ಅಂಗವಿಕಲರಿಗೆ ಸಿಗಲಿಲ್ಲ ವೀಲ್‌ಚೇರ್

7
ಈ ಹಿಂದಿನ ಎಲೆಕ್ಷನ್‌ ಬ್ಯಾರೆ. ಈ ಸಲ ಬ್ಯಾರೆ ಐತಿ, ಯಾರಿಗೆ ವೋಟ್ ಹಾಕಿದ್ರೇನು, ನಮಗೇನ್‌ ಮಾಡ್ತಾರ..?

ಅಂಗವಿಕಲರಿಗೆ ಸಿಗಲಿಲ್ಲ ವೀಲ್‌ಚೇರ್

Published:
Updated:

ವಿಜಯಪುರ: ‘ಈ ಹಿಂದಿನ ಎಲೆಕ್ಷನ್‌ ಬ್ಯಾರೆ. ಈ ಸಲ ಬ್ಯಾರೆ ಐತಿ, ಯಾರಿಗೆ ವೋಟ್ ಹಾಕಿದ್ರೇನು, ನಮಗೇನ್‌ ಮಾಡ್ತಾರ. ಎಲ್ರೂ ತಮ್ಮ ಕಿಸೆ ತುಂಬಿಸಿಕೊಳ್ತಾರ, ರೊಕ್ಕದ ಆಟ ನಡಿದೈತ, ಆದ್ರೂ ಜನ್ರು ತಮ್ಗ ಬೇಕಂದವರಿಗೆ ವೋಟ್‌ ಹಾಕ್ತಾರ. ಹೆಸರಿಗೆ ಮಾತ್ರ ಅಂಗವಿಕಲರ ಮತಗಟ್ಟೆ. ಸೌಕರ್ಯ ಏನೊಂದು ಇಲ್ಲ...

ನಾಗಠಾಣ, ಬಬಲೇಶ್ವರ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಶನಿವಾರ ಮತ ಚಲಾಯಿಸಿದ ಜನರ ಅನಿಸಿಕೆಗಳಿವು.

‘ನಾನು ವೋಟ್‌ ಹಾಕಿ ಬಂದಿನ್ರೀ. ಯಾರಿಗಿ ಅಂತ ಕೇಳಬ್ಯಾಡ್ರಿ. ಯಾವುದೋ ಒಂದೂಕ ಒತ್ತಿ ಬಂದ್ವೀನಿ. ಈ ಹಿಂದ ಎಲೆಕ್ಷನ್‌ ಬ್ಯಾರೆ ಇರ್ತಿತ್ತು. ಈ ಸಲ ಬ್ಯಾರೆ ಐತಿ. ಒಳ್ಳೆಯವ ಗೆಲ್ತಾನ. ಜನರು ಕೂಡ ಬಾಳ ಶ್ಯಾಣೆ ಆಗ್ಯಾರ. ಹಿಂದಿನಂಗ ಯಾರೋ ಹೇಳಿದ್ರು, ದುಡ್ಡು ಕೊಟ್ರೂ ಅಂತ ವೋಟ್‌ ಹಾಕಲ್ರಿ. ಹಾಕೋರ್ಗೆ ಹಾಕ್ತಾರೆ’ ಎಂದು ಸಾರವಾಡ ಗ್ರಾಮದ ಮಹಿಳೆಯೊಬ್ಬರು ಹೆಸರು ಬಳಸಬಾರದು ಎಂಬ ಷರತ್ತಿನ ಮೇರೆಗೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಚಿತ್ರಣದ ಹೂರಣ ಬಿಚ್ಚಿಟ್ಟರು.

‘ಯಾವ್ನೂ ಕೂಡ ನಮ್ಮೂರಾಗ ಕೆಲ್ಸಾ ಮಾಡಿಲ್ಲ. ಕುಡ್ಯಾಕ ಸರಿಯಾಗಿ ನೀರಿಲ್ಲ. ಹೆಂಗಸ್ರು ಸಂಡಾಸ್ಗೆ ಬಯಲಿಗೆ ಹೋಗಬೇಕು. ಮಹಿಳೆಯರು ಸಂಘ ಕಟ್ಟಿಕೊಂಡು 18 ವರ್ಷ ಆಯ್ತು. ಯಾವ್ನೂ ಕೂಡ ಒಂದ ಜಾಗ ಕೊಟ್ಟಿಲ್ಲ. ಎಲ್ರೂ ತಮ್ಮ ತಮ್ಮ ಕಿಸೆ ತುಂಬಿಸಿಕೊಳ್ಳಾಕ ಬರ್ತಾರ. ಇಂತಾವ್ರಿಗೆ ವೋಟ್‌ ಹಾಕ್ಲೆ ಬಾರ್ದು ಅಂತ ಮಾಡಿದ್ವಿ. ಹಾಳಾಗಿ ಹೋಗ್ಲಿ, ವೋಟ್‌ ಕೆಡಸಿಕೋ ಬ್ಯಾಡ. ಒಬ್ರಿಗಿ ಹಾಕ್‌ ಬಾ ಅಂತ ಜನ್ರು ಹೇಳ್ಯಾರ. ಹಿಂಗಾಗಿ ಇದ್ದೂದ್ರೊಳಗ ಒಳ್ಳೆಯವನಿಗೆ ಹಾಕ್ತೀನಿ’ ಎಂದು ನಾಗಠಾಣ ವಿಧಾನಸಭಾ ಕ್ಷೇತ್ರದ ಖತಿಜಾಪುರ ಗ್ರಾಮದ ಸುಶೀಲಾ ಹೂಟಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಾಕ ಸಂವಿಧಾನದಲ್ಲಿ ಹಕ್ಕು ಕೊಟ್ಟಿದ್ದಾರೆ. ಹೀಗಾಗಿ ವೋಟ್ ಮಾರಿಕೊಂಡಿಲ್ಲ. ಜಾತಿ, ಧರ್ಮ ಸಹ ನೋಡಿಲ್ಲ. ಯಾರು ಒಳ್ಳೆಯವರ ಅದಾರ ಅವರಿಗೆ ನನ್ನ ಅಮೂಲ್ಯವಾದ ಮತ ನೀಡಿದ್ದೇನೆ’ ಎಂದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಅಭಿಷೇಕ ಬಿರಾದಾರ ಹೇಳಿದರು.

ಫೋಟೋಗೆ ಸೀಮಿತವಾದ ವ್ಹೀಲ್‌ಚೇರ್..!: ‘ಅಂಗವಿಕಲರ ಅನುಕೂಲಕ್ಕಾಗಿಯೇ ವಿಶೇಷ ಮತಗಟ್ಟೆ ತೆಗೆದಿದ್ದಾರೆ. ಆದ್ರೆ ಇಲ್ಲಿ ವ್ಹೀಲ್‌ಚೇರ್‌ ಇಟ್ಟಿಲ್ಲ. ಶುಕ್ರವಾರ ಸಂಜೆ ಫೋಟೋ ತೆಗೆಸಿಕೊಳ್ಳಾಕ ಖಾಸಗಿಯವರ ಬಳಿ ತಂದು, ಕೆಲ ನಿಮಿಷದಲ್ಲಿ ತೆಗೆದುಕೊಂಡು ಹೋಗ್ಯಾರ.

ಕುಂಟ್ರು, ಕುಳ್ಡ್ರು, ಆರಾಮ ಇಲ್ಲದಿರುವರು ಏನಿಲ್ಲ ಅಂದ್ರು ನೂರು ಜನ್ರು ಅದಾರ. ವ್ಹೀಲ್‌ಚೇರ್‌ ಇಲ್ಲದಿರೋಕೆ ಹೊತ್ಕೊಂಡು ಹೊಂಟೇವಿ. ಪಿಡಿಓ ಕೇಳಿದ್ರೆ, ಸಾಹೇಬ್ರೀಗೆ ಕೇಳ್ರಿ ಅಂತಾರ. ತಹಶೀಲ್ದಾರ್‌ಗೆ ಕೇಳಿದ್ರ ನಮ್ಮ ಮನಷ್ಯಾ ತರ್ತಾನ ಅಂತಾರಾ. ಮಧ್ಯಾಹ್ನ ಒಂದ್‌ ಗಂಟೆ ಆಯ್ತು. ಇನ್ನೂ ಬಂದಿಲ್ಲ’ ಎಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಾಗರಾಳ ಮತಗಟ್ಟೆಯ ಮತದಾರರಾದ ಸುರೇಶ ಕಣಮುಚನಾಳ, ಪ್ರವೀಣ ಗುಣದಾಳ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉರುಳು ಸೇವೆ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳರ ಗೆಲುವಿಗಾಗಿ ವಿಠ್ಠಲ ಪೂಜಾರಿ ಎಂಬಾತ ಲಕ್ಷ್ಮೀ ನಗರದಿಂದ ಸಿದ್ಧೇಶ್ವರ ದೇವಸ್ಥಾನದವರೆಗೆ ಉರುಳು ಸೇವೆ ನಡೆಸಿದರು.

ಗೌಡ್ರಾ... ನನ್ಗ ರೊಕ್ಕಾ ಮುಟ್ಟಿಲ್ರೀ..!

ಬಬಲೇಶ್ವರ ಗ್ರಾಮದ ಮತಗಟ್ಟೆಯೊಂದರಲ್ಲಿ ಕೈಯಲ್ಲಿ ಮತ ಪತ್ರ ಹಿಡಿದಿದ್ದ ವಯೋವೃದ್ಧರೊಬ್ಬರು ‘ಎಲ್ರಿಗೂ ರೊಕ್ಕಾ ಮುಟ್ಯಾವ. ಆದ್ರಾ ನನಗ ಬಂದಿಲ್ರೀ ಗೌಡ್ರಾ. ನಾನ್‌ ಇನ್ನೂ ವೋಟ್‌ ಹಾಕಿಲ್ರಿ’ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರ ಬಳಿ ಹೇಳುತ್ತಿದ್ದಂತೆ, ಕೊಡೋಣ. ಹೋಗೋ ವೋಟ್‌ ಹಾಕಿ ಬಾ ಎಂದು ಮನವೊಲಿಸಿದ ದೃಶ್ಯ ಗೋಚರಿಸಿತು.

**

ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂಬ ಕಾರಣಕ್ಕೆ ಕಣ್ಣು ಕಾಣದಿದ್ದರೂ; ಮಗನ ಸಹಾಯದೊಂದಿಗೆ ಬಂದು ವೋಟ್‌ ಮಾಡುತ್ತಿದ್ದೇನೆ

– ನಾರಾಯಣ ಜುಮನಾಳ, ಅಂಧ ಮತದಾರ

**

ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry