ಮನಸು ಕೇಳಲಿಲ್ಲ. ಹಾಗಾಗಿ ಬಂದೆ. ನಮ್ಮ ಕಷ್ಟಗಳನ್ನು ಯಾರೂ ಕೇಳುವುದಿಲ್ಲ. ನಾನು ಈ ಪ್ರದೇಶಕ್ಕೆ ಬಂದು 35 ವರ್ಷವಾಯಿತು. ಮನೆಯ ವ್ಯವಸ್ಥೆ ಮಾಡಿಕೊಳ್ಳಲಾಗಲಿಲ್ಲ’ ಎಂದು ಕಣ್ಣು ಮಂಜಾಗಿಸಿದರು ಅಜ್ಜಿ.

ಪಿಂಕ್‌ ಬೂತಾ?

ಚುನಾವಣಾ ಆಯೋಗ ದಾಖಲೆಯಲ್ಲಿ ನಮೂದಿಸಿದ ಅನೇಕ ಬೂತ್‌ಗಳು ಪಿಂಕ್‌ ಬೂತ್‌ಗಳಾಗಿರಲಿಲ್ಲ. ಅಧಿಕಾರಿಗಳಿಗೆ ಇದು ಪಿಂಕ್‌ಬೂತ್‌ ಎನ್ನುವ ಮಾಹಿತಿಯೂ ಇರಲಿಲ್ಲ. ಮತ್ತೆ ಕೆಲ ಬೂತ್‌ಗಳಲ್ಲಿ ಮಹಿಳಾ ಸಿಬ್ಬಂದಿ ಕಡಿಮೆ ಇದ್ದಾರೆ ಎನ್ನುವ ಕಾರಣಕ್ಕೆ ಪುರುಷರೇ ಕಾರ್ಯನಿರ್ವಹಿಸುತ್ತಿದ್ದರು.

ಪುಲಕೇಶಿ ನಗರದ ಸೇಂಟ್‌ ರಾಕ್ಸ್‌ ಗರ್ಲ್ಸ್‌ ಹೈಸ್ಕೂಲ್‌ನಲ್ಲಿ ಪಿಂಕ್‌ಬೂತ್‌ ಸುವ್ಯವಸ್ಥಿತವಾಗಿತ್ತು. ‘ಈ ಬಾರಿ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಯಾವುದೇ ಗೊಂದಲವಿಲ್ಲದೆ ಮತ ಹಾಕಿ ಬಂದೆ. ನಾನು ವೋಟ್‌ ಹಾಕಿದ್ದಕ್ಕೆ ದೃಢೀಕರಣ ನೀಡುವ ಯಂತ್ರವೂ ಇದ್ದುದರಿಂದ ಯಾವ ಚಿಂತೆಯೂ ಇಲ್ಲದೆ ಹೊರ ಬಂದೆ’ ಎಂದು ಮೊಹಮದ್‌ ಆಸೀಂ ಖುಷಿ ಹಂಚಿಕೊಂಡರು.

ಹೆಬ್ಬಾಳದ ಮತಗಟ್ಟೆ ಸಂಖ್ಯೆ 50ರಲ್ಲಿರುವ ಸಖಿ ಪಿಂಕ್‌ಬೂತ್‌ನಲ್ಲಿ ಶೋಭಾ ಕರಂದ್ಲಾಜೆ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಖುಷಿಯ ಬೆಳಗು

ಸಿ.ವಿ.ರಾಮನ್‌ ನಗರ ವ್ಯಾಪ್ತಿಯ ಕಾಕ್ಸ್‌ಟೌನ್‌ನ ಸೇಂಟ್‌ ಅಲೋಶಿಯಸ್‌ ಸಮೀಪ ನಿಂತಿದ್ದ ಲೈಂಗಿಕ ಅಲ್ಪಸಂಖ್ಯಾತರ ಮೊಗದಲ್ಲಿ ತೃಪ್ತಭಾವ. ಅವರ ಮಾತು ಹಾವ ಭಾವಗಳಲ್ಲಿಯೂ ಗೆದ್ದ ಖುಷಿ. ಸೀರೆ, ಚೂಡಿದಾರ ತೊಟ್ಟು ಹೂವು ಮುಡಿದ ಬಂದಿದ್ದ ಅವರಿಗೆ ಮತದಾನ ಮಾಡಿದ್ದು ಒಂದು ಖುಷಿಯಾದರೆ, ‘ಇತರೆ (ಅದರ್ಸ್‌)’ ಅಡಿಯಲ್ಲಿ ಮತದಾನದ ಚೀಟಿ ಸಿಕ್ಕಿದ್ದು ಇನ್ನೊಂದು ಖುಷಿ.

‘ನಮ್ಮ ನಿರಂತರ ಹೋರಾಟಕ್ಕೆ ಬಲ ಸಿಕ್ಕಿದೆ. ನಾವು ಒಟ್ಟೂ 35 ಜನ ಬಂದು ಮತದಾನ ಮಾಡಿದೆವು. ಯಾರಿಗೆ ಯಾವ ಪಕ್ಷಕ್ಕೆ ಇಷ್ಟವಾಗುತ್ತದೋ, ಅವರಿಗೆ ಮತ ನೀಡಿದ್ದಾರೆ. ನಮಗೆ ಯಾವುದೇ ಗೌರವ ಇಲ್ಲ. ಜನರೂ ನಮ್ಮನ್ನು ಕೆಟ್ಟ ದೃಷ್ಟಿಯಲ್ಲಿಯೇ ನೋಡುತ್ತಾರೆ. ನಮಗೆ ಸೆಕ್ಸ್‌ ವರ್ಕರ್‌ ಎನ್ನುವ ಹಣೆ ಪಟ್ಟಿ ಕೊಟ್ಟುಬಿಟ್ಟಿದ್ದಾರೆ. ಯಾವುದೇ ಸರ್ಕಾರ ಬಂದರೂ ನಾಯಿಗಿಂತ ಕಡೆಯಾಗಿಯೇ ನಮ್ಮನ್ನು ನಡೆಸಿಕೊಂಡಿದ್ದಾರೆ. ಹೋರಾಟ ನಡೆಸಿದ ಮೇಲೆ ನಮ್ಮನ್ನು ನೋಡುವ ದೃಷ್ಟಿ ನಿಧಾನವಾಗಿ ಬದಲಾಗುತ್ತಿದೆ. ಮತದಾನ ಮಾಡುವ ಮೂಲಕ ಆಯ್ದು ಬರುವ ಅಭ್ಯರ್ಥಿ ನಮ್ಮ ಸಮಸ್ಯೆಗಳನ್ನೂ ಕೇಳುತ್ತಾರೆ, ಪರಿಹಾರ ನೀಡುತ್ತಾರೆ’ ಎಂದು ತಂಡದ ನಾಯಕಿ ರಾಜಮ್ಮ ಹೇಳಿದರು.

‘ಇಷ್ಟು ದಿನ ಮಹಿಳೆ/ಪುರುಷ ಹೆಸರಿನಲ್ಲಿಯೇ ಚುನಾವಣಾ ಚೀಟಿ ಪಡೆದು ಮತದಾನ ಮಾಡಿದ್ದೆವು. ಇದೇ ಮೊದಲ ಬಾರಿಗೆ ‘ಅದರ್ಸ್‌’ ಹೆಸರಿನಲ್ಲಿ ಮತಚೀಟಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ‘ತೃತೀಯಲಿಂಗಿ’ ಹೆಸರಿನಲ್ಲಿ ಮತದಾನ ಚೀಟಿ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.