ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ

74 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ, ಮೇ 15ಕ್ಕೆ ಮತ ಎಣಿಕೆ
Last Updated 13 ಮೇ 2018, 7:32 IST
ಅಕ್ಷರ ಗಾತ್ರ

ಶಿವಮೊಗ್ಗ: ಕೈಕೊಟ್ಟ ಮತಯಂತ್ರಗಳು ಸೃಷ್ಟಿಸಿದ ಗೊಂದಲ, ಸಣ್ಣಪುಟ್ಟ ತಕರಾರು, ಮೂಲ ಸೌಕರ್ಯಕ್ಕೆ ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಂಗೋಟೆಯಲ್ಲಿ ಮಧ್ಯಾಹ್ನದವರೆಗೂ ಮತದಾನ ಬಹಿಷ್ಕಾರ, ಭದ್ರಾವತಿ ತಾಲ್ಲೂಕು ಬಿಳಕಿ ತಾಂಡದಲ್ಲಿ ಹೊಡೆದಾಟ ಹೊರತುಪಡಿಸಿ ಜಿಲ್ಲೆಯ ಎಲ್ಲಡೆ ಶನಿವಾರ ಶಾಂತಿಯುತ ಮತದಾನ ನಡೆಯಿತು.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ 1,756 ಮತಗಟ್ಟೆಗಳಲ್ಲಿ 50ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹಾಗಾಗಿ, ಈ ಮತಗಟ್ಟೆಗಳಲ್ಲಿ ಒಂದು ಗಂಟೆ ತಡವಾಗಿ ಮತದಾನ ಆರಂಭವಾಯಿತು. ಸಾಗರ ತಾಲ್ಲೂಕು ಕೋಟೆಕೊಪ್ಪದಲ್ಲಿ ಬಿಜೆಪಿ ಅಭ್ಯರ್ಥಿಯ ಗುರುತಿನ ಬಟನ್ ಸರಿಯಾಗಿ ಬಳಸಲು ಬರುತ್ತಿಲ್ಲ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರು ಗಲಾಟೆ ಮಾಡಿದರು. ಸ್ಥಳಕ್ಕೆ ಅಭ್ಯರ್ಥಿ ಹರತಾಳು ಹಾಲಪ್ಪ ಬಂದ ನಂತರ ಚುನಾವಣಾಧಿಕಾರಿಗೆ ದೂರು ನೀಡಿ, ಮತಯಂತ್ರ ಬದಲಿಸಿದರು.

‘ಮಂಗೋಟೆ ಕ್ಯಾಂಪ್‌ನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಮಳೆ ಬಂದರೆ ಮನೆಯ ಒಳಗೆ ನೀರು ನುಗ್ಗುತ್ತದೆ. ಚರಂಡಿ 20 ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯವಿಲ್ಲ. ನಿವೇಶನ ಸಮಸ್ಯೆ ಇದೆ. ತಹಶೀಲ್ದಾರ್, ಜನ ಪ್ರತಿನಿಧಿಗಳು, ಕಂದಾಯ ಸಚಿವರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಿಲ್ಲ’ ಎಂದು ಕಾರ್ಯಕರ್ತರು ದೂರಿದರು.

ಕೊನೆಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಚುನಾವಣೆಯ ಬಳಿಕ ಮೂಲ ಸೌಕರ್ಯ ಒದಗಿಸುವ ಭರವಸೆ ನೀಡಿದ ನಂತರ ಸಂಜೆ ಮತದಾನ ಮಾಡಿದರು.

ಭದ್ರಾವತಿ ತಾಲ್ಲೂಕು ಬಿಳಕಿ ತಾಂಡಾದಲ್ಲಿ ಕಾಂಗ್ರೆಸ್ ಮತದಾರರನ್ನು ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ತಡೆದಿದ್ದಾರೆ. ಆಗ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ಜೆಡಿಎಸ್‌ನ ನಾಲ್ವರು ಗಾಯಗೊಂಡಿದ್ದಾರೆ.

ಈ ಬಾರಿ ನಿರಾಶ್ರಿತರು, ಅಂಗವಿಕಲರು, ವೃದ್ಧರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇವರ ಅನುಕೂಲಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ನೇಮಕವಾಗಿರುವ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಕರೆತರಲಾಗಿದ್ದ ಭದ್ರತಾ ಸಿಬ್ಬಂದಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಪೊಲೀಸರು ಮತಗಟ್ಟೆ ಕೇಂದ್ರಗಳಲ್ಲಿ ನಿಂತಿದ್ದ ಗುಂಪುಗಳನ್ನು ಚದುರಿಸುವ ಪ್ರಯತ್ನ ಮಾಡಿದರು. ಹಾಗಾಗಿ ಸಣ್ಣಪುಟ್ಟ ಗೊಂದಲ ಉಂಟಾಯಿತು.

ಹಕ್ಕಿಪಿಕ್ಕಿಗಳ ಮತದಾನ ಸಂಭ್ರಮ:

ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಮತದಾರರನ್ನು ಆಕರ್ಷಿಸಲು ಹಸೆ, ಚಪ್ಪರ ಹಾಗೂ ಸುಣ್ಣಬಣ್ಣ ಬಳಿದು ಮತದಾನ ಕೇಂದ್ರಗಳನ್ನು ಸಿಂಗರಿ ಸಲಾಗಿತ್ತು. ವಿಶೇಷ ಎಂದರೆ ಬೆಳಿಗ್ಗೆ 11.30ರ ಸುಮಾರಿಗೆ ಶೇ 50 ರಷ್ಟು ಮತದಾನ ಮುಗಿದಿತ್ತು. ತೀರ್ಥಹಳ್ಳಿ ಕ್ಷೇತ್ರವಾದ ಕಡೆಕಲ್‌ನಲ್ಲಿ ಮಹಿಳಾ ಮತದಾರರು ಹೆಚ್ಚಿರುವುದರಿಂದ ಅವರನ್ನು ಆಕರ್ಷಿಸಲು ಪಿಂಕ್‌ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಇದರಿಂದ ಆಕರ್ಷಿ ತರಾದ ಮತದಾರರು ಬೆಳಿಗ್ಗೆಯೇ ತಂಡೋಪತಂಡವಾಗಿ ಬಂದು ಮತ ಚಲಾಯಿಸಿದರು. ಕಡೆಕಲ್‌ 95 ಮತಗಟ್ಟೆ ಕೇಂದ್ರದಲ್ಲಿರುವ 557 ಮತದಾರರ ಪೈಕಿ ಮಧ್ಯಾಹ್ನ 1 ಗಂಟೆಗಾಗಲೇ 286 ಮತದಾರರು ತಮ್ಮ ಮತ ಚಲಾಯಿಸಿದ್ದರು.

ತೀರ್ಥಹಳ್ಳಿ ಮತಕ್ಷೇತ್ರದ ಹೊಸಹಳ್ಳಿಯಲ್ಲಿ ಬೆಳಿಗ್ಗೆಯಿಂದಲೇ ಉತ್ತಮ ಮತದಾನ ನಡೆಯಿತು. ಮೊದಲ ಬಾರಿಗೆ ಮತಗಟ್ಟೆಗೆ ಬಂದ ಮತದಾರರು ಹರ್ಷದಿಂದ ತಮ್ಮ ಹಕ್ಕು ಚಲಾಯಿಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಪಿಳಂಗಿರಿ, ಹೊಳೆಹೊನ್ನೂರು, ಹನುಮಂತಾಪುರ, ಅರಹತೊಳಲು, ಮಂಗೋಟೆ, ಮೈದೊಳಲು, ಹರಮಘಟ್ಟ, ಹೊಳಲೂರು ಮೊದಲಾದ ಗ್ರಾಮಗಳಲ್ಲಿ ಜನರು ಗುಂಪಾಗಿ ನಿಂತು ಚರ್ಚೆ ನಡೆಸುತ್ತಿದ್ದರು. ಉದ್ದದ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಮೈದೊಳಲಿನಲ್ಲಿ ಅಂಗವಿಕಲ ರುದ್ರಪ್ಪ ಗಾಲಿ ಇರುವ ಮರದ ಹಲಗೆಯಲ್ಲಿ ಕೆಸರು ರಸ್ತೆಯಲ್ಲೇ ಬಂದು ಮತ ಚಲಾಯಿಸಿದ್ದು ಮನ ಕಲಕುವಂತಿತ್ತು.

ಮತಚಲಾಯಿಸಿದ ಗಣ್ಯರು

ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ ಸೇರಿ ಹಲವು ಗಣ್ಯರು ಶನಿವಾರ ನಗರದ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.

ಅಶೋಕ ನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಪತ್ನಿ ಗೀತಾಂಜಲಿ ಜತೆ ತೆರಳಿ ಮತ ಚಲಾಯಿಸಿದರು.

ಬಿ.ಎಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಪತ್ನಿ ಜಯಲಕ್ಷ್ಮೀ, ಮಗ ಕಾಂತೇಶ್, ಸೊಸೆ ಹಾಗೂ ಪುತ್ರಿಯ ಜತೆ ಬಂದು ಈಶ್ವರಪ್ಪ ಮತ ಚಲಾಯಿಸಿದರು.

ಸಭಾಪತಿ ಡಿ.ಎಚ್.ಶಂಕರಮೂರ್ತಿ ಪುತ್ರ ಅರುಣ ಅವರ ಕುಟುಂಬ ಸಮೇತ ಬಸವನ ಗುಡಿ ಮತಗಟ್ಟೆಯ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಕೋಟೆ ರಸ್ತೆಯ ಜಿಲ್ಲಾ ತರಬೇತಿ ಕೇಂದ್ರದ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಪತ್ನಿ ಜತೆ ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದರು.

ವೆಂಕಟೇಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ ಅವರು ಮತ ಚಲಾಯಿಸಿದರು.

ಒಂದಾದ ಹಿಂದೂ ಸಮುದಾಯ: ಈಶ್ವರಪ್ಪ

‘ಕಾಂಗ್ರೆಸ್ ಮುಸ್ಲಿಮರ ಓಲೈಕೆಯಲ್ಲೇ ಐದು ವರ್ಷ ಪೂರೈಸಿತ್ತು. ಹಿಂದೂಗಳ ಹತ್ಯೆ ಮತ್ತಿತರ ಕಾರಣಗಳಿಂದ ಜನರು ಈ ಬಾರಿ ಸರ್ಕಾರ ಬದಲಿಸಲು ನಿರ್ಧರಿಸಿದ್ದರು. ಇಡೀ ಹಿಂದೂ ಸಮುದಾಯ ಬಿಜೆಪಿಗೆ ಮತ ಹಾಕಿದೆ. ಅದರ ಫಲವಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ’ ಎಂದು ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮತದಾನದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯ ಪ್ರವಾಸದ ನಂತರ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT