ವಿಶ್ರಾಂತಿ ಪಡೆದರೂ ಮನಸ್ಸಿನಲ್ಲಿ ತಳಮಳ

7
ಮುಗಿದ ಮತದಾನ: ರಾಜಕೀಯ ಚಟುವಟಿಕೆಗೆ ಅಲ್ಪ ವಿರಾಮವಿಟ್ಟ ಅಭ್ಯರ್ಥಿಗಳು

ವಿಶ್ರಾಂತಿ ಪಡೆದರೂ ಮನಸ್ಸಿನಲ್ಲಿ ತಳಮಳ

Published:
Updated:

ದಾವಣಗೆರೆ: ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಿ ಪ್ರಚಾರ ನಡೆಸಿದ ಬಹುತೇಕ ಅಭ್ಯರ್ಥಿಗಳು ಮತದಾನ ಮುಗಿದ ಮಾರನೇ ದಿನವಾದ ಭಾನುವಾರ ವಿಶ್ರಾಂತಿ ತೆಗೆದುಕೊಂಡರು.

ಬಹಿರಂಗ ಸಮಾವೇಶ, ರ‍್ಯಾಲಿ, ರೋಡ್‌ ಷೋ, ಮನೆ ಮನೆ ಭೇಟಿ ಎಂದು ಊರೂರು ಸುತ್ತಿದ ಬಹುತೇಕ ನಾಯಕರು ತಮ್ಮ ಮನೆಗಳಲ್ಲೇ ಉಳಿದರು. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆದರು. ಕೆಲವರು ಸಂಬಂಧಿಕರೊಂದಿಗೆ ಮನೆಯ ಊಟ ಸವಿದರು. ನಂತರ ವಾಹಿನಿಗಳಲ್ಲಿ ಪ್ರಸಾರವಾದ ಚುನಾವಣೋತ್ತರ ಸಮೀಕ್ಷೆಗಳನ್ನು ವೀಕ್ಷಿಸಿದರು.

ಮುಖಂಡರು, ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ರಾಜಕೀಯ ಪಕ್ಷಗಳ ಕಚೇರಿಗಳು, ಅಭ್ಯರ್ಥಿಗಳ ಮನೆಗಳು ಭಾನುವಾರ ಭಣಗುಡುತ್ತಿದ್ದವು. ಬಹುತೇಕ ಅಭ್ಯರ್ಥಿಗಳು ಆಪ್ತೇಷ್ಟರನ್ನಷ್ಟೇ ಭೇಟಿ ಮಾಡಿದರು.

ದೇಹದ ಆಯಾಸ ನಿವಾರಿಸಿಕೊಳ್ಳಲು ವಿಶ್ರಾಂತಿಗೆ ಜಾರಿದರೂ ಅಭ್ಯರ್ಥಿಗಳ ಮನಸ್ಸಿನಲ್ಲಿ ಫಲಿತಾಂಶದ ಬಗ್ಗೆ ತಳಮಳ ಶುರುವಾಗಿದೆ. ಹೀಗಾಗಿ, ಪ್ರಮುಖ ಕಾರ್ಯಕರ್ತರು, ಆಪ್ತರನ್ನು ಕರೆಯಿಸಿಕೊಂಡ ಕೆಲ ಅಭ್ಯರ್ಥಿಗಳು, ‘ಯಾವ ಮತಗಟ್ಟೆಯಲ್ಲಿ ಹೇಗೆ ಮತ ಚಲಾವಣೆಯಾಗಿದೆ. ವಾತಾವರಣ ಯಾರಿಗೆ ಲಾಭದಾಯಕವಾಗಿದೆ’ ಎಂಬ ಅಂಕಿ ಅಂಶಗಳನ್ನು ಪಡೆದುಕೊಂಡರು. ಸಮೀಕ್ಷೆಗಳ ಬಗ್ಗೆಯೂ ಮಾಹಿತಿ ಪಡೆದು, ಸೋಲು–ಗೆಲುವಿನ ಲೆಕ್ಕಾಚಾರಗಳನ್ನು ಹಾಕಿದರು.

‘ಜಿಲ್ಲಾ ಉಸ್ತುವಾರಿ ಸಚಿವ, ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ ಮನೆಯಲ್ಲಿ ವಿಶ್ರಾಂತಿ ಪಡೆದರು. ಸಂಜೆ ವೇಳೆಗೆ ಕಾರ್ಯಕರ್ತರ ಜತೆ ಕಾಲ ಕಳೆದರು. ದಿನಪತ್ರಿಕೆಗಳನ್ನು ಓದಿದರು. ಸಮೀಕ್ಷೆಗಳನ್ನು ಆಧರಿಸಿ, ಜಿಲ್ಲೆಯ ಮುಂದಿನ ರಾಜಕೀಯ ಚಿತ್ರಣದ ಬಗ್ಗೆ ಚರ್ಚೆ ನಡೆಸಿದರು’ ಎಂದು ಅವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಕೀಯ ಚಟುವಟಿಕೆಗಳಿಗೆ ಅಲ್ಪ ವಿರಾಮ ನೀಡಿ, ವಿಶ್ರಾಂತಿ ತೆಗೆದುಕೊಂಡರೂ ಅಭ್ಯರ್ಥಿಗಳು ಫಲಿತಾಂಶದ ಬಗ್ಗೆ ಆತಂಕಗೊಂಡಿದ್ದರು. ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರೂ ಇದರ ಬೆನ್ನಲ್ಲೇ ಕ್ಷೇತ್ರದ ಕೆಲ ಭಾಗಗಳಲ್ಲಿ ಉತ್ತಮ ಮತವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು’ ಎಂದು ಅಭ್ಯರ್ಥಿಯೊಬ್ಬರ ಆಪ್ತರು ಮಾಹಿತಿ ನೀಡಿದರು.

‘ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಅವರು ದೇವರಾಜ ಅರಸ್‌ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲೇ ದಿನ ಕಳೆದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಜಾಧವ್‌, ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಮತದಾನ ಹೇಗೆ ಆಗಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಉತ್ತರ ಕ್ಷೇತ್ರದ ಅಭ್ಯರ್ಥಿ,

ಹಿರಿಯ ರಾಜಕಾರಣಿ ಎಸ್‌.ಎ. ರವೀಂದ್ರನಾಥ್‌ ಶಿರಮಗೊಂಡನಹಳ್ಳಿಯ ನಿವಾಸದಲ್ಲಿ ಇದ್ದರು. ಕುಟುಂಬದವರೊಂದಿಗೆ ಅವರು ದಿನ ದೂಡಿದರು’ ಎಂದು ಬಿಜೆಪಿ ಕಾರ್ಯಕರ್ತರು ತಿಳಿಸಿದರು.

ಜಗಳೂರು ಶಾಸಕ ಎಚ್‌.ಪಿ. ರಾಜೇಶ್‌ ಸ್ವಗ್ರಾಮ ಬಿದರೆಕೆರೆಯ ಮನೆಯಲ್ಲಿ ಕಾಲ ಕಳೆದರು. ಕಾರ್ಯಕರ್ತರು, ಕಾಂಗ್ರೆಸ್‌ ಪದಾಧಿಕಾರಿಗಳು ಅವರನ್ನು ಭೇಟಿಯಾದರು. ಇನ್ನು ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ ಕ್ಷೇತ್ರದಲ್ಲಿ ಪ್ರವಾಸ ಮಾಡಿದರು. ಭಾನುವಾರ ನಡೆದ ಸಂಬಂಧಿಕರ, ಬಿಜೆಪಿ ಕಾರ್ಯಕರ್ತರ ಮದುವೆಗಳಲ್ಲಿ ಸಂಭ್ರಮದಿಂದ ಭಾಗವಹಿಸಿದರು.

ಹೊನ್ನಾಳಿ ಕ್ಷೇತ್ರದ ಶಾಸಕ ಡಿ.ಜಿ. ಶಾಂತನಗೌಡ, ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ತಮ್ಮ ಕುಟುಂಬದೊಂದಿಗೆ ಕಾಲ ಕಳೆದರು. ಹರಿಹರ, ಮಾಯಕೊಂಡ ಕ್ಷೇತ್ರದ ಅಭ್ಯರ್ಥಿಗಳೂ ಬಿಡುವಿಲ್ಲದ ರಾಜಕೀಯ ಚಟುವಟಿಕೆಗೆ ಅಲ್ಪ ವಿರಾಮ ಹಾಕಿ, ವಿಶ್ರಾಂತಿಗೆ ಜಾರಿದರು.

ಚನ್ನಗಿರಿ ಕ್ಷೇತ್ರದ ಶಾಸಕ ಕಾಂಗ್ರೆಸ್‌ ಅಭ್ಯರ್ಥಿ ವಡ್ನಾಳ್‌ ರಾಜಣ್ಣ, ಬಿಜೆಪಿ ಹುರಿಯಾಳು ಮಾಡಾಳು ವಿರೂಪಾಕ್ಷಪ್ಪ, ಜೆಡಿಯು ಅಭ್ಯರ್ಥಿ ಮಹಿಮ ಪಟೇಲ್, ಜೆಡಿಎಸ್‌ನ ಹೊದಿಗೆರೆ ರಮೇಶ್ ಅವರವರ ಮನೆಗಳಲ್ಲೇ ಉಳಿದು ವಿರಮಿಸಿದರು.

ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಸ್ವಂತ ಊರು ಹಡಗಲಿಗೆ ತೆರಳಿದರೆ, ಬಿಜೆಪಿಯ ಕರುಣಾಕರರೆಡ್ಡಿ ಬಳ್ಳಾರಿ ಜಿಲ್ಲೆಯ ಹಂಸಭಾವಿಗೆ ಹೋಗಿದ್ದರು. ಜೆಡಿಎಸ್‌ನ ಎನ್‌. ಕೊಟ್ರೇಶ್‌ ಅರಸೀಕೆರೆಯಲ್ಲಿ ಇದ್ದರು. ಮಧ್ಯಾಹ್ನದ ನಂತರ ಹರಪನಹಳ್ಳಿಗೆ ಬಂದು ಕಾರ್ಯಕರ್ತರ ಜತೆ ಮತದಾನ ಪ್ರಮಾಣದ ಬಗ್ಗೆ ಚರ್ಚೆ ಮಾಡಿದರು.

ಮೊಮ್ಮಕ್ಕಳ ಜತೆ ಸಮಯ ಕಳೆದ ಶಾಮನೂರು

ಕಾಂಗ್ರೆಸ್‌ನ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಚುನಾವಣಾ ಪ್ರಚಾರಕ್ಕಾಗಿ ಇಳಿ ವಯಸ್ಸಿನಲ್ಲೂ ಸತತವಾಗಿ ರೋಡ್‌ ಷೋ ನಡೆಸಿದ್ದರು. ಮತದಾನ ಮುಗಿದ ಹಿನ್ನೆಲೆಯಲ್ಲಿ ಭಾನುವಾರ ಅವರು ಮಕ್ಕಳು, ಮೊಮ್ಮಕ್ಕಳ ಜತೆಗೆ ಸ್ವಲ್ಪ ಸಮಯ ಕಳೆದರು.

ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರಚಾರಕ್ಕಾಗಿ ಬಿಸಿಲಲ್ಲಿ ಸುತ್ತಿ ಕಪ್ಪಗಾಗಿದ್ದೇನೆ ಅಷ್ಟೆ. ಮತ್ತೆ ಬೆಳ್ಳಗಾಗಬೇಕು’ ಎಂದು ಚಟಾಕಿ ಹಾರಿಸಿದರು.

‘ನಮಗೆ ರಾಜಕೀಯ ಮೊದಲಲ್ಲ. ಚುನಾವಣೆಯ ಒತ್ತಡದಿಂದಾಗಿ ನಮ್ಮ ವ್ಯವಹಾರದ ಲೆಕ್ಕಪತ್ರಗಳನ್ನು ಪರಿಶೀಲಿಸಲು ಆಗಿರಲಿಲ್ಲ. ಈಗ ಆ ಕೆಲಸ ಮಾಡುತ್ತೇನೆ’ ಎಂದು ಕಡತಗಳನ್ನು ಪರಿಶೀಲಿಸಲು ಕುಳಿತರು. ಪ್ರಚಾರಕ್ಕಾಗಿ ಓಡಾಡಿ ಬಳಲಿದರೂ ಶಿವಶಂಕರಪ್ಪ ಎಂದಿನಂತೆ ಚಟುವಟಿಕೆಯಿಂದಲೇ ಇದ್ದಿದ್ದು, ಯುವಕರೂ ಹುಬ್ಬೇರಿಸುವಂತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry