ಗುರುವಾರ , ಮಾರ್ಚ್ 4, 2021
21 °C
ಮತದಾರರ ಉತ್ಸಾಹ ಯಾರಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರ

ಮತದಾನದ ಏರಿಕೆಯಿಂದ ಹೆಚ್ಚಿದ ಕುತೂಹಲ

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮತದಾನದ ಏರಿಕೆಯಿಂದ ಹೆಚ್ಚಿದ ಕುತೂಹಲ

ಮಂಗಳೂರು: ಜಿಲ್ಲೆಯಲ್ಲಿ ಮತದಾನದ ಪ್ರಮಾಣ 2013ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡ 3.15ರಷ್ಟು ಏರಿಕೆಯಾಗಿದೆ. ಈ ಏರಿಕೆ ಚುನಾವಣಾ ಫಲಿತಾಂಶದ ಕುರಿತ ಕುತೂಹಲಕ್ಕೆ ಕಾರಣವಾಗಿದೆ. ಮತದಾರರ ಉತ್ಸಾಹ ಯಾರಿಗೆ ವರವಾಗಬಹುದು ಎಂಬ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

ಜಿಲ್ಲೆಯಲ್ಲಿ 17,11,848 ಮತದಾರರಿದ್ದು, 13,29,601 ಮಂದಿ ಮತ ಚಲಾಯಿಸಿದ್ದಾರೆ. ಜಿಲ್ಲೆಯಾದ್ಯಂತ ಮತದಾನಕ್ಕೆ ಹೆಚ್ಚಿನ ಆಸಕ್ತಿ ವ್ಯಕ್ತವಾಗಿದೆ. ಜಿಲ್ಲೆಯ ಮತದಾರರಲ್ಲಿ ಮಹಿಳೆಯರೇ ಬಹುಸಂಖ್ಯಾತರಾಗಿದ್ದು, ಮತ ಚಲಾಯಿಸಿದವರಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಎಲ್ಲ ವರ್ಗ ಮತ್ತು ವಯಸ್ಸಿನ ಮತದಾರರು ಮತಗಟ್ಟೆಯತ್ತ ಬಂದು ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ. ಜಿಲ್ಲೆಯಾದ್ಯಂತ ವ್ಯಕ್ತವಾಗಿರುವ ಈ ಪ್ರತಿಕ್ರಿಯೆ ಫಲಿತಾಂಶದ ಮೇಲೆ ಹೇಗೆ ಪರಿಣಾಮ ಬೀರಿರಬಹುದು ಎಂಬ ಸಂಗತಿ ಯಾರ ಊಹೆಗೂ ನಿಲುಕುತ್ತಿಲ್ಲ.

ಎಲ್ಲ ಎಂಟು ಕ್ಷೇತ್ರಗಳಲ್ಲೂ ಮತದಾನದಲ್ಲಿ ಹೆಚ್ಚಳ ಕಂಡುಬಂದಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ಈ ಬಾರಿಯೂ ಜಿಲ್ಲೆಯಲ್ಲೇ ಅತ್ಯಧಿಕ ಮತದಾನ ನಡೆದ ಕ್ಷೇತ್ರ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ಇಲ್ಲಿ ಶೇ 83ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಳೆದ ಚುನಾವಣೆಯಂತೆ ಮಂಗಳೂರು ನಗರ ದಕ್ಷಿಣ ಕ್ಷೇತ್ರ ಸರಾಸರಿ ಮತದಾನದಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಸುಳ್ಯ, ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ಈ ಬಾರಿ ಮತದಾನದ ಪ್ರಮಾಣ ಶೇ 80ರ ಗಡಿ ದಾಟಿದೆ.

ವಿಭಿನ್ನ ಲೆಕ್ಕಾಚಾರ: ಮತದಾನದ ಹೆಚ್ಚ ಳಕ್ಕೆ ಯುವ ಮತದಾರರು ಕಾರಣ ಎಂಬ ನಂಬಿಕೆ ಜಿಲ್ಲೆಯಲ್ಲಿನ ಬಿಜೆಪಿ ಮುಖಂಡರದ್ದು. ಯುವ ಮತದಾರರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಪಕ್ಷ ಈ ಬಾರಿ ಮುನ್ನಡೆ ಸಾಧಿಸುವುದು ಖಚಿತ ಎಂಬ ವಾದ ಮಂಡಿಸುತ್ತಿದ್ದಾರೆ. ಮತದಾನದ ಪ್ರಮಾಣದಲ್ಲಿ ಏರಿಕೆಯಾದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬ ವಾದವೊಂದನ್ನು ಅವರು ಇದಕ್ಕೆ ಆಧಾರವಾಗಿ ನೀಡುತ್ತಿದ್ದಾರೆ.

ಆದರೆ, ಈ ಬಾರಿ ಮತದಾನದಲ್ಲಿ ಹೆಚ್ಚಳವಾಗಿರುವುದಕ್ಕೆ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳು ಕಾರಣ ಎಂಬ ವಾದ ಕಾಂಗ್ರೆಸ್‌ ನಾಯಕರದ್ದು. ಮತದಾನದಲ್ಲಿ ಭಾರಿ ಏರಿಕೆಯಿಂದ ಬಿಜೆಪಿಗೆ ಲಾಭವಾಗದು. ಯುವ ಮತದಾರರು ಒಂದಷ್ಟು ಸಂಖ್ಯೆಯಲ್ಲಿ ಅತ್ತ ವಾಲಿದರೂ, ಮತದಾರರಲ್ಲಿ ಹೆಚ್ಚಿನವರು ಕಾಂಗ್ರೆಸ್‌ನತ್ತ ಇದ್ದಾರೆ ಎಂಬುದು ‘ಕೈ’ ಪಾಳೆಯದ ನಾಯಕರ ವಾದ.

ಆಯಾ ಪ್ರದೇಶಗಳಲ್ಲಿ ಚಲಾವಣೆ ಆಗಿರುವ ಮತಗಳ ಸಂಖ್ಯೆಯನ್ನು ಆಧರಿಸಿ ಫಲಿತಾಂಶವನ್ನು ಲೆಕ್ಕ ಹಾಕುವ ಕಸರತ್ತು ಕೂಡ ನಡೆಯುತ್ತದೆ. ಒಂದೇ ಧರ್ಮದ ಜನರು ಹೆಚ್ಚು ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ನಡೆದಿರುವ ಮತದಾನ, ವಿವಿಧ ಜಾತಿಗಳ ಜನರು ಹೆಚ್ಚಿರುವ ಪ್ರದೇಶ ಗಳಲ್ಲಿ ಮತದಾನಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆ ಇವೆಲ್ಲವನ್ನೂ ಆಧರಿಸಿ ಫಲಿ ತಾಂಶವನ್ನು ಊಹೆ ಮಾಡಲಾಗುತ್ತಿದೆ.

ಎಸ್‌ಡಿಪಿಐ ಕಣದಿಂದ ಹಿಂದೆ ಸರಿದಿರುವುದರಿಂದ ಆಗಿರುವ ಲಾಭ, ನಷ್ಟಗಳು, ಸಿಪಿಎಂ ಅಭ್ಯರ್ಥಿಗಳ ಸ್ಪರ್ಧೆ, ಜೆಡಿಎಸ್‌ ನಿರೀಕ್ಷಿತ ಸ್ಪರ್ಧೆ ಒಡ್ಡದಿರುವುದು ಕೂಡ ಚರ್ಚೆಯ ಭಾಗವಾಗಿದೆ.

ಹೆಚ್ಚಿದ ಕುತೂಹಲ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮತದಾರರಲ್ಲಿ ಅತ್ಯುತ್ಸಾಹ ವ್ಯಕ್ತವಾಗಿದೆ. ಇಲ್ಲಿ ಮತದಾನದ ಪ್ರಮಾಣದಲ್ಲಿ ಶೇ 5.92ರಷ್ಟು ಹೆಚ್ಚಳ ದಾಖಲಾಗಿದೆ. ಇದು ಈ ಕ್ಷೇತ್ರದ ಫಲಿತಾಂಶದ ಕುರಿತು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಒಂಬತ್ತನೇ ಬಾರಿ ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್‌ನ ಕೆ.ವಸಂತ ಬಂಗೇರ ಐದು ಬಾರಿ ಶಾಸಕರಾಗಿದ್ದರು. ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದಿರುವ ಬಿಜೆಪಿಯ ಹರೀಶ್‌ ಪೂಂಜ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಇಲ್ಲಿ ಮತದಾನದಲ್ಲಿನ ಭಾರಿ ಏರಿಕೆ ಯಾರಿಗೆ ಅನುಕೂಲ ಮಾಡಿಕೊಡಬಹುದು ಎಂಬ ಕುತೂಹಲ ಜಿಲ್ಲೆಯಾದ್ಯಂತ ಮೂಡಿದೆ.

*

ಬಸ್ಸಿನ ವ್ಯವಸ್ಥೆ ವರವಾಗುವುದೇ?

ಹಲವು ಅಭ್ಯರ್ಥಿಗಳು ಬೆಂಗಳೂರು, ಮುಂಬೈ, ಪುಣೆ ಮತ್ತಿತರ ನಗರಗಳಲ್ಲಿರುವ ಇಲ್ಲಿನ ಮತದಾರರಿಗೆ ಊರಿಗೆ ಬಂದು, ಮತ ಚಲಾಯಿಸಿ ಹೋಗುವುದಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದ್ದರು. ಅಂತಹ ಬಸ್ಸುಗಳಲ್ಲಿ ಶನಿವಾರ ಬೆಳಿಗ್ಗೆ ಊರು ತಲುಪಿದ್ದ ಸಾವಿರಾರು ಮಂದಿ ಮತ ಚಲಾಯಿಸಿದ್ದಾರೆ. ಈ ತಂತ್ರಗಾರಿಕೆ ಲಾಭ ತಂದುಕೊಡುವುದೇ ಎಂಬ ಕುತೂಹಲವೂ ಜಿಲ್ಲೆಯಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.