ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಲ್ಲೂ ಮಹಿಳೆಯರೇ ಮೊದಲು

ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡೇ ಮತಗಟ್ಟೆಗೆ ಬಂದ ವನಿತೆಯರ
Last Updated 13 ಮೇ 2018, 6:42 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಬೆಳಿಗ್ಗೆ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿ ಕಂಡುಬಂತು. ಸೇಡಂ ಕ್ಷೇತ್ರದ ಮಳಖೇಡ ಪ್ರೌಢಶಾಲೆಯಲ್ಲಿ ಹಲವರು ಮಕ್ಕಳ ಸಮೇತ ಸಾಲಿನಲ್ಲಿ ನಿಂತಿದ್ದರು. ಕಲಬುರ್ಗಿ ಗ್ರಾಮೀಣ, ಚಿತ್ತಾಪುರ, ಅಫಜಲಪುರ ಹಾಗೂ ಸೇಡಂ ಕ್ಷೇತ್ರದ ಬಹುಪಾಲು ಮತಗಟ್ಟೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಕಂಡುಬಂದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬೆರಳೆಣಿಕೆಯಷ್ಟು ಯುವಕ– ಯುವತಿಯರು ಮಾತ್ರ ಮತದಾನದ ಸಾಲಿನಲ್ಲಿ ಇದ್ದರು.

‘ಮಹಿಳೆಯರು ಬೇಗ ಮತ ಹಾಕಿ ತಮ್ಮ ಮನೆ ಕೆಲಸಗಳಿಗೆ ಮರಳುತ್ತಾರೆ. ಹೊಲ– ಗದ್ದೆ, ಮದುವೆ ಅಥವಾ ಪರ ಊರಿಗೆ ಹೋದ ಯುವಕರು ಸಂಜೆ ವೇಳೆಗೆ ಬಂದು ಮತಚಲಾಯಿಸುವುದು ರೂಢಿ’ ಎಂದು ಫರಹತಾಬಾದ್‌ ಗ್ರಾಮದನಲ್ಲಿ ವ್ಯಕ್ತಿಯೊಬ್ಬರು ಹೇಳಿದರು.

ಕೆಲವೆಡೆ ನೀರಸ: ಕಲಬುರ್ಗಿ ಗ್ರಾಮೀಣ ಮೀಸಲು ಕ್ಷೇತ್ರ ವ್ಯಾಪ್ತಿಗೆ ಬರುವ ಶಹಾಬಾದ್‌ನಲ್ಲಿ, ಅಫಜಲಪುರ ಕ್ಷೇತ್ರದ ಫರಹದಾಬಾದ್‌ನಲ್ಲಿ ಬೆಳಿಗ್ಗೆ ಮತದಾನ ನೀರಸವಾಗಿತ್ತು. ‘ಪಟ್ಟಣದಲ್ಲಿ ಇದೇ ದಿನ ಮೂರು ಮದುವೆ ಸಮಾರಂಭ ಇವೆ. ಅಲ್ಲಿಗೆ ಹೋದವರೆಲ್ಲ ಸಂಜೆಯೇ ಮತದಾನ ಮಾಡುತ್ತಾರೆ’ ಎಂದು ಗ್ರಾಮದ ಯುವಕ ಕಿರಣ್‌ ಹೇಳಿದರು.

ಹಿರಿಯರ ಮತದಾನ: ಯುವಕರೂ ನಾಚುವಂತೆ ಹಲವು ಹಿರಿಯರು ಮತದಾನ ಮಾಡಿದ್ದು ಕಂಡಬಂತು. ಬೆಳಿಗ್ಗೆ 10ಕ್ಕೆ ಉರಿಬಿಸಿಲು ಆರಂಭವಾದರೂ ಹಲವು ವೃದ್ಧರು ಮತಗಟ್ಟೆಗಳ ಸಾಲಿನಲ್ಲಿ ನಿಂತಿದ್ದರು. ಚಿತ್ತಾಪುರ ಕ್ಷೇತ್ರದ ದಂಡೋತಿ ಮತಗಟ್ಟೆ–70 ವಿಶೇಷವಾಗಿ ಕಾಣಿಸಿತು. ಸುಮಾರು 70ರಿಂದ 85 ವರ್ಷ ವಯಸ್ಸಿನ ಹಿರಿಯರು ಗುಂಪಾಗಿ ಬಂದದ್ದು ಇಲ್ಲಿ ಕಂಡುಬಂತು.

80 ವರ್ಷದ ರತ್ನಮ್ಮ, 85ರ ವಯಸ್ಸಿನ ಮಲ್ಲಮ್ಮ, 70 ವಯಸ್ಸಿನ ಮರೆಮ್ಮ, 75ರ ರತ್ನಮ್ಮ ಹಾಗೂ ಯಲ್ಲಮ್ಮ ಮುಂತಾದವರು ತಮ್ಮ ಮಕ್ಕಳ ಸಹಾಯದಿಂದ ಬಂದು ಹಕ್ಕು ಚಲಾಯಿಸಿದರು. ಪಾರ್ಶ್ವವಾಯು ಪೀಡಿತರಾದ 75 ವಯಸ್ಸಿನ ಗಂಗಿಮಾಳಮ್ಮ ಅವರು ಪುತ್ರನ ಕಂಕುಳಲ್ಲಿ ಕುಳಿತೇ ಮತಗಟ್ಟೆ ಬಂದರು.

**
ಜಿಲ್ಲೆಯ ಎಲ್ಲ ಕಡೆ ಶಾಂತಿಯುತ ಮತದಾನ ನಡೆದಿದೆ. ಈ ಭಾಗದ ಜನರಲ್ಲಿ ವಿಶೇಷವಾದ ಶಿಸ್ತು ಇದೆ. ಹಾಗಾಗಿ, ಗೊಂದಲ ಉಂಟಾಗಿಲ್ಲ
– ಅಶುತೋಷ್‌ ರಾಯ್‌, ಜಿಲ್ಲಾ ಚುನಾವಣಾ ಭದ್ರತಾ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT